ADVERTISEMENT

ದೈನಂದಿನ ಬದುಕಿಗೆ ಹೊಸ ಹೊಸ ಆ್ಯಪ್‌ಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2016, 19:30 IST
Last Updated 6 ಡಿಸೆಂಬರ್ 2016, 19:30 IST
ದೈನಂದಿನ ಬದುಕಿಗೆ  ಹೊಸ ಹೊಸ ಆ್ಯಪ್‌ಗಳು
ದೈನಂದಿನ ಬದುಕಿಗೆ ಹೊಸ ಹೊಸ ಆ್ಯಪ್‌ಗಳು   
ದೈನಂದಿನ ಜೀವನದ ಅನುಕೂಲತೆ  ಹೆಚ್ಚಿಸುವ ಹಲವು ಆ್ಯಪ್‌ಗಳು ಈ ವಾರ  ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.  ಟೈಪಿಸದೇ ಮಾತಿನ ಮೂಲಕವೇ ಟಿಕೆಟ್ ಬುಕ್ ಮಾಡುವ ಯಾತ್ರಾಡಾಟ್‌ಕಾಂ ಆ್ಯಪ್, ಆಫ್‌ಲೈನ್‌ನಲ್ಲಿಯೇ  ವಿಡಿಯೊ ಡೌನ್‌ಲೋಡ್‌ ಮಾಡುವ ನೆಟ್‌ಫ್ಲಿಕ್ಸ್‌ ಆ್ಯಪ್, ಫೇಸ್‌ಬುಕ್‌ ಗೇಮ್ಸ್್ ಆ್ಯಪ್ ಮತ್ತು ನಗದು ರಹಿತ ವಹಿವಾಟಿಗೆ ಬಳಸಬಹುದಾದಎಸ್ಆರ್‌ಇಡಿ ಆ್ಯಪ್‌ಗಳು ಮುಖ್ಯವಾಗಿದ್ದು ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
 
ಯಾತ್ರಾಡಾಟ್‌ಕಾಂ ಆ್ಯಪ್‌ನಲ್ಲಿ ನೂತನ ಧ್ವನಿ ಅಪ್ಲಿಕೇಷನ್…
ಜಾಗತಿಕವಾಗಿ ಟಿಕೆಟ್ ಬುಕ್ಕಿಂಗ್ ಮತ್ತು ಪ್ರವಾಸೋಧ್ಯಮ ಸೇವೆ ಒದಗಿಸುತ್ತಿರುವ ಯಾತ್ರಾ.ಕಾಂ (Yatra.com) ಸಂಸ್ಥೆ ತನ್ನ ಮೊಬೈಲ್ ಆ್ಯಪ್‌ನಲ್ಲಿ ನೂತನ ಧ್ವನಿ ಅಪ್ಲಿಕೇಷನ್ ಪರಿಚಯಿಸುವ ಮೂಲಕ ಹೊಸ ವಿಕ್ರಮ ಸಾಧಿಸಿದೆ. ಯಾತ್ರಾ.ಕಾಂ  ಆ್ಯಪ್ ಬಳಕೆದಾರರು ಈ  ಧ್ವನಿ  ಸೌಲಭ್ಯದ ಮೂಲಕ ಇನ್ನು ಮುಂದೆ ದೇಶಿಯ ಹಾಗೂ ಅಂತರರಾಷ್ಟ್ರೀಯ ವಿಮಾನದ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
 
ಗ್ರಾಹಕರು ಕೀ ಬೋರ್ಡ್ ಬದಲಾಗಿ ಈ ನೂತನ ವಾಯ್ಸ್ ಅಪ್ಲಿಕೇಷನ್ ಬಳಸಬಹುದು. ಉದಾಹರಣೆಗೆ ಗ್ರಾಹಕರೊಬ್ಬರು ಬೆಂಗಳೂರಿನಿಂದ ದೆಹಲಿಗೆ ತೆರಳಲು ವಿಮಾನ ಟಿಕೆಟ್ ಬುಕ್ಕಿಂಗ್ ಅನ್ನು ಕೀ ಬೋರ್ಡ್ ಸಹಾಯವಿಲ್ಲದೆ ಮಾತಿನ (ಧ್ವನಿ) ಮೂಲಕವೇ ಮಾಡಬಹುದು. ಉದಾಹರಣೆಗೆ, ಯಾತ್ರಾ.ಕಾಂ ಆ್ಯಪ್‌ನಲ್ಲಿರುವ ಮೈಕ್ರೊಫೋನ್ ಆನ್ ಮಾಡಬೇಕು. ನಂತರ ಮೊಬೈಲ್ ಪರದೆಯ ಮೇಲೆ ಎಲ್ಲಿಗೆ, ಯಾವಾಗ ಎಂಬ ಮಾಹಿತಿ ಬಿತ್ತರವಾಗುತ್ತದೆ. ಆಗ ಗ್ರಾಹಕರು ಧ್ವನಿ ಮೂಲಕ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಿದರೆ ವಿಮಾನದ ಟಿಕೆಟ್ ಬುಕ್ ಆಗುತ್ತದೆ.
 
ಮೈಕ್ರೊಫೋನ್ ಲಭ್ಯವಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು. ಇದು ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ. 
ಗೂಗಲ್ ಪ್ಲೆಸ್ಟೋರ್: Yatra.com voice app
 
**
ಫೇಸ್‌ಬುಕ್‌ನಲ್ಲಿ ಗೇಮ್ಸ್‌ಗಳ ಪರಿಚಯ…
ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಆಕರ್ಷಕ ಹೊಸ ಹೊಸ ಗೇಮ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರು ಆನ್‌ಲೈನ್‌ನಲ್ಲಿ ತಮ್ಮ ಸ್ನೇಹಿತರ ಜತೆ ಲೈವ್ ಗೇಮ್ಸ್‌ಗಳನ್ನು ಆಡಬಹುದು ಎಂದು ಫೇಸ್‌ಬುಕ್‌ ಸಂಸ್ಥೆ  ತಿಳಿಸಿದೆ. ಈ ಸೌಲಭ್ಯವನ್ನು ಮೆಸೆಂಜರ್ ಬಳಕೆದಾರರು ಸಹ ಬಳಸಬಹುದಾಗಿದೆ.
 
ಫೇಸ್‌ಬುಕ್‌ ಮತ್ತು ಮೆಸೆಂಜರ್ ಆ್ಯಪ್‌ನಲ್ಲಿ ಖಾತೆದಾರರು ತಮ್ಮ ಪುಟವನ್ನು ತೆರೆದಾಗ ಮೆನು ಬಾರ್‌ನಲ್ಲಿ ಗೇಮ್ಸ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ  ವಿವಿಧ ಗೇಮ್ಸ್‌ಗಳು ತೆರೆದುಕೊಳ್ಳುತ್ತವೆ.  ಪ್ಯಾಕ್-ಮ್ಯಾನ್,   ಸೇರಿದಂತೆ ಹತ್ತಕ್ಕೂ ಹೆಚ್ಚು ಗೇಮ್ಸ್‌ಗಳನ್ನು ಅಳವಡಿಸಲಾಗಿದೆ. ಫೇಸ್‌ಬುಕ್‌ ಮತ್ತು ಮೆಸೆಂಜರ್ ಬಳಕೆದಾರರು ತಮ್ಮ ಖಾತೆಯಲ್ಲಿರುವ ಸ್ನೇಹಿತರ ಜತೆ ಮಾತ್ರ ಈ ಗೇಮ್‌ಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ.
ಗೂಗಲ್ ಪ್ಲೆಸ್ಟೋರ್: FACEBOOK-GAME
 
**
ಆಫ್‌ಲೈನ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡುವ ಆ್ಯಪ್…
ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವಿಡಿಯೊ ಸಂಸ್ಥೆ ‘ನೆಟ್‌ಫ್ಲಿಕ್ಸ್‌’ (Netflix) ಇದೀಗ ಆಫ್‌ಮೋಡ್‌ನಲ್ಲಿ ಸಿನಿಮಾ ಮತ್ತು ಧಾರಾವಾಹಿಗಳನ್ನು ಡೌನ್‌ಲೋಡ್್ ಮಾಡಿಕೊಳ್ಳುವ ಅಪ್ಲಿಕೇಷನ್ ಪರಿಚಯಿಸಿದೆ. ನೆಟ್‌ಫ್ಲಿಕ್ಸ್‌ ಸಂಸ್ಥೆ ಅಮೆರಿಕದ ಬಹುದೊಡ್ಡ ಆನ್‌ಲೈನ್‌ ಮನರಂಜನಾ ವೆಬ್ ಪೋರ್ಟಲ್ ಆಗಿದೆ. ವಿಶ್ವದಲ್ಲಿ ನೂರಕ್ಕೂ ಹೆಚ್ಚು ದೇಶಗಳಲ್ಲಿನ ಲಕ್ಷಾಂತರ ಗ್ರಾಹಕರು ಈ ಪೋರ್ಟಲ್‌ನ ಹಿಂಬಾಲಕರಾಗಿದ್ದಾರೆ.
 
ಬಳಕೆದಾರರು ತಮ್ಮ  ಸ್ಮಾರ್ಟ್‌ಫೋನ್‌ಗಳಲ್ಲಿ  ನೆಟ್‌ಫ್ಲಿಕ್ಸ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇಂಟರ್‌ನೆಟ್  ಸಂಪರ್ಕದ ಮೂಲಕ ಅನಿಯಮಿತ ಮನರಂಜನೆ (ಸಿನಿಮಾಗಳು, ಧಾರಾವಾಹಿ, ಆನ್‌ಲೈನ್‌ ಗೇಮ್ಸ್‌, ವಿಡಿಯೊ ಮತ್ತು ಆಡಿಯೊ) ಪಡೆಯಬಹುದಾಗಿತ್ತು. ಇದೀಗ ಇಂಟರ್‌ನೆಟ್ ಸಂಪರ್ಕವಿಲ್ಲದೆ ತಮ್ಮ ಇಷ್ಟದ ಸಂಗೀತ, ವಿಡಿಯೊ ಸಿನಿಮಾ, ಧಾರಾವಾಹಿಗಳನ್ನು  ಲೈವ್ ಸ್ಟ್ರೀಮ್‌ನಲ್ಲಿ ವೀಕ್ಷಿಸುವ ಮತ್ತು ಡೌನ್್ಲೋಡ್ ಮಾಡುವ ಸೌಕರ್ಯವನ್ನು ಕಲ್ಪಿಸಲಾಗಿದೆ. ಇದು ಯೂಟೂಬ್‌ನ ಆಫ್‌ಲೈನ್‌ ಅಪ್ಲಿಕೇಷನ್‌ಗಿಂತ ಭಿನ್ನವಾಗಿದೆ.
ಗೂಗಲ್ ಪ್ಲೆಸ್ಟೋರ್: Netflix
 
**
ನಗದುರಹಿತ ವಹಿವಾಟಿಗೆ ಎಸ್ಆರ್‌ವಿಡಿ ಆ್ಯಪ್…
ದೇಶದಲ್ಲಿ ₹ 500 ಮತ್ತು ₹1,000   ಮುಖಬೆಲೆಯ ನೋಟು ರದ್ದಾದ ಬಳಿಕ ಚಿಲ್ಲರೆ ಮತ್ತು ನಗದು ರೂಪಾಯಿಗೆ ಸಾಕಷ್ಟು ಬೇಡಿಕೆ ಬಂದಿದೆ. ಗ್ರಾಮೀಣ ಪ್ರದೇಶ ಮತ್ತು ಸಣ್ಣ ಸಣ್ಣ ಪಟ್ಟಣಗಳಲ್ಲಿನ ಜನರಿಗೆ ನಗದು ರಹಿತ ವಹಿವಾಟು ನಡೆಸಲು ಅನುಕೂಲ ಕಲ್ಪಿಸಲು ಮುಂಬೈ ಮೂಲದ ಸಾಫ್ಟ್‌ವೇರ್‌ ಕಂಪೆನಿಯೊಂದು ಎಸ್್ಇಆರ್‌ವಿಡಿ (SERV’D) ಆ್ಯಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಪೇಟಿಎಂ ಮಾದರಿಯಲ್ಲೇ ಈ ಆ್ಯಪ್ ಕೂಡ ಕೆಲಸ ಮಾಡುತ್ತದೆ. ಇದು ಚಿಲ್ಲರೆ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದೆ. ಅಂದರೆ ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಉಡುಪು, ಫ್ಯಾಷನ್ ಸರಕುಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಹಕರು ಎಸ್್ಇಆರ್‌ವಿಡಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಖಾತೆಯ ವಾಲೆಟ್‌ನಲ್ಲಿ ಹಣ ಭರ್ತಿ ಮಾಡಿ ಸರಕು ಮತ್ತು ಪದಾರ್ಥಗಳನ್ನು ಖರೀದಿಸಬಹುದು. ಮುಂದಿನ ದಿನಗಳಲ್ಲಿ ಎಲ್ಲ ವಹಿವಾಟಿಗೂ ಬಳಸುವಂತೆ ಈ ಆ್ಯಪ್್ ಅನ್ನು ನವೀಕರಿಸಲಾಗುವುದು ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಗೂಗಲ್ ಪ್ಲೆಸ್ಟೋರ್: SERV’D - An App

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.