ADVERTISEMENT

ಹಳ್ಳಿಯಲ್ಲೊಂದು ಕ್ರೀಡಾ ಕ್ರಾಂತಿ...

ಮಂಡ್ಯ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಸೈಕಲ್‌ ಪೋಲೊ ಕ್ರೀಡೆ

ಕೆ.ಓಂಕಾರ ಮೂರ್ತಿ
Published 16 ಮಾರ್ಚ್ 2017, 6:26 IST
Last Updated 16 ಮಾರ್ಚ್ 2017, 6:26 IST
ಹಳ್ಳಿಯಲ್ಲೊಂದು  ಕ್ರೀಡಾ ಕ್ರಾಂತಿ...
ಹಳ್ಳಿಯಲ್ಲೊಂದು ಕ್ರೀಡಾ ಕ್ರಾಂತಿ...   
ಕ್ರೀಡೆಯ ಬೆಳವಣಿಗೆ ಹೀಗೂ ಸಾಧ್ಯ ಎಂಬುದಕ್ಕೆ ಕುಗ್ರಾಮವೊಂದರ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ಸಾಧನೆಯೇ ಸಾಕ್ಷಿ. ಹಳ್ಳಿಯ ಮಕ್ಕಳಿಗೆ ಒಂದು ಕ್ರೀಡೆ ಬಗ್ಗೆ ಒಲವು ಮೂಡಿಸಿದರೆ ಎಷ್ಟೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ ಕೂಡ.

ಈ ಊರಲ್ಲಿ ಸರಿಯಾಗಿ ರಸ್ತೆಗಳೂ ಇಲ್ಲ. ನೆಟ್ಟಗೆ ಒಂದು ಕ್ರೀಡಾಂಗಣ ಇಲ್ಲ. ‘ಡಿಜಿಟಲ್‌ ಭಾರತ’ದ ಅರಿವು ಕೂಡ ಇಲ್ಲ. ರೈತಾಪಿ ವರ್ಗದಿಂದ ಕೂಡಿರುವ ಈ ಗ್ರಾಮದ ಮಕ್ಕಳ ಸಾಧನೆ ಮಾತ್ರ ಅನನ್ಯ.
 
‘ಸೈಕಲ್ ಪೋಲೊ’ ಎಂಬ ಆಟದ ಮೂಲಕ ಇಡೀ ದೇಶದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲ್ಲೂಕಿನ ಬಿಲ್ಲೇನಹಳ್ಳಿ ಮಕ್ಕಳು ಮಿಂಚು ಹರಿಸುತ್ತಿದ್ದಾರೆ. ಆ ಕ್ರಾಂತಿಯ ಸೂತ್ರಧಾರ ಬಿ.ಶ್ರೀನಿವಾಸ್‌. ಇಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಒಂದು ಗಂಟೆ ಸೈಕಲ್ ಪೋಲೊ ಆಡಿಸಲಾಗುತ್ತದೆ.

ಎರಡು ವರ್ಷಗಳಲ್ಲಿ ಶಾಲೆಯ ಹಲವಾರು ವಿದ್ಯಾರ್ಥಿಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಮಕ್ಕಳಲ್ಲೂ ಸೈಕಲ್‌ ಪೋಲೊ ಕ್ರೀಡೆಯ ಒಲವು ಮೂಡಿಸುತ್ತಿದ್ದಾರೆ. ಸುಮಾರು ನಾಲ್ಕೈದು ವರ್ಷಗಳಿಂದ ತಣ್ಣಗೆ ಈ ಕ್ರಾಂತಿ ನಡೆದಿದೆ. ಇದೆಲ್ಲಾವೂ ಉಚಿತವಾಗಿ!
 
ಈಗಾಗಲೇ ಸೈಕಲ್‌ ಪೋಲೊ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ಕರ್ನಾಟಕ ತಂಡ ಗಮನ ಸೆಳೆದಿದೆ. ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅದಕ್ಕೆ ಕಾರಣ ಗ್ರಾಮೀಣ ಪ್ರದೇಶದ ಮಕ್ಕಳು.
 
‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಉಚಿತ ಸೈಕಲ್‌ ಬಳಸಿಕೊಂಡು ಸೈಕಲ್‌ ಪೋಲೊ ಹೇಳಿಕೊಡುತ್ತಿದ್ದೇನೆ. ಇದೇನೂ ದುಬಾರಿ ಕ್ರೀಡೆ ಅಲ್ಲ. ಭಾರತ ಸೈಕಲ್ ಪೋಲೊ ಫೆಡರೇಷನ್‌ ವತಿಯಿಂದಲೇ ಚೆಂಡು ಹಾಗೂ ಸ್ಟಿಕ್‌ ಒದಗಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್‌.
 
ರಾಷ್ಟ್ರೀಯ ಸೀನಿಯರ್‌ ಸೈಕಲ್‌ ಪೋಲೊ ತಂಡದ ಆಟಗಾರ ಕೂಡ ಆಗಿರುವ ಶ್ರೀನಿವಾಸ್‌ ಅವರು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರದ ಸುಮಾರು 150 ಮಕ್ಕಳಿಗೆ ತರಬೇತಿ ನೀಡಿದ್ದಾರೆ.

40ಕ್ಕೂ ಅಧಿಕ ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಹಂತದ ಟೂರ್ನಿಗಳಲ್ಲಿ ಆಡಿದ್ದಾರೆ. ಬಿಲ್ಲೇನಹಳ್ಳಿಯ ಶಾಲೆಯ ಹಿಂಬದಿಯ ಪುಟ್ಟ ಮೈದಾನದಲ್ಲಿ ಈಗ 40 ಮಕ್ಕಳಿಗೆ ಸೈಕಲ್‌ ಪೋಲೊ ಕಲಿಸುತ್ತಿದ್ದಾರೆ. ಮೈಸೂರಿನ ಕಾಫಿ ಬೋರ್ಡ್‌ ಮೈದಾನದಲ್ಲೂ ಆಟಗಾರರು ಅಭ್ಯಾಸ ನಡೆಸುತ್ತಾರೆ.
 
ಶ್ರೀನಿವಾಸ್‌ ರಾಜ್ಯ ಸೀನಿಯರ್‌ ಮಹಿಳೆಯರ ತಂಡದ ಕೋಚ್‌ ಕೂಡ. ರಾಜಸ್ತಾನದ ಜೈಪುರದಲ್ಲಿ ಫೆಬ್ರುವರಿ 21ರಿಂದ 25ರವರೆಗೆ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯದ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದಾರೆ.

ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ವಿಭಾಗದಲ್ಲಿ ಟೂರ್ನಿಗಳು ನಡೆಯುತ್ತವೆ. ರಾಜ್ಯದಲ್ಲಿ ಸೈಕಲ್ ಪೋಲೊ ಜನಪ್ರಿಯವಾಗಲು ವಿಜಯಲಕ್ಷ್ಮಿ ಪಾಟೀಲ್‌ ಮತ್ತು ಅರುಣ್‌ ಕುಮಾರ್ ಪಾಟೀಲ್‌ ಪ್ರಮುಖ ಕಾರಣ. ಇವರು ರಾಜ್ಯ ಪೋಲೊ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
2016ರ ಡಿಸೆಂಬರ್‌ನಲ್ಲಿ ಜೋಧ್‌ಪುರದಲ್ಲಿ ವಿಶ್ವಕಪ್‌ ಸೈಕಲ್‌ ಪೋಲೊ ನಡೆಯಿತು. ಇದರಲ್ಲಿ ಭಾರತ ತಂಡವೇ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಸೇನಾಪಡೆ, ವಾಯುಪಡೆಯ ಯೋಧರು ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪುರುಷರ ವಿಭಾಗದಲ್ಲಿ ಇವರದ್ದೇ ಪಾರಮ್ಯ. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡ ಉತ್ತಮ ಸಾಧನೆ ಮಾಡುತ್ತಿದೆ. ಐದು ಬಾರಿ ಬೆಳ್ಳಿ ಪದಕ ಜಯಿಸಿದೆ. ದಸರಾ ಕ್ರೀಡಾಕೂಟದಲ್ಲಿ ಸೈಕಲ್‌ ಪೋಲೊ ಕ್ರೀಡೆಗೆ ಸ್ಥಾನ ನೀಡಲಾಗಿದೆ.
 
‘ಶಾಲೆಯ ಶಿಕ್ಷಕರು ತಮ್ಮ ವೇತನದಿಂದ ತೆಗೆದಿರಿಸಿದ ಹಣದಿಂದ ಮಕ್ಕಳನ್ನು ವಿವಿಧೆಡೆ ನಡೆಯುವ ಟೂರ್ನಿಗೆ ಕರೆದುಕೊಂಡು ಹೋಗುತ್ತೇವೆ. ಕೆಲ ಪೋಷಕರು ಧನ ಸಹಾಯ ಮಾಡುತ್ತಾರೆ. ಕರ್ನಾಟಕ ಸೈಕಲ್‌ ಪೋಲೊ ಸಂಸ್ಥೆ ವತಿಯಿಂದಲೂ ನೆರವು ಲಭಿಸುತ್ತಿದೆ.

ಆದರೆ, ಮೈದಾನದ್ದೇ ಕೊರತೆ. ಮತ್ತಷ್ಟು ಪ್ರೋತ್ಸಾಹ ಹಾಗೂ ನೆರವು ಲಭಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು’ ಎಂದು ನುಡಿಯುತ್ತಾರೆ ಕೋಚ್‌ ಶ್ರೀನಿವಾಸ್‌.
 
ಸೈಕಲ್‌ ಪೋಲೊ ಇತಿಹಾಸ
ಆನೆ ಹಾಗೂ ಕುದುರೆ ಪೋಲೊದ ಮುಂದುವರಿದ ಭಾಗವೇ ಸೈಕಲ್ ಪೋಲೊ. ಇದಕ್ಕೆ ದೊಡ್ಡ ಇತಿಹಾಸವೇ ಇದೆ. 19ನೇ ಶತಮಾನದ ಅಂತ್ಯದ ವೇಳೆಗೆ ಸೈಕಲ್ ಪೋಲೊ ಯೂರೋಪ್‌ನಲ್ಲಿ ಪ್ರಸಿದ್ಧಿ ಪಡೆಯಿತು.
 
1901ರಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವೆ ಮೊದಲ ಪಂದ್ಯ ನಡೆಯಿತು. 1908ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈಕಲ್ ಪೋಲೊ ಕ್ರೀಡೆಯ ಪ್ರದರ್ಶನ ಪಂದ್ಯ ಜರುಗಿತು.
 
ಹಿಂದೆ ರಾಜರ ಕಾಲದಲ್ಲಿ ಕುದುರೆ ಹಾಗೂ ಆನೆ ಮೇಲೆ ಕುಳಿತು ಪೋಲೊ ಆಡಲಾಗುತಿತ್ತು. ಕುದುರೆಯ ಬದಲಿಗೆ ಈಗ ಸೈಕಲ್ ಬಳಸಲಾಗುತ್ತದೆ ಅಷ್ಟೆ. ಆಗಿನ ಕಾಲದಲ್ಲಿ ರಾಜಮನೆತನಗಳಿಗೆ ಮೀಸಲಾಗಿದ್ದ ಕ್ರೀಡೆ ಈಗ ಗ್ರಾಮೀಣ ಪ್ರದೇಶದ ಬಡಕುಟುಂಬದ ಮಕ್ಕಳ ಕೈಗೂ ಎಟುಕುತ್ತಿದೆ. ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಮಾನ್ಯತೆ ಕೂಡ ಲಭಿಸಿದೆ.
 
ಆಡುವುದು ಹೇಗೆ..?
ಅಪಾಯಕಾರಿ ಸಾಹಸ ಕ್ರೀಡೆಯಾಗಿರುವ ಸೈಕಲ್ ಪೋಲೊ ಮೈಸೂರು ಭಾಗದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಪ್ರತಿ ತಂಡದಲ್ಲಿ ನಾಲ್ವರು ಆಟಗಾರರು ಇರುತ್ತಾರೆ. ಹೆಚ್ಚುವರಿ ಆಟಗಾರರ ಸಂಖ್ಯೆ 4. ಫುಟ್‌ಬಾಲ್‌ ಕ್ರೀಡಾಂಗಣದ ಮಾದರಿಯಲ್ಲೇ ಮೈದಾನವಿರುತ್ತದೆ.
 
ಸೈಕಲ್‌ ಪೆಡಲ್‌ ತುಳಿಯುತ್ತಾ ಟೆನಿಸ್‌ ಬಾಲ್‌ ಮಾದರಿಯ ಚೆಂಡನ್ನು ಸ್ಟಿಕ್‌ (ಮ್ಯಾಲೆಟ್‌) ಸಹಾಯದಿಂದ ಎದುರಾಳಿ ಆಟಗಾರನ್ನು ತಪ್ಪಿಸಿ ಗೋಲುಪೆಟ್ಟಿಗೆ ಸೇರಿಸಬೇಕು. ಒಂದು ಕೈಯಲ್ಲಿ ಹ್ಯಾಂಡಲ್ ಹಿಡಿದು ಮತ್ತೊಂದು ಕೈಯಲ್ಲಿ ಚೆಂಡನ್ನು ಬಾರಿಸುವ ಕಸರತ್ತು ಮೈನವಿರೇಳಿಸುತ್ತದೆ.

ತಲಾ ಏಳೂವರೆ ನಿಮಿಷಗಳ ನಾಲ್ಕು ಚಕ್ಕರ್‌ (ಅವಧಿ) ಇರುತ್ತದೆ. ಸೀನಿಯರ್‌ ವಿಭಾಗದ ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಚಕ್ಕರ್‌ಗಳ ಸಂಖ್ಯೆ 5. ಒಂದು ಚಕ್ಕರ್‌ ಪೂರ್ಣಗೊಳ್ಳುವವರೆಗೆ ಆಟಗಾರರನ್ನು ಬದಲಾಯಿಸುವಂತಿಲ್ಲ.

ಪ್ರತಿ ಗೋಲು ಗಳಿಸಿದಾಗ ಆವರಣ ಬದಲಾಗುತ್ತಿರುತ್ತದೆ. ಇಬ್ಬರು ಅಂಪೈರ್‌ಗಳು ಸೈಕಲ್‌ನಲ್ಲೇ ಓಡಾಡುತ್ತಿರುತ್ತಾರೆ. ಸೈಕಲ್‌ಗೆ ಬೆಲ್‌, ಮಡ್‌ಗಾರ್ಡ್‌ ಸೇರಿದಂತೆ ಯಾವುದೇ ಹೆಚ್ಚುವರಿ ಜೋಡಣೆ ಮಾಡುವಂತಿಲ್ಲ. ಸುರಕ್ಷತೆ ದೃಷ್ಟಿಯಿಂದ ಆಟಗಾರರು ಹೆಲ್ಮೆಟ್‌ ಹಾಗೂ ಪ್ಯಾಡ್‌ ಧರಿಸಬೇಕು.
 
* ನಮ್ಮ ತಂದೆ ರೈತರು. ನಾವೆಲ್ಲಾ ಶಾಲೆಯಲ್ಲಿ ಕಬಡ್ಡಿ, ಕೊಕ್ಕೊ ಆಡಿಕೊಂಡಿದ್ದೆವು. ಆದರೆ, ಕೋಚ್‌ ಶ್ರೀನಿವಾಸ್‌ ಸರ್‌ ಸೈಕಲ್ ಪೋಲೊ ಹೇಳಿಕೊಟ್ಟರು. ಹಳ್ಳಿಯನ್ನು ಬಿಟ್ಟು ಹೊರ ಹೋಗದ ನಾನು ಸೈಕಲ್‌ ಪೋಲೊ ಕ್ರೀಡೆಯಿಂದ ಇಡೀ ದೇಶ ಸುತ್ತಿ ಬಂದಿದ್ದೇನೆ
–ವಿನಯ್‌ ಜಿ.ಬಸವನಹಳ್ಳಿ, ಮಂಡ್ಯ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.