ADVERTISEMENT

ಎಲ್ಲಿ ಹೋದರು ಸ್ಪಿನ್ನರ್‌ಗಳು?

ವಿಕ್ರಂ ಕಾಂತಿಕೆರೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ರವಿಚಂದ್ರನ್ ಅಶ್ವಿನ್‌
ರವಿಚಂದ್ರನ್ ಅಶ್ವಿನ್‌   

ವಾಂಡರರ್ಸ್‌ನಲ್ಲಿ ಕಳೆದ ವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಟಾಸ್ ಹಾಕಲು ಕೆಲವೇ ಕ್ಷಣಗಳು ಬಾಕಿ ಇದ್ದವು. ಕ್ರೀಡಾ ಚಾನೆಲ್‌ನಲ್ಲಿ ಕ್ರಿಕೆಟ್ ಪಂಡಿತರ ಚರ್ಚೆ ರಂಗೇರಿತ್ತು. ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಎದುರಿನಲ್ಲಿ ಕುಳಿತಿದ್ದ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರತ್ತ ಒಂದು ಪ್ರಶ್ನೆ ಎಸೆದರು.

‘ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಕಣಕ್ಕೆ ಇಳಿಸಲಿರುವ ಪ್ರಮುಖ ಸ್ಪಿನ್ನರ್ ಯಾರು’ ಎಂದು ಕೇಳಿದರು. ಇದಕ್ಕೆ ನಗುತ್ತಾ ಉತ್ತರಿಸಿದ ಜಾಂಟಿ ‘ಬಹುಶಃ ಡೀನ್‌ ಎಲ್ಗರ್‌...’ ಎಂದು ಹೇಳಿದರು. ಚರ್ಚಾ ಕೊಠಡಿಯಲ್ಲಿ ಜೋರಾಗಿ ನಗೆಯುಕ್ಕಿತು.

ಈ ಪ್ರಶ್ನೆ, ಉತ್ತರ ಮತ್ತು ನಂತರ ಹೊಮ್ಮಿದ ನಗೆಯಲ್ಲಿ ವಿಡಂಬನೆ ಇತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಎರಡೂ ತಂಡಗಳು ಪ್ರಕಟಿಸಿದ ತಂಡಗಳಲ್ಲಿ ಇದ್ದ ಒಟ್ಟು 31 ಮಂದಿ ಆಟಗಾರರ ಪೈಕಿ ಇದ್ದ ಸ್ಪಿನ್ನರ್‌ಗಳು ಮೂವರು ಮಾತ್ರ. ಭಾರತ ಇಬ್ಬರು ಮತ್ತು ದಕ್ಷಿಣ ಆಫ್ರಿಕಾ ಒಬ್ಬ ಸ್ಪಿನ್ನರ್‌ಗೆ ತಂಡದಲ್ಲಿ ಸ್ಥಾನ ನೀಡಿತ್ತು.

ADVERTISEMENT

ದಕ್ಷಿಣ ಆಫ್ರಿಕಾ ತಂಡದಲ್ಲಿ ಸಾಂದರ್ಭಿಕ ಸ್ಪಿನ್ನರ್‌ ಡೀನ್‌ ಎಲ್ಗರ್ ಕೂಡ ಇದ್ದರು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಒಬ್ಬೊಬ್ಬ ಸ್ಪಿನ್ನರ್‌ಗೆ ಮಾತ್ರ ಅವಕಾಶ ನೀಡಿದ್ದವು. ಕೊನೆಯ ಪಂದ್ಯದಲ್ಲಿ ಹಸಿರು ಹೊದ್ದಿದ್ದ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೇನು ಕೆಲಸ ಎಂಬ ಕುಹಕ ಜಾಂಟಿ ರೋಡ್ಸ್‌ ಮಾತಿನಲ್ಲಿ ಇತ್ತೇನೋ ಇಲ್ಲವಾದರೆ ಸ್ಪಿನ್ನರ್‌ ಕೇಶವ್‌ ಮಹಾರಾಜ್ ತಂಡದಲ್ಲಿದ್ದಾಗ 44 ಪಂದ್ಯಗಳಲ್ಲಿ ಕೇವಲ 13 ವಿಕೆಟ್‌ ಕಬಳಿಸಿರುವ ಡೀನ್ ಎಲ್ಗರ್‌ ಹೆಸರು ಪ್ರಸ್ತಾಪಿಸುವ ಅಗತ್ಯವೇನಿತ್ತು?

ಚರ್ಚೆಯಲ್ಲಿ ಕೇಳಿದ ಕುತೂಹಲಕ್ಕೆ ಅಂಗಣದಲ್ಲಿ ಉಭಯ ತಂಡದ ನಾಯಕರು ಉತ್ತರ ನೀಡಿದರು. ಮೂರನೇ ಟೆಸ್ಟ್‌ನಲ್ಲಿ ಎರಡೂ ತಂಡಗಳು ತಲಾ ಐವರು ವೇಗಿಗಳ ಜೊತೆ ಕಣಕ್ಕೆ ಇಳಿದರು. ಅದಕ್ಕೆ ಫಲವೂ ಸಿಕ್ಕಿತು.

ಹಾಗೆ ನೋಡಿದರೆ ಭಾರತ–ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸ್ಪಿನ್ನರ್‌ಗಳು ತೆರೆಮರೆಗೆ ಸರಿದಿದ್ದರು. ಎರಡು ಪಂದ್ಯಗಳಲ್ಲಿ ವೇಗಿಗಳೇ ಮೆರೆದಿದ್ದರು. ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉರುಳಿದ 40 ವಿಕೆಟ್‌ಗಳಲ್ಲಿ 38 ವಿಕೆಟ್‌ಗಳನ್ನು ವೇಗಿಗಳು ಕಬಳಿಸಿದ್ದರು. ಎರಡು ವಿಕೆಟ್‌ ರವಿಚಂದ್ರನ್‌ ಅಶ್ವಿನ್ ಪಾಲಾಗಿದ್ದವು. ಸೆಂಚೂರಿಯನ್‌ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಬಹುದು ಎಂಬ ನಿರೀಕ್ಷೆ ಇದ್ದರೂ ವಿಕೆಟ್‌ ಬಿದ್ದದ್ದು ವೇಗಿಗಳಿಗೆ. ಅಲ್ಲೂ 40 ವಿಕೆಟ್‌ಗಳು ಪತನಗೊಂಡಿದ್ದವು. ಐದು ವಿಕೆಟ್ ಕಬಳಿಸಿದ ಅಶ್ವಿನ್ ಮತ್ತು ಒಂದು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್‌ ಸ್ಪಿನ್ನರ್‌ಗಳ ‘ಗೌರವ’ ಉಳಿಸಿದ್ದರು.

ಭಾರತದ ಸ್ಪಿನ್‌ ದಾಳಿಯ ಮೊನಚು ಎಲ್ಲಿ ಹೋಯಿತು?
ಭಾರತ ಉಪಖಂಡಲ್ಲಿ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಕೂಡ ಮಿಂಚುವ ಸ್ಪಿನ್ನರ್‌ಗಳು ವಿದೇಶಿ ನೆಲದಲ್ಲಿ, ವಿಶೇಷವಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮುಂತಾದ ‘ವೇಗದ’ ನೆಲದಲ್ಲಿ ಕೈಚೆಲ್ಲುವ ಪರಿಸ್ಥಿತಿ ಈಚೆಗೆ ನಿರ್ಮಾಣವಾಗಿದೆ. ಅನಿಲ್ ಕುಂಬ್ಳೆ, ಹರಭಜನ್ ಸಿಂಗ್ ಮುಂತಾದವರು  ಸ್ಪಿನ್‌ ದಾಳಿಯಲ್ಲಿ ಕರಾಮತ್ತು ಮಾಡಿದ ನೆಲದಲ್ಲಿ ಈಗಿನ ಸ್ಪಿನ್ನರ್‌ಗಳು ಯಾಕೆ ಮಿಂಚುತ್ತಿಲ್ಲ ಎಂಬ ಪ್ರಶ್ನೆಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.

ಭಾರತದ ಹಿಂದಿನ ಸ್ಪಿನ್ನರ್‌ಗಳ ಪೈಕಿ ಲೆಗ್‌ಸ್ಪಿನ್ನರ್ ಬಿ.ಎಸ್.ಚಂದ್ರಶೇಖರ್‌, ಎಡಗೈ ಸ್ಪಿನ್ನರ್ ಬಿಷನ್ ಸಿಂಗ್‌ ಬೇಡಿ, ಆಫ್‌ಸ್ಪಿನ್ನರ್ ಎರ‍್ರಪಳ್ಳಿ ಪ್ರಸನ್ನ, ಎಸ್‌.ವೆಂಕಟರಾಘವನ್‌ ಮುಂತಾದವರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಈಗಿನ ಕೋಚ್‌ ರವಿಶಾಸ್ತ್ರಿ ಹರಿಣಗಳ ನಾಡಿನಲ್ಲಿ ಎಡಗೈ ಸ್ಪಿನ್ ದಾಳಿ ನಡೆಸಿದ್ದಾರೆ. 1992ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೂರು ಪಂದ್ಯಗಳನ್ನು ಆಡಿ ಎರಡು ವಿಕೆಟ್ ಗಳಿಸಿದ್ದಾರೆ. ಅಲ್ಲಿನ ಪಿಚ್‌ಗಳನ್ನು ಸ್ಪಿನ್‌ಗೆ ಪೂರಕವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಚಿಂತನೆ ಅವರಿಗೂ ಹೊಳೆಯಲಿಲ್ಲ.

ಅನಿಲ್ ಕುಂಬ್ಳೆ ದಕ್ಷಿಣ ಆಫ್ರಿಕಾದಲ್ಲಿ 12 ಪಂದ್ಯಗಳನ್ನು ಆಡಿದ್ದಾರೆ. 45 ವಿಕೆಟ್‌ ಗಳಿಸಿರುವ ಅವರು ಒಂದೇ ಇನಿಂಗ್ಸ್‌ನಲ್ಲಿ 53 ರನ್‌ಗಳಿಗೆ ಆರು ವಿಕೆಟ್ ಕಬಳಿಸಿದ್ದಾರೆ. ಪಂದ್ಯವೊಂದರಲ್ಲಿ ಎಂಟು ವಿಕೆಟ್ ಉರುಳಿಸಿದ ಖ್ಯಾತಿಯೂ ಅವರ ಹೆಸರಿನಲ್ಲಿದೆ. ಆಸ್ಟ್ರೇಲಿಯಾ (10 ಪಂದ್ಯಗಳಲ್ಲಿ 49 ವಿಕೆಟ್‌), ವೆಸ್ಟ್ ಇಂಡೀಸ್‌ (11 ಪಂದ್ಯಗಳಲ್ಲಿ 45), ನ್ಯೂಜಿಲೆಂಡ್‌ (ಮೂರು ಪಂದ್ಯಗಳಲ್ಲಿ 11) ನೆಲದಲ್ಲೂ ಅವರ ಸಾಧನೆ ಗಮನಾರ್ಹವಾಗಿದೆ.

ಹರಭಜನ್‌ ಸಿಂಗ್‌ ದಕ್ಷಿಣ ಆಫ್ರಿಕಾದಲ್ಲಿ ಆಡಿರುವುದು ನಾಲ್ಕು ಪಂದ್ಯ. ಅವುಗಳಲ್ಲಿ 18 ವಿಕೆಟ್‌ ಬಗಲಿಗೆ ಹಾಕಿಕೊಂಡಿದ್ದು ವೆಸ್ಟ್ ಇಂಡೀಸ್‌ನಲ್ಲಿ ಎಂಟು ಪಂದ್ಯಗಳಲ್ಲಿ 36 ವಿಕೆಟ್‌, ನ್ಯೂಜಿಲೆಂಡ್‌ನಲ್ಲಿ ಆರು ಪಂದ್ಯಗಳಲ್ಲಿ 21 ವಿಕೆಟ್ ಗಳಿಸಿರುವುದು ಅವರ ಸಾಧನೆ.

ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ತಂಡದಲ್ಲಿದ್ದರು. ಆಫ್‌ ಸ್ಪಿನ್ನರ್‌ ಅಶ್ವಿನ್‌ ಕೂಡ ಇದ್ದರು. ಜಡೇಜಗೆ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಅಶ್ವಿನ್‌ಗೆ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಿಸಲು ಆಗಲಿಲ್ಲ. ಫೆಬ್ರುವರಿ ಒಂದರಂದು ಆರಂಭವಾಗುವ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ಸಾಧನೆಯನ್ನು ಅಳೆಯಬೇಕಾಗಿದೆ. ಅಲ್ಲಿಯೂ ವೈಫಲ್ಯ ಕಂಡರೆ ಆಫ್ರಿಕಾದಂಥ ನಾಡಿನಲ್ಲಿ ಭಾರತದ ಸ್ಪಿನ್‌ ದಾಳಿಗೆ ಮೊನಚು ತುಂಬುವ ಬಗ್ಗೆ ಚಿಂತನೆ ನಡೆಯಬೇಕಾದೀತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.