ADVERTISEMENT

ಬ್ಯಾಂಕ್‌ ಹೆಸರಿನ ಇ–ಮೇಲ್‌ಗಳ ಬಗ್ಗೆ ಇರಲಿ ಎಚ್ಚರ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 16 ನವೆಂಬರ್ 2016, 19:30 IST
Last Updated 16 ನವೆಂಬರ್ 2016, 19:30 IST

ಕೇಂದ್ರ ಸರ್ಕಾರವು ₹500 ಮತ್ತು ₹1000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದುಪಡಿಸಿರುವ ಬೆನ್ನಲ್ಲೇ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡುವುದೂ ಹೆಚ್ಚಾಗಿದೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಸೈಬರ್‌ ಕಳ್ಳರು ಹಲವು ಮಾರ್ಗಗಳ ಮೂಲಕ ಬ್ಯಾಂಕ್‌ ಖಾತೆಗಳಿಗೆ ಕನ್ನಹಾಕಲು ಹೊಂಚು ಹಾಕಿದ್ದಾರೆ. ಈ ಕಳ್ಳ ಮಾರ್ಗಗಳಲ್ಲಿ ಇ–ಮೇಲ್‌ ಕೂಡ ಒಂದು!

ಭಾರತೀಯ ರಿಸರ್ವ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಅಥವಾ ಇನ್ನಾವುದೇ ಬ್ಯಾಂಕ್‌ಗಳ ಹೆಸರಿನಲ್ಲಿ ನಿಮಗೆ ಇ–ಮೇಲ್‌ ಸಂದೇಶ ಬಂದರೆ ಎಚ್ಚರ. ಇ–ಮೇಲ್‌ ಮೂಲಕ ನಿಮ್ಮ ಬ್ಯಾಂಕ್‌ ಖಾತೆ ಸಂಖ್ಯೆ, ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಸಂಖ್ಯೆ, ಪಿನ್‌ ಸಂಖ್ಯೆ, ನೆಟ್‌ ಬ್ಯಾಂಕಿಂಗ್‌ ಮಾಹಿತಿಯನ್ನು ನೀಡುವಂತೆ ಕೇಳಿ ಇ–ಮೇಲ್‌ ಬಂದರೆ ಅದಕ್ಕೆ ರಿಪ್ಲೈ ಮಾಡಬೇಡಿ.

ಈ ರೀತಿ ಬ್ಯಾಂಕ್‌ ಖಾತೆಯ ಮಾಹಿತಿ ಕೇಳುವವರು ಸೈಬರ್‌ ಕಳ್ಳರು ಎಂಬುದು ನೆನಪಿನಲ್ಲಿರಲಿ. ಏಕೆಂದರೆ ಯಾವುದೇ ಬ್ಯಾಂಕ್‌ಗಳು ಗ್ರಾಹಕರಲ್ಲಿ ಈ ರೀತಿ ಖಾತೆ ಮಾಹಿತಿಯನ್ನು ಇ–ಮೇಲ್‌ ಮೂಲಕ ಕೇಳುವುದಿಲ್ಲ. ಅಲ್ಲದೆ ಗ್ರಾಹಕರು ವಂಚನೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದಲೇ ಬ್ಯಾಂಕ್‌ಗಳು ಈ ರೀತಿಯ ಇ–ಮೇಲ್‌ ಕಲಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ.

ಒಂದು ವೇಳೆ ಬ್ಯಾಂಕ್‌ ಡೊಮೈನ್‌ ಹೋಲುವಂಥ ಮೇಲ್‌ ಐಡಿಗಳಿಂದಲೇ ಇ–ಮೇಲ್‌ ಬಂದರೂ ಅದಕ್ಕೂ ಉತ್ತರಿಸಲು ಮುಂದಾಗಬೇಡಿ. ಏಕೆಂದರೆ ಬ್ಯಾಂಕ್‌ಗಳ ಡೊಮೈನ್‌ ಮೇಲ್‌ ಐಡಿಯನ್ನೇ ಹೋಲುವಂಥ ಐಡಿಗಳನ್ನು ಬಳಸಿಕೊಂಡು ಖಾತೆಗಳಿಗೆ ಕನ್ನ ಹಾಕುವ ವ್ಯವಸ್ಥಿತ ಜಾಲವೇ ಇದೆ. ಈ ಸೈಬರ್‌ ಕಳ್ಳರ ಬಗ್ಗೆ ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೇ. ಈ ಕಳ್ಳರು ಬ್ಯಾಂಕ್‌ಗಳ ಹೆಸರಿನಿಂದ ಮಾತ್ರವಲ್ಲ, ಬ್ಯಾಂಕ್‌ಗಳ ಮುಖ್ಯ ವ್ಯವಸ್ಥಾಪಕರ ಹೆಸರಿನಲ್ಲೂ ಇ–ಮೇಲ್‌ಗಳನ್ನು ಕಳಿಸುತ್ತಾರೆ.

ಇನ್ನು ಬ್ಯಾಂಕ್‌ಗಳ ಅಸುರಕ್ಷಿತ ವೈಫೈ ಸಂಪರ್ಕದಲ್ಲಿ ಮೊಬೈಲ್‌ ಆ್ಯಪ್‌ ಬಳಕೆ ಹಾಗೂ ನೆಟ್‌ ಬ್ಯಾಂಕಿಂಗ್‌ ವ್ಯವಹಾರವನ್ನು ಮಾಡಬೇಡಿ. ಈ ಮೂಲಕವೂ ಸೈಬರ್‌ ಕಳ್ಳರು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.

ಇನ್ನು ಬ್ಯಾಂಕ್‌ ಖಾತೆಯ ಮಾಹಿತಿ ಕೇಳಿ ಬರುವ ಮೆಸೇಜ್‌ ಅಥವಾ ದೂರವಾಣಿ ಕರೆಗಳ ಬಗ್ಗೆಯೂ ಎಚ್ಚರದಿಂದಿರಿ. ಯಾಕೆಂದರೆ ಯಾವ ಬ್ಯಾಂಕ್‌ಗಳೂ ಹೀಗೆ ಮೆಸೇಜ್‌ ಅಥವಾ ದೂರವಾಣಿ ಕರೆಯ ಮೂಲಕ ತಮ್ಮ ಗ್ರಾಹಕರ ಖಾತೆ ಮಾಹಿತಿಯನ್ನು ಕೇಳುವ ವ್ಯವಸ್ಥೆಯಿಲ್ಲ. ಬ್ಯಾಂಕ್‌ ಹೆಸರಲ್ಲಿ ಇ–ಮೇಲ್‌, ಮೆಸೇಜ್‌ ಅಥವಾ ದೂರವಾಣಿ ಕರೆ ಮೂಲಕ ಖಾತೆ ಮಾಹಿತಿ ಕೇಳುತ್ತಿದ್ದಾರೆ ಎಂದರೆ ಅವರು ಸೈಬರ್‌ ಕಳ್ಳರು ಎಂಬುದು ಜ್ಞಾಪಕದಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.