ADVERTISEMENT

ಸರಳ ಸಜ್ಜನಿಕೆಯ ಕುಂಬ್ಳೆ...

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST
ಅನಿಲ್‌ ಕುಂಬ್ಳೆ
ಅನಿಲ್‌ ಕುಂಬ್ಳೆ   

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಭಾರತದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ. ಒಂದೇ ಇನಿಂಗ್ಸ್‌ನಲ್ಲಿ ಹತ್ತೂ ವಿಕೆಟ್‌ಗಳನ್ನು ಕಬಳಿಸಿದ ಭಾರತದ ಏಕೈಕ ಬೌಲರ್‌.

ಇದೆಲ್ಲವೂ ಕನ್ನಡಿಗ ಅನಿಲ್‌ ಕುಂಬ್ಳೆ ಅವರ ಕ್ರಿಕೆಟ್ ಬದುಕಿನ ಸಾಧನೆಗಳಾದವು. ವೈಯಕ್ತಿಕ ಬದುಕಿನಲ್ಲಿ ಅವರು ಹೊಂದಿರುವ ಸರಳತೆ ಮತ್ತು ಸಜ್ಜನಿಕೆ ಅಪಾರ. ಕುಂಬ್ಳೆ ಜೊತೆಗಿನ ಒಡನಾಟದ ಕುರಿತು ಚನ್ನಗಿರಿ ಕೇಶವಮೂರ್ತಿ ಅವರು ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಜೊತೆ ನನಗೆ 1976ರಿಂದಲೂ ಒಡನಾಟ ವಿದೆ. ಎಪ್ಪತ್ತರ ದಶಕದ ಕೊನೆಯಲ್ಲಿ ಬೆಂಗಳೂರಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಆಯೋಜನೆಯಾಗಿತ್ತು. ಆಗ ಅನಿಲ್‌ ಕುಂಬ್ಳೆ ಅವರಿಗೆ ಹತ್ತು ವರ್ಷ ವಯಸ್ಸು.

ಆಗ ವಿದ್ಯಾರ್ಥಿಯಾಗಿದ್ದ ಕುಂಬ್ಳೆ ಅವರು ಆ ವಯಸ್ಸಿನಲ್ಲಿ ಭಾರತವಿರಲಿ, ರಾಜ್ಯ ತಂಡಕ್ಕೆ ಆಡುವ ಕನಸು ಕಂಡಿದ್ದರೋ ಇಲ್ಲವೋ. ನಂತರದ ಹತ್ತು ವರ್ಷಗಳಲ್ಲಿ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 

ಕೆಎಸ್‌ಸಿಎಯಲ್ಲಿ ಕೆಲಸ ಮಾಡುತ್ತಿದ್ದ ಸಿ. ವಿ. ನಾಗೇಂದ್ರನಾಥ್ ಅದೊಮ್ಮೆ ಕುಂಬ್ಳೆ ಅವರನ್ನು ಭೇಟಿ ಮಾಡಿಸಿದ್ದರು. ‘ಇವರು ಅನಿಲ್ ಕುಂಬ್ಳೆ ,ಈ ಕಾಲಘಟ್ಟದ ಪ್ರತಿಭಾವಂತ ಆಟಗಾರ. ತುಂಬಾ ಸರಳ ಸ್ವಭಾವದವರು' ಎಂದು ಹೇಳಿದ ನೆನಪು.

2003ರಲ್ಲಿ  ಕುಂಬ್ಳೆಯವರೊಡನೆ ಕೆಲವು ವೃತ್ತಿಪರ ವಿಷಯ ಮಾತನಾಡುವ ಅವಕಾಶ ಲಭಿಸಿತ್ತು. ಅಂದು ಅಶೋಕ ಹೋಟೆಲ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರನ್ನು ನೋಡಲು ಹೋಗಿದ್ದಾಗ ಕುಂಬ್ಳೆ ಎದುರಾಗಿದ್ದರು.

2012ರಲ್ಲಿ ಕುಂಬ್ಳೆ ಅವರು ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ವೇಳೆ ನಡೆದ ಘಟನೆಯೊಂದನ್ನು ಇಲ್ಲಿ ಹಂಚಿಕೊಳ್ಳಬೇಕಿದೆ. ನಾನು ಬರೆದಿದ್ದ ‘ಭಾರತದ ಕ್ರಿಕೆಟ್ ನಾಯಕರು’ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ ಕುಂಬ್ಳೆ ಅವರಲ್ಲಿ ವಿನಂತಿಸಿ ಕೊಂಡಿದ್ದೆ. 

ಈ ಕುರಿತು ಅವರೊಂದಿಗೆ  ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೆ. ಅವರ ಜ್ಞಾನ ಬಂಡಾರ ಕಂಡು ನನಗೆ ಅಚ್ಚರಿಯಾಗಿತ್ತು. ಆಗ ಕುಂಬ್ಳೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ತಾಂತ್ರಿಕ ಸಮಿತಿ ಮುಖ್ಯಸ್ಥ ಸ್ಥಾನದಂಥ ಎತ್ತರದ ಹುದ್ದೆಯಲ್ಲಿದ್ದರೂ ಯಾವತ್ತೂ ಸರಳತೆಯ ರೇಖೆಯನ್ನು ಬಿಟ್ಟು ಹೋದವರಲ್ಲ ಎಂದು ಆಗ ಗೊತ್ತಾಯಿತು.

ಇಲ್ಲಿ ಪ್ರಸ್ತಾಪಿಸಿರುವ ಇನ್ನೊಂದು ಘಟನೆ ಕೂಡ ಕುಂಬ್ಳೆ ಅವರ ಸರಳತೆಗೆ ಸಾಕ್ಷಿಯಾಗಿದೆ. ಬೆಂಗಳೂರಿ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆದ ವೇಳೆ ಜರುಗಿದ ಘಟನೆಯಿದು.

ಟೆಸ್ಟ್‌ ಪಂದ್ಯವನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೆಸ್‌ ಬಾಕ್ಸ್‌ಗೆ ತೆರಳಿದ್ದೆ. ಅಲ್ಲಿಂದ ಹೊರಬಂದಾಗ ಎದುರಾದ ಕುಂಬ್ಳೆ ಅವರು ಪಂದ್ಯವನ್ನು ನೋಡಲು ಇದಕ್ಕಿಂತಲೂ ಉತ್ತಮ ವಾದ ಸ್ಥಳವಿದೆ.

ಆ ಸ್ಥಳದಿಂದ ಪಂದ್ಯ ನೋಡಿದರೆ ಅನೇಕ ವಿಷಯಗಳು ತಿಳಿಯುತ್ತವೆ ಎಂದು ಹೇಳಿದ್ದರಲ್ಲದೇ ಅಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿದ್ದರು. ಮುಂದೆ ಎರಡು ವರ್ಷ ಕೆಎಸ್‌ಸಿಎಗೆ ದೇಶಿ ಕ್ರಿಕೆಟ್‌ನ ಅಂಕಿ ಅಂಶ ತಜ್ಞನಾಗಿ ಕೆಲಸ ಮಾಡಲು ಅವರೇ ಅವಕಾಶ ನೀಡಿದರು.

ಈ ನೆನಪುಗಳನ್ನೆಲ್ಲಾ ಈಗ ಕೆದಕಲು ಒಂದು ಕಾರಣವಿದೆ. ಕ್ಲಬ್‌ ಮಟ್ಟದ ಟೂರ್ನಿ ಗಳಲ್ಲಿ ಆಡುತ್ತಿದ್ದಾಗಿನಿಂದಲೂ ಸರಳತೆ ಯನ್ನು ಮೈಗೂಡಿಸಿಕೊಂಡಿರುವ ಲೆಗ್‌ ಸ್ಪಿನ್ನರ್‌ ಕುಂಬ್ಳೆ ಅವರು ಈಗಲೂ ಮೊದಲಿನ ಸರಳತೆಯನ್ನೇ ಉಳಿಸಿ ಕೊಂಡಿದ್ದಾರೆ. ಹೋದ ವಾರ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾದಾಗ ಆಗಲೂ ನೆನಪಾಗಿದ್ದು ಕುಂಬ್ಳೆ ಅವರ ಸರಳತೆ.

ಕುಂಬ್ಳೆ ತಾವೊಬ್ಬರೇ ಬೆಳೆಯದೆ ಜೊತೆಗೆ ಯುವ ಕ್ರಿಕೆಟಿಗರ ಬೆಳವಣಿಗೆಗೂ ಕಾರಣ ರಾದರು. ರಾಜ್ಯ ತಂಡದಲ್ಲಿದ್ದಾಗ ಮತ್ತು ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯುವ ಕ್ರಿಕೆಟಿಗರ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಶ್ರಮಿಸಿದರು. ಆಲೂರು ಮೈದಾನಗಳನ್ನು ನಿರ್ಮಿಸಲು ಕಾರಣರಾದರು.

ತಮ್ಮ ಕ್ರಿಕೆಟ್‌ ಬದುಕಿನ ಯಶಸ್ಸಿಗೆ ಕಾರಣವಾದ ಸ್ಪಿನ್‌ ಬೌಲಿಂಗ್ ಬಗ್ಗೆ ಕುಂಬ್ಳೆ ಅಪಾರ ಪ್ರೀತಿ ಹೊಂದಿದ್ದಾರೆ. ಮುಂದೆಯೂ ಹೆಚ್ಚೆಚ್ಚು ಉತ್ತಮ ಸ್ಪಿನ್ನರ್‌ಗಳು ಬರಬೇಕು ಎನ್ನುವ ಕಾರಣಕ್ಕಾಗಿ ಸ್ಪಿನ್‌ ಫೌಂಡೇಷನ್‌ ಹುಟ್ಟು ಹಾಕಿದ್ದಾರೆ.

ದೇಶಿ ಟೂರ್ನಿಗಳಲ್ಲಿ ಮಹತ್ವದ್ದೆನಿಸಿರುವ ರಣಜಿಗೆ ಹೊಸ ರೂಪ ಕೊಟ್ಟಿದ್ದು ಕುಂಬ್ಳೆ. ಮೊದಲೆಲ್ಲಾ ರಣಜಿ ಪಂದ್ಯಗಳ ವೇಳಾಪಟ್ಟಿ ಆಟಗಾರರಿಗೆ ಹೊರೆಯಾಗುತ್ತಿತ್ತು. ಆದರೆ, ಒಂದು ಪಂದ್ಯದ ಬಳಿಕ ನಾಲ್ಕು ದಿನ ಅಂತರ ಇರಲಿ ಎನ್ನುವ ಸಲಹೆಯನ್ನು ಬಿಸಿಸಿಐಗೆ ಕೊಟ್ಟಿದ್ದು ಕುಂಬ್ಳೆ. ಇದು ಜಾರಿಗೆ ಬಂದು ಆಟಗಾರರಿಗೆ ಅನುಕೂಲವಾಯಿತು.

ಕುಂಬ್ಳೆ ಅವರು ಬಿಸಿಸಿಐ ಮತ್ತು ಐಸಿಸಿಯಲ್ಲಿ ಹಲವಾರು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿ ದ್ದಾರೆ. ಹೋದ ವಾರ ನನ್ನ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ವಿಜಯ್‌ ಭಾರದ್ವಾಜ್‌ ಅವರ ಜೊತೆ ಕುಂಬ್ಳೆ ಬಂದಿದ್ದರು.

ಆಗ ‘ನೀವು ಕೋಚ್ ಹುದ್ದೆಗೆ ಅರ್ಜಿ ಹಾಕಬಾರದಾಗಿತ್ತು.  ಕ್ರಿಕೆಟ್ ಮಂಡಳಿಯೇ ಮುಂದಾಗಿ ನಿಮ್ಮ ಅರ್ಹತೆ ಗಮನಿಸಿ ಕೋಚ್ ಹುದ್ದೆ ನೀಡ ಬೇಕಿತ್ತು’ ಎಂದು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ.

ಇದಕ್ಕೆ ಸೌಜನ್ಯದಿಂದಲೇ ಉತ್ತರಿಸಿದ್ದ ಅವರು ‘ಬಿಸಿಸಿಐನ ನಿಯಮಗಳನ್ನು ಎಲ್ಲರೂ ಗೌರವಿಸಬೇಕು ಮತ್ತು ಅದಕ್ಕನುಸಾರ ನಡೆದುಕೊಳ್ಳಬೇಕು. ಈಗಿನ ನಿಯಮಗಳ ಪ್ರಕಾರ ಅರ್ಜಿ ಹಾಕಲೇಬೇಕಲ್ಲ’ ಎಂದಿದ್ದರು. 

ಕುಂಬ್ಳೆ ಮುಂದೆ ಸವಾಲಿನ ಹಾದಿ...
ಟೆಸ್ಟ್ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ವಿಶ್ವದ ಎಷ್ಟು ಬೌಲರ್‌ಗಳಿಗೆ ಇದೆ. ಇದುವರೆಗೂ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಇಬ್ಬರಿಗೆ ಮಾತ್ರ. ಇಂಗ್ಲೆಂಡ್‌ನ ಜಿಮ್ ಲೇಕರ್. ಇನ್ನೊಬ್ಬರು ಅನಿಲ್‌ ಕುಂಬ್ಳೆ.

ADVERTISEMENT

ಉತ್ತಮ ಎತ್ತರ ಹೊಂದಿರುವವರು ಶ್ರೇಷ್ಠ ಬೌಲರ್‌ ಆಗಬಹುದು ಎಂಬುದು ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿರುವ ಮಾತು. ಈ ಮಾತು ಕುಂಬ್ಳೆ ಅವರಿಗೆ ಚೆನ್ನಾಗಿ ಅನ್ವಯಿಸುತ್ತದೆ. ಆರು ಅಡಿ ಒಂದು ಇಂಚು ಎತ್ತರವಿರುವ ಅವರಿಗೆ ಎತ್ತರವೇ ವರದಾನವಾಗಿದೆ.

ಎತ್ತರವಿರುವ ಕಾರಣ ಕುಂಬ್ಳೆ ಅವರಿಗೆ ಮೊದಲಿನಿಂದಲೂ ವೇಗದ ಬೌಲರ್ ಆಗಬೇಕೆನ್ನುವ ಆಸೆಯಿತ್ತು. ಆದರೆ ಅವರ ಸಹೋದರ ದಿನೇಶ್‌ ಕುಂಬ್ಳೆ ಸ್ಪಿನ್ನರ್‌ ಆಗಲು ಪ್ರೋತ್ಸಾಹಿಸಿದ್ದರು. 118 ಟೆಸ್ಟ್‌ ಪಂದ್ಯಗಳನ್ನು ಆಡಿದ ಬಳಿಕ ಕುಂಬ್ಳೆಗೆ ಭಾರತ ತಂಡದ ನಾಯಕ ಸ್ಥಾನದ ಜವಾಬ್ದಾರಿ ಲಭಿಸಿತು.

ಸ್ಪಿನ್‌  ಬೌಲಿಂಗ್‌ನಲ್ಲಿ ಕುಂಬ್ಳೆ ಅವರ ಪ್ರತಿಭೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಬೌಲರ್‌ ಆಗಿ ಹೆಸರು ಮಾಡುವ ಮೊದಲು ಅವರು ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದರು.

19 ವರ್ಷದ ಒಳಗಿನವರ ಜೂನಿಯರ್ ಕ್ರಿಕೆಟ್‌ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕುಂಬ್ಳೆ ಶತಕ ಬಾರಿಸಿದ್ದರು. ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್‌ ಟೂರ್ನಿಗಳಲ್ಲಿ ಬ್ಯಾಟಿಂಗ್ ಮೂಲಕವೂ ಮಿಂಚಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಹಲವು ಪಂದ್ಯಗಳಲ್ಲಿ ಆಡಿದ ಬಳಿಕವೂ ಕಳಪೆ ಫಾರ್ಮ್‌ನಿಂದಾಗಿ ಸ್ಥಾನ ಕಳೆದುಕೊಂಡಿದ್ದ ಕುಂಬ್ಳೆ ಹಲವು ಸಲ ಫಿನಿಕ್ಸ್‌ನಂತೆ ಎದ್ದು ಬಂದ ಉದಾಹರಣೆಗಳಿವೆ. 1990ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ತಮ್ಮ ಚೊಚ್ಚಲ ಸರಣಿಯಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡದ ಕಾರಣ ನಂತರ ಏಳು ಟೆಸ್ಟ್‌ ಪಂದ್ಯಗಳಿಗೆ ತಂಡದಲ್ಲಿ ಸ್ಥಾನವೇ ಲಭಿಸಲಿಲ್ಲ. ಇದರಿಂದ ನಿರಾಸೆಯಾದರೂ ತೋರಿಸಿಕೊಳ್ಳದ ಕುಂಬ್ಳೆ ಅವರು ತಮ್ಮ ಸಾಮರ್ಥ್ಯವನ್ನು ದೇಶಿ ಟೂರ್ನಿಗಳಲ್ಲಿ ಸಾಬೀತು ಮಾಡಿದರು. ದುಲೀಪ್‌ ಟ್ರೋಫಿಯಲ್ಲಿ ಶತಕ ಬಾರಿಸಿ ಗಮನ ಸೆಳೆದರು.

ಸವಾಲುಗಳು: ಭಾರತದ ಪಿಚ್‌ಗಳು ಸ್ಪಿನ್ನರ್‌ ಸ್ನೇಹಿಯಾಗಿವೆ. ಆದ್ದರಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಮೊದಲಿನಿಂದಲೂ ಪೈಪೋಟಿಯಿದೆ. ಸುಭಾಸ್‌ ಗುಪ್ಟೆ, ಬಾಲೂ ಗುಪ್ಟೆ, ವಿ.ವಿ ಕುಮಾರ್‌, ಶಿವರಾಮಕೃಷ್ಣನ್‌, ಹಿರ್ವಾನಿ, ನಾಡಕರ್ಣಿ, ಪ್ರಸನ್ನ, ಬಿಷನ್‌ ಸಿಂಗ್ ಬೇಡಿ, ವೆಂಕಟರಾಘವನ್‌ ಹೀಗೆ ಅನೇಕ ಸ್ಪಿನ್ ಗಾರುಡಿಗರು ಭಾರತದಲ್ಲಿ ಹೆಸರು ಮಾಡಿದ್ದಾರೆ.

ಇವರ ನಡುವೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಸಾಕಷ್ಟು ಪೈಪೋಟಿ ಇತ್ತು. ರಣಜಿ ಟೂರ್ನಿಯಲ್ಲಿ 600ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಸ್ಪಿನ್ನರ್‌ ರಾಜೇಂದರ್‌ ಗೋಯಲ್‌ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನವೇ ಲಭಿಸಲಿಲ್ಲ.

ಸ್ಪಿನ್ನರ್‌ಗಳ ನಡುವೆ ಸಾಕಷ್ಟು ಪೈಪೋಟಿ ಇರುವ ಭಾರತದಲ್ಲಿ ಈಗ ಸ್ಪಿನ್ನರ್‌ ಒಬ್ಬರು ಮುಖ್ಯ ಕೋಚ್‌ ಆಗಿರುವುದರಿಂದ ನಮ್ಮಲ್ಲಿನ ಸ್ಪಿನ್‌ ಪರಂಪರೆಯನ್ನು ಉಳಿಸಲು ನೆರವಾಗುತ್ತದೆ.

ಹೋದ ವರ್ಷ ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳೇ ವಿಜೃಂಭಿಸಿದ್ದರು. ಇದರಿಂದ ಐದು ದಿನಗಳ ಟೆಸ್ಟ್‌ ಪಂದ್ಯಗಳು ಎರಡು ಮೂರು ದಿನಗಳಲ್ಲಿ ಮುಗಿದು ಹೋಗಿದ್ದವು.

ಆದರೆ ಇಂಗ್ಲೆಂಡ್‌, ಆಸ್ಟ್ರೇಲಿಯಾದಂಥ ಕಠಿಣ ಪಿಚ್‌ಗಳಲ್ಲಿ ಆಡಲು ಹೋದಾಗ ವೇಗದ ಬೌಲರ್‌ಗಳು ಚುರುಕಾಗಿರಬೇಕು. ಅವರನ್ನು ತಯಾರು ಮಾಡಬೇಕಾದ ಹೊಣೆಗಾರಿಕೆ ಕುಂಬ್ಳೆ ಮುಂದಿದೆ. ಮುಂಬರುವ ವೆಸ್ಟ್‌ ಇಂಡೀಸ್‌ ಸರಣಿ ಕುಂಬ್ಳೆ ಪಾಲಿಗೆ ಅಗ್ನಿಪರೀಕ್ಷೆ.

‘ಸವಾಲೆಂದರೆ ಇಷ್ಟ’ ಎಂದು ಮೊದಲಿನಂದಲೂ ಹೇಳುತ್ತಲೇ ಬಂದಿರುವ ಕುಂಬ್ಳೆ ಅವರು ಮುಖ್ಯ ಕೋಚ್‌ ಸ್ಥಾನ ಪಡೆದ ಮೊದಲ ಕನ್ನಡಿಗರಾಗಿದ್ದಾರೆ. ಕ್ರಿಕೆಟ್‌ ಪಯಣದ ಜತೆಗೆ ಕುಂಬ್ಳೆ ಛಾಯಾಗ್ರಹಣದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಸರಣಿಯನ್ನಾಡಲು ಬೇರೆ ಬೇರೆ ಸ್ಥಳಗಳಿಗೆ ಹೋದಾಗ ತೆಗೆದ ಚಿತ್ರಗಳು ‘ವೈಡ್‌ ಆ್ಯಂಗಲ್‌’ ಎನ್ನುವ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.