ADVERTISEMENT

ಸಂದರ್ಶನ ತಯಾರಿ

ಸುಚೇತನಾ ನಾಯ್ಕ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಕೈಯಲ್ಲೊಂದು ರ್‍ಯಾಂಕ್‌ ಸರ್ಟಿಫಿಕೇಟ್‌, ಅದರೊಟ್ಟಿಗೆ ಒಂದಿಷ್ಟು ಡಿಗ್ರಿ ಸರ್ಟಿಫಿಕೇಟ್‌, ಮತ್ತೊಂದಿಷ್ಟು ಅವಾರ್ಡ್ ಸರ್ಟಿಫಿಕೇಟ್ ಇದ್ದ ಮಾತ್ರಕ್ಕೆ ‘ಒಳ್ಳೆಯ ಕಂಪೆನಿಯೊಂದರಲ್ಲಿ ಉತ್ತಮ ಕೆಲಸ ಸಿಗದೇ ಇನ್ನೇನು’ ಎಂದುಕೊಳ್ಳುವ ಕಾಲ ಇದಲ್ಲ.

ಕೆಲವೇ ಕೆಲವು ಕಡೆ ಈ  ಪ್ರಮಾಣ ಪತ್ರಗಳು, ಅಂಕಪಟ್ಟಿಗಳು ನೌಕರಿ ಗಿಟ್ಟಿಸಿಕೊಳ್ಳುವ ಮಾನದಂಡ ಆಗಬಹುದು. ಆದರೆ ಹಲವು ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಪ್ರಸಿದ್ಧ ಕಂಪೆನಿಗಳಲ್ಲಿ ಇವುಗಳು ನಿಮ್ಮನ್ನು ಕಂಪೆನಿಯ ಬಾಗಿಲವರೆಗೆ ಕೊಂಡೊಯ್ದು, ಸಂದರ್ಶಕರ ಎದುರು ಕುಳ್ಳರಿಸುವ ಸಾಧನವಷ್ಟೇ ಆದೀತು. ಆದರೆ ನಿಮ್ಮ ಮುಂದಿನ ಹಣೆಬರಹ ನಿಗದಿ ಮಾಡುವುದು ನಿಮ್ಮಲ್ಲಿರುವ ಆತ್ಮವಿಶ್ವಾಸ, ವಾಕ್‌ಚಾತುರ್ಯ, ಹಾವಭಾವ, ವಿನಯವಂತಿಕೆ, ಆಂಗಿಕ ಭಾಷೆ, ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್‌... ಇತ್ಯಾದಿ. ಒಂದೇ ಶಬ್ದದಲ್ಲಿ ಹೇಳುವುದಾದರೆ ನಿಮ್ಮ ಸಂಪೂರ್ಣ ವ್ಯಕ್ತಿತ್ವದ ದರ್ಶನ ಮಾಡಿಸುವ ‘ಸಂದರ್ಶನ’.

ಶಾಲಾ ಕಾಲೇಜಿನಲ್ಲಿ ನೀವು ಕಲಿತಿರುವ ವಿದ್ಯೆಯ ಅರ್ಹತೆ ನಿಮ್ಮ ಕೈಯಲ್ಲಿರುವ ಪ್ರಮಾಣಪತ್ರದಲ್ಲಿ ಗೋಚರವಾದರೆ, ನಿಜವಾಗಿ ನಿಮ್ಮಲ್ಲಿ ಇರುವ ಅರ್ಹತೆಯನ್ನು ಒರೆಗೆ ಹಚ್ಚುವುದು ಈ ‘ಸಂದರ್ಶನ’! ಶೈಕ್ಷಣಿಕ ಸಾಲಿನಲ್ಲಿ  ಜೀರೊ ಆದವನು ಸಂದರ್ಶನದಲ್ಲಿ ಹೀರೊ ಆಗಲೂಬಹುದು, ಇಲ್ಲವೇ ಅಲ್ಲಿ ಹೀರೊ ಆದವನು ಇಲ್ಲಿ ಜೀರೊ ಆಗಬಹುದು.

ಶೈಕ್ಷಣಿಕ ವಿದ್ಯಾರ್ಹತೆಯೊಂದರಿಂದಲೇ ಉದ್ಯೋಗಕ್ಕೆ ಆಯ್ಕೆಯಾಗುತ್ತಾನೆ ಎಂದು ಹೇಳಲಾಗದು. ಸಂದರ್ಶನ ಎನ್ನುವುದು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯ ಬದುಕಿನ ಪ್ರಮುಖ ಘಟ್ಟ ಎನ್ನಬಹುದು.

ಏಕೆ ಬೇಕು?
ಯಾವುದೇ ಸಂಸ್ಥೆ/ ಕಂಪೆನಿಗಳಲ್ಲಿ ವಿದ್ಯಾರ್ಹತೆ ನೋಡಿ ಉದ್ಯೋಗ ಕೊಡುವ ಬದಲು ಈ ಸಂದರ್ಶನ ಏಕೆ ಎಂಬುದು ಬಹುತೇಕ ಯುವಕರ ಪ್ರಶ್ನೆ. ಆದರೆ, ಒಬ್ಬ ವ್ಯಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು ಮುಖಾಮುಖಿಯಾಗಿ ಮಾತನಾಡಿಸಿದಾಗ ಮಾತ್ರ. ತಮ್ಮ ಸಂಸ್ಥೆ /ಕಂಪೆನಿಗಳಲ್ಲಿ ಉದ್ಯೋಗ ಮಾಡುವ ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ತಿಳಿದುಕೊಳ್ಳುವುದು ನೌಕರಿ ನೀಡುವವರಿಗೂ ಮುಖ್ಯ. ಅಭ್ಯರ್ಥಿಯ ಕೌಟುಂಬಿಕ ಹಿನ್ನೆಲೆ, ಸಾಮರ್ಥ್ಯ ಮತ್ತು ದೌರ್ಬಲ್ಯ, ವೃತ್ತಿ ಜೀವನದ ಧ್ಯೇಯ, ಉದ್ಯೋಗದ ಬಗ್ಗೆ ಆತನ ನಿರೀಕ್ಷೆ--, ಅಪೇಕ್ಷೆ ಎಲ್ಲವನ್ನೂ ತಿಳಿದುಕೊಳ್ಳಲು ಇದು ಉಪಕಾರಿ.

ಹೀಗಿರಲಿ ತಯಾರಿ
‘ಫಸ್ಟ್‌ ಇಂಪ್ರೆಷನ್‌ ಈಸ್‌ ಬೆಸ್ಟ್ ಇಂಪ್ರೆಷನ್‌’... ಇದು ಸಂದರ್ಶನ ಎದುರಿಸುವ ಪ್ರತಿ ಅಭ್ಯರ್ಥಿಗೆ ಹೇಳಿ ಮಾಡಿಸಿದ ಮಾತು. ಆದ್ದರಿಂದ ಸಂದರ್ಶನಕ್ಕೆ ಕರೆ ಬಂದ ದಿನದಿಂದಲೇ ಆ ಬಗ್ಗೆ ಪೂರ್ವ ತಯಾರಿ ನಡೆಸುವುದು ಬಹು ಮುಖ್ಯ. ಪೂರ್ವ ತಯಾರಿಯಲ್ಲಿ ಪ್ರಥಮ ಸ್ಥಾನ ಆತ್ಮವಿಶ್ವಾಸದ್ದು. ಈ ಆತ್ಮವಿಶ್ವಾಸ ಮೂಡುವುದು ನಿಮ್ಮ ಪೂರ್ವ ತಯಾರಿ ಸರಿಯಾಗಿದ್ದಲ್ಲಿ ಮಾತ್ರ. ಒಂದಕ್ಕೊಂದು ಪೂರಕ ಆಗಿರುವ ಪೂರ್ವ ತಯಾರಿ ಹಾಗೂ ಆತ್ಮವಿಶ್ವಾಸ ಮೂಡಿಸಿಕೊಳ್ಳುವ ಬಗ್ಗೆ ತಜ್ಞರು, ಮನಶಾಸ್ತ್ರಜ್ಞರು ತಿಳಿಸಿರುವ ಒಂದಿಷ್ಟು ಮಾಹಿತಿ ಇಲ್ಲಿದೆ.

*ಸಂದರ್ಶನಕ್ಕೆ ಕರೆ ಬಂದ ತಕ್ಷಣ  ಮಾಡಬೇಕಾದ ಮೊದಲ ಕೆಲಸ ಎಂದರೆ ಉದ್ಯೋಗಕ್ಕೆ ಬೇಕಾಗಿರುವ ದಾಖಲೆಗಳನ್ನು ಒಪ್ಪವಾಗಿ ಒಂದು ಫೈಲ್‌ನಲ್ಲಿ ಜೋಡಿಸಿಕೊಳ್ಳುವುದು. ಅರ್ಜಿ ಸಲ್ಲಿಸುವಾಗ ಅದರಲ್ಲಿ  ವಿದ್ಯಾರ್ಹತೆ ಹಾಗೂ ಇತರ ಅರ್ಹತೆಗಳಿಗೆ ಸಂಬಂಧಿಸಿದಂತೆ ಏನೇನು ಉಲ್ಲೇಖ ಮಾಡಿರುತ್ತೀರೋ ಅವುಗಳ ಮೂಲ ಪ್ರತಿಗಳ ಜೊತೆ ಜೆರಾಕ್ಸ್ ಪ್ರತಿಗಳನ್ನು ತಪ್ಪದೇ ಜೋಡಿಸಿಕೊಳ್ಳಿ. ಹೀಗೆ ಜೋಡಿಸಿಕೊಂಡ ದಾಖಲೆಗಳು ಕೂಡ ನಿಮ್ಮ ವ್ಯಕ್ತಿತ್ವವನ್ನು ತಿಳಿಸಬಲ್ಲ ಅಸ್ತ್ರವಾಗುತ್ತದೆ ಎನ್ನುವುದು ನೆನಪಿರಲಿ.

*ನೀವು ಸಂದರ್ಶನಕ್ಕೆ ಹೋಗುವ ಕಂಪೆನಿಯ ಬಗ್ಗೆ ಸ್ವಲ್ಪವಾದರೂ ಮಾಹಿತಿ ಇರಲಿ. ಈಗ ಮಾಹಿತಿ ಸಂಗ್ರಹಿಸುವ ಕೆಲಸ ಕಷ್ಟಕರವೇನಲ್ಲ. ಕಂಪೆನಿಯ ಸಾಧನೆ, ಅಲ್ಲಿರುವ ಅವಕಾಶ ಮತ್ತು ಸವಾಲುಗಳ ಕುರಿತು, ಕಂಪೆನಿಯ ದೂರದೃಷ್ಟಿ, ಬಂಡವಾಳ, ನೀತಿ- ನಿಯಮ, ಕಾರ್ಯಾಚರಣೆ, ಆಯವ್ಯಯ, ಉತ್ಪನ್ನಗಳ ವಿವರ, ಮಾರುಕಟ್ಟೆಯ ಪಾಲು ಇತ್ಯಾದಿಗಳ ಮಾಹಿತಿ ಸಂಗ್ರಹಿಸಿದರೆ ಆತ್ಮವಿಶ್ವಾಸ ಸ್ವಾಭಾವಿಕವಾಗಿಯೇ ಮೂಡುತ್ತದೆ.

*ಸಂದರ್ಶನಕ್ಕೆ ಹೋಗುವಾಗ ಅಲಂಕಾರ ಅತಿಯಾಗದಿರಲಿ. ಶುಚಿಯಾದ ಬಟ್ಟೆ ಧರಿಸಿ. ಆದಷ್ಟು ತಿಳಿ ಬಣ್ಣದ ಬಟ್ಟೆಯನ್ನೇ ಧರಿಸಿ. ಸ್ತ್ರೀಯರು ತಮ್ಮ ಬಟ್ಟೆಯ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವುದು ಅಗತ್ಯ. ಆಭರಣ ಹೇರಿಕೊಳ್ಳುವುದು ಬೇಡ. ಹಾಗೆಯೇ ಬಟ್ಟೆಗೆ ಸಿಂಪಡಿಸಿಕೊಳ್ಳುವ ಸುಗಂಧ ದ್ರವ್ಯಗಳು (ಪರ್‌ಫ್ಯೂಮ್‌) ಸಂದರ್ಶಕರಿಗೆ ತಲೆನೋವು ತರುವ ರೀತಿಯಲ್ಲಿ ಇರದಂತೆ ಎಚ್ಚರ ವಹಿಸಿ.

*ಸಮಯ ಪ್ರಜ್ಞೆ ಸಂದರ್ಶನದ ಸಮಯದಲ್ಲಿ ಬಹುಮುಖ್ಯ. ಟ್ರಾಫಿಕ್‌ ಜಾಂ, ಅಪಘಾತದಂಥ ಆಕಸ್ಮಿಕಗಳನ್ನು ಗಮನದಲ್ಲಿರಿಸಿಕೊಂಡು, ಪ್ರಯಾಣವನ್ನು ಯೋಜಿಸಬೇಕು. ಆದಷ್ಟು ಅರ್ಧಗಂಟೆಯಾದರೂ ಮುನ್ನ ಸಂದರ್ಶನದ ತಾಣ ತಲುಪುವಂತಾಗಬೇಕು.
(ಮುಂದಿನ ವಾರ: ಸಂದರ್ಶನ ಕೊಠಡಿಯಲ್ಲಿ...)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.