ADVERTISEMENT

ಮಹಿಳಾ ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ ಮೇರಿ

ಕೆ.ಓಂಕಾರ ಮೂರ್ತಿ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಮಹಿಳಾ ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ ಮೇರಿ
ಮಹಿಳಾ ಬಾಕ್ಸಿಂಗ್‌ನ ಸ್ಫೂರ್ತಿಯ ಸೆಲೆ ಮೇರಿ   

‘ದೇಹದಲ್ಲಿ ಬಲ ಇರುವವರೆಗೆ ಬಾಕ್ಸಿಂಗ್‌ ತೊರೆಯುವ ವಿಚಾರವೇ ಇಲ್ಲ. ಮತ್ತಷ್ಟು ಕಠಿಣ ಪ್ರಯತ್ನ ಹಾಕಿ ಹೋರಾಡುತ್ತೇನೆ’

–ವಿಯೆಟ್ನಾಂನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಂದರ್ಭದಲ್ಲಿ ಬಾಕ್ಸರ್‌ ಮೇರಿ ಕೋಮ್‌ ಅವರು ಮಾಡಿದ ಟ್ವೀಟ್‌ ಇದು.

ಮಹಿಳಾ ಬಾಕ್ಸಿಂಗ್‌ನಲ್ಲಿ ವಿಶೇಷ ಕ್ರಾಂತಿಗೆ ಕಾರಣರಾದವರು ಮೇರಿ ಕೋಮ್‌. ಮೂರು ಮಕ್ಕಳ ತಾಯಿಗೆ ಈಗ ಬರೋಬ್ಬರಿ 34 ವರ್ಷ. ಆದರೆ, ಬಾಕ್ಸಿಂಗ್‌ ರಿಂಗ್‌ನೊಳಗೆ ಯುವತಿಯರನ್ನೂ ನಾಚಿಸುವ ಸಾಮರ್ಥ್ಯ ಅವರದ್ದು. ಮಣಿಪುರದ ಈ ಮಹಿಳೆಯ ಸಾಧನೆ ಅಷ್ಟಿಷ್ಟಲ್ಲ. 18 ವರ್ಷಗಳಿಂದ ಹೆಜ್ಜೆ ಗುರುತು ಮೂಡಿಸುತ್ತಲೇ ಇದ್ದಾರೆ. ಮಕ್ಕಳ ಅನಾರೋಗ್ಯ, ಸತತ ಪ್ರವಾಸ, ವಿವಾದಗಳ ಜೊತೆಗೆ ಹಲವು ಅಡೆತಡೆಗಳನ್ನು ದಾಟಿ ಬಂದಿದ್ದಾರೆ. ಈಗ ಹಿರಿಯ ಬಾಕ್ಸರ್‌ ಆಗಿ ಮಾರ್ಗದರ್ಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ADVERTISEMENT

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದು ಒಂದೆಡೆಯಾದರೆ ಐದು ಬಾರಿ ವಿಶ್ವ ಅಮೆಚೂರ್‌ ಬಾಕ್ಸಿಂಗ್‌ ಚಾಂಪಿಯನ್‌ ಆಗಿದ್ದು ವಿಶೇಷ ಸಾಧನೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಕೂಡ. ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ ನಾಲ್ಕು ಬಾರಿ ಚಾಂಪಿಯನ್‌ ಆಗಿದ್ದಾರೆ. ಈ ಸಾಧನೆಯನ್ನು ಮೆಚ್ಚಿಯೇ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕಾರಣ ಮಾಡಲಾಗಿದೆ. ಮೇರಿ ಕುರಿತು ಬಾಲಿವುಡ್‌ನಲ್ಲಿ ಸಿನಿಮಾ ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಮಣಿಪುರದಲ್ಲಿ ಬಾಕ್ಸಿಂಗ್‌ ಅಕಾಡೆಮಿ ಸ್ಥಾಪಿಸಿ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ.

2012ರ ಒಲಿಂಪಿಕ್ಸ್‌ ಹಾಗೂ 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕದ ಸಾಧನೆ ಬಳಿಕ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ಗೆ ಭಾರತದ ಮಹಿಳಾ ಬಾಕ್ಸರ್‌ಗಳು ಅರ್ಹತೆ ಗಿಟ್ಟಿಸಿರಲಿಲ್ಲ. ಮೇರಿ ಈ ಹಿಂದೆ 48 ಕೆ.ಜಿ ವಿಭಾಗದಲ್ಲಿ (ಲೈಟ್‌ ಫ್ಲೈವೇಟ್‌) ಸ್ಪರ್ಧಿಸುತ್ತಿದ್ದರು. 2010ರಿಂದ 51 ಕೆ.ಜಿ ವಿಭಾಗದಲ್ಲಿ (ಫ್ಲೈವೇಟ್‌) ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ, ಈಗ ಮತ್ತೆ 48 ಕೆ.ಜಿ ವಿಭಾಗದಲ್ಲಿ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಯುವ ಸ್ಪರ್ಧಿಗಳಿಂದ ಎದುರಾದ ಸವಾಲನ್ನು ಮೆಟ್ಟಿ ನಿಂತು ಈ ವಿಭಾಗದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದರು. ಈ ವಿಭಾಗದ ಸ್ಪರ್ಧೆ ಒಲಿಂಪಿಕ್ಸ್‌ನಲ್ಲಿ ಇಲ್ಲ. ಭಾರತ ಬಾಕ್ಸಿಂಗ್‌ನ ಸದ್ಯದ ಪರಿಸ್ಥಿತಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಯುವ ಪ್ರತಿಭೆಗಳನ್ನು ಹುರಿದುಂಬಿಸಲು ರಾಜ್ಯ ಹಾಗೂ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗಳೇ ನಡೆಯುತ್ತಿಲ್ಲ. ಈ ಬಗ್ಗೆ ಮೇರಿ ಕೋಮ್‌ ಹಲವು ಬಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೇರಿ, ಎಲ್‌.ಸರಿತಾ ದೇವಿ ಹೊರತುಪಡಿಸಿ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಮಹಿಳಾ ಬಾಕ್ಸರ್‌ಗಳು ಕಾಣಿಸುತ್ತಿಲ್ಲ. ಸೋನಿಯಾ ಲಾಥರ್‌, ಪೂಜಾ ರಾಣಿ, ಸೀಮಾ, ಸರ್ಜುಬಾಲಾ ದೇವಿ ಸೇರಿದಂತೆ ಹೆಚ್ಚಿನವರು ಏಷ್ಯನ್‌ ಬಾಕ್ಸಿಂಗ್‌ಗೆ ಸೀಮಿತವಾಗುತ್ತಿದ್ದಾರೆ. ಬಾಕ್ಸಿಂಗ್‌ ಫೆಡರೇಷನ್‌ ಕೂಡ ಹಲವು ವಿವಾದಗಳಿಗೆ ಸಿಲುಕಿದೆ. ಈಚೆಗಷ್ಟೇ ವೇತನ ವಿಚಾರದಲ್ಲಿ ಮಹಿಳಾ ತಂಡದ ಕೋಚ್‌, ಫ್ರಾನ್ಸ್‌ನ ಸ್ಟಿಫಾನೆ ಕಾಟಲೋರ್ಡ ರಾಜೀನಾಮೆ ನೀಡಿದ್ದಾರೆ. ಅವರ ನೇಮಕವಾಗಿ ಒಂದು ತಿಂಗಳಷ್ಟೇ ಆಗಿತ್ತು.  ಮೇರಿ ಅವರು ಸ್ಟಿಫಾನೆ ಮನವೊಲಿಸಲು ಪ್ರಯತ್ನಿಸಿದ್ದರು. ಇದೇ ತಿಂಗಳು ನಡೆಯಲಿರುವ ಐಒಸಿ ಅಥ್ಲೀಟ್‌ಗಳ ವೇದಿಕೆಯಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಅಸೋಸಿಯೇಷನ್‌ನ ಪ್ರತಿನಿಧಿಯಾಗಿ ಭಾಗವಹಿಸಲು ಮೇರಿ ಅವಕಾಶ ಪಡೆದುಕೊಂಡಿದ್ದಾರೆ.

ಸಾಧನೆಯ ಹೆಜ್ಜೆ ಗುರುತು ಮೂಡಿಸಿರುವುದು ಮಾತ್ರವಲ್ಲ; ದೇಶದ ಮಹಿಳೆಯರ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಪ್ರೇರಣಾಶಕ್ತಿಯಾಗಿದ್ದಾರೆ. ಹಿರಿಯ ಬಾಕ್ಸರ್‌ ಆಗಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯೂ ಇದೆ. ತಮ್ಮ ಅನುಭವವನ್ನು ಯುವ ಬಾಕ್ಸರ್‌ಗಳಿಗೆ ಹೇಳಿಕೊಟ್ಟು ಅತ್ಯುತ್ತಮ ತಂಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರೇ ಹೇಳಿಕೊಂಡಂತೆ ಇನ್ನೂ ಹಲವು ವರ್ಷ ಸ್ಪರ್ಧಾ ಕಣದಲ್ಲಿ ಮುಂದುವರಿಯುವ ಸಾಮರ್ಥ್ಯ ಅವರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.