ADVERTISEMENT

ಸಾಧನೆಯ ಎತ್ತರಕ್ಕೆ ಸಮೀರ್‌...

ಜಿ.ಶಿವಕುಮಾರ
Published 14 ಮೇ 2017, 19:30 IST
Last Updated 14 ಮೇ 2017, 19:30 IST
ಸಾಧನೆಯ ಎತ್ತರಕ್ಕೆ ಸಮೀರ್‌...
ಸಾಧನೆಯ ಎತ್ತರಕ್ಕೆ ಸಮೀರ್‌...   
ಭಾರತದ ಬ್ಯಾಡ್ಮಿಂಟನ್‌ ಕ್ವಿತಿಜದಲ್ಲಿ ಭರವಸೆಯಾಗಿ ಗೋಚರಿಸಿರುವ ತಾರೆ ಸಮೀರ್‌ ವರ್ಮಾ.
 
ಎಳವೆಯಲ್ಲೇ ಬ್ಯಾಡ್ಮಿಂಟನ್‌ ಲೋಕದಲ್ಲಿ ಎತ್ತರದ ಸಾಧನೆ ಮಾಡುವ ಹಂಬಲ ಹೊತ್ತ ಸಮೀರ್‌, ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಬದ್ಧತೆ ಮತ್ತು ಅರ್ಪಣಾ ಭಾವದಿಂದ ಈ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿರುವ ಅವರು ಸಾಧನೆಯ ಹಾದಿ ಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ.
 
17ನೇ ವಯಸ್ಸಿನಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ ಷಿಪ್‌ನಲ್ಲಿ ಕಂಚಿಗೆ ಕೊರಳೊಡ್ಡಿದ್ದ ಅವರು ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ.
 
2013ರಲ್ಲಿ ನಡೆದಿದ್ದ ಬಹರೇನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿ ಕೊಂಡಿದ್ದ ಮಧ್ಯಪ್ರದೇಶದ ಈ ಪ್ರತಿಭೆ  ಅಖಿಲ ಭಾರತ ಸೀನಿಯರ್‌ ರ್‍ಯಾಂಕಿಂಗ್‌ ಚಾಂಪಿಯನ್‌ಷಿಪ್‌, ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಸೈಯದ್‌ ಮೋದಿ ಇಂಟರ್‌ ನ್ಯಾಷನ್‌ ಕೂಟ ಹೀಗೆ ಅನೇಕ ಟೂರ್ನಿಗಳಲ್ಲಿ ಅಮೋಘ ಆಟ ಆಡಿ  ಸಾಧನೆಯ ಕಿರೀಟಕ್ಕೆ ಒಂದೊಂದೇ ಗರಿ ಸೇರ್ಪಡೆ ಮಾಡಿಕೊಳ್ಳುತ್ತಾ ಮುಂದಡಿ ಇಡುತ್ತಿದ್ದಾರೆ. 
 
ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಪಿಎಸ್‌ಪಿಬಿ ಅಂತರ ಘಟಕ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
 
 
*ಬ್ಯಾಡ್ಮಿಂಟನ್‌ ಆಡಲು ಶುರು ಮಾಡಿದ್ದು ಯಾವಾಗ?
ಬ್ಯಾಡ್ಮಿಂಟನ್‌ ಲೋಕಕ್ಕೆ ಅಡಿ ಇಡಲು ಅಪ್ಪ ಸುಧೀರ್‌ ವರ್ಮಾ  ಅವರೇ ಪ್ರೇರಣೆ. ನರ್ಮದಾ ವ್ಯಾಲಿ ಅಭಿವೃದ್ಧಿ ಮಂಡಳಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅವರು ನಿತ್ಯವೂ ಬ್ಯಾಡ್ಮಿಂಟನ್‌ ಆಡಲು ಮನೆಯ ಸಮೀಪದ ಕ್ಲಬ್‌ಗೆ ಹೋಗುತ್ತಿದ್ದರು. ಆಗ ನಾನು ಅವರ ಜೊತೆಗಿರುತ್ತಿದ್ದೆ.   ಅವರ ಆಟ ನೋಡುತ್ತಾ ಬೆಳೆದೆ.  ಕ್ರಮೇಣ ಈ ಕ್ರೀಡೆಯತ್ತ ಆಕರ್ಷಿತನಾದೆ. ಶಾಲಾ ದಿನಗಳಲ್ಲಿ ಚೆನ್ನಾಗಿ ಆಡುತ್ತಿದ್ದೆ.  ಹೀಗಾಗಿ  ಇದರಲ್ಲೇ ಎತ್ತರದ ಸಾಧನೆ ಮಾಡುವ ಕನಸು ಹೊತ್ತು ಈ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದೇನೆ.
 
* ಈ ವರ್ಷದ ಆರಂಭದಲ್ಲಿ ನಡೆದ ಸೈಯದ್‌ ಮೋದಿ ಗ್ರ್ಯಾನ್‌ ಪ್ರಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದೀರಿ. ಈ ಸಾಧನೆಯ ಬಗ್ಗೆ ಹೇಳಿ?
ಬಿಡಬ್ಲ್ಯುಎಫ್‌ ಗ್ರ್ಯಾನ್‌ಪ್ರಿ  ಗೋಲ್ಡ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಕನಸು ಈ ವರ್ಷ ಸಾಕಾರಗೊಂಡಿದೆ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ.
 
* ಗೋಪಿಚಂದ್‌ ಅಕಾಡೆಮಿಗೆ ಸೇರಿದ್ದು ಯಾವಾಗ? 
2010ರಲ್ಲಿ   ಅಕಾಡೆಮಿಗೆ ಸೇರಿದೆ. ಅಲ್ಲಿ ಪುಲ್ಲೇಲಾ ಗೋಪಿಚಂದ್‌ ಅವರು ಆಟದ ಪಾಠಗಳನ್ನು ಹೇಳಿಕೊಟ್ಟು, ಪ್ರತಿಭೆಗೆ ಸಾಣೆ ಹಿಡಿದರು. ಅಕಾಡೆಮಿಗೆ ಸೇರಿದ ಮರು ವರ್ಷವೇ ವಿಶ್ವ ಜೂನಿ ಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದೆ. 2012ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲೂ ಕಂಚಿಗೆ ಕೊರಳೊಡ್ಡಿದ್ದೆ. ಆ ನಂತರ ಈ ಕ್ರೀಡೆಯಲ್ಲಿ ಇನ್ನಷ್ಟು ನೈಪುಣ್ಯ ಸಾಧಿಸಿದೆ.
 
* ಹಾಂಕಾಂಗ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿದ್ದೀರಿ. ಹೇಗನ್ನಿಸುತ್ತಿದೆ?
2016 ನನ್ನ ಪಾಲಿಗೆ ಸ್ಮರಣೀಯ ವರ್ಷ ಎಂದೇ ಹೇಳಬಹುದು. 2012 ಮತ್ತು 2013ರಲ್ಲಿ ಗಾಯದ ಸಮಸ್ಯೆ ಬೆಂಬಿಡದೆ ಕಾಡಿತ್ತು. ಹೀಗಾಗಿ ಸೂಪರ್‌ ಸೀರಿಸ್‌ ಟೂರ್ನಿಗಳಲ್ಲಿ ಹೆಚ್ಚಾಗಿ ಆಡಲು ಆಗಿರಲಿಲ್ಲ.  ಹಾಂಕಾಂಗ್‌ ಓಪನ್‌ನಲ್ಲಿ ‘ರನ್ನರ್‌’ ಅಪ್‌ ಸ್ಥಾನ ಗಳಿಸಿ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದ್ದೇನೆ. ಈ ಟೂರ್ನಿಯ ಬಳಿಕ ಹೋದಲೆಲ್ಲಾ ಜನ ಗುರುತಿಸುತ್ತಿದ್ದಾರೆ. ಅಭಿಮಾನಿಗಳ  ಪ್ರೀತಿ ಕಂಡು ಪುಳಕಿತನಾಗಿದ್ದೇನೆ.
 
* 2015ರ ಟಾಟಾ ಓಪನ್‌ನಲ್ಲಿ ಸಹೋದರನ ಸವಾಲು ಮೀರಿ ನಿಂತಿದ್ದೀರಿ. ಆ ಅನುಭವದ ಬಗ್ಗೆ ಹೇಳಿ?
ಎಳವೆಯಿಂದಲೂ ನಾನು, ಸೌರಭ್‌ ಆಟ ನೋಡಿ ಬೆಳೆದವನು. ಆತ   ಅಣ್ಣ ಮಾತ್ರವಲ್ಲ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತ ಕೂಡ.  ಟಾಟಾ ಓಪನ್‌ ಫೈನಲ್‌ನಲ್ಲಿ ಅಣ್ಣನನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿದ್ದ ಆ ಕ್ಷಣವನ್ನು ಎಂದಿಗೂ ಮರೆಯಲಾರೆ.
 
* ಸೌರಭ್‌ ಜೊತೆ ಡಬಲ್ಸ್‌ನಲ್ಲಿ ಆಡುವ ಆಲೋಚನೆ ಇದೆಯೇ?
 ನಾವಿಬ್ಬರೂ ಸಿಂಗಲ್ಸ್‌ನಲ್ಲೇ ಎತ್ತರದ ಸಾಧನೆ ಮಾಡುವ ಮಹಾದಾಸೆ ಹೊತ್ತಿದ್ದೇವೆ. ಹೀಗಾಗಿ ಈ ವಿಭಾಗದತ್ತ ಮಾತ್ರ ಚಿತ್ತ ಹರಿಸುತ್ತಿದ್ದೇವೆ. ಡಬಲ್ಸ್‌ನಲ್ಲಿ ಜೊತೆಯಾಗಿ ಆಡುವ ಯಾವ ಆಲೋಚನೆಯೂ ಸದ್ಯಕ್ಕಿಲ್ಲ.
 

 
* ನಿಮ್ಮ ಆಟದಲ್ಲಿ ಯಾವೆಲ್ಲಾ ಸುಧಾರಣೆಗಳಾಗಬೇಕು ಅಂತ ಭಾವಿಸುತ್ತೀರಿ?
ದೀರ್ಘ ರ್‍ಯಾಲಿ ಮತ್ತು ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ   ಕಲೆ ಕರಗತ ಮಾಡಿಕೊಂಡಿದ್ದೇನೆ. ಆದರೆ ಒತ್ತಡವನ್ನು ಮೀರಿ ನಿಲ್ಲುವ ಕೌಶಲ ಸಿದ್ಧಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.
 
* ನಿಮ್ಮ ಮುಂದಿರುವ ಸವಾಲುಗಳೇನು?
ಕ್ರೀಡಾಪಟುಗಳು ಸಾಧನೆಯ ಶಿಖರಕ್ಕೇರುವಲ್ಲಿ  ಫಿಟ್ನೆಸ್‌ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಫಿಟ್ನೆಸ್‌ ಕಾಪಾಡಿ ಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
 
* ಪಿಬಿಎಲ್‌ನಿಂದ  ಕಲಿತಿದ್ದೇನು?
ಪ್ರೀಮಿಯರ್‌ ಲೀಗ್‌ ಶುರುವಾದ ಬಳಿಕ ಭಾರತದ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಕ್ರಾಂತಿ ಉಂಟಾಗಿರುವುದು ಗೊತ್ತೇ ಇದೆ. ಈ ಲೀಗ್‌ ನನ್ನಂತಹ ಅನೇಕ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರಲು ವೇದಿಕೆಯಾಗಿದೆ. 
 
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಎತ್ತರದ ಸಾಧನೆ ಮಾಡಿರುವ  ಕ್ರೀಡಾಪಟುಗಳು ಲೀಗ್‌ನಲ್ಲಿ ಆಡುತ್ತಾರೆ. ನನ್ನ ವಾರಿಗೆಯವರಾದ ಕೆಂಟೊ ಮೊಮೊಟ ಮತ್ತು  ವಿಕ್ಟರ್‌ ಆ್ಯಕ್ಸಲ್‌ಸನ್‌  ಅವರು ಸಾಧನೆಯ ಹಾದಿಯಲ್ಲಿ ಬಹಳ ಮುಂದೆ ಸಾಗಿದ್ದಾರೆ.
 
ಅವರಲ್ಲಿರುವ ಅರ್ಪಣಾ ಭಾವ, ಆಟದ ಬಗೆಗೆ ಹೊಂದಿರುವ ಬದ್ಧತೆಯನ್ನು  ಬಹಳ ಹತ್ತಿರದಿಂದ ನೋಡುವ ಅವಕಾಶ ಲೀಗ್‌ನಿಂದ ಸಿಕ್ಕಿದೆ.   ವಿದೇಶಿ ಆಟಗಾರರು ಪಂದ್ಯಕ್ಕೆ ಸಜ್ಜಾಗುವ ಬಗೆ, ಎದುರಾಳಿಗಳನ್ನು ಹಣಿಯಲು ಹೆಣೆಯುವ ತಂತ್ರ ಹೀಗೆ ಅನೇಕ ವಿಷಯಗಳನ್ನು ಕಲಿಯಲೂ ನೆರವಾಗಿದೆ.
 
* ಪ್ರಸ್ತುತ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದ್ದೀರಿ. ರ್‍ಯಾಂಕಿಂಗ್‌ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಮುಂದಿರುವ ಸವಾಲುಗಳೇನು?
2015ರ ಆರಂಭದಲ್ಲಿ 262ನೇ ಸ್ಥಾನದಲ್ಲಿದ್ದೆ. ಆ ನಂತರ  ಸ್ಥಿರ ಸಾಮರ್ಥ್ಯ ತೋರುತ್ತಾ ಬಂದಿದ್ದೇನೆ. ಹೀಗಾಗಿ ರ್‍ಯಾಂಕಿಂಗ್‌ನಲ್ಲಿ ಪ್ರಗತಿಯಾಗಿದೆ. ಮುಂಬರುವ ಟೂರ್ನಿಗಳಲ್ಲೂ ಗುಣಮಟ್ಟದ ಆಟ ಆಡುವತ್ತ ಚಿತ್ತ ಹರಿಸಬೇಕು.
 
*ಸದಾ ನೆನಪಿನಲ್ಲಿ ಉಳಿಯುವಂತಹ ಗೆಲುವು?
ಹಾಂಕಾಂಗ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಜಾನ್‌ ಒ ಜೊರ್ಗೆನ್‌ಸನ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದ್ದೆ. ಆ ಗೆಲುವು ಸದಾ ನೆನಪಿನಲ್ಲಿ ಉಳಿಯುವಂತಹದ್ದು.

*ನಿಮ್ಮ ಪ್ರಕಾರ ಅತ್ಯಂತ ಬಲಿಷ್ಠ ಎದುರಾಳಿ ಯಾರು?
ನಿರ್ದಿಷ್ಟವಾಗಿ ಒಬ್ಬರ ಹೆಸರನ್ನು ಉಲ್ಲೇಖಿಸುವುದು ಕಷ್ಟ. ಬ್ಯಾಡ್ಮಿಂಟನ್‌ ಆಡುವ ಎಲ್ಲಾ ದೇಶಗಳ ಆಟಗಾರರೂ ಬಲಿಷ್ಠರೇ ಆಗಿದ್ದಾರೆ.
 

 
*ಮುಂದಿನ ಟೂರ್ನಿಗಳ ಬಗ್ಗೆ ಹೇಳಿ?
ಜೂನ್‌ನಲ್ಲಿ ಇಂಡೊನೇಷ್ಯಾ ಮತ್ತು ಆಸ್ಟ್ರೇಲಿಯಾ ಓಪನ್‌ ಟೂರ್ನಿಗಳು ನಡೆಯಲಿವೆ. ಎರಡರಲ್ಲೂ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದೇನೆ.
 
*ಮೆಚ್ಚಿನ ಆಟಗಾರ?
ಚೀನಾದ ಲಿನ್‌ ಡಾನ್‌ ಅವರನ್ನು ಹೆಚ್ಚು ಇಷ್ಟಪಡುತ್ತೇನೆ. ಅವರ ಆಟ ನೋಡುವುದೇ ಒಂದು ಸೊಬಗು. ಟೂರ್ನಿಯೊಂದರ ವೇಳೆ ಅವರನ್ನು ಭೇಟಿಯಾಗಿ ಮಾತನಾಡಿದ್ದೆ. 
****
ಸಮೀರ್‌ ಪರಿಚಯ
ಜನನ: 22 ಅಕ್ಟೋಬರ್‌ 1994
ಸ್ಥಳ: ಧಾರ್‌, ಮಧ್ಯಪ್ರದೇಶ
ಬಲಗೈ ಆಟಗಾರ
ಸಿಂಗಲ್ಸ್‌ ರ‍್ಯಾಂಕಿಂಗ್‌: 27
****
ಏನಿದು ಪಿಎಸ್‌ಪಿಬಿ ಟೂರ್ನಿ
ಪ್ರತಿಭಾವಂತ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ಪ್ರತಿ ವರ್ಷ ಅಂತರ ಘಟಕ ಟೂರ್ನಿಯನ್ನು ನಡೆಸುತ್ತಾ ಬರುತ್ತಿದೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್‌, ಟೆನಿಸ್ ಆಟಗಾರ ರೋಹನ್‌ ಬೋಪಣ್ಣ, ಟೇಬಲ್‌ ಟೆನಿಸ್‌ ತಾರೆ ಶರತ್‌ ಕಮಲ್‌ ಸೇರಿದಂತೆ ಅನೇಕರು  ಪಿಎಸ್‌ಪಿಬಿ ಟೂರ್ನಿಗಳಲ್ಲಿ ಆಡಿ  ಬೆಳೆದವರು ಎಂಬುದು ವಿಶೇಷ.
ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಹಾಕಿ, ಟೆನಿಸ್‌, ಚೆಸ್‌, ವಾಲಿಬಾಲ್‌, ಕೇರಂ ಮತ್ತು ಸ್ಕ್ವಾಷ್‌ ಸೇರಿದಂತೆ ಒಟ್ಟು 17 ಕ್ರೀಡಾ ಪ್ರಕಾರಗಳಲ್ಲಿ ಈ ಟೂರ್ನಿ ಜರುಗುತ್ತಿದೆ.
****
ಸಿಂಗಲ್ಸ್‌ನಲ್ಲಿ ಒಟ್ಟಾರೆ ಸಾಧನೆ
ಪಂದ್ಯ - 172
ಗೆಲುವು - 124
ಸೋಲು - 48

****
2017ರಲ್ಲಿ ಸಿಂಗಲ್ಸ್‌ ಸಾಧನೆ
ಪಂದ್ಯ - 14
ಸೋಲು - 4
ಗೆಲುವು - 10

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.