ADVERTISEMENT

ಬಿಎಫ್‌ಸಿ ಮೈಲಿಗಲ್ಲು

ಜಿ.ಶಿವಕುಮಾರ
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   

ತಂಡ ಯಾವುದೇ ಇರಲಿ. ಅದು ಎಷ್ಟೇ ಬಲಿಷ್ಠವಾಗಿರಲಿ. ನಾವು ಆ ಕುರಿತು ಕಿಂಚಿತ್ತೂ ಯೋಚಿಸುವುದಿಲ್ಲ. ಪಂದ್ಯದ ದಿನ ಒಂದು ತಂಡವಾಗಿ ಶ್ರೇಷ್ಠ ಸಾಮರ್ಥ್ಯ ತೋರುವತ್ತ ಮಾತ್ರ  ಚಿತ್ತ ಹರಿಸುತ್ತೇವೆ. ಹೀಗಾಗಿಯೇ ಯಶಸ್ಸು ನಮ್ಮನ್ನು ಅರಸಿ ಬರುತ್ತಿದೆ...

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ನಾಯಕ ಸುನಿಲ್‌ ಚೆಟ್ರಿ ಕೆಲ ತಿಂಗಳುಗಳ ಹಿಂದೆ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಮಾತುಗಳಿವು.

ಚೆಟ್ರಿ ಅವರ ಮಾತು ಈಗ ಅಕ್ಷರಶಃ  ನಿಜವಾಗಿದೆ. 2013ರ ಜುಲೈ ತಿಂಗಳಿನಲ್ಲಿ ಹುಟ್ಟು ಪಡೆದು  ಅದೇ ವರ್ಷ ಐ ಲೀಗ್‌ ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಚರಿತ್ರೆಯ ಪುಟ ಸೇರಿದ್ದ ಬಿಎಫ್‌ಸಿ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡಿದೆ.

ADVERTISEMENT

ಪ್ರತಿಷ್ಠಿತ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಕಪ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ಬೆಂಗಳೂರಿನ  ತಂಡ ಏಷ್ಯಾದ ಫುಟ್‌ಬಾಲ್‌ ಲೋಕದಲ್ಲಿ ನೂತನ ಮೈಲಿಗಲ್ಲು ನೆಟ್ಟಿದೆ.

ಭಾರತದ ಯಾವ ತಂಡದಿಂದಲೂ ಆಗದಂತಹ ಅಪ್ರತಿಮ ಸಾಧನೆಗೆ ಭಾಜನವಾಗಿರುವ ಚೆಟ್ರಿ ಪಡೆ ಫುಟ್‌ಬಾಲ್‌ ಕ್ರೀಡೆಯಲ್ಲಿ ಹೊಸದೊಂದು ಅಧ್ಯಾಯ ಬರೆದಿದೆ. ಈ ಮೂಲಕ ಏಷ್ಯಾ ಖಂಡದಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.

ಚೆಟ್ರಿ ಎಂಬ ಮಾಂತ್ರಿಕ...
ಬಿಎಫ್‌ಸಿಯ ಯಶಸ್ಸಿನ ಬಹುಪಾಲು ನಾಯಕ ಸುನಿಲ್‌ ಚೆಟ್ರಿಗೆ ಸೇರುತ್ತದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಚೆಟ್ರಿ ಬಿಎಫ್‌ಸಿ ತಂಡದ ಶಕ್ತಿ ಎನಿಸಿದ್ದಾರೆ.

ಶ್ರೇಷ್ಠ ಸಾಮರ್ಥ್ಯದ ಮೂಲಕ ಎದುರಾಳಿ ತಂಡದ ರಕ್ಷಣಾ ವ್ಯೂಹವನ್ನು ಭೇದಿಸುವ ಕಲೆ ಕರಗತ ಮಾಡಿಕೊಂಡಿರುವ ಸ್ಟ್ರೈಕರ್‌ ಚೆಟ್ರಿ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು  ಗೆಲುವಿನ ದಡ ಮುಟ್ಟಿಸಿದ್ದಾರೆ.

ಹೋದ ಬುಧವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಮಲೇಷ್ಯಾದ ಜೋಹರ್‌ ದಾರುಲ್‌ ವಿರುದ್ಧದ ಎಎಫ್‌ಸಿ ಕಪ್‌ ಎರಡನೇ ಹಂತದ ಸೆಮಿಫೈನಲ್‌ನಲ್ಲಿ  ಚೆಟ್ರಿ ಮೋಡಿ ಮಾಡಿದ್ದರು. ಎರಡು ಗೋಲು ಗಳಿಸಿದ್ದ ಅವರು ಬಿಎಫ್‌ಸಿ ಗೆಲುವಿನ ರೂವಾರಿ ಎನಿಸಿದ್ದರು. ಈ ಮೂಲಕ  ಉದ್ಯಾನ ನಗರಿಯ ಅಭಿಮಾನಿಗಳ ಮನ ಗೆದ್ದಿದ್ದರು.

ಸಂದಿಗ್ಧ ಪರಿಸ್ಥಿತಿಯಲ್ಲೂ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಗುಣ ಹೊಂದಿರುವ ಚೆಟ್ರಿ  ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ  ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸಹ ಆಟಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಹೀಗಾಗಿಯೇ ತಂಡ ಪ್ರತಿ ಪಂದ್ಯದಲ್ಲಿಯೂ ಚೈತನ್ಯದ ಚಿಲುಮೆಯಂತೆ ಆಡಿ ಗೆಲುವಿನ ಬೇಟೆ ಮುಂದುವರಿಸಿಕೊಂಡು ಸಾಗುತ್ತಿದೆ.

ಮೊದಲ ಟೂರ್ನಿಯಲ್ಲಿ ಯಶಸ್ಸು
ಎಎಫ್‌ಸಿ ಕಪ್‌ ಟೂರ್ನಿ ಸ್ಪೇನ್‌ನ ಅಲ್ಬರ್ಟ್‌ ರೋಕಾ ಅವರ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಅವರು ಬಿಎಫ್‌ಸಿ ತಂಡದ ಮುಖ್ಯ ಕೋಚ್‌ ಆದ ಬಳಿಕ ತಂಡ ಆಡಿದ ಮೊದಲ ಮಹತ್ವದ ಚಾಂಪಿಯನ್‌ಷಿಪ್‌ ಇದಾಗಿದೆ. ಇದರಲ್ಲಿ ಅವರು ಯಶಸ್ಸು ಕಂಡಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನ ತಂಡಕ್ಕೆ ಇಂಗ್ಲೆಂಡ್‌ನ ಆ್ಯಷ್ಲೆ ವೆಸ್ಟ್‌ವುಡ್‌ ಕೋಚ್‌ ಆಗಿ ಕೆಲಸ ಮಾಡಿದ್ದರು. ಇವರ ಮಾರ್ಗದರ್ಶನದಲ್ಲಿ ತಂಡ ಎರಡು ಸಲ ಐ ಲೀಗ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಒಂದು ಸಲ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದ ತಂಡ ಫೆಡರೇಷನ್‌ ಕಪ್‌ ನಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಏಳು ಬೀಳಿನ ಹಾದಿ..
2015ರಲ್ಲಿ ಮೊದಲ ಬಾರಿಗೆ ಎಎಫ್‌ಸಿ ಕಪ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ಬಿಎಫ್‌ಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಭರವಸೆ ಮೂಡಿಸಿತ್ತು.
ಈ ಬಾರಿ ಪ್ರಶಸ್ತಿ ಗೆದ್ದೇ ತೀರುವ ಛಲದೊಂದಿಗೆ ಕಣಕ್ಕಿಳಿದಿದ್ದ ಚೆಟ್ರಿ ಪಡೆಯ ಆಟಗಾರರು  ಲೀಗ್‌ ಹಂತದಲ್ಲಿ ಏಳು ಬೀಳಿನ ಹಾದಿ ಸವೆಸಿ ಪ್ರಶಸ್ತಿಯ ಹೆಬ್ಬಾಗಿಲಿಗೆ ಬಂದು ನಿಂತಿದ್ದಾರೆ.

ಪ್ರತಿಭಾನ್ವಿತರ ಕಣಜ ಎನಿಸಿದ್ದ ಜೋಹರ್‌ ದಾರುಲ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಬಿಎಫ್‌ಸಿ ಗೆಲ್ಲುವುದು ಕನಸಿನ ಮಾತು ಎಂದು ಹಲವರು ಪಂದ್ಯಕ್ಕೂ ಮುನ್ನವೇ ಷರಾ ಬರೆದುಬಿಟ್ಟಿದ್ದರು.  ಹಾಲಿ ಚಾಂಪಿಯನ್ನರ ಸವಾಲನ್ನು ಮೀರಿ ನಿಂತಿರುವ ಬಿಎಫ್‌ಸಿ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿದೆ.

ನವೆಂಬರ್‌ 5ರಂದು ಕತಾರ್‌ನ ಸವೊದ್‌ ಬಿನ್‌ ಅಬ್ದುಲ್‌ ರಹಮಾನ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ  ಚೆಟ್ರಿ ಪಡೆ ಇರಾಕ್‌ನ ಅಲ್‌ ಕ್ವಾವಾ ಅಲ್‌ ಜವಿಯಾ ತಂಡದ ವಿರುದ್ಧ ಸೆಣಸಲಿದೆ. ಆ ಪಂದ್ಯದಲ್ಲೂ ಗೆದ್ದರೆ ಬಿಎಫ್‌ಸಿ ಸಾಧನೆ ಚರಿತ್ರಾರ್ಹ ಎನಿಸಿಕೊಳ್ಳಲಿದೆ. 

*

ಎಎಫ್‌ಸಿ ಕಪ್‌ ಬಗ್ಗೆ...

ಏಷ್ಯಾ ಖಂಡದಲ್ಲಿ ಫುಟ್‌ಬಾಲ್‌ ಕ್ರೀಡೆಯ ಬೇರುಗಳನ್ನು ವಿಸ್ತರಿಸುವ ಉದ್ದೇಶದಿಂದ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) 2004ರಲ್ಲಿ ಎಎಫ್‌ಸಿ ಕಪ್‌ ಚಾಂಪಿಯನ್‌ಷಿಪ್‌ ಹುಟ್ಟು ಹಾಕಿತು.

ಈ ಚಾಂಪಿಯನ್‌ಷಿಪ್‌ನಲ್ಲಿ ಎಎಫ್‌ಸಿಯ ಅಧೀನದಲ್ಲಿ ಬರುವ ರಾಷ್ಟ್ರಗಳ ಪ್ರಮುಖ ಕ್ಲಬ್‌ಗಳು ಪ್ರತಿ ವರ್ಷ ಪ್ರಶಸ್ತಿಗಾಗಿ ಸೆಣಸುತ್ತವೆ. ಕುವೈತ್‌ನ ಅಲ್‌ ಕುವೈತ್‌ ತಂಡ ಚಾಂಪಿಯನ್‌ಷಿಪ್‌ನಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಎತ್ತಿ ಹಿಡಿದ ದಾಖಲೆ ಹೊಂದಿದೆ.

ಮಲೇಷ್ಯಾದ ಜೋಹರ್‌ ದಾರುಲ್‌ ತಾಜಿಮ್‌ ತಂಡ ಹಾಲಿ ಚಾಂಪಿಯನ್‌ ಎನಿಸಿದೆ. ಇರಾಕ್‌ನ ಹಮ್ಮದಿ ಅಹ್ಮದ್‌ (15 ಗೋಲು) ಎಎಫ್‌ಸಿ ಕಪ್‌ನಲ್ಲಿ ಹೆಚ್ಚು ಗೋಲು ಗಳಿಸಿರುವ ಆಟಗಾರ ಎಂಬ ಹಿರಿಮೆ  ಹೊಂದಿದ್ದಾರೆ.

ಎಎಫ್‌ಸಿ ಕಪ್‌ ಗುಂಪು ಹಂತದಲ್ಲಿ ಬಿಎಫ್‌ಸಿ ಸಾಧನೆ
ಆಡಿದ ಪಂದ್ಯ ಗೆಲುವು ಸೋಲು ಗೋಲು ಪಾಯಿಂಟ್ಸ್‌
6 3 3 19 9

*

ಬಿಎಫ್‌ಸಿ ಫೈನಲ್‌ ಹಾದಿ
ಪ್ರೀ ಕ್ವಾರ್ಟರ್ ಫೈನಲ್‌
ಎದುರಾಳಿ ಫಲಿತಾಂಶ ಅಂತರ -
ಕೀಚಿ (ಹಾಂಕಾಂಗ್‌) ಗೆಲುವು 3–2 -
ಕ್ವಾರ್ಟರ್‌ ಫೈನಲ್‌
ಎದುರಾಳಿ ಗೆಲುವಿನ
ಸರಾಸರಿ
ಮೊದಲ ಲೆಗ್‌ ಎರಡನೇ ಲೆಗ್‌
ತಂಪೀನಸ್‌  ರೋವರ್ಸ್‌
(ಸಿಂಗಪುರ)
1–0 1–0
(ಬಿಎಫ್‌ಸಿ
ಗೆಲುವು)
0–0
ಸೆಮಿಫೈನಲ್‌
ಎದುರಾಳಿ ಗೆಲುವಿನ
ಸರಾಸರಿ
ಮೊದಲ ಲೆಗ್‌ ಎರಡನೇ ಲೆಗ್‌
ಜೋಹರ್‌ ದಾರುಲ್‌
ತಾಜಿಮ್‌  (ಮಲೇಷ್ಯಾ)
4–2 1–1 3–1
(ಬಿಎಫ್‌ಸಿ ಜಯ)

***

ಎಎಫ್‌ಸಿ ಕಪ್‌ನಲ್ಲಿ ಪ್ರಶಸ್ತಿ ಗೆದ್ದ ತಂಡಗಳು
ಕ್ಲಬ್‌ ಪ್ರಶಸ್ತಿ ಗೆದ್ದ ವರ್ಷ ರನ್ನರ್ಸ್‌ ಅಪ್‌
ಅಲ್‌ ಕುವೈತ್‌ 2009,2012,2013 2011
ಅಲ್‌ ಫೈಸಲಿ 2005–2006 2007
ಅಲ್‌ ಕ್ವಾದ್ಸಿಯಾ 2014 2010, 2013
ಅಲ್‌ ಮುಹಾರಕ್‌ 2008 2006
ಅಲ್‌ ಜೈಶಾ 2004 -
ಶಬಬ್‌ ಅಲ್‌ ಒರ್ಡೊನ್‌ 2007 -
ಅಲ್‌ ಇತ್ತಿಹಾದ್‌ 2010 -
ಉಜ್‌ಬೆಕಿಸ್ತಾನ
ಎಫ್‌ಸಿ ನಸಾಫ್‌
2011 -
ಜೋಹರ್‌ ದಾರುಲ್‌ 2015 -

***

ಬಿಎಫ್‌ಸಿ ಸಾಧನೆಯ ನೋಟ
ಆವೃತ್ತಿ ಐ ಲೀಗ್‌ ಎಎಫ್‌ಸಿ ಟೂರ್ನಿಗಳು ಗರಿಷ್ಠ ಗೋಲು ಗಳಿಕೆ
  ಪಂದ್ಯ ಗೆಲುವು ಡ್ರಾ ಸೋಲು ಒಟ್ಟು ಗೋಲು ಪಾಯಿಂಟ್ಸ್‌ ಸಾಧನೆ ಪಂದ್ಯ ಜಯ ಡ್ರಾ ಸೋಲು ಗೋಲು ಆಟಗಾರ ಗೋಲು
2013–14 24 14 5 5 70 47 ಪ್ರಶಸ್ತಿ - - - - - ಸುನಿಲ್‌ ಚೆಟ್ರಿ 15
2014–15 20 10 7 3 54 37 ರನ್ನರ್ಸ್‌ ಅಪ್‌ 8 4 0 4 21 ಸುನಿಲ್‌ ಚೆಟ್ರಿ 14
2015–16 16 10 2 4 41 32 ಪ್ರಶಸ್ತಿ 7 4 0 3 24 ಸುನಿಲ್‌ ಚೆಟ್ರಿ 9

***

ಎಎಫ್‌ಸಿ ಕಪ್‌ನಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ರಾಷ್ಟ್ರಗಳು
ದೇಶ ಪ್ರಶಸ್ತಿ ರನ್ನರ್ಸ್‌ ಅಪ್‌
ಕುವೈತ್‌ 4 3
ಜೋರ್ಡಾನ್‌ 3 1
ಸಿರಿಯಾ 2 2
ಬಹರೇನ್‌ 1 1
ಉಜ್‌ಬೆಕಿಸ್ತಾನ 1 -
ಮಲೇಷ್ಯಾ 1 -

***

ಬಿಎಫ್‌ಸಿ ತಂಡದ ಮುಖ್ಯ ಕೋಚ್‌ಗಳ ಸಾಧನೆ
ಕೋಚ್‌ ದೇಶ ಅವಧಿ ಪಂದ್ಯ ಗೆಲುವು ಡ್ರಾ ಸೋಲು ಜಯ (ಶೇಕಡ)
ಆ್ಯಷ್ಲೆ ವೆಸ್ಟ್‌ವುಡ್‌ ಇಂಗ್ಲೆಂಡ್‌ 2 ಜುಲೈ 2013
ರಿಂದ 31 ಮೇ 2016
89 49 17 23 55.06
ಅಲ್ಬರ್ಟ್‌ ರೋಕಾ ಸ್ಪೇನ್‌ 6 ಜುಲೈ 2016 4 2 2 0 50.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.