ADVERTISEMENT

ಐಫೋನ್‌ಗೆ ಸ್ಪರ್ಧೆ ಒಡ್ಡುವುದೇ ಗೂಗಲ್‌ ಪಿಕ್ಸಲ್‌?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 19:30 IST
Last Updated 25 ಅಕ್ಟೋಬರ್ 2016, 19:30 IST
ಐಫೋನ್‌ಗೆ ಸ್ಪರ್ಧೆ ಒಡ್ಡುವುದೇ ಗೂಗಲ್‌ ಪಿಕ್ಸಲ್‌?
ಐಫೋನ್‌ಗೆ ಸ್ಪರ್ಧೆ ಒಡ್ಡುವುದೇ ಗೂಗಲ್‌ ಪಿಕ್ಸಲ್‌?   
- ಬ್ರಿಯಾನ್‌ ಎಕ್ಸ್‌ಚೇನ್, ನ್ಯೂಯಾರ್ಕ್‌ ಟೈಮ್ಸ್‌
 
***
ಆಂಡ್ರಾಯ್ಡ್‌ ಕಾರ್ಯನಿರ್ವಹಣಾ ತಂತ್ರಾಂಶದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಆಳುತ್ತಿರುವ ಕಾಲದಲ್ಲೇ, ಗೂಗಲ್‌ ಕಂಪೆನಿ, ತನ್ನ ಸ್ವಂತ  ಬ್ರ್ಯಾಂಡ್‌ನ ಬಹುನಿರೀಕ್ಷಿತ ಹೈ ಎಂಡ್‌ ಸ್ಮಾರ್ಟ್‌ಫೋನ್‌ ಪಿಕ್ಸಲ್‌ ( Google Pixel) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಸ್ಯಾಮ್ಸಂಗ್‌ ಕಂಪೆನಿ ತಾಂತ್ರಿಕ ಲೋಪದಿಂದಾಗಿ ಗ್ಯಾಲೆಕ್ಸಿ ನೋಟ್‌ 7ಎಸ್‌ ಮಾದರಿಯನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆದ ಬೆನ್ನಲ್ಲೇ ಪಿಕ್ಸಲ್‌ ಮಾರುಕಟ್ಟೆ ಪ್ರವೇಶಿಸಿರುವುದು ಕೂಡ ಮಹತ್ವ ಪಡೆದುಕೊಂಡಿದೆ. 
 
4ಜಿಬಿ ರ್‍ಯಾಮ್‌, 32ಜಿಬಿ ಇಂಟರ್‌ನಲ್‌ ಮೆಮೊರಿ, ದೂಳು ನಿರೋಧಕ ತಂತ್ರಜ್ಞಾನ ಹೊಂದಿರುವ ನ್ಯಾನೊ ಸಿಮ್‌,  5 ಇಂಚಿನ ಗೊರಿಲ್ಲಾ ಗ್ಲಾಸ್‌ನ ದೃಶ್ಯಪರದೆ ಸೇರಿದಂತೆ ಸದ್ಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಐಫೋನ್7 ಮತ್ತು ಗ್ಯಾಲೆಕ್ಸಿ ಎಸ್‌7 ಮಾದರಿಗಳಿಗೆ ಪೈಫೋಟಿ ನೀಡಲು ಸಾಕಷ್ಟು ಗುಣವಿಶೇಷಗಳು ಪಿಕ್ಸಲ್‌ನಲ್ಲಿವೆ.
 
ಆದರೆ, ವಾಸ್ತವದಲ್ಲಿ ಐಫೋನ್‌ 7ಗೆ ಹೋಲಿಸಿದರೆ ಗೂಗಲ್‌ ಪಿಕ್ಸಲ್‌ನ ಸಾಮರ್ಥ್ಯ ತುಸು ಕಡಿಮೆಯೇ. ಐಫೋನ್‌ನಲ್ಲಿರುವಂತೆ 12 ಮೆಗಾ ಪಿಕ್ಸಲ್ಸ್‌ ಸಾಮರ್ಥ್ಯದ ಕ್ಯಾಮೆರಾ ಮತ್ತು ವರ್ಚುವಲ್‌ ಅಸಿಸ್ಟೆಂಟ್‌ ತಂತ್ರಜ್ಞಾನ ಇದ್ದರೂ, ಐಫೋನ್‌7ನಲ್ಲಿ ತೆಗೆದ ಚಿತ್ರದ ಗುಣಮಟ್ಟವನ್ನು ಪಿಕ್ಸಲ್‌ ಸರಿಗಟ್ಟಲಾರದು.  ದೃಶ್ಯಾನುಭವದ ವಿಷಯಕ್ಕೆ ಬಂದರೆ ಐಫೋನ್‌ ಒಂದು ಹೆಜ್ಜೆ ಮುಂದಿದೆ. 
 
ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌7ನಲ್ಲಿ ಗರಿಷ್ಠ ಗುಣಮಟ್ಟದ ಕ್ಯಾಮೆರಾ ಇದ್ದರೂ ಚಿತ್ರದ ನೈಸರ್ಗಿಕ ಬಣ್ಣಕ್ಕಿಂತ ಕೃತ್ರಿಮ ಬಣ್ಣದ ಪ್ರಭಾವ ಹೆಚ್ಚಿದೆ. ವೃತ್ತಿಪರ ಛಾಯಾಗ್ರಾಹಕರು ನೀಡಿದ ರೇಟಿಂಗ್‌ನಲ್ಲಿ ಕ್ಯಾಮೆರಾ ಗುಣಮಟ್ಟದಲ್ಲಿ ಐಫೋನ್‌ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನದಲ್ಲಿ ಪಿಕ್ಸಲ್‌ ಇದೆ.
 
ಫೋನ್ ಅನ್‌ಲಾಕ್‌ ಮಾಡಲು ಪಿಕ್ಸಲ್‌ನಲ್ಲಿ ಬೆರಳಚ್ಚು ಗುರುತಿಸುವ ಸೆನ್ಸರ್‌ ಇದೆ. ಅಪ್ಲಿಕೇಷನ್‌ ಕಾರ್ಯನಿರ್ವಹಣೆ ವಿಷಯಕ್ಕೆ ಬಂದರೆ ಐಫೋನ್‌7 ಮತ್ತು  ಗ್ಯಾಲಕ್ಸಿ ಎಸ್‌7ಗಿಂತಲೂ ಪಿಕ್ಸಲ್‌ ಹೆಚ್ಚಿನ ವೇಗ ಹೊಂದಿದೆ. ಆದರೆ, ಸಂಪೂರ್ಣ ಜಲ ನಿರೋಧಕ ತಂತ್ರಜ್ಞಾನ ಪಿಕ್ಸಲ್‌ನಲ್ಲಿಲ್ಲ.  ನೀರ ಹನಿಗಳಿಂದ ಮಾತ್ರ ಇದು ರಕ್ಷಣೆ ನೀಡುತ್ತದೆ. ಆ್ಯೊಪಲ್‌ ಕಂಪೆನಿ ಐಫೋನ್‌7ನಲ್ಲಿ ತೆಗೆದು ಹಾಕಿದ ಆಡಿಯೊ ಜಾಕ್‌ ಸೌಲಭ್ಯ ಪಿಕ್ಸಲ್‌ನಲ್ಲಿದೆ ಎನ್ನುವುದು ವಿಶೇಷ. 
 
ಉಳಿದ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಂತೆ ಪಿಕ್ಸಲ್‌ ಅಗ್ನಿ ಅನಾಹುತಗಳನ್ನು ಮಾಡುವುದಿಲ್ಲ. ಮಕ್ಕಳು ಕೂಡ ಧೈರ್ಯವಾಗಿ ಈ ಹ್ಯಾಂಡ್‌ಸೆಟ್‌ ಬಳಸಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈಗಾಗಲೇ ಆಂಡ್ರಾಯ್ಡ್‌ ಫೋನ್‌ ಬಳಸುತ್ತಿರುವವರು, ಗೂಗಲ್ ಮ್ಯಾಪ್‌, ಜಿ–ಮೇಲ್‌, ಫೋಟೊ ಎಡಿಟಿಂಗ್‌ ಅಪ್ಲಿಕೇಷನ್‌ ಸೇರಿದಂತೆ ಹಲವು ಸೇವೆಗಳನ್ನು ಪಡೆಯುತ್ತಿರುವ ಗೂಗಲ್‌ ಪ್ರೇಮಿಗಳು ಈ ಫೋನ್‌ ಖರೀದಿಸಬಹುದು ಎಂಬ ಸಲಹೆಯನ್ನು ಅವರು ಮುಂದಿಡುತ್ತಾರೆ. 
 
ಕ್ಷಿಪ್ರ ಸಂವೇದನೆಯ ದೃಶ್ಯ ಪರದೆ,  ಸುಧಾರಿತ ವರ್ಚುವಲ್ ಅಸಿಸ್ಟಂಟ್ ತಂತ್ರಜ್ಞಾನದ ಛಾಯಾಗ್ರಹಣ ಸೌಲಭ್ಯ, ಕ್ಲೌಡ್‌ ಕಂಪ್ಯೂಟಿಂಗ್‌ ತಂತ್ರಜ್ಞಾನ ಸೇರಿದಂತೆ ಹಲವು ಗುಣವಿಶೇಷತೆಗಳೊಂದಿಗೆ ಪಿಕ್ಸಲ್‌ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ತಲೆಮಾರಿನ ಕಾರ್ಯನಿರ್ಹಣೆ ಕೌಶಲಗಳನ್ನು ಹೊಂದಿರುವ ಈ ಪೋನ್‌ ಖಂಡಿತವಾಗಿಯೂ ಬಳಕೆದಾರನಿಗೆ ಅನನ್ಯ ಅನುಭವ ನೀಡಲಿದೆ ಎನ್ನುತ್ತದೆ ಗೂಗಲ್‌ ಕಂಪೆನಿ.
 
 ಪಿಕ್ಸಲ್‌ನ  ಆರಂಭಿಕ ಬೆಲೆ 650 ಡಾಲರ್‌ ಅಂದರೆ ಅಂದಾಜು ₹ 43 ಸಾವಿರ. ಇದರಲ್ಲಿ 5  ಮತ್ತು 5.5 ಇಂಚಿನ ದೃಶ್ಯಪರದೆ ಹೊಂದಿರುವ ಎರಡು ಪ್ರತ್ಯೇಕ ಮಾದರಿಗಳಿವೆ. 5.5 ಇಂಚಿನ ದೃಶ್ಯಪರದೆ ಹೊಂದಿರುವ ಪಿಕ್ಸಲ್‌ ಎಕ್ಸ್‌ಎಲ್‌ ಮಾದರಿಗೆ ಬೆಲೆ ತುಸು ಹೆಚ್ಚಿದೆ.
 
ಆ್ಯಪಲ್‌, ಅಮೆಜಾನ್‌ ಮತ್ತು ಮೈಕ್ರೊಸಾಫ್ಟ್‌ಗೆ ಹೋಲಿಸಿದರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಕಲ್ಪಿಸಿರುವ ಧ್ವನಿ ಮೂಲಕ ದೃಶ್ಯಗಳನ್ನು ಗುರುತಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅತ್ಯುತ್ತಮವಾಗಿದೆ. ಇದರಲ್ಲಿರುವ ಸುಧಾರಿತ ವರ್ಚುವಲ್‌ ಅಸಿಸ್ಟಂಟ್‌ ತಂತ್ರಜ್ಞಾನ ಬಳಸಿ, ದ್ವಿಮುಖ ಸಂವಹನ ನಡೆಸಬಹುದು. ಅಂದರೆ ಈ ಮಾರ್ಗದರ್ಶಿ ತೆರೆದು ಬಳಕೆದಾರ ಯಾವ ಮಾಹಿತಿಯನ್ನು ಬೇಕಾದರೂ ಕೇಳಬಹುದು, ಹೆಚ್ಚುವರಿ ಮಾಹಿತಿಗಾಗಿ ಮನವಿಯನ್ನೂ ಮಾಡಿಕೊಳ್ಳಬಹುದು.
 
ಉದಾಹರಣೆಗೆ ತಾಜ್‌ಮಹಲ್‌ ಎಲ್ಲಿದೆ ಎಂದು ಕೇಳಬಹುದು, ಅದರ ಬೆನ್ನಿಗೇ ತಾಜ್‌ಮಹಲ್‌ ಎಷ್ಟು ವರ್ಷಗಳಷ್ಟು ಹಳೆಯದು, ಸದ್ಯ ಇರುವ ಜಾಗದಿಂದ ಅದು ಎಷ್ಟು ದೂರದಲ್ಲಿದೆ ಎಂಬ ಪ್ರಶ್ನೆಗಳನ್ನೂ ಕೇಳಬಹುದು.  ಸಮೀಪದಲ್ಲಿರುವ ಹೋಟೆಲ್‌ಗಳಲ್ಲಿ ಕಾದಿರಿಸಲು ಕೋಣೆ ಲಭ್ಯವಿದೆಯೇ, ಈಗ ಹವಾಮಾನ ಹೇಗಿದೆ? ಸುರಿಯುತ್ತಿರುವ ಮಳೆ ಯಾವಾಗ ನಿಲ್ಲಬಹುದು ಎಂಬಿತ್ಯಾದಿ ಎಂಬ ಪ್ರಶ್ನೆಗಳನ್ನು ಕೇಳಬಹುದು.
 
ಎಲ್ಲಾ ಪ್ರಶ್ನೆಗಳಿಗೂ ಈ ಮಾರ್ಗದರ್ಶಿ ಉತ್ತರ ನೀಡುತ್ತದೆ. ಹೆಚ್ಚಿನವು ಗೂಗಲ್‌ ಸರ್ಚ್‌ ಎಂಜಿನ್‌ ಆಧರಿಸಿದ ಉತ್ತರಗಳು. ಹೀಗಾಗಿ ಎಲ್ಲಾ ಪ್ರಶ್ನೆಗಳಿಗೂ ನಿಖರ ಉತ್ತರ ಲಭಿಸಬೇಕೆಂದಿಲ್ಲ. ಆದರೆ, ಹೆಚ್ಚುವರಿ ಮಾಹಿತಿಯಂತೂ ಲಭಿಸುತ್ತದೆ. ಆದರೆ, ಸಣ್ಣ ಸಣ್ಣ ಅನುಮಾನಗಳಿಗೂ ಈ ಮಾರ್ಗದರ್ಶಿ ಅವಲಂಬಿಸುವುದು ಅನಗತ್ಯವಾಗಿ ಹೆಚ್ಚು ಸಮಯ ಕೊಲ್ಲುತ್ತದೆ ಎನ್ನುತ್ತಾರೆ ಸ್ಮಾರ್ಟ್‌ಫೋನ್‌ ವಿಶ್ಲೇಷಕರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.