ADVERTISEMENT

ಹಾಕಿ ಕೋಚ್‌ ಮುಳ್ಳಿನ ಮೇಲಿನ ನಡಿಗೆ...

ಪ್ರಮೋದ ಜಿ.ಕೆ
Published 26 ಜುಲೈ 2015, 19:30 IST
Last Updated 26 ಜುಲೈ 2015, 19:30 IST

ಮಾಧ್ಯಮಗಳ ಮೂಲಕ ನಡೆದ ಹೀಗೊಂದು ಸಂಭಾಷಣೆ...
ಪೌಲ್‌ ವಾನ್ ಆಸ್‌: ಹಾಕಿ ಇಂಡಿಯಾ ನನ್ನನ್ನು ವಜಾ ಮಾಡಿದೆ.

ನರೀಂದರ್‌ ಬಾತ್ರ: ಛೇ... ತರಬೇತುದಾರರನ್ನು ನಾವು ತೆಗೆದು ಹಾಕಿಲ್ಲ. ಒಲಿಂಪಿಕ್ಸ್‌ಗೆ ಶಿಬಿರ ಆರಂಭವಾಗಿದೆ. ತರಬೇತಿ ನೀಡಲು ಕೋಚ್‌ ಬಾರದಿದ್ದರೆ ನಾವೇನು ಮಾಡಬೇಕು?

ಪೌಲ್‌ ವಾನ್ ಆಸ್‌: ಸಹಾಯಕ ಕೋಚ್‌ ರೋಲಂಟ್ ಓಲ್ಟಮಸ್‌ ಮೂಲಕ ನನ್ನನ್ನು ವಜಾ ಮಾಡಿದ ವಿಷಯವನ್ನು ಹಾಕಿ ಇಂಡಿಯಾ ತಿಳಿಸಿದೆಯಲ್ಲಾ?

ನರೀಂದರ್‌ ಬಾತ್ರ: ತೆಗೆದು ಹಾಕಿಲ್ಲವೆಂದು ಆಗಲೇ ಹೇಳಿದ್ದೀವಲ್ಲಾ. ಆದರೂ ಅವರು ಶಿಬಿರಕ್ಕೆ ಏಕೆ ಬಂದಿಲ್ಲ?
ಪೌಲ್‌ ವಾನ್ ಆಸ್‌: ನನ್ನ ತವರೂರು ನೆದರ್‌ ಲೆಂಡ್‌ನಲ್ಲಿದ್ದೇನೆ. ವಿಮಾನದ ಟಿಕೆಟ್‌ ಕಳುಹಿಸ ದಿದ್ದರೆ ಭಾರತಕ್ಕೆ ಹೇಗೆ ಬರಲಿ?
ನರೀಂದರ್‌ ಬಾತ್ರ: ಅವರು ಉತ್ತಮ ಕೋಚ್‌ ಆಗಿರಲಿಲ್ಲ. ಆಟಗಾರರ ಜೊತೆ ಹೊಂದಾಣಿಕೆಯೇ ಇರಲಿಲ್ಲ.

ಪೌಲ್‌ ವಾನ್ ಆಸ್‌: ಭಾರತದಲ್ಲಿ ಶ್ರೇಷ್ಠ ಆಟಗಾ ರರಿದ್ದಾರೆ. ಅವರೆಲ್ಲರೂ ಪ್ರತಿಭಾವಂತರು. ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಆದರೆ, ಬಾತ್ರ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಹಾಕಿ ಹಿಂದುಳಿಯುತ್ತಿದೆ.

ಸಿದ್ಧತೆಗೆ ತೊಡಕು
2016ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತ ಒಂದು ವರ್ಷದ ಹಿಂದೆಯೇ ಅರ್ಹತೆ ಪಡೆದುಕೊಂಡಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹೆಗ್ಗುರಿಯೊಂದಿಗೆ ಸಜ್ಜಾಗುತ್ತಿದೆ. ಆದರೆ ಕೋಚ್‌ ಹಾಗೂ ಹಾಕಿ ಇಂಡಿಯಾದ ಅಧ್ಯಕ್ಷ ಬಾತ್ರ ನಡುವಿನ ವೈಮನಸ್ಸು ವಿವಾದಕ್ಕೆ ಕಾರಣವಾಗಿದೆ.

ಭಾರತ ಹಾಕಿ ಕ್ರೀಡೆಯ ಮಟ್ಟಿಗೆ ಕೋಚ್‌ಗಳ ಜೊತೆಗಿನ ವಿವಾದ ಹೊಸ ವಿಷಯವೇನಲ್ಲ. ಮಹತ್ವದ ಕ್ರೀಡಾಕೂಟಗಳು ಆರಂಭವಾಗಲು ಕೆಲ ದಿನಗಳಷ್ಟೇ ಬಾಕಿ ಇರುವಾಗ ಕೋಚ್‌ಗಳನ್ನು   ತೆಗೆದು ಹಾಕುವ ಪರಿಪಾಠ ಸಂಪ್ರದಾಯವೇನೋ ಎನ್ನುವಂತೆ ಬೆಳೆದುಕೊಂಡು ಬಂದಿದೆ.

ಆಟಗಾರರ ವಿಶ್ವಾಸಕ್ಕೆ ಪಾತ್ರರಾಗಿದ್ದ ರಾಜೀಂದರ್‌ ಸಿಂಗ್‌ ಸೀನಿಯರ್‌ ವಿಷಯದ ಲ್ಲಿಯೂ ಇದೇ ರೀತಿ ಆಗಿತ್ತು. 2004ರ ಅಥೆನ್ಸ್‌ ಒಲಿಂಪಿಕ್ಸ್‌ಗೆ 27 ದಿನಗಳಷ್ಟೇ ಬಾಕಿ ಇದ್ದಾಗ ರಾಜೀಂದರ್‌ ಅವರನ್ನು ಕೋಚ್ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು. ಈ ಘಟನೆಗೂ ಒಂದು ವರ್ಷದ ಹಿಂದೆಯಷ್ಟೇ ಭಾರತ ಏಷ್ಯಾಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು. ಆಗ ಭಾರತ ತಂಡದ ಯಶಸ್ಸಿನಲ್ಲಿ ಇದೇ ರಾಜೀಂದರ್‌ ಇದ್ದರು.

ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಆಡಲು ಭಾರತ ತಂಡ ಜರ್ಮನಿಗೆ ತೆರಳಿತ್ತು. ಆಗ ತಂಡದ ಜೊತೆಗಿದ್ದ ರಾಜೀಂದರ್ ಅವರಿಗೆ ತಕ್ಷಣವೇ ಭಾರತಕ್ಕೆ ಮರಳುವಂತೆ ಸೂಚಿಸಿ ಕೋಚ್‌ ಸ್ಥಾನದಿಂದ ಕೆಳಗಿಳಿಸಲಾಯಿತು.

ಹಾಕಿ ತಂಡಕ್ಕೆ ಹೊಸ ಕೋಚ್‌ ಆಯ್ಕೆ ಮಾಡಬೇಕು ಎನ್ನುವ ವಿಷಯ ಚರ್ಚೆಗೆ ಬಂದಾಗಲೆಲ್ಲಾ ಸ್ವದೇಶಿ ಹಾಗೂ ವಿದೇಶಿ ಎನ್ನುವ ಚರ್ಚೆ ಮೊದಲು ಶುರುವಾಗುತ್ತದೆ. ಸ್ವದೇಶದಲ್ಲಿ ಪ್ರತಿಭಾವಂತ ಕೋಚ್‌ಗಳಿದ್ದರೂ ಆಡಳಿತಗಾರರು ವಿದೇಶಿ ಕೋಚ್‌ಗಳನ್ನೇ ಆಯ್ಕೆ ಮಾಡಲು ಒಲವು ತೋರಿಸುತ್ತಾರೆ. ಇದಕ್ಕೆ ಹಾಕಿ ಇಂಡಿಯಾ ಸಾಕಷ್ಟು ಲೆಕ್ಕಾಚಾರಗಳನ್ನು ಹಾಕುತ್ತದೆ.

ಒಂದು ವೇಳೆ ಸ್ವದೇಶದ ಕೋಚ್‌ ಆಯ್ಕೆ ಮಾಡಿದರೆ ಆಟಗಾರರ ನಡುವೆ ಗುಂಪುಗಾರಿಕೆ ಆರಂಭವಾಗುತ್ತದೆ. ಪಂದ್ಯಗಳಲ್ಲಿ ಆಡಿಸುವಾಗ ಪಕ್ಷಪಾತ ಮಾಡಲಾಗುತ್ತದೆ. ದೇಶಿ ಶೈಲಿಗೆ ಒತ್ತು ನೀಡುತ್ತಾರೆ. ಕೋಚ್‌ಗಳು ಆಡಳಿತಗಾರರ ಮರ್ಜಿ ಹಿಡಿಯುವ ಕಾರಣ ಆಟದ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಹಾಕಿ ಇಂಡಿಯಾ ಸ್ವದೇಶಿ ಕೋಚ್‌ಗಳತ್ತ ಗಮನ ಹರಿಸುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ಎಂಟು ಸಲ ಚಿನ್ನ ಜಯಿಸಿದ್ದರೂ ಭಾರತದ ಆಟಗಾರರಿಗೆ ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ತರಬೇತಿ ನೀಡಲು ವಿಫಲರಾಗುತ್ತಿದ್ದಾರೆ.

ಒಂದು ವೇಳೆ ಪ್ರಮುಖ ಟೂರ್ನಿಯಲ್ಲಿ ವೈಫಲ್ಯ ಕಂಡರೆ ಕೋಚ್‌ಗಳು ನೇರವಾಗಿ ಆಟಗಾರರನ್ನೇ ದೂಷಿಸುವ ಜಾಯಮಾನ ಭಾರತದ ಹಾಕಿಯಲ್ಲಿ ಬೆಳೆದು ಬಂದಿದೆ. ಈ ಕಾರಣಕ್ಕಾಗಿ ಹಾಕಿ ಇಂಡಿಯಾ ವಿದೇಶಿಗರತ್ತ ಕಣ್ಣರಳಿಸಿ ನೋಡುತ್ತದೆ.

ಹಾಕಿ ಆಡಳಿತಗಾರರು 13 ವರ್ಷಗಳ ಅವಧಿಯಲ್ಲಿ ಏಳು ಸ್ವದೇಶಿ ಮತ್ತು ಒಂಬತ್ತು ವಿದೇಶಿ ಕೋಚ್‌ಗಳನ್ನು ಬದಲಿಸಿದ್ದಾರೆ. ಕೆಲ ಅಭಿಮಾನಿಗಳು ಮತ್ತು ಆಟಗಾರರು ವಿದೇಶಿ ಕೋಚ್ ಇದ್ದರಷ್ಟೇ ಭಾರತ ಶ್ರೇಷ್ಠ ಸಾಮರ್ಥ್ಯ ನೀಡಲು ಸಾಧ್ಯ ಎನ್ನುವುದನ್ನು ಬಲವಾಗಿ ನಂಬಿಬಿಟ್ಟಿದ್ದಾರೆ.

ವಿದೇಶಿ ಕೋಚ್‌ಗಳು ಏನೆಲ್ಲಾ ಎಡವಟ್ಟು ಮಾಡುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆ ಗಳಿವೆ. ಅದರಲ್ಲೂ ಗರಾರ್ಡ್‌ ರಾಚ್‌ ನೇಮಕ ವಂತೂ ಭಾರತ ಹಾಕಿಯ ದುರಂತದ ದಿನಗ ಳೆಂದೇ ಹೇಳಬೇಕು. ತೆರಿಗೆ ವಂಚನೆಗಾಗಿ ಹಲ ವಾರು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ  ಜರ್ಮನಿಯ ಗರಾರ್ಡ್‌ ರಾಚ್‌ ಅವರನ್ನು ಭಾರತದ ಕೋಚ್‌ ಆಗಿ ನೇಮಿಸಲಾಯಿತು.

ಸೊಗಸಾದ ಆಟದ ಮೂಲಕ ಹಾಕಿ ಕ್ರೀಡೆಯ ಮಹತ್ವವನ್ನು ಹೆಚ್ಚಿಸಿದ್ದ ಧನರಾಜ್‌ ಪಿಳ್ಳೈ ಮತ್ತು ಬಲ್ಜೀತ್‌ ಸಿಂಗ್‌ ಧಿಲ್ಲೋನ್ ಅವರನ್ನು ರಾಚ್‌ ಮೂಲೆಗುಂಪು ಮಾಡಲು ಯತ್ನಿಸಿದ್ದರು. ಇವ ರಿಬ್ಬರೂ ಬೇಗನೆ ನಿವೃತ್ತಿ ಹೊಂದಿದರೆ ಉತ್ತಮ ಎನ್ನುವ ಸಲಹೆಯನ್ನೂ ರಾಚ್‌ ನೀಡಿದ್ದರು. ರಾಚ್‌ ಮಾಡಿದ್ದ ಎಡವಟ್ಟುಗಳನ್ನು ಸರಿಪಡಿಸಿ ಮತ್ತೆ ತಂಡವನ್ನು ಸರಿ ಮಾಡುವ ಜವಾಬ್ದಾರಿ ರಾಜೀಂದರ್‌ ಸಿಂಗ್‌ ಜೂನಿಯರ್‌ಗೆ ಲಭಿಸಿತ್ತು.

ರಾಜೀಂದರ್‌ ಗರಡಿಯಲ್ಲಿ ತರಬೇತುಗೊಂಡ ಭಾರತ ತಂಡ ಅಜ್ಲನ್‌ ಷಾ ಟೂರ್ನಿಯಲ್ಲಿ ಐದನೇ ಸ್ಥಾನ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಆಗ ಅವರನ್ನು ಕಿತ್ತೊಗೆಯಲಾಯಿತು. 

2006ರಲ್ಲಿ ವಿ. ಭಾಸ್ಕರನ್‌ ಮತ್ತೆ ಭಾರತದ ಕೋಚ್‌ ಆಗಿದ್ದಾಗ ಅವರದ್ದು ಮುಳ್ಳಿನ ಮೇಲಿನ ನಡಿಗೆಯಂಥ ಸ್ಥಿತಿಯಾಗಿತ್ತು. ಸಂಕಷ್ಟದ ಸಮಯದಲ್ಲಿ ಕೋಚ್ ಆಗಿ ಬಂದ ಜೋಕಿಮ್ ಕರ್ವಾಲೊ ಭಾರತ ತಂಡದಲ್ಲಿ ಚೈತನ್ಯ ತುಂಬಿದರು. ಆದರೆ, 2008ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದ ಘಟನೆ ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆಗ ಮತ್ತೆ ವಿದೇಶಿ ಕೋಚ್‌ ಎನ್ನುವ ಧ್ಯಾನ ಶುರುವಾಯಿತು. ಟೆರ್ರಿ ವಾಲ್ಶ್‌, ಸ್ಪೇನ್‌ನ ಜೋಸ್‌ ಬ್ರಾಸಾ ಹೀಗೆ ಅನೇಕ ಕೋಚ್‌ಗಳು ಬಂದು ಹೋದರು. ಪ್ರತಿ ಕೋಚ್ ಕೂಡಾ ಒಂದಲ್ಲಾ ಒಂದು ವಿವಾದ ಮಾಡಿಕೊಂಡೇ ಹೋಗಿದ್ದಾರೆ.

ಪ್ರಸಕ್ತ ಸಹಾಯಕ ಕೋಚ್‌ ಆಗಿ ಕೆಲಸ ಮಾಡುತ್ತಿರುವ ನೆದರ್‌ಲೆಂಡ್‌ನ ರೋಲಂಟ್‌ ಓಲ್ಟ ಮಸ್ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಆದರೆ, ಈ ಘಟನೆ ಅಭ್ಯಾಸಕ್ಕೆ ಅಡ್ಡಿಯಾಗಿಲ್ಲ ಎಂದು ಶಿಬಿರದಲ್ಲಿ ಪಾಲ್ಗೊಂಡಿರುವ ಕರ್ನಾಟಕದ ಆಟಗಾರರೊಬ್ಬರು ಹೇಳುತ್ತಾರೆ.

‘ಕೋಚ್‌ ವಿವಾದ ಪ್ರತಿಯೊಬ್ಬರಿಗೂ ಗೊತ್ತಿದೆ. ಇದರಿಂದ ಅಭ್ಯಾಸಕ್ಕೆ ಏನೂ ತೊಂದರೆಯಾಗಿಲ್ಲ. ರೋಲಂಟ್‌ ಓಲ್ಟಮಸ್‌ ಮುಖ್ಯ ಕೋಚ್‌ ಜವಾ ಬ್ದಾರಿ ವಹಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನ ದಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದಷ್ಟೇ ನಮ್ಮ ಗುರಿ’ ಎಂದು ಹೆಸರು ಹೇಳಲು ಬಯಸದ ರಾಜ್ಯದ ಆ ಆಟಗಾರ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.
*
ಏನಿದು ವಿವಾದ
ಹೋದ ತಿಂಗಳು ಬೆಲ್ಜಿಯಂನ ಆ್ಯಂಟ್‌ ವರ್ಪ್‌ನಲ್ಲಿ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್ ಟೂರ್ನಿ ನಡೆದಿತ್ತು. ಮಲೇಷ್ಯಾ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ಸಂದರ್ಭದಲ್ಲಿ ನರೀಂದರ್ ಬಾತ್ರ ವಿಶ್ರಾಂತಿಯ ವೇಳೆ ಮೈದಾನದೊಳಗೆ ಹೋಗಿ ಆಟಗಾರರ ಜೊತೆ ಕಟುವಾದ ಪದಗಳಲ್ಲಿ ಮಾತನಾಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಾನ್‌ ಆಸ್ ಆಟಗಾರರು ಮೈದಾನದಲ್ಲಿದ್ದಾಗ ಮಾತ ನಾಡಿಸಿ ಅವರ ಏಕಾಗ್ರತೆ  ಹಾಳು ಮಾಡ ಬಾರದು ಎಂದು ಬಾತ್ರ ಅವರನ್ನು ಟೀಕಿಸಿ ದ್ದರು. ಮೂಲತಃ ಉದ್ಯಮಿಯಾಗಿರುವ ಬಾತ್ರ ಕೋಚ್ ವಿರುದ್ಧ ಸಿಡಿಮಿಡಿಗೊಂಡರು. ಆಗಿ ನಿಂದಲೂ ಬಾತ್ರ ಮತ್ತು ವಾನ್‌ ಆಸ್ ನಡುವೆ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ. ದಿನಕ್ಕೊಂದು ವಿವಾದ ಬಹಿರಂಗವಾಗುತ್ತಿವೆ.
*
ಒಲಿಂಪಿಕ್ಸ್‌ಗೆ ಒಂದು ವರ್ಷವಷ್ಟೇ ಬಾಕಿ ಇರುವಾಗ ಈ ರೀತಿಯ ಘಟನೆ ನಡೆಯಬಾರದಿತ್ತು. ಸ್ವದೇಶಿ ಅಥವಾ ವಿದೇಶಿ ಯಾರೇ ಕೋಚ್‌ ಆಗಿರಲಿ ನಾವು  ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು
–ರಘುಪ್ರಸಾದ್,
ಅಂತರರಾಷ್ಟ್ರೀಯ ಹಾಕಿ ಅಂಪೈರ್‌
*
ಈ ಘಟನೆಗಳು ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ. ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಬಹುದಾಗಿದ್ದ ವಿಷಯವಿದು. ಆಟಗಾರರು ಇದರ ಬಗ್ಗೆ ಯೋಚಿಸಬಾರದು
–ಎ.ಬಿ. ಸುಬ್ಬಯ್ಯ,
ಹಾಕಿ ಇಂಡಿಯಾ ಆಯ್ಕೆ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT