ADVERTISEMENT

ಗೂಗಲ್‍‍ ಫೋಟೋಸ್‌ನಲ್ಲಿ ಚಿತ್ರಗಳ ಹುಡುಕಾಟ

ದಯಾನಂದ ಎಚ್‌.ಎಚ್‌.
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಗೂಗಲ್‍‍ ಫೋಟೋಸ್‌ನಲ್ಲಿ ಚಿತ್ರಗಳ ಹುಡುಕಾಟ
ಗೂಗಲ್‍‍ ಫೋಟೋಸ್‌ನಲ್ಲಿ ಚಿತ್ರಗಳ ಹುಡುಕಾಟ   

ಸ್ಮಾರ್ಟ್‌ಫೋನ್‌ಗಳ ಇಂದಿನ ಕಾಲದಲ್ಲಿ ಮೊಬೈಲ್‍‍ ಫೋಟೊಗ್ರಫಿ ಮಾಡದಿರುವವರು ಅಪರೂಪ. ಮೊಬೈಲ್‍‍ ಫೋಟೊಗ್ರಫಿಗೇನೂ ಹೆಚ್ಚಿನ ನೈಪುಣ್ಯ ಬೇಕಿಲ್ಲ. ಕ್ಲಿಕ್ಕಿಸುತ್ತಾ ಹೋದಂತೆ ಹೊಸ ಹೊಸ ಚೌಕಟ್ಟುಗಳು ಚಿತ್ರಗಳಿಗೆ ದಕ್ಕುತ್ತಾ ಹೋಗುತ್ತವೆ. ಬಹುತೇಕರು ತಮ್ಮ ಡಿವೈಸ್‌ನಿಂದ ತೆಗೆದ ಚಿತ್ರಗಳು, ವಿಡಿಯೊಗಳನ್ನು ಗೂಗಲ್‍‍ ಫೋಟೋಸ್‌ಗೆ ಸೇವ್‍‍ ಮಾಡಿರುತ್ತಾರೆ. ಆದರೆ, ಸೇವ್‍‍ ಆಗಿರುವ ಫೋಟೊಗಳನ್ನು ಅನೇಕರು ಆ ಬಳಿಕ ತೆರೆದು ನೋಡಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಗೂಗಲ್ ಫೋಟೋಸ್‌ನಿಂದ ಯಾವುದಾದರೊಂದು ಚಿತ್ರವನ್ನು ಹುಡುಕಬೇಕಾದ ಸಂದರ್ಭ ಬಂದರೆ ಸ್ವಲ್ಪ ಹೆಚ್ಚೇ ಸಮಯ ಕಳೆಯಬೇಕಾಗುತ್ತದೆ.

ಗೂಗಲ್‍‍ ಫೋಟೋಸ್‌ನಲ್ಲಿ ಚಿತ್ರಗಳನ್ನು ಹುಡುಕಲು ಸಮಯ ವ್ಯರ್ಥ ಮಾಡುವುದಕ್ಕಿಂತ ಫೋಟೊ ಹೆಕ್ಕಲು ಇರುವ ಕೆಲವು ಸರಳ ಮಾರ್ಗಗಳ ಬಗ್ಗೆ ಈ ವಾರ ತಿಳಿಯೋಣ. ನಿಮ್ಮ ಫೋನ್‍‍ ಸೆಟ್ಟಿಂಗ್‍‍ ಆಟೊ ಸಿಂಕ್ ಆಗಿದ್ದರೆ ಡಿವೈಸ್‌ನಲ್ಲಿ ತೆಗೆದ ಚಿತ್ರಗಳು, ವಿಡಿಯೊಗಳು, ಡಿವೈಸ್‌ಗೆ ಬಂದ ವಾಟ್ಸ್‌ಆ್ಯಪ್‌ ಚಿತ್ರಗಳು ಪ್ರತ್ಯೇಕ ಫೋಲ್ಡರ್‌ನಲ್ಲಿ ಗೂಗಲ್‍‍ ಫೋಟೋಸ್‌ನಲ್ಲಿ ಸೇವ್‍‍ ಆಗಿರುತ್ತವೆ. ಅದೇ ರೀತಿ ನಿಮ್ಮ ಡಿವೈಸ್‌ನ ಲೊಕೇಷನ್ ಆಧಾರದ ಮೇಲೆ ಚಿತ್ರಗಳು ಗೂಗಲ್‍‍ ಫೋಟೋಸ್‌ನಲ್ಲಿ ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್‍‍ ಆಗಿರುತ್ತವೆ.

ಉದಾಹರಣೆಗೆ, ನೀವು ಅನೇಕ ಬಾರಿ ದೆಹಲಿಗೆ ಹೋಗಿ ಬಂದಿರುತ್ತೀರಿ ಎಂದಿಟ್ಟುಕೊಳ್ಳಿ. ಹೋದಾಗಲೆಲ್ಲಾ ಫೋಟೊ ತೆಗೆದುಕೊಂಡಿರುತ್ತೀರಿ. ಈಗ ನಿಮಗೆ ದೆಹಲಿಗೆ ಹೋಗಿ ಬಂದ ಫೋಟೊ ಬೇಕೆಂದರೆ ನೀವು ದೆಹಲಿಗೆ ಹೋಗಿದ್ದ ದಿನಾಂಕವನ್ನು ನೆನಪಿಸಿಕೊಳ್ಳಬೇಕಿಲ್ಲ. ಡಿವೈಸ್‌ನಲ್ಲಿ ಗೂಗಲ್‍‍ ಫೋಟೋಸ್‌ಗೆ ಹೋಗಿ Albums ಫೋಲ್ಡರ್‍‍ ಮೇಲೆ ಟ್ಯಾಪ್‍‍ ಮಾಡಿ. ಇಲ್ಲಿ People, Places, Things, Videos ಮುಂತಾದ ಫೋಲ್ಡರ್‌ಗಳಲ್ಲಿ ಚಿತ್ರಗಳು ಸೇವ್‍‍ ಆಗಿರುತ್ತವೆ. ಇಲ್ಲಿರುವ Places ಮೇಲೆ ಟ್ಯಾಪ್‍‍ ಮಾಡಿ. ನೀವು ಯಾವ ಯಾವ ಸ್ಥಳಗಳಲ್ಲಿ ಫೋಟೊ ತೆಗೆದುಕೊಂಡಿರುತ್ತೀರೋ ಆ ಜಾಗಗಳ ಫೋಲ್ಡರ್‍‍ಗಳನ್ನು ಗೂಗಲ್‍‍ ಲೊಕೇಷನ್ ಆಧಾರದಲ್ಲಿ ಸಿಂಕ್‍‍ ಮಾಡಿರುತ್ತದೆ. ನಿಮಗೆ ದೆಹಲಿಯ ಫೋಟೊಗಳು ಬೇಕೆಂದರೆ ದೆಹಲಿ ಫೋಲ್ಡರ್‍‍ ಮೇಲೆ ಟ್ಯಾಪ್‍‍ ಮಾಡಿದರೆ ದೆಹಲಿಯಲ್ಲಿ ಕ್ಲಿಕ್ಕಿಸಿದ ಎಲ್ಲಾ ಚಿತ್ರಗಳೂ ಒಂದೆಡೆ ಸಿಗುತ್ತವೆ. ಇವುಗಳಲ್ಲಿ ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದು.

ADVERTISEMENT

ಇದೇ ರೀತಿ Things ಫೋಲ್ಡರ್‌ನಲ್ಲಿ Selfies, Sky, Flower, Receipts, Temples ಮುಂತಾದ ಫೋಲ್ಡರ್‌ ಗಳಿವೆ. ಹಿಂದೆ ಯಾವಾಗಲೋ ನೀವು ಡಿವೈಸ್‌ನಿಂದ ಕ್ಲಿಕ್ಕಿಸಿದ ರಸೀದಿಯೊಂದರ ಚಿತ್ರ ಬೇಕಿದ್ದರೆ Receipts ಮೇಲೆ ಟ್ಯಾಪ್‍‍ ಮಾಡಿ. ಇಲ್ಲಿ ನೀವು ಕ್ಲಿಕ್ಕಿಸಿರುವ ಎಲ್ಲಾ ರಸೀದಿ, ದಾಖಲೆಗಳೂ ಸೇವ್‍‍ ಆಗಿರುತ್ತವೆ. ಅದೇ ರೀತಿ ಆಯಾ ವಿಷಯಗಳಿಗೆ ಸಂಬಂಧಿಸಿದ ಫೋಲ್ಡರ್‌ಗಳಲ್ಲಿ ಸೇವ್‍‍ ಆಗಿರುವ ಚಿತ್ರಗಳನ್ನು ನೀವು ಸುಲಭವಾಗಿ ಹುಡುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.