ADVERTISEMENT

ರೋಲ್‌ಬಾಲ್‌ ಬೆಳವಣಿಗೆಗೆ ಬೇಕಿದೆ ಗಟ್ಟಿನೆಲೆ...

ಪುಣೆಯಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದ ರೋಲ್‌ಬಾಲ್‌

ಪ್ರಮೋದ ಜಿ.ಕೆ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST
ಒಂದೆಡೆ ಹಳೆಯ ಕ್ರೀಡೆಗಳಿಗೆ ‘ಲೀಗ್‌’ಗಳ ಸ್ಪರ್ಶ ಕೊಟ್ಟು ಕ್ರೀಡೆಯ ಜನಪ್ರಿಯತೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ ಹೊಸ ಕ್ರೀಡೆಗಳನ್ನು ಜನರ ಮುಂದಿಟ್ಟು ಆ ಕ್ರೀಡೆಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯವೂ ಸಾಗಿದೆ. ಅದರಲ್ಲಿ ರೋಲ್‌ಬಾಲ್‌ ಕೂಡ ಒಂದು.
 
ಈ ಕ್ರೀಡೆ ಭಾರತದಲ್ಲಿ ಹುಟ್ಟಿ ವಿದೇಶಗಳಲ್ಲಿ ಕಂಪು ಪಸರಿಸುತ್ತಿದೆ. ಪುಣೆಯಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದ ರೋಲ್‌ಬಾಲ್‌ ಈಗ ಕರ್ನಾಟಕ, ತಮಿಳುನಾಡು, ಪಂಜಾಬ್‌, ಕೇರಳ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
 
ಪತ್ರಿಕೆ ಹಂಚುವ ಹುಡುಗ ಕಟ್ಟಿದ ಕ್ರೀಡೆ
ಆ ಹುಡುಗ ನಿತ್ಯ ಬೆಳಗಿನ ಜಾವ ಎದ್ದು ಮನೆಮನೆಗೆ ಹೋಗಿ ಪತ್ರಿಕೆ ಹಂಚುತ್ತಿದ್ದ. ನಂತರದ ದಿನಗಳಲ್ಲಿ ಪತ್ರಿಕೆ ಹಂಚುವ ಜೊತೆಗೆ ಸ್ಕೇಟಿಂಗ್ ಕೂಡ ಕಲಿತುಕೊಂಡ. ಇನ್ನೊಂದಿಷ್ಟು ದಿನಗಳು ಉರುಳಿದ ಬಳಿಕ ಬೆನ್ನ ಮೇಲೊಂದು ಪತ್ರಿಕೆಗಳ ಬ್ಯಾಗ್‌ ನೇತುಹಾಕಿಕೊಂಡು ಸ್ಕೇಟಿಂಗ್‌ ಮಾಡುತ್ತಾ ಪತ್ರಿಕೆ ತಲುಪಿಸುವ ಕೆಲಸ ಮಾಡುತ್ತಿದ್ದ. ಹೀಗೆ ಪತ್ರಿಕೆ ಹಂಚುವ ಜೊತೆಗೆ ಬೆಳೆದ ಸ್ಕೇಟಿಂಗ್‌ ಪ್ರೀತಿ ಮುಂದೆ ಹಲವಾರು ಸಾಧನೆಗಳಿಗೆ ನಾಂದಿಯಾಯಿತು. ಆ ಸಾಧನೆ ಮಾಡಿದ ಹುಡುಗನೇ ಪುಣೆಯ ರಾಜು ದಬಾಡೆ.
 
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ರೋಲರ್‌ ಸ್ಪೀಡ್‌್ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಸಾಕಷ್ಟು ಸಾಧನೆ ಮಾಡಿರುವ ರಾಜು ಅವರೇ 2003ರಲ್ಲಿ ರೋಲ್‌ ಬಾಲ್‌ ಕ್ರೀಡೆಯನ್ನು ಹುಟ್ಟುಹಾಕಿದರು. ವಿದ್ಯಾಭ್ಯಾಸ ಮುಗಿಸಿದ ನಂತರ ಪುಣೆಯ ಕಾಲೇಜೊಂದ ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಕೆಲಸ ಮಾಡಿದರು.
 
ಕ್ರೀಡೆಯ ನಿಯಮಗಳು
ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ರೀಡೆಯಾದ ಕಾರಣ ಎಲ್ಲಕಡೆಯೂ ರೋಲ್‌ ಬಾಲ್‌ ಅಂಕಣಗಳಿಲ್ಲ. ಆದ್ದರಿಂದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿಯೇ ಪಂದ್ಯಗಳನ್ನು ಆಡಿಸಲಾಗುತ್ತಿದೆ.
 
ಒಂದು ತಂಡದಲ್ಲಿ ಒಟ್ಟು 12 ಆಟಗಾರರು ಇರುತ್ತಾರೆ. ಇದರಲ್ಲಿ ಆರು ಜನ ಕಣಕ್ಕಿಳಿಯಬೇಕು. ಒಬ್ಬರು ಗೋಲ್‌ಕೀಪರ್ ಇರುತ್ತಾರೆ. ಸ್ಕೇಟಿಂಗ್‌ನಲ್ಲಿ ಬಳಸುವ ಸ್ಕೇಟ್‌ ಬಳಸಲಾಗುತ್ತದೆ. ತಮ್ಮ ತಂಡದವರಲ್ಲಿ ಒಬ್ಬರಿಂದ ಒಬ್ಬರಿಗೆ ಚೆಂಡನ್ನು ಪಾಸ್ ಮಾಡುತ್ತಾ ಅಂತಿಮವಾಗಿ ಎದುರಾಳಿ ತಂಡದ ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ಹಾಕಬೇಕಾಗುತ್ತದೆ.
 
ಹಾಕಿ ಕ್ರೀಡೆಯಲ್ಲಿ ಇರುವಷ್ಟೇ ಸಮಯ ರೋಲ್‌ ಬಾಲ್‌ನಲ್ಲಿದೆ. 15 ನಿಮಿಷಗಳ ನಾಲ್ಕು ಕ್ವಾರ್ಟರ್‌ಗಳು ನಡೆಯುತ್ತವೆ. ಒಂದು ಮತ್ತು ಮೂರನೇ ಕ್ವಾರ್ಟರ್‌ ಮುಗಿದ ಬಳಿಕ ತಲಾ ಮೂರು ನಿಮಿಷ ವಿಶ್ರಾಂತಿ ಲಭಿಸುತ್ತದೆ.

ಮೊದಲ ಎರಡು ಕ್ವಾರ್ಟರ್‌ಗಳು ಮುಗಿದ ಬಳಿಕ ಐದು ನಿಮಿಷ ವಿಶ್ರಾಂತಿ. ಪಂದ್ಯದ ಅವಧಿ ಒಟ್ಟು 60 ನಿಮಿಷದ್ದಾಗಿರುತ್ತದೆ. ಹೆಚ್ಚು ಗೋಲು ಹೊಡೆದ ತಂಡ ವಿಜಯೀಯಾಗುತ್ತದೆ. ಇದರಲ್ಲಿಯೇ ಮಿನಿ ಮತ್ತು ನಾರ್ಮಲ್‌ ರೋಲ್‌ಬಾಲ್ ಟೂರ್ನಿಗಳು ನಡೆಯುತ್ತವೆ. ಮಿನಿ ರೋಲ್‌ಬಾಲ್‌ನಲ್ಲಿ ಬಳಸಲಾಗುವ ಚೆಂಡು 340ರಿಂದ 400ಗ್ರಾಮ್‌ನಷ್ಟು ತೂಕವಿರುತ್ತದೆ.  
 
ಕರ್ನಾಟಕದಲ್ಲಿಯೂ ಪ್ರಗತಿಯ ಹಾದಿ
ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ನಡೆಯುತ್ತಿವೆ. 2014ರಲ್ಲಿ ಅಸ್ಸಾಮ್‌ನಲ್ಲಿ ಸಬ್‌ ಜೂನಿಯರ್‌ ಮತ್ತು ಅದೇ ವರ್ಷ ತಮಿಳುನಾಡಿನಲ್ಲಿ ಜೂನಿಯರ್‌ ಕ್ರೀಡಾ ಕೂಟ ನಡೆದಿತ್ತು. ಹೋದ ವರ್ಷ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪಾಲ್ಗೊಂಡಿತ್ತು.
 
ಜೂನಿಯರ್‌ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅನಿಕೇತ್‌, ಎಂಇಎಸ್‌ನ ಅರ್ಜುನ್‌, ಎಂಇಎಸ್‌ ಕಿಶೋರ ಕೇಂದ್ರದ ವಿಷ್ಣು, ಕೊಪ್ಪಳದ ಗವೀಶ್ ಮಂಗಳೂರು, ಕೆ. ದರ್ಶನ್‌, ವೈ.ಎಸ್‌. ಅಭಿಷೇಕ್‌, ದರ್ಶನ್ ಕಾತ್ವಾ, ಎಸ್‌. ರಂಜಿತಾ ಹೀಗೆ ಅನೇಕ ಪ್ರತಿಭಾನ್ವಿತರು ಮಿಂಚುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೊಪ್ಪಳ, ರಾಯಚೂರು, ಬಿಜಾಪುರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳ ಶಾಲೆಗಳಲ್ಲಿಯೂ ಈ ಕ್ರೀಡೆ ಕ್ರಿಯಾಶೀಲವಾಗಿದೆ. 
 
ಫೆಬ್ರುವರಿ 17ರಿಂದ ವಿಶ್ವಕಪ್‌
ರೋಲ್‌ಬಾಲ್‌ ಕ್ರೀಡೆಯ ನಾಲ್ಕನೇ ವಿಶ್ವಕಪ್‌ ಫೆಬ್ರುವರಿ 17ರಿಂದ ಬಾಂಗ್ಲಾದೇಶದ ಢಾಕಾದಲ್ಲಿ ಆಯೋಜನೆಯಾಗಿದೆ. ಈ ಬಾರಿ 45 ದೇಶಗಳ ಸುಮಾರು 700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ವಿಶ್ವಕಪ್‌ನ ಹಾಲಿ ಚಾಂಪಿಯನ್‌ ಭಾರತ, ಫ್ರಾನ್ಸ್‌, ಇಂಗ್ಲೆಂಡ್‌, ಅರ್ಜೆಂಟೀನಾ, ಈಕ್ವೆಡಾರ್‌, ಉರುಗ್ವೆ, ಈಜಿಪ್ಟ್‌, ಇರಾನ್‌, ಡೆನ್ಮಾರ್ಕ್‌, ಬೆಲಾರಸ್‌, ಚೀನಾ, ಥಾಯ್ಲೆಂಡ್, ಇಂಡೊನೇಷ್ಯಾ, ತಾಂಜೇನಿಯಾ, ಕೆನ್ಯಾ, ಐವರಿ ಕೋಸ್ಟ, ಜಾಂಬಿಯಾ, ಯುನೈಟೆಡ್‌ ಅರಬ್ ಎಮಿರೇಟ್ಸ್‌, ನೆದರ್ಲೆಂಡ್ಸ್‌, ವಿಯಟ್ನಾಂ, ಹಾಂಕಾಂಗ್‌, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಆತಿಥೇಯ ಬಾಂಗ್ಲಾದೇಶ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಬಾಂಗ್ಲಾದಲ್ಲಿ ಆಯೋಜನೆಯಾಗಿರುವ ಮೊದಲ ರೋಲ್‌ಬಾಲ್‌ ವಿಶ್ವಕಪ್‌ ಇದು. 2011 ಮತ್ತು 2015ರಲ್ಲಿ ಎರಡು ಸಲ ಭಾರತ ಈ ಟೂರ್ನಿಗೆ ಆತಿಥ್ಯ ವಹಿಸಿತ್ತು. 2013ರಲ್ಲಿ ಕೆನ್ಯಾದ ನೈರೋಬಿಯಲ್ಲಿ ಜರುಗಿತ್ತು.

ಭಾರತದಲ್ಲಿಯೇ ಹುಟ್ಟಿ ಪ್ರಗತಿಯ ಹಾದಿಯಲ್ಲಿಸಾಗುತ್ತಿರುವ ಕಾರಣ ಭಾರತವರೇ ಈ ಕ್ರೀಡೆಯ ಆಡಳಿತದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ರೋಲ್‌ಬಾಲ್‌ ಫೆಡರೇಷನ್‌ಗೆ ಹರಿಯಾಣದ ಮನೋಜ್ ಯಾದವ್‌ ಸಂಯೋಜಕರಾಗಿದ್ದಾರೆ. ಮಾಜಿ ರಣಜಿ ಕ್ರಿಕೆಟ್‌ ಆಟಗಾರ ಮನೋಜ್‌ ಏಷ್ಯನ್‌ ರೋಲ್‌ಬಾಲ್‌ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ.
 
‘ಪ್ರಗತಿಯತ್ತ ದಾಪುಗಾಲು’
ಸ್ಕೇಟಿಂಗ್ ಆಡುವ ಪ್ರತಿಯೊಬ್ಬರೂ ರೋಲ್‌ಬಾಲ್‌ ಆಡಬಹುದು. ನಿಯಮಗಳು ಸರಳವಾಗಿವೆ. ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಸ್ಕೂಲ್‌ ಗೇಮ್ಸ್‌ ಫೆಡರೇಷನ್ಸ್‌ ಆಫ್‌ ಇಂಡಿಯಾದಿಂದ ಮಾನ್ಯತೆ ಲಭಿಸಿರುವ ಕಾರಣ ಶಾಲಾ ವಿದ್ಯಾರ್ಥಿಗಳೇ ಹೆಚ್ಚು ಭಾಗವಹಿಸುತ್ತಾರೆ.
 
ಮುಂದಿನ ವಿಶ್ವಕಪ್‌ ವೇಳೆಗೆ ರಾಜ್ಯದ ಕನಿಷ್ಠ ನಾಲ್ಕೈದು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುತ್ತಾರೆ. ಈ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಭಾರತವೇ ಪ್ರಾಬಲ್ಯ ಹೊಂದಿದೆ. ಹಿಂದಿನ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಜಯಿಸಿರುವುದು ಈ ಕ್ರೀಡೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ.
–ಗೋವಿಂದಯ್ಯ, ರೋಲ್‌ಬಾಲ್ ಸಂಸ್ಥೆ ಕಾರ್ಯದರ್ಶಿ
 
‘ಸರ್ಕಾರದ ನೆರವು ಬೇಕು’
ರೋಲ್‌ಬಾಲ್‌ ಪುಣೆಯಲ್ಲಿ ಉದಯವಾದ ಕಾರಣ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯಲ್ಲಿದೆ. ಕೆಲ ದಿನಗಳ ಹಿಂದೆ ಕೊಪ್ಪಳದಲ್ಲಿ ತರಬೇತಿ ಶಿಬಿರ ನಡೆಸಿದ್ದಾಗ ನಾಲ್ಕೈದು ಜಿಲ್ಲೆಗಳಿಂದಲೇ 125ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಆಗಾಗ್ಗೆ ಶಾಲಾ ಮಟ್ಟದಲ್ಲಿ ಟೂರ್ನಿಗಳನ್ನು ನಡೆಸುತ್ತೇವೆ. ಸ್ಪರ್ಧೆಗಳನ್ನು ಆಯೋಜಿಸಲು ಬೇಕಾಗುವ ಅಂಕಣ ಗ್ರಾಮೀಣ ಪ್ರದೇಶಗಳಲ್ಲಿ ಸಿಗದ ಕಾರಣ ನಗರದ ಮೇಲೆ ಅಲವಂಬಿತವಾಗಬೇಕಾಗುತ್ತದೆ. ಆರ್ಥಿಕವಾಗಿ ಹೊರೆ ಎನಿಸುವ ಕಾರಣ ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿದೆ.
–ಅಬ್ದುಲ್‌ ರಜಾಕ್‌ ಟೇಲರ್‌, ಕರ್ನಾಟಕ ರೋಲ್‌ಬಾಲ್‌ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.