ADVERTISEMENT

ಹೊಸ ಪ್ರತಿಭೆಗಳಿಗೆ ಚಿಮ್ಮುಹಲಗೆ ಕೆಪಿಎಲ್‌

ಪ್ರಮೋದ ಜಿ.ಕೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST
ಹೊಸ ಪ್ರತಿಭೆಗಳಿಗೆ ಚಿಮ್ಮುಹಲಗೆ ಕೆಪಿಎಲ್‌
ಹೊಸ ಪ್ರತಿಭೆಗಳಿಗೆ ಚಿಮ್ಮುಹಲಗೆ ಕೆಪಿಎಲ್‌   

‘ಐಪಿಎಲ್, ಕೆಪಿಎಲ್‌ ಟೂರ್ನಿಗಳಿಂದ ಕ್ರಿಕೆಟ್‌ ಸೊಬಗು ಹಾಳಾಗಿ ಹೋಯಿತು ಎಂದು ಸಾಕಷ್ಟು ಜನ ದೂರುತ್ತಾರೆ. ಯಾರು ಏನೇ ಅಂದರೂ ಈ ಟೂರ್ನಿಗಳಿಂದ ಸಾಕಷ್ಟು ಅನುಕೂಲವಾಗಿದೆ. ನೂರಾರು ಆಟಗಾರರ ಬದುಕು ಬದಲಾಗಿದೆ..’

ಹೀಗೆ ಹೇಳಿದ್ದು ಬೆಳಗಾವಿ ಪ್ಯಾಂಥರ್ಸ್ ತಂಡದಲ್ಲಿರುವ ಧಾರವಾಡದ ಆಟಗಾರ ನಿತಿನ್‌ ಭಿಲ್ಲೆ. ರೈಲ್ವೇಸ್ ತಂಡದ ಪರ ಆಡುವ ನಿತಿನ್‌ 28 ಪ್ರಥಮ ದರ್ಜೆ ಪಂದ್ಯಗಳಿಂದ 1300 ರನ್ ಗಳಿಸಿದ್ದಾರೆ.

2008ರಲ್ಲಿ ‘ಮಿಲಿಯನ್‌ ಡಾಲರ್‌ ಬೇಬಿ’ ಐಪಿಎಲ್ ಶುರುವಾದ ನಂತರದ ವರ್ಷವೇ ಕೆಪಿಎಲ್‌ ಆರಂಭವಾಯಿತು. ಮೊದಮೊದಲು ಹಿರಿಯ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗ ಹೊಸಬರಿಗೆ ಹೆಚ್ಚು ಅವಕಾಶ ಸಿಗುತ್ತಿದೆ. ಐಪಿಎಲ್‌ನಂಥ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಸ್ಥಾನ ಲಭಿಸುತ್ತಿದೆ.

ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯದ ಆಟಗಾರರಾದ ಜಿಶನ್‌ ಅಲಿ ಸೈಯದ್‌, ರೋಹನ್‌ ಕದಮ್‌, ರಿತೇಶ ಭಟ್ಕಳ, ಡಾಮ್ನಿಕ್‌ ಫರ್ನಾಂಡೀಸ್‌, ಸ್ವಪ್ನಿಲ್ ಎಳವೆ, ಶಿಶಿರ್‌ ಭವಾನೆ, ರೋನಿತ್‌ ಮೋರೆ, ರಾಜು ಭಟ್ಕಳ, ಅನಿರುದ್ಧ ಜೋಶಿ, ಶೊಯೆಬ್‌ ಮ್ಯಾನೇಜರ್‌, ನಿತಿನ್‌ ಭಿಲ್ಲೆ, ದರ್ಶನ ಪಾಟೀಲ, ಕಿಶೋರ್ ಕಾಮತ್‌, ಪವನ್ ದೇಶಪಾಂಡೆ ಕೆಪಿಎಲ್‌ನಲ್ಲಿ ಆಡಲು ಆರಂಭಿಸಿದ ಬಳಿಕ ಸಾಕಷ್ಟು ಜನಕ್ಕೆ ಗೊತ್ತಾಗಿದ್ದಾರೆ. ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ.

ದೇಶಿ ಟೂರ್ನಿಗಳಲ್ಲಿ ಕರ್ನಾಟಕದ ತಂಡದ ಪರ ಒಂದೂ ಪಂದ್ಯವಾಡದ ಕೆ.ಸಿ. ಕಾರಿಯಪ್ಪ ಮೊದಲು ರಾಜ್ಯದ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಅಷ್ಟೇ ಏಕೆ ರಾಜ್ಯದ ಕೆಲ ಆಟಗಾರರಿಗೂ ಯಾರೆಂದು ತಿಳಿದಿರಲಿಲ್ಲ. ಆದರೆ 2015ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ₹ 2.4 ಕೋಟಿ ಹಣಕ್ಕೆ ಖರೀದಿಸಿದಾಗ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳು ‘ಕಾರಿಯಪ್ಪ ಯಾರು’ ಎಂದು ಪ್ರಶ್ನಿಸಿದ್ದರು.
ರಾಜ್ಯ ಟೂರ್ನಿ ಮತ್ತು ಕೆಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಧಾರವಾಡದ ಕೆಲವು ಆಟಗಾರರು ಕೂಡ ಐಪಿಎಲ್‌ ತಂಡಗಳಲ್ಲಿದ್ದರು.

ಬೆಳಗಾವಿಯ ರೋನಿತ್‌ ಮೋರೆ (ಚೆನ್ನೈ ಸೂಪರ್‌ ಕಿಂಗ್ಸ್‌), ಹುಬ್ಬಳ್ಳಿಯ ಶಿಶಿರ್‌ ಭವಾನೆ ಮತ್ತು ಬೆಳಗಾವಿಯ ರಾಜು ಭಟ್ಕಳ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ಮತ್ತು ಹುಬ್ಬಳ್ಳಿಯ ಕಿಶೋರ ಕಾಮತ್‌ (ಮುಂಬೈ ಇಂಡಿಯನ್ಸ್‌್ ) ತಂಡಗಳಲ್ಲಿ ಸ್ಥಾನ ಗಳಿಸಿದ್ದರು.
‘ಜನರ ಮನದಲ್ಲಿ ಹೆಚ್ಚು ಕಾಲ ಉಳಿಯಬೇಕಾದರೆ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಎಲ್ಲಾ ಮಾದರಿಗಳಲ್ಲಿ ಚೆನ್ನಾಗಿ ಆಡಲೇಬೇಕು. ಇದರಿಂದ ಹೊಸ ಆಟಗಾರರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಿಂದ ಒಂದ ಕ್ರಿಕೆಟಿಗರು ಮುಂದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗುತ್ತದೆ. ಆಟಗಾರನ ಶ್ರಮಕ್ಕೆ ಇದಕ್ಕಿಂತ ಇನ್ನೇನು ಸೌಭಾಗ್ಯ ಬೇಕು’ ಎಂದು ಪ್ರಶ್ನಿಸಿದರು.

ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಲಿ:
‘ಈಗ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಕೆಪಿಎಲ್‌ ಪಂದ್ಯಗಳನ್ನು ನಡೆಸಲಾಗುತ್ತಿದೆ. ಬೆಳಗಾವಿ, ಶಿವಮೊಗ್ಗದಲ್ಲಿಯೂ ಉತ್ತಮ ಕ್ರೀಡಾಂಗಣಗಳು ಇವೆ. ಕೆಲವೆಡೆ ಕೆಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಮುಂದಿನ ಕೆಲ ವರ್ಷಗಳಲ್ಲಿ ಹೊಸ ಪ್ರದೇಶಗಳಲ್ಲಿ ಪಂದ್ಯಗಳನ್ನು ಆಯೋಜಿಸಲಿ. ಇದರಿಂದ ಕೆಪಿಎಲ್‌ ಬೆಳಗವಣಿಗೆ ವೇಗ ಹೆಚ್ಚಾಗುತ್ತದೆ’ ಎಂದು ನಿತಿನ್‌ ಭಿಲ್ಲೆ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಪಿಎಲ್‌ ಪಂದ್ಯಗಳನ್ನು ನೋಡಲು ನಿತ್ಯ ನೂರಾರು ಯುವ ಕ್ರಿಕೆಟಿಗರು ಬರುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡದ ವಿವಿಧ ಕ್ಲಬ್‌ಗಳಲ್ಲಿ ತರಬೇತಿ ಪಡೆಯುತ್ತಿರುವ ಕಿರಿಯ ಆಟಗಾರರು ಪಂದ್ಯಗಳನ್ನು ನೋಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಆಡಿದ ವಿನಯ್ ಕುಮಾರ್, ಅಭಿಮನ್ಯು ಮಿಥುನ್‌, ಅರವಿಂದ್, ಕರುಣ್‌ ನಾಯರ್‌ ಹೀಗೆ ಹಲವಾರು ಆಟಗಾರರು ಕೆಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇವರ ಆಟ ಕಿರಿಯ ಕ್ರಿಕೆಟಿಗರಿಗೆ ಸ್ಫೂರ್ತಿಯಾಗುತ್ತದೆ. ಆದ್ದರಿಂದ ಈ ಟೂರ್ನಿ ಕ್ರಿಕೆಟ್‌ ಬದುಕಿನ ರಹದಾರಿ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.