ADVERTISEMENT

ವೇಗದ ಮೋಜಿನೊಳಗೆ...

ಕೆ.ಓಂಕಾರ ಮೂರ್ತಿ
Published 26 ಜುಲೈ 2015, 19:30 IST
Last Updated 26 ಜುಲೈ 2015, 19:30 IST

ಮೋಟಾರ್‌ ಸ್ಪೋರ್ಟ್ಸ್‌ ಕ್ಷೇತ್ರದಲ್ಲಿ ಮತ್ತೆ ಸೂತಕದ ಛಾಯೆ ಆವರಿಸಿದೆ...

ವೇಗದ ಚಾಲನೆ ಮೂಲಕ ಗರ್ಜಿಸಿದ್ದ ಏಳು ಬಾರಿಯ ಫಾರ್ಮುಲಾ ಒನ್‌ ಚಾಂಪಿಯನ್‌ ಮೈಕಲ್‌ ಶುಮಾಕರ್‌ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಸಾಹಸ ಕ್ರೀಡೆ ಸ್ಕೀಯಿಂಗ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಅಪ್ಪಳಿಸಿ ತಲೆಗೆ ಪೆಟ್ಟು ಮಾಡಿ ಕೊಂಡಿದ್ದ ಅವರಿನ್ನೂ ಪೂರ್ಣ ವಾಗಿ ಕೋಮಾದಿಂದ ಹೊರ ಬಂದಿಲ್ಲ. ಇವರು ಮೋಟಾರು ರೇಸ್‌ನಲ್ಲಿ ಗಾಯಗೊಂಡವರಲ್ಲ.  ಆದರೂ ಅವರ ಕೋಮಾಸ್ಥಿತಿ ಮೋಟಾರು ಕ್ರೀಡಾ ರಂಗ ದಲ್ಲಿರುವವರಿಗೆಲ್ಲರಿಗೂ ಆಘಾತ ಉಂಟು ಮಾಡಿದೆ.  ಅಷ್ಟರಲ್ಲಿ ಫಾರ್ಮುಲಾ ಒನ್‌ ಕ್ಷೇತ್ರದಲ್ಲಿ ಸಂಭವಿಸಿದ ಸಾವಿನ ಸುದ್ದಿಯೊಂದು ಕ್ರೀಡಾ ಲೋಕವನ್ನು ತಲ್ಲಣಗೊಳಿಸಿದೆ.

2014ರಲ್ಲಿ ಜಪಾನ್‌ ಗ್ರ್ಯಾನ್‌ ಪ್ರಿ ಸ್ಪರ್ಧೆ ವೇಳೆ ಸುಜುಕಾದಲ್ಲಿ ಸಂಭವಿಸಿದ ಅಪ ಘಾತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಜೂಲ್ಸ್‌ ಬಿಯಾಂಚಿ ಕೆಲ ದಿನಗಳ ಹಿಂದೆ ಅಸು ನೀಗಿದರು. 9 ತಿಂಗಳಿನಿಂದ ಕೋಮಾದಲ್ಲಿದ್ದ ಅವರೀಗ ನೆನಪು ಮಾತ್ರ. ಫ್ರಾನ್ಸ್‌ನ ಈ ಚಾಲಕನಿಗೆ ಕೇವಲ 25 ವರ್ಷ ವಯಸ್ಸು. ವೇಗದ ಮೋಜು ಎಂಬ ಆಕರ್ಷಣೆಯು ಸಾಹಸಿಯೊಬ್ಬನ ಪ್ರೀತಿ, ಕನಸು ಜೀವವನ್ನೇ ಕಿತ್ತುಕೊಂಡಿದೆ. ಚಿಕ್ಕಂದಿ ನಿಂದಲೇ ಬಿಯಾಂಚಿಗೆ ರೇಸ್‌ ಎಂದರೆ ವಿಪರೀತ ಗೀಳು. ಮೂರು ವರ್ಷ ವಯಸ್ಸಿನಲ್ಲೇ ಗೋ ಕಾರ್ಟಿಂಗ್‌ ಮೂಲಕ ರೇಸ್‌ ಮೋಹಕ್ಕೆ ಬಿದ್ದ ಅವರು ಎಫ್‌–1ನಲ್ಲಿ ಭಾರಿ ಭರವಸೆ ಮೂಡಿಸಿದ್ದರು.

ಈ ರೇಸ್‌ನ ಮೋಹವೇ ಹಾಗೆ. ಹೃದಯ ಬಡಿತ ಹೆಚ್ಚಿಸುತ್ತಲೇ ಸ್ಫೂರ್ತಿ ತುಂಬುವ ಶಕ್ತಿ ಇದೆ. ಮನಸ್ಸುಗಳನ್ನು ಮುದಗೊಳಿಸುವ ತಾಕತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅದರೊಳ ಗೊಂದು ಅದ್ಭುತ ಎನಿಸುವ ಸೌಂದರ್ಯವಿದೆ. ಹಣಕ್ಕಿಂತ ವೇಗದ ರೋಮಾಂಚನವೇ ಚಾಲಕರಿಗೆ ಸ್ಫೂರ್ತಿ ನೀಡುವಂಥದ್ದು. ಈ ಕ್ರೀಡೆಗೆ ಬರುವವರೆಲ್ಲಾ ಬಹುತೇಕ ಶ್ರೀಮಂತರು ಎನ್ನುವುದೂ ನಿಜ. ಆದರೆ, ಅಪಾಯ ಜೊತೆಯಲ್ಲಿಯೇ ಇರುತ್ತದೆ. ಸಾವು ಹಾಗೂ ಮೋಟಾರ್ ರೇಸ್ ಜೊತೆಜೊತೆ ಯಾಗಿಯೇ ಸಾಗುತ್ತಿರುತ್ತವೆ ಎನ್ನುವ ಮಾತಿದೆ. 

ಸುರಕ್ಷತೆ ಬಗ್ಗೆ ಪ್ರಶ್ನೆ: ಸುರಕ್ಷತೆಯ ಕೋಟೆ ನಡುವೆ ಈಗ ರೇಸ್‌ಗಳು ನಡೆಯುತ್ತಿದ್ದರೂ ಬಿಯಾಂಚಿ ಅವರ ಕಾರು ಅಪಘಾತ ಕ್ಕೀಡಾ ಗಿದ್ದು ಎಫ್‌–1 ವಲಯವನ್ನು ಬೆಚ್ಚಿ ಬೀಳಿಸಿದೆ. ಮೋಟಾರ್‌ ಸ್ಪೋರ್ಟ್ಸ್‌ನ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ. ಲೂಯಿಸ್‌ ಹ್ಯಾಮಿ ಲ್ಟನ್‌ ಸೇರಿದಂತೆ ಹೆಸರಾಂತ ಫಾರ್ಮುಲಾ ಒನ್‌ ಚಾಲಕರು, ಬಿಯಾಂಚಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಎಫ್‌–1 ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಬೇಕೆನ್ನುವ ಕೂಗು ಎಬ್ಬಿಸಿದ್ದಾರೆ.

ಫಾರ್ಮುಲಾ ಒನ್‌ ಚಾಂಪಿಯನ್‌ಷಿಪ್‌ ನಲ್ಲಿ 20 ವರ್ಷಗಳ ಬಳಿಕ ಇಂಥದೊಂದು ಭೀಕರ ಅವಘಡ ಸಂಭವಿಸಿದೆ. 1994ರಲ್ಲಿ ಬ್ರೆಜಿಲ್‌ನ ಐಯರ್ಟನ್‌ ಸೆನ್ನಾ ಸ್ಪರ್ಧೆ ವೇಳೆ ಕಾರು ಅಪಘಾತದಲ್ಲಿ ಇಮೋಲಾದಲ್ಲಿ ಸಾವನ್ನಪ್ಪಿದ್ದರು. ಮೋಟಾರ್‌ ಸ್ಪೋರ್ಟ್ಸ್‌ ನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರು ತ್ತವೆ. ಆದರೆ, ಇಷ್ಟೊಂದು ಗಂಭೀರ ಅಪಘಾತ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರಲಿಲ್ಲ.

‘ಹೌದು, ಮೋಟಾರ್‌ ಸ್ಪೋರ್ಟ್ಸ್‌ ತುಂಬಾ ಅಪಾಯಕಾರಿ ಕ್ರೀಡೆ. ಹಾಗಂತ ಕ್ರೀಡೆ ನಡೆಸ ದಿರಲು ಸಾಧ್ಯವೇ? ಆದರೆ, ನಮ್ಮ ಮೊದಲ ಆದ್ಯತೆ ಚಾಲಕರ ಸುರಕ್ಷತೆ. ಪ್ರೇಕ್ಷಕರು ಹಣ ನೀಡಿ ಅಪಘಾತ ವೀಕ್ಷಿಸಲು ಬರುವುದಿಲ್ಲ. ಅವರು ಸ್ಪರ್ಧೆ ವೀಕ್ಷಿಸಲು ಬಂದಿರುತ್ತಾರೆ’ ಎಂದಿದ್ದಾರೆ ಎಫ್‌–1 ರೇಸ್‌ನ ಮುಖ್ಯಸ್ಥ ಬರ್ನಿ ಎಕ್ಲೆಸ್ಟನ್‌.

ಸಾಹಸ ಕ್ರೀಡೆ ಸ್ಕೀಯಿಂಗ್‌ ಮಾಡುವ ವೇಳೆ ಫಾರ್ಮುಲಾ ಒನ್‌ ಮಾಜಿ ಚಾಂಪಿ ಯನ್‌ ಶುಮಾಕರ್‌ ಗಾಯಗೊಂಡಿದ್ದು ಎಫ್‌–1 ವಲಯವನ್ನು ಶೋಕದ ಕಡಲಲ್ಲಿ ಮುಳುಗಿಸಿತ್ತು. 20 ವರ್ಷಗಳ ತಮ್ಮ ಫಾರ್ಮುಲಾ ಒನ್‌ ರೇಸ್‌ ವೇಳೆ ಶುಮಾಕರ್‌ ಹಲವು ಬಾರಿ ಗಾಯಗೊಂಡಿದ್ದರು. 1999ರಲ್ಲಿ ಸಿಲ್ವರ್‌ಸ್ಟೋನ್ ಟ್ರ್ಯಾಕ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಅವರ ಕಾಲಿಗೆ ಪೆಟ್ಟಾಗಿತ್ತು. ಮಾರ್ಕ್‌ ವೆಬರ್‌, ಫಿಲಿಪ್‌ ಮಾಸಾ ಸೇರಿದಂತೆ ಹಲವು ಎಫ್‌–1 ಚಾಲಕರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿ ದ್ದುಂಟು. ಆದರೆ, ಈಗ ಬಿಯಾಂಚಿ ಸಾವು ಎಫ್‌–1 ರೇಸ್‌ ಬಗ್ಗೆ ಆತಂಕ ಸೃಷ್ಟಿಸಿದೆ. 

ಬಿಯಾಂಚಿ 2011ರಲ್ಲಿ ಫೆರಾರಿ ತಂಡದ ಪರೀಕ್ಷಾರ್ಥ ಚಾಲಕರಾಗಿ ಎಫ್‌–1 ಕ್ಷೇತ್ರಕ್ಕೆ ಕಾಲಿಟ್ಟಿದ್ದರು. 2012ರಲ್ಲಿ ಫೋರ್ಸ್‌ ಇಂಡಿಯಾದ ಕಾಯ್ದಿರಿಸಿದ ಚಾಲಕ ರಾಗಿದ್ದರು. 2013ರಲ್ಲಿ ಮಾರುಷ್ಯಾ ತಂಡ ಸೇರಿದ್ದರು. ಮಳೆಯಲ್ಲಿಯೇ ನಡೆಯುತ್ತಿದ್ದ ರೇಸ್‌ನಲ್ಲಿ 44ನೇ ಲ್ಯಾಪ್‌ನಲ್ಲಿ ನಿಯಂತ್ರಣ ಕಳೆದುಕೊಂಡ ಬಿಯಾಂಚಿ ತಮ್ಮ ಕಾರನ್ನು ಟ್ರ್ಯಾಕ್‌ ಹೊರಗೆ ನಿಂತಿದ್ದ ವಾಹನವೊಂದಕ್ಕೆ ಗುದ್ದಿಸಿದ್ದರು. ಮಳೆಯ ಕಾರಣ ಟ್ರ್ಯಾಕ್‌ನಲ್ಲಿ ಕೊಂಚ ಮಬ್ಬು ಕವಿದಿತ್ತು. ಆದರೂ ರೇಸ್‌ ಮುಂದುವರಿಸಲಾಗಿತ್ತು. ತಲೆಗೆ ಪೆಟ್ಟು ಮಾಡಿಕೊಂಡ ಬಿಯಾಂಚಿ ಅವರನ್ನು ತಕ್ಷಣವೇ ಸುಜುಕಾ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. 9 ತಿಂಗಳು ಕೋಮಾದಲ್ಲಿದ್ದರು.

‘ನನಗೆ ದುಃಖವಾಗಿಲ್ಲ. ಏಕೆಂದರೆ ಆತ ನನ್ನ ಕನಸನ್ನು ನನಸು ಮಾಡಿ ಹೋಗಿದ್ದಾನೆ. ಆ ಖುಷಿಯಲ್ಲಿಯೇ ಮುಂದಿನ ದಿನಗಳನ್ನು ಕಳೆಯುತ್ತೇನೆ’ ಎಂದು ಬಿಯಾಂಚಿ ತಂದೆ ಸಿಲ್ವಿಯನ್‌ ಬ್ರಿಸನ್‌ ಭಾವುಕರಾಗಿ ಹೇಳಿದ್ದಾರೆ. ಈ ಸಾವು ಫಾರ್ಮುಲಾ ಒನ್‌ ಕ್ಷೇತ್ರಕ್ಕೆ ಎಚ್ಚರಿಕೆಯ ಗಂಟೆ. ಎಷ್ಟೇ ಸುರಕ್ಷಿತ ವಿಧಾನ ಅನುಸರಿಸಿದರೂ ಎಫ್‌–1 ರೇಸ್‌ ಸದಾ ಅಪಾಯಕಾರಿ. ಸುರಕ್ಷತೆಗೆ ಮತ್ತಷ್ಟು ಒತ್ತು ನೀಡುವುದು ಅಂತರ ರಾಷ್ಟ್ರೀಯ ಆಟೊ ಮೊಬೈಲ್‌ ಫೆಡರೇಷನ್‌ ಜವಾಬ್ದಾರಿ ಕೂಡ.
*
ಅಸುನೀಗಿದ 80 ಚಾಲಕರು...
1950ರಿಂದ ಎಫ್‌–1 ರೇಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 80 ಚಾಲಕರು ಅಸುನೀಗಿದ್ದಾರೆ. ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಕಣಕ್ಕಿಳಿಯಬೇಕಾದ ಸ್ಪರ್ಧೆ ಮೋಟಾರ್‌ ರೇಸ್‌. ಯಾವ ಸಂದರ್ಭದಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಏಕೆಂದರೆ ಕಾರು ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸುತ್ತಿರುತ್ತದೆ. ನೋಡುಗರಿಗೆ ಎಷ್ಟು ರೋಮಾಂಚನ ಉಂಟು ಮಾಡುತ್ತದೆಯೋ ಅಷ್ಟೆ ಅಪಾಯಕಾರಿ. 50 ಹಾಗೂ 60ರ ದಶಕದಲ್ಲಿ ಈಗಿನಂತೆ ಸುರಕ್ಷತಾ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಈ ಅವಧಿಯ ಎಫ್‌–1 ರೇಸ್‌ಗಳಲ್ಲಿ ಸತ್ತ ಚಾಲಕರ ಸಂಖ್ಯೆ 50ಕ್ಕೂ ಅಧಿಕ. ಇತ್ತೀಚಿನ ವರ್ಷಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕಾರಿನ ವಿನ್ಯಾಸ, ಟ್ರ್ಯಾಕ್‌ ರಚನೆಯಲ್ಲೂ ಬದಲಾವಣೆಯಾಗಿದೆ. ಹೆಲ್ಮೆಟ್‌ ಸೇರಿದಂತೆ ಮೈತುಂಬಾ ಸುರಕ್ಷತೆಯ ಸಾಧನಗಳಿರುತ್ತವೆ. ಕಾರಿನ ವೇಗವನ್ನೂ ತಗ್ಗಿಸಲಾಗಿದೆ. ಮೋಟಾರ್‌ ರೇಸ್‌ ವೀಕ್ಷಿಸಲು ಬರುವವರಿಗೆ ನೀಡುವ ಟಿಕೆಟ್‌ ಹಿಂಬದಿ ಕೂಡ  ‘ಮೋಟಾರ್‌ ರೇಸಿಂಗ್‌ ಅಪಾಯಕಾರಿ ಕ್ರೀಡೆ’ ಎಂದು ಬರೆದಿರುತ್ತದೆ.
*
ಅಪಾಯಕಾರಿ ಇಂಡಿಯಾನ ಟ್ರ್ಯಾಕ್
ಫಾರ್ಮುಲಾ ಒನ್‌ ಚಾಂಪಿಯನ್‌ಷಿಪ್‌ ಋತುವಿನಲ್ಲಿ 18 ಸ್ಥಳಗಳಲ್ಲಿ ಗ್ರ್ಯಾಂಡ್‌ ಪ್ರಿ ರೇಸ್‌ಗಳು ನಡೆಯುತ್ತವೆ. ಅದರಲ್ಲಿ ಅಮೆರಿಕದ ಇಂಡಿಯಾನಪೊಲೀಸ್‌ ಮೋಟಾರ್‌ ಸ್ಪೀಡ್‌ವೇ ಅತ್ಯಂತ ಅಪಾಯಕಾರಿ ಟ್ರ್ಯಾಕ್‌. ಇಲ್ಲಿ ನಡೆದ ಸ್ಪರ್ಧೆಗಳ ವೇಳೆ ಏಳು ಚಾಲಕರು ದುರಂತ ಸಾವು ಕಂಡಿದ್ದಾರೆ. ಹಲವು ಬಾರಿ ಅಪಘಾತಗಳು ಸಂಭವಿಸಿ ಅನೇಕ ಚಾಲಕರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.