ADVERTISEMENT

ಮದ್ದಿಗೆ ಮುತ್ತಿಕ್ಕಿ ಮುಕ್ಕಾದ ಮಾನ

ಗಿರೀಶದೊಡ್ಡಮನಿ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಮದ್ದಿಗೆ ಮುತ್ತಿಕ್ಕಿ ಮುಕ್ಕಾದ ಮಾನ
ಮದ್ದಿಗೆ ಮುತ್ತಿಕ್ಕಿ ಮುಕ್ಕಾದ ಮಾನ   

ಆಟದಲ್ಲಿ ಸೋಲು ಸಹನೀಯ. ಅದರೆ ವಾಮಮಾರ್ಗದಿಂದ ಪಡೆದ ಗೆಲುವು ಅಕ್ಷಮ್ಯ ಎಂಬ ಮಾತು ಈಗ ಮತ್ತೊಮ್ಮೆ ಸಾಬೀತಾಗಿದೆ.

ಹದಿನೈದು ದಿನಗಳ ಹಿಂದೆ ಭುವನೇಶ್ವರದ ಅಂಗಳದಲ್ಲಿ ಮೈಮೇಲೆ ತ್ರಿವರ್ಣ ಧ್ವಜ ಹೊದ್ದು, ಕೈಯಲ್ಲಿ ಚಿನ್ನದ ಪದಕ ಹಿಡಿದು ನಗೆ ಚೆಲ್ಲುತ್ತ ನಿಂತಿದ್ದ ಮನಪ್ರೀತ್ ಕೌರ್ ಅಭಿಮಾನಿಗಳ ಕಣ್ಮಣಿಯಾಗಿ ಆಗಿದ್ದರು. ಮುಂದಿನ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ‌

ಆದರೆ ಅಂದು ಕೊಂಡಾಡಿದ್ದ ಅಭಿಮಾನಿಗಳ ಪಾಲಿಗೆ ಕೌರ್ ಖಳನಾಯಕಿಯಂತೆ ಕಾಣುತ್ತಿದ್ದಾರೆ. ಉದ್ದೀಪನ ಮದ್ದು ಸೇವನೆಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಅವರು ಗೆಲುವಿಗಾಗಿ ದುರ್ಮಾರ್ಗ ಹಿಡಿದಿದ್ದು ಕ್ರೀಡಾಪ್ರೇಮಿಗಳಿಗೆ ಬೇಸರ ತರಿಸಿದೆ. ಅಭಿಮಾನಿಗಳ ಪ್ರೀತಿ,   ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ ಮಹಿಳೆಯರ ಶಾಟ್‌ಪಟ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಅವರು ಕಳೆದುಕೊಂಡಿದ್ದಾರೆ. ಅಲ್ಲದೇ ದೇಶದ ಮಾನವೂ ಮಣ್ಣುಮುಕ್ಕಿತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅವಕಾಶವೂ ಅವರ ಕೈತಪ್ಪಿದೆ.

ADVERTISEMENT

ಏಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್‌ ಮತ್ತು ಜೂನ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್‌ ಕಪ್ ಅಥ್ಲೆಟಿಕ್ಸ್‌ ಕೂಟಗಳ ಸಂದರ್ಭದಲ್ಲಿ ಉದ್ದೀಪನ ಮದ್ದು ತಡೆ ಘಟಕಗಳ ಅಧಿಕಾರಿಗಳು ಮನಪ್ರೀತ್ ಅವರಿಂದ ಮೂತ್ರದ ಮಾದರಿ ಸಂಗ್ರಹಿಸಿದ್ದರು.

ಅದರಲ್ಲಿ ಪತ್ತೆಯಾಗಿರುವ ಡಿಮೆಥೈಲ್‌ಬುಟೈಲಮೈನ್ ಅಂಶವು ವಾಡಾದ ನಿಷೇಧಿತ ಮದ್ದುಗಳ ಪಟ್ಟಿಯಲ್ಲಿದೆ. ಆದರೆ ಈ ಹಿಂದೆ ವರದಿಯಾದ ಪ್ರಕರಣಗಳಲ್ಲಿ ಈ ಮದ್ದು ಬಳಕೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಇದನ್ನು ಬಳಸಿದ ಅಥ್ಲೀಟ್‌ ಮನಪ್ರೀತ್ ಆಗಿದ್ದಾರೆ.

ಇತಿಹಾಸದಿಂದ ಪಾಠ ಕಲಿಯಲಿಲ್ಲ

ಭಾರತದಲ್ಲಿ ಅತ್ಯಂತ ಜನಪ್ರಿಯ ಆಟವಾಗಿರುವ ಕ್ರಿಕೆಟ್‌ ಅನ್ನು ಮೀರಿ ಬೆಳೆಯುವ ಸವಾಲು ಉಳಿದ ಕ್ರೀಡೆಗಳಿಗೆ ಇದೆ. ಕಳೆದೊಂದು ದಶಕದಿಂದ ಒಲಿಂಪಿಕ್ಸ್‌ ಸೇರಿದಂತೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೈಪೋಟಿ ಕಾಣುತ್ತಿದೆ.

ಆದರೆ ಉದ್ದೀಪನ ಮದ್ದು ಸೇವನೆಯ ಪಿಡುಗು ಕೂಡ ಭೂತಾಕಾರವಾಗಿ ಕಾಡುತ್ತಿದೆ.

ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಘಟಕ) ಪ್ರತಿವರ್ಷವೂ ನಡೆಸುವ ಸಮೀಕ್ಷೆಯಲ್ಲಿ ಭಾರತವು ಕಳೆದ ಎರಡು ವರ್ಷಗಳಿಂದಲೂ ಅತಿ ಹೆಚ್ಚು ಉದ್ದೀಪನ ಮದ್ದು ಪ್ರಕರಣಗಳು ವರದಿಯಾಗಿರುವ ಮೂರನೇ ಸ್ಥಾನದಲ್ಲಿದೆ.

ಈ ವಿಷಯದಲ್ಲಿ ನಮ್ಮ ದೇಶ ಅಮೆರಿಕ, ಚೀನಾಗಳಿಗಿಂತಲೂ ಮುಂದಿದೆ. ಮೊದಲ ಸ್ಥಾನದಲ್ಲಿರುವ ರಷ್ಯಾ ಮತ್ತು ಎರಡನೇ ಸ್ಥಾನದಲ್ಲಿ ಇಟಲಿ ಇವೆ.

2009ರಿಂದ ಇಲ್ಲಿಯವರೆಗೆ ಭಾರತದ ಸುಮಾರು 700 ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಮಹತ್ವದ ಟೂರ್ನಿಗಳಲ್ಲಿ ಸಿಕ್ಕಿಬಿದ್ದು ತಮ್ಮ ಭವಿಷ್ಯವನ್ನೂ ಹಾಳು ಮಾಡಿಕೊಂಡಿದ್ದಾರೆ. ತಾವು ಪ್ರತಿನಿಧಿಸಿದ ದೇಶ, ಸಂಸ್ಥೆಗಳಿಗೂ ಕಳಂಕ ಮೆತ್ತಿದ್ದಾರೆ.

ಅದರಲ್ಲಿ ಕೆಲವರು ಹಿತಶತ್ರುಗಳ ಪಿತೂರಿಗೆ ಬಲಿಯಾದ, ಇನ್ನು ಕೆಲವರಿಗೆ ತಪ್ಪು ಮಾರ್ಗದರ್ಶನಗಳು ಇದಕ್ಕೆ ಕಾರಣ. ಆದರೆ ಬಹುತೇಕರಿಗೆ ಶೀಘ್ರ ಯಶಸ್ಸು, ಕೀರ್ತಿ, ಹಣ ಗಳಿಸುವ ಹಪಾಹಪಿಯೇ ಮದ್ದು ಸೇವನೆಗೆ ಪ್ರಚೋದಿಸುವ ಕಾರಣಗಳಾಗಿವೆ. ಇವುಗಳಲ್ಲಿ ಮನಪ್ರೀತ್ ಅವರನ್ನು ಸೆಳೆದ ಕಾರಣ ಯಾವುದು ಎಂದು ಇನ್ನಷ್ಟೇ ತಿಳಿಯಬೇಕಿದೆ.

ಹೋದ ವರ್ಷ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿದ್ದರು. ಆದರೆ, ಅವರು ಇದುವರೆಗೂ ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದೇ ಹೇಳುತ್ತಾರೆ.

ಈ ಹಿಂದೆ ವೇಟ್‌ಲಿಫ್ಟರ್‌ ಕುಂಜುರಾಣಿದೇವಿ, ಸನಮಾಚಾ ಚಾನು, ಸತೀಶ್ ರೈ, ಅಥ್ಲೀಟ್ ಅಶ್ವಿನ ಅಕ್ಕುಂಜಿ, ಸೀಮಾ ಪೂನಿಯಾ ಅಂಟಿಲ್, ಆಕಾಶ್ ಅಂಟಿಲ್, ಸಿನಿ ಜೋಸ್, ಮನದೀಪ್ ಕೌರ್, ಅನಿಲ್ ಕುಮಾರ್ ಅವರು ತಾವು ಗೆದ್ದ ಪದಕ ಕಳೆದುಕೊಂಡಿದ್ದರು. ಅವರಲ್ಲಿ ಬಹುತೇಕರು ತಮ್ಮ ತಪ್ಪಿಲ್ಲ ಎಂದೇ ಹೇಳಿಕೊಂಡಿದ್ದರು.

ಆದರೆ ಈ ಬಾರಿ ಪ್ರಕರಣ ನಡೆದು ನಾಲ್ಕು ದಿನಗಳು ಕಳೆದಾಗಲೂ ಮನಪ್ರೀತ್ ಮತ್ತು ಅವರ ಕೋಚ್ ಕೂಡ ಆಗಿರುವ ಪತಿ ಕರಮ್‌ಜೀತ್ ಸಿಂಗ್ ಕೂಡ ಮೌನಮುರಿದಿಲ್ಲ. ‘ಮೌನಂ ಸಮ್ಮತಿ ಲಕ್ಷಣಂ’ ಆಗಿರಬಹುದೇ ಎಂಬ ಸಂದೇಹಕ್ಕೆ ಬಲ ಬಂದಿದೆ. ಜೊತೆಗೆ ಫೆಡರೇಷನ್‌ಗಳು, ಮದ್ದು ತಡೆ ಜಾಗೃತಿ ಕಾರ್ಯಕ್ರಮ ಮತ್ತು ಪರೀಕ್ಷಾ ಕಾರ್ಯವಿಧಾನಗಳ ಸುಧಾರಣೆಗಳ ಅವಶ್ಯಕತೆಯನ್ನೂ ಈ ಪ್ರಕರಣ ಎತ್ತಿ ತೋರಿಸಿದೆ.

ಪಂಜಾಬ್‌ನ ಸಹೌಲಿ ಗ್ರಾಮದ ಮನಪ್ರೀತ್ ಬಾಲ್ಯದಲ್ಲಿಯೇ ಪಿತೃವಿಯೋಗ ಅನುಭವಿಸಿದ್ದವರು. ಅಲ್ಲದೇ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ತಾಯಿ ಮತ್ತು ಮೂವರು ಮಕ್ಕಳ ಕುಟುಂಬದಲ್ಲಿ ಎದುರಾಗಿದ್ದ ಕಷ್ಟಗಳನ್ನು ಸಹಿಸುತ್ತ, ಎದುರಿಸುತ್ತ ಬೆಳೆದವರು.

ಅಥ್ಲೆಟಿಕ್ಸ್‌ನಲ್ಲಿ ಮಹತ್ವದ ಸಾಧನೆ ಮಾಡಲು ಛಲದಿಂದ ಹೋದ ವರ್ಷ ರಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಸುವವರೆಗೂ ಬೆಳೆದವರು. ರೈಲ್ವೆ ಉದ್ಯೋಗಿಯಾಗಿರುವ ಅವರು ಹೆಣ್ಣುಮಗುವಿನ ತಾಯಿ ಕೂಡ ಆಗಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಮೂರು ಚಿನ್ನದ ಪದಕ (ಚೀನಾ, ಪಟಿಯಾಲ ಮತ್ತು ಭುವನೇಶ್ವರಗಳಲ್ಲಿ) ಗೆದ್ದು ಸುದ್ದಿಯಾಗಿದ್ದರು. ಆದರೆ ಅವರ ದಿಢೀರ್ ಸಾಧನೆಗಳ ಹಿಂದಿನ ಕರಾಳ ಸತ್ಯ ಬಯಲಾಗಿದೆ. ಬಾಲ್ಯದಿಂದಲೂ ಅನುಭವಿಸಿದ ಕಷ್ಟ, ನಷ್ಟಗಳು, ಮಾಡಿದ ಸಾಧನೆಗಳೂ ಈಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

**

ತಳಮಟ್ಟದಲ್ಲಿ ಜಾಗೃತಿ ಅವಶ್ಯ

ಕ್ರೀಡಾ ವಸತಿ ನಿಲಯಗಳಲ್ಲಿ, ಶಿಬಿರಗಳಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ, ಪ್ರಚಾರ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಆದರೆ ಇದು ಸಾಲದು. ಶಾಲಾಮಟ್ಟದಲ್ಲಿಯೇ ಉದ್ದೀಪನ ಮದ್ದಿನ ಸೇವನೆಯಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಆರಂಭಿಕ ಹಂತದ ಕ್ರೀಡಾಕೂಟಗಳಿಂದಲೇ (ಜೂನಿಯರ್ ರಾಷ್ಟ್ರೀಯ, ರಾಜ್ಯ ಮಟ್ಟದ ಕೂಟಗಳು) ಮದ್ದು ಸೇವನೆ ಪರೀಕ್ಷೆಗಳ ವ್ಯವಸ್ಥೆ ಮಾಡುವಲ್ಲಿ ಕೂಡ ಹಿನ್ನಡೆ ಉಂಟಾಗಿದೆ. ಪರೀಕ್ಷೆಯ ವೆಚ್ಚವು ದುಬಾರಿಯಾಗಿರುವುದೇ (ಒಂದು ಟೆಸ್ಟ್‌ಗೆ ಕನಿಷ್ಠ ₹ 15 ಸಾವಿರ ವೆಚ್ಚ ತಗಲುತ್ತದೆ) ಇದಕ್ಕೆ ಕಾರಣ.

***

ಮನಪ್ರೀತ್ ಕೌರ್ ಸಾಧನೆ

* 2013: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು.

* 15.76 ಮೀ: ಗುವಾಂಗ್ಜುನಲ್ಲಿ ಎರಡು ವರ್ಷಗಳ ಹಿಂದೆ ಮಾಡಿದ್ದ ದಾಖಲೆ

* 17.96 ಮೀ: ಕೋಲ್ಕತ್ತದಲ್ಲಿ ಹೋದ ವರ್ಷ ನಡೆದಿದ್ದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬರೆದ ದಾಖಲೆ

* 18.86 ಮೀ: ಹೋದ ಏಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್‌ಪ್ರಿ ಕೂಟದಲ್ಲಿ ಮಾಡಿದ ದಾಖಲೆ

* 2016: ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ

* 2017ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.