ADVERTISEMENT

ಕಾರ್ಪೊರೇಟ್‌ನತ್ತ ರೆಜಿನ್‌ ವಾರೆನೋಟ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST
ಕಾರ್ಪೊರೇಟ್‌ನತ್ತ ರೆಜಿನ್‌ ವಾರೆನೋಟ
ಕಾರ್ಪೊರೇಟ್‌ನತ್ತ ರೆಜಿನ್‌ ವಾರೆನೋಟ   

ಒಂದೆಡೆ ಸೈಬರ್ ಅಪರಾಧಗಳ ತಡೆಗೆ  ತಾಂತ್ರಿಕವಾಗಿ ಮುಂದಿರುವ ದೇಶಗಳೆಲ್ಲವೂ ಶತಾಯಗತಾಯ ಪ್ರಯತ್ನ ನಡೆಸುತ್ತಿವೆ. ಇನ್ನೊಂದೆಡೆ, ಸೈಬರ್‌ ಅಪರಾಧಿಗಳು ಸದ್ದಿಲ್ಲದೇ ತಮ್ಮ ದಾಳಿಗಳನ್ನು ಎಂದಿನಂತೆಯೇ ಮುಂದುವರಿಸಿದ್ದಾರೆ. 

ಸೈಬರ್‌ ದಾಳಿ ತಡೆಗೆ ಲೆಕ್ಕವಿಲ್ಲದಷ್ಟು ಮಾರ್ಗೋಪಾಯಗಳನ್ನು ಕಂಡು­ಕೊಂಡಿ­ದ್ದೇವೆ, ಹೊಸ ಹೊಸ ಉಪಾಯಗಳನ್ನು ಕಂಡುಹಿಡಿ­ಯುತ್ತಿ­ದ್ದೇವೆ ಕೂಡಾ. ಹೀಗಿದ್ದರೂ ರೆಜಿನ್‌ ಎಂಬ ಮಾಲ್‌ವೇರ್‌ ಕಳೆದ ಆರು ವರ್ಷಗಳಿಂದ ದಾಳಿ ನಡೆಸು­ತ್ತಿರುವ ವಾಸನೆ ನಮಗೆ ಬಡಿಯಲೇ ಇಲ್ಲ ಎನ್ನುವುದು ಹಾಸ್ಯಾಸ್ಪದವೇ ಸರಿ.

ಭಾರತ ಒಳಗೊಂಡು, ಪಾಕಿಸ್ತಾನ, ಬ್ರೆಜಿಲ್‌, ಜರ್ಮನಿ ಮತ್ತು ರಷ್ಯಾ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ಈ ರೆಜಿನ್‌ ಮಾಲ್‌ವೇರ್‌ ಸರ್ಕಾರ, ಸಂಘ ಸಂಸ್ಥೆಗಳು, ಪ್ರಮುಖ ಕಂಪೆನಿ-­ಗಳಿಗೆ ಸಂಬಂಧಿಸಿದ ಮಾಹಿತಿ­ಗಳನ್ನು ಕಳೆದ ಆರು ವರ್ಷಗಳಿಂದ ದೋಚುತ್ತಿದೆ ಎಂದಾದರೆ, ಮುಂದೆ ಅದರಿಂದ ಬಂದೊದಗಬಹುದಾದ ಆಪತ್ತು ಹೇಗಿರಬಹುದು ಎಂಬುದು ಊಹೆಗೂ ನಿಲುಕದ್ದು.

ಇತ್ತೀಚೆಗಷ್ಟೆ, ಅಮೆರಿಕದ ಭದ್ರತಾ ಕಂಪೆನಿ ಸಿಮ್ಯಾಂಟೆಕ್‌ ನಡೆಸಿದ ಸಂಶೋಧನೆಯಲ್ಲಿ ಈ ರೆಜಿನ್‌ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು  ಬಹಿರಂಗವಾಗಿದೆ. ಇದನ್ನು ಯಾವುದೋ ಒಂದು ದೇಶಕ್ಕಾಗಿ ಕೆಲಸ ಮಾಡುತ್ತಿರುವ ಕಂಪ್ಯೂಟರ್‌ ಪರಿಣತರು ಸೃಷ್ಟಿಸಿದ್ದಾರೆ ಎಂದು ಸಿಮ್ಯಾಂಟೆಕ್‌ ವರದಿ ತಿಳಿಸಿದೆ. ಆದರೆ ಇದರ ಹಿಂದೆ ಯಾವ ಸರ್ಕಾರದ ಕೈವಾಡವಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. 

ಕೆಲವೇ ಮಾಲ್‌ವೇರ್‌ಗಳು ಮಾತ್ರ ಬಹಳ ಅಪಾಯಕಾರಿ ಅಥವಾ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇರುವಂತಹವು. ಇಂತಹ ಮಾಲ್‌ವೇರ್‌ಗಳ ಸಾಲಿಗೆ ಈ ರೆಜಿನ್‌ ಸೇರಿದ್ದು ಎಂದು ವರದಿ ಮಾಹಿತಿ ನೀಡಿದೆ. ಹೀಗಿರುವಾಗಲೇ, ಭಾರತದಲ್ಲಿ ಇದು ಕಾರ್ಪೊರೇಟ್‌ ಕಂಪೆನಿಗಳು, ಜಿಎಸ್‌ಎಂ ನೆಟ್‌ವರ್ಕ್‌ಗಳನ್ನು ಗುರಿಯಾಗಿಸಿ­ಕೊಂಡು ದಾಳಿ ನಡೆಸುತ್ತಿದೆ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.

ದೂರಸಂಪರ್ಕ ನಿರ್ವಾಹಕರು (ಟೆಲೆಕಾಂ ಆಪರೇಟರ್ಸ್‌) ಹಣಕಾಸು ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಬಹುರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಆಧುನಿಕ ಗಣಿತಶಾಸ್ತ್ರ ಅಥವಾ ಗೂಢಲಿಪಿ ಶಾಸ್ತ್ರದಂತಹ ವಿಷಯಗಳ  ಸಂಶೋಧನೆಗಳಲ್ಲಿ ತೊಡಗಿರುವ ವ್ಯಕ್ತಿ­ಗಳನ್ನು ಕೇಂದ್ರೀಕರಿಸಿ ಇದನ್ನು ರೂಪಿಸಲಾಗಿದೆ ಎನ್ನುತ್ತದೆ ಸಿಮ್ಯಾಂಟೆಕ್‌.

ರೆಜಿನ್‌ ಮಾಲ್‌ವೇರ್‌ 2003ಕ್ಕೂ ಮುಂಚೆ ಸೃಷ್ಟಿಯಾಗಿದೆ ಎಂದು ವೈರಸ್‌ನಿಂದ ರಕ್ಷಣೆ ಒದಗಿಸುವ ಸಂಸ್ಥೆ ಕ್ಯಾಸ್ಪರ್ಸ್‌ ಕೀ  ಪ್ರಯೋಗಾಲಯ ಪತ್ತೆ ಮಾಡಿದೆ. ದಾಳಿ ನಡೆಸಿದ ನೆಟ್‌ವರ್ಕ್‌ನಿಂದ ರಹಸ್ಯ ಮಾಹಿತಿಗಳನ್ನು ಪಡೆಯುವುದು ಇದರ ಮುಖ್ಯ ಕೆಲಸ.  ಸಂಶಯಾಸ್ಪದ ಎಂದು ಕಂಡುಬರುವುದನ್ನು ಪತ್ತೆ ಹಚ್ಚುವ ವ್ಯವಸ್ಥೆ ಜಿಎಸ್‌ಎಂ  ನೆಟ್‌ವರ್ಕ್‌ ಹೊಂದಿದೆಯಾದರೂ ಇದನ್ನು ಬೇರೆಯವರು ಹೈಜಾಕ್‌ ಮಾಡಿ­ಕೊಂಡು ಮೊಬೈಲ್‌ ಬಳಕೆದಾರರ ವಿರುದ್ಧ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಕ್ಯಾಸ್ಪರ್ಸ್‌ ಕೀ ಲ್ಯಾಬ್‌ ನಿರ್ದೇಶಕ ಕೋಸ್ಟಿನ್‌ ರಿಯೂ ಗಮನ ಸೆಳೆದಿದ್ದಾರೆ.

ಒಂದು ನಿರ್ದಿಷ್ಟ ಮೊಬೈಲ್‌ನಿಂದ ಯಾರಿಗೆ ಯಾವಾಗ ಕರೆ ಮಾಡಲಾಗಿದೆ ಎಂದು ಪತ್ತೆ ಮಾಡುವುದು, ನೆಟ್‌ವರ್ಕ್‌ ನಿರ್ವಹಣೆ ಸೇರಿದಂತೆ ಇನ್ನಿತರ ಅಪಾಯಕಾರಿ ಚಟುವಟಿಕೆ ನಡೆಸಬಲ್ಲವು ಎನ್ನುತ್ತಾರೆ ಅವರು.

ರೆಜಿನ್‌ ದಾಳಿ ಎಲ್ಲಿ, ಎಷ್ಟು?

ಖಾಸಗಿ ವ್ಯಕ್ತಿ, ಸಣ್ಣ ಉದ್ದಿಮೆದಾರರು ಶೇ 48ರಷ್ಟು
ಟೆಲೆಕಾಂ ಕಂಪೆನಿಗಳು ಶೇ 28ರಷ್ಟು
ಹಾಸ್ಪಿಟಾಲಿಟಿ ಶೇ 9ರಷ್ಟು, ಯಾವ ದೇಶದಲ್ಲೆಷ್ಟು
ದೇಶ                                        ದಾಳಿ ಪ್ರಮಾಣ
ರಷ್ಯಾ                                             ಶೇ 28
ಸೌದಿ ಅರೇಬಿಯಾ                              ಶೇ 24
ಮೆಕ್ಸಿಕೊ, ಐರ್ಲೆಂಡ್‌                              ಶೇ 9
ಭಾರತ, ಅಫ್ಘಾನಿಸ್ತಾನ, ಪಾಕಿಸ್ತಾನ            ಶೇ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT