ADVERTISEMENT

ಟ್ವಿಟರ್‌: ‘ಬೆಸ್ಟ್‌ ಟ್ವೀಟ್ ಫಸ್ಟ್‌’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2016, 19:30 IST
Last Updated 16 ಫೆಬ್ರುವರಿ 2016, 19:30 IST
ಟ್ವಿಟರ್‌: ‘ಬೆಸ್ಟ್‌ ಟ್ವೀಟ್  ಫಸ್ಟ್‌’
ಟ್ವಿಟರ್‌: ‘ಬೆಸ್ಟ್‌ ಟ್ವೀಟ್ ಫಸ್ಟ್‌’   

ಇನ್ನು ಮುಂದೆ ಟ್ವಿಟರ್‌ ಖಾತೆ ತೆರೆಯುತ್ತಿದ್ದಂತೆ ‘ಷೊ ಮಿ ಬೆಸ್ಟ್‌ ಟ್ವೀಟ್ಸ್‌ ಫಸ್ಟ್‌’ ಎಂಬ ಸೌಲಭ್ಯ ಕಾಣಿಸಲಿದೆ. ಟ್ವಿಟರ್‌ನಲ್ಲಿ ನೀವು ಹಿಂಬಾಲಿಸುತ್ತಿರುವ ನೂರಾರು ವ್ಯಕ್ತಿಗಳ ಟ್ವೀಟ್‌ನಲ್ಲಿ ಅತ್ಯುತ್ತಮ ಟ್ವೀಟ್‌ಗಳು ಈ ಆಯ್ಕೆಯಡಿ ಪುಟದ ಮೇಲ್ಭಾಗದಲ್ಲೇ ಕಾಣಿಸುತ್ತವೆ. ಖಾತೆ ತೆರೆದು ಆ ದಿನದ ಅತ್ಯುತ್ತಮ ಟ್ವೀಟ್‌ ಯಾವುದು ಎಂದು ಹುಡುಕುವ ಅಗತ್ಯವಿಲ್ಲ, ಎಲ್ಲ ಮಹತ್ವದ ಟ್ವೀಟ್‌ಗಳು ಇಲ್ಲಿರುತ್ತವೆ. ಹೌದು, ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿರುವ ‘ಪಿನ್‌ ಟು ಟಾಪ್‌’ ಎಂಬ ಸೌಲಭ್ಯವನ್ನೇ ಹೆಚ್ಚೂ ಕಡಿಮೆ ಹೋಲುವ ಈ ಸೌಲಭ್ಯವನ್ನು ಟ್ವಿಟರ್‌ ಶೀಘ್ರದಲ್ಲಿಯೇ ಪರಿಚಯಿಸಲಿದೆ.

‘ಬೆಸ್ಟ್‌ ಟ್ವೀಟ್ಸ್‌’ ಸೌಲಭ್ಯ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ  ಟ್ವಿಟರ್‌ ತನ್ನ ಬಳಕೆದಾರರಿಗೆ ನಿಯಮಿತವಾಗಿ ಸಂದೇಶಗಳನ್ನು ಕಳುಹಿಸುತ್ತಿದೆ. ಆದರೆ, ‘ರಿಯಲ್‌ ಟೈಮ್‌’ ಟ್ವೀಟ್‌ಗಳನ್ನು ಹಿಂಬಾಲಿಸುವ ಅನೇಕರಿಗೆ ಹೊಸ ಸೌಲಭ್ಯ ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು ಎನ್ನುತ್ತಾರೆ ಸಾಮಾಜಿಕ ಜಾಲ ತಾಣಗಳ ಕುರಿತು ಅಧ್ಯಯನ ನಡೆಸುತ್ತಿರುವ ಫಾರ್‌ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕಂಪೆನಿ.

‘ಒಬ್ಬ ಟ್ವಿಟರ್‌ ಖಾತೆದಾರನಿಗೆ ನೂರಾರು, ಕೆಲವರಿಗೆ ಸಾವಿರಾರು ಹಿಂಬಾಲಕರಿರುತ್ತಾರೆ. ಆದರೆ, ಹಿಂಬಾಲಕರಲ್ಲಿ ಎಲ್ಲರ ಟ್ವೀಟ್‌ಗಳನ್ನು ನಿಯಮಿತವಾಗಿ ನೋಡಲು, ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿರುವುದಿಲ್ಲ. ಇನ್ನು ಕೆಲವರಿಗೆ ಪ್ರತಿ ದಿನ ಟ್ವಿಟರ್‌ ಖಾತೆಯನ್ನು ನೋಡಲು ಸಾಧ್ಯವಾಗುತ್ತಿರುವುದಿಲ್ಲ. ಎರಡು ದಿನಕ್ಕೊಮ್ಮೆಯೊ, ವಾರಕ್ಕೊಮ್ಮೆಯೊ ಟ್ವೀಟ್‌ಗಳನ್ನು ನೋಡುತ್ತಿರುತ್ತಾರೆ.

ಇಂತವರಿಗಾಗಿ  ಈ ವಿಶೇಷ ಟೈಮ್‌ಲೈನ್‌ ಸೌಲಭ್ಯ ಜಾರಿಗೆ ತರುತ್ತಿದ್ದೇವೆ. ಅಂದರೆ,  ಪ್ರವಾಹದೋಪಾದಿಯಲ್ಲಿ ಹರಿದು ಬರುವ ಟ್ವೀಟ್‌ಗಳಲ್ಲಿ ಅತ್ಯುತ್ತಮ/ಮಹತ್ವದ ಟ್ವೀಟ್‌ಗಳನ್ನು ಈ ಆಯ್ಕೆಯಡಿ ಪಟ್ಟಿ ಮಾಡಿ ಕೊಡಲಾಗುತ್ತದೆ. ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲ ಸಾಮಾಜಿಕ ಜಾಲ ತಾಣಗಳು ಅನುಸರಿಸುತ್ತಿರುವ ಕ್ರಮಾವಳಿ ಇದು ಎನ್ನುತ್ತಾರೆ ಟ್ವಿಟರ್‌ನ ಹಿರಿಯ ವ್ಯವಸ್ಥಾಪಕ (ಎಂಜಿನಿಯರಿಂಗ್‌) ಮೈಕ್‌ ಝಾರ್‌.

‘ಅಂದ ಮಾತ್ರಕ್ಕೆ ಈ ಹೊಸ ಸೌಲಭ್ಯ ಬಳಕೆದಾರರಿಗೆ ಕಡ್ಡಾಯವಲ್ಲ. ಇಷ್ಟವಾದರೆ ಮಾತ್ರ ಇದನ್ನು ಒಪ್ಪಿಕೊಂಡು ಮುಂದುವರೆಯಬಹುದು, ಇಲ್ಲವಾದಲ್ಲಿ, ಸೆಟ್ಟಿಂಗ್ಸ್‌ಗೆ ಹೋಗಿ ಬದಲಾಯಿಸಿಕೊಳ್ಳಬಹುದು. ಇದು ಸಂಪೂರ್ಣವಾಗಿ ಬಳಕೆದಾರನ ಆಯ್ಕೆಗೆ ಬಿಟ್ಟ ವಿಚಾರ. ಆದರೆ, ಅತಿ ಹೆಚ್ಚು ಟ್ವೀಟ್‌ ಮಾಡುವ, ರೀ ಟ್ವೀಟ್‌ ಮಾಡುವ ಬಳಕೆದಾರರಿಗೆ ಖಂಡಿತ ಇದು ತುಂಬಾ ಸಹಾಯಕವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’ ಎನ್ನುತ್ತಾರೆ ಝಾರ್‌.

ವರ್ಷದ ಹಿಂದೆ ಟ್ವಿಟರ್‌ ‘ವೈಲ್‌ ಯೂ ವರ್‌ ಅವೇ’ ಎಂಬ ಸೌಲಭ್ಯವನ್ನು ಪರಿಚಯಿಸಿತ್ತು. ಅಂದರೆ ನಿಯಮಿತವಾಗಿ ಟ್ವೀಟ್‌ಗಳನ್ನು ನೋಡಲು ಸಾಧ್ಯವಾಗದ ಬಳಕೆದಾರರು, ಖಾತೆ ತೆರೆದಾಗ ಮಹತ್ವದ ಎಲ್ಲ ಟ್ವೀಟ್‌ಗಳು ಪುಟದ ಮೇಲ್ಭಾದಲ್ಲಿ ಲಭ್ಯವಾಗುವಂತೆ ಮಾಡುವ  ಸೌಲಭ್ಯ ಇದಾಗಿತ್ತು. ಇದರಿಂದ ಬಳಕೆದಾರ ಆಫ್‌ಲೈನ್‌ನಲ್ಲಿದ್ದರೂ ಮಹತ್ವದ ಟ್ವೀಟ್‌ಗಳು ಕಣ್ತಪ್ಪಿ ಹೋಗುತ್ತಿರಲಿಲ್ಲ. ‘ಷೊ ಮಿ ದ ಬೆಸ್ಟ್‌ ಟ್ವೀಟ್ಸ್‌’ ಸೌಲಭ್ಯ ಕೂಡ ಹೆಚ್ಚೂ ಕಡಿಮೆ ಇದರ ಪರಿಷ್ಕೃತ ಆವೃತ್ತಿಯಂತಿದೆ ಎಂದೂ  ಫಾರ್‌ ಸೋಷಿಯಲ್‌ ಮೀಡಿಯಾ ಹೇಳಿದೆ.

ಟ್ವಿಟರ್‌ ಖಾತೆ ತೆರೆಯುತ್ತಿದ್ದಂತೆ ಬಲ ತುದಿಯ ಮೇಲ್ಭಾಗದಲ್ಲಿ ಹಳೆಯ, ಮಹತ್ವದ ಟ್ವೀಟ್‌ಗಳ ಪಟ್ಟಿ ಕಾಣಿಸಲಿದೆ.  ಇದನ್ನು ನೋಡಲು ಇಷ್ಟಪಡದ ಬಳಕೆದಾರರು, ಇದರಿಂದ ತಪ್ಪಿಸಿಕೊಂಡು ಲೈವ್‌, ರಿಯಲ್ ಟೈಮ್‌ ಟ್ವೀಟ್‌ಗಳನ್ನು ನೋಡಬೇಕಾದರೆ ಪುಟವನ್ನೊಮ್ಮೆ ರಿಫ್ರೆಶ್‌ ಮಾಡಿದರೆ ಸಾಕು. ಟ್ವಿಟರ್‌ ಪುಟ ಹಳೆಯ ರಿಯಲ್‌ ಟೈಮ್‌ ಸ್ಥಿತಿಗೆ ಬದಲಾಗುತ್ತದೆ ಎನ್ನುತ್ತಾರೆ  ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಎರಿಕ್‌ ಫ್ರಾಕ್ಸ್‌.

‘ಟ್ವೀಟ್‌ಗಳು ಬದುಕಿನ ಭಾಗವಾಗಿವೆ. ತಮ್ಮ ಸುತ್ತಮುತ್ತಲಿನ ಘಟನೆಗಳಿಗೆ ಜನರು ಕ್ಷಿಪ್ರಗತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ  ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ಅದರ ಮರು ಗಳಿಗೆಯಲ್ಲೇ ಲಕ್ಷಗಟ್ಟಲೆ ಟ್ವೀಟ್‌ಗಳು ಹರಿದುಬರುತ್ತವೆ.  ಇವೆಲ್ಲವನ್ನೂ ನಿರ್ವಹಣೆ ಮಾಡುವುದು ಸವಾಲು.

ಒಬ್ಬ ಬಳಕೆದಾರನಿಗೆ ನೂರಾರು ಹಿಂಬಾಲಕರಿದ್ದರೂ, ಅದರಲ್ಲಿ ತನಗಿಷ್ಟದ ವ್ಯಕ್ತಿಗಳ ಟ್ವೀಟ್‌ಗಳನ್ನು ಮಾತ್ರ ನಿಯಮಿತವಾಗಿ ಓದಲು ಇಷ್ಟಪಡುತ್ತಾನೆ.  ಆಫ್‌ಲೈನ್‌ನಲ್ಲಿ ಇದ್ದ ಸಂದರ್ಭದಲ್ಲೂ ತಾನು ಹಿಂಬಾಲಿಸುವ ವ್ಯಕ್ತಿಗಳು ನಿರ್ದಿಷ್ಟ ವಿಷಯ/ಘಟನೆ ಕುರಿತು ಏನು ಹೇಳಿದ್ದಾರೆ, ಏನು ಬರೆದಿದ್ದಾರೆ ಎನ್ನುವುದನ್ನು ನೋಡುವ ಕುತೂಹಲ ಇದ್ದೇ ಇರುತ್ತದೆ. ಹೊಸ ಟೈಮ್‌ಲೈನ್‌ ಸೌಲಭ್ಯ ಇದೇ ಉದ್ದೇಶಕ್ಕೆ ಅಭಿವೃದ್ಧಿಗೊಂಡಿದೆ ಎನ್ನುತ್ತಾರೆ ಅವರು. 

‘ಷೊ ಮಿ ದ ಬೆಸ್ಟ್‌ ಟ್ವೀಟ್ಸ್‌ ಫಸ್ಟ್‌’ ಸೌಲಭ್ಯವು ಡೆಸ್ಕ್‌ಟಾಪ್‌ ಬ್ರೌಸರ್‌ ಮೂಲಕ ಟ್ವಿಟರ್‌ ಬಳಸುವ ಖಾತೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.  ಮೊಬೈಲ್‌ನಲ್ಲಿ ಟ್ವಿಟರ್‌ ಆಪ್ಲಿಕೇಷನ್‌ ಬಳಸುವ ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೂ ಈ ಸೌಲಭ್ಯ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.