ADVERTISEMENT

ಅದ್ಭುತ ಬಣ್ಣ ಗ್ರ್ಯಾಫೀನ್ ಆಕ್ಸೈಡ್‌!

ಸುಭಾಸ ಯಾದವಾಡ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST
ಗ್ರ್ಯಾಫೀನ್ ಆಕ್ಸೈಡಿನ ಪೇಂಟ್‌
ಗ್ರ್ಯಾಫೀನ್ ಆಕ್ಸೈಡಿನ ಪೇಂಟ್‌   

ಇದೊಂದು ಅಣುವಿನಷ್ಟು ತೆಳುವಾದ ಇಂಗಾಲದ ಪದರ. ಹೆಸರು ಗ್ರ್ಯಾಫೀನ್.  ಇತ್ತೀಚೆಗೆ ವಿಜ್ಞಾನಿಗಳು ಇದಕ್ಕೆ ಆಮ್ಲಜನಕವನ್ನು ಸೇರಿಸಿ ಗ್ರ್ಯಾಫೀನ್ ಆಕ್ಸೈಡ್ ಎಂಬ ಅಪರೂಪದ ಪೇಂಟ್ ಸಿದ್ಧಪಡಿಸಿದ್ದಾರೆ. ಇದು ಅತ್ಯಂತ ಯಶಸ್ವಿ ಜಂಗು(Rust) ನಿರೋಧಕ ವಸ್ತುವಾಗಿದೆ. ಕಬ್ಬಿಣ, ಗಾಜು, ಇಟ್ಟಿಗೆ, ತಾಮ್ರ... ಮೊದಲಾದ ಎಲ್ಲ ವಸ್ತುಗಳ ಮೇಲೂ ಇದನ್ನು ಹಚ್ಚಬಹುದು.  ಲೋಹ, ಮರದ ಸಾಮಗ್ರಿಗಳು ನೀರು, ತೇವ, ಬಿಸಿಲು ಮೊದಲಾದವುಗಳ ಪ್ರಭಾವದಿಂದ  ಹಾಳಾಗದಂತೆ ಈ ಪೇಂಟ್‌ ಪರಿಣಾಮಕಾರಿಯಾಗಿ ತಡೆಯುತ್ತದೆ.

ಗ್ರ್ಯಾಫೀನ್ ಅತ್ಯಂತ ತೆಳುವಾಗಿದ್ದು ಉಕ್ಕಿಗಿಂತ ಬಲಿಷ್ಟವಾಗಿದೆ. ಬಹು ಪದರಗಳ ಗ್ರ್ಯಾಫೀನ್ ಆವರಣ ಜಲ ಹಾಗು ವಾಯು ನಿರೋಧಕವಾಗಿದೆ ಎಂದು ವಿಜ್ಞಾನಿ ರಾಹುಲ್ ನಾಯರ್ ಹಾಗೂ ನೊಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಆ್ಯಂಡ್ರೆ ಜಿಮ್‌ ತಂಡ ದೃಢಪಡಿಸಿದೆ.

ನೀರು ಶುದ್ಧೀಕರಣಕ್ಕೂ ಗ್ರ್ಯಾಫೀನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.  ಗ್ರ್ಯಾಫೀನ್ ಆಕ್ಸೈಡ್‌ನ ತೆಳುವಾದ ಪದರದಲ್ಲಿ ಲಕ್ಷಾಂತರ ರಂಧ್ರಗಳಿವೆ.  ಅವುಗಳನ್ನು ಚಿಕ್ಕಚಿಕ್ಕ ಕೊಳವೆಗಳಿಂದ ಜೋಡಿಸಿದಂತಿದೆ. ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಇದೊಂದು ಬಗೆಯ ಜೇನು ಗೂಡಿನಂತೆ ಕಾಣುತ್ತದೆ. ಇದರ ಮೂಲಕ ನೀರನ್ನು ಹಾಯಿಸಿ ಶುದ್ಧಗೊಳಿಸುತ್ತಾರೆ. ಕೆಲವು ಸರಳ ರಾಸಾಯನಿಕಗಳ ಉಪಚಾರದಿಂದ ಈ ಎಲ್ಲ ರಂಧ್ರಗಳನ್ನು ಮುಚ್ಚುತ್ತಾರೆ. ಆಮೇಲೆ ಹವೆಯಾಗಲಿ ನೀರಾಗಲಿ ಗ್ರ್ಯಾಫೀನ್ ಆಕ್ಸೈಡಿನ ಪದರನ್ನು ಭೇದಿಸುವದು ಸಾಧ್ಯವೇ ಇಲ್ಲವಂತೆ. 

ಹೀಗೆ ಉಪಚರಿಸಿದ ಗ್ರ್ಯಾಫೀನ್ ಆಕ್ಸೈಡನ್ನು ಪೇಂಟಾಗಿ ಬಳಸಲಾಗುತ್ತದೆ.  ಈ ಪೇಂಟ್‌ ಅತ್ಯಂತ ಬಲಯುತವಾಗಿರುತ್ತದೆ ಎನ್ನುತ್ತಾರೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು.

ಪಾರದರ್ಶಕವಾದ ಈ ಪೇಂಟ್ ಬಳಕೆ ಇನ್ನು ಮುಂದೆ ಹೆಚ್ಚಾಗಲಿದೆ ಎನ್ನುತ್ತಾರೆ ಸಂಶೋಧಕ ವಿಜ್ಞಾನಿ ಡಾ. ಯಾಂಗ ಸು.
ಇದು ವೈದ್ಯಕೀಯ, ಎಲೆಕ್ಟ್ರಾನಿಕ್, ನ್ಯೂಕ್ಲಿಯರ್, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು ಎನ್ನುವುದು ಯಾಂಗ ಅವರ ನಿರೀಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT