ADVERTISEMENT

ಮಾಲ್‌ವೇರ್‌ ಬಗ್ಗೆ ಇರಲಿ ಎಚ್ಚರ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 5 ಅಕ್ಟೋಬರ್ 2016, 19:30 IST
Last Updated 5 ಅಕ್ಟೋಬರ್ 2016, 19:30 IST

ತಂತ್ರಜ್ಞಾನ ಬಳಕೆಯಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಅದು ಕಡಿಮೆಯೇ. ಗಟ್ಟಿ ಬೇಲಿ ಹಾಕಿದಷ್ಟೂ ನುಸುಳುಕೋರರೂ ಚಾಲಾಕಿಗಳಾಗುವಂತೆ ಆ್ಯಂಟಿ ವೈರಸ್‌ ದಿಕ್ಕು ತಪ್ಪಿಸಿ ಮಾಲ್‌ವೇರ್‌ ಹರಿಬಿಡುವ ಮಾರ್ಗಗಳ ಹುಡುಕಾಟದಲ್ಲಿ ವೃತ್ತಿನಿರತ ಹ್ಯಾಕರ್‌ಗಳು ತೊಡಗಿಕೊಂಡಿರುತ್ತಾರೆ.

ಇಮೇಲ್‌, ಮೆಸೇಜ್‌ಗಳ ಮೂಲಕ ವೈರಸ್‌ ಹಬ್ಬುತ್ತಿದ್ದ ಹ್ಯಾಕರ್‌ಗಳು ಈಗ ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳ ಮೂಲಕ ಮಾಲ್‌ವೇರ್‌ ಹರಿಬಿಡುತ್ತಿದ್ದಾರೆ. ಇತ್ತೀಚೆಗೆ ಫೇಸ್‌ಬುಕ್‌ ಸಂದೇಶದ ಮೂಲಕ ವಿಡಿಯೊ ಮಾದರಿಯ ಮಾಲ್‌ವೇರ್‌ ಹರಿದಾಡಿ ಸಾಕಷ್ಟು ಮಂದಿಗೆ ಮುಜುಗರ ಉಂಟು ಮಾಡಿದ್ದಂತೂ ಸುಳ್ಳಲ್ಲ.

ಫೇಸ್‌ಬುಕ್‌ ಗೆಳೆಯರೊಬ್ಬರಿಂದ ಮಾಲ್‌ವೇರ್‌ ಲಿಂಕ್‌ ಹೊತ್ತು ಬರುವ ಸಂದೇಶವನ್ನು ನೀವು ತೆರೆದರೆ ಮುಗಿಯಿತು. ಅಲ್ಲಿಗೆ ನೀವು ಮಾಲ್‌ವೇರ್‌ ದಾಳಿಗೆ ಒಳಗಾಗಿದ್ದೀರಿ ಎಂದೇ ಅರ್ಥ. ಈ ದಾಳಿ ಇಲ್ಲಿಗೇ ನಿಲ್ಲುವುದಿಲ್ಲ. ನಿಮ್ಮ ಫೇಸ್‌ಬುಕ್‌ ಖಾತೆಯ ಮೂಲಕ ಆ ಮಾಲ್‌ವೇರ್‌ ಲಿಂಕ್‌ ನಿಮ್ಮೆಲ್ಲಾ ಫೇಸ್‌ಬುಕ್‌ ಗೆಳೆಯರಿಗೂ ಸ್ವಯಂಚಾಲಿತವಾಗಿ ಸಂದೇಶ ರೂಪದಲ್ಲಿ ರವಾನೆಯಾಗಿರುತ್ತದೆ. ನಿಮ್ಮ ಗೆಳೆಯರು ಆ ಲಿಂಕ್‌ ಕ್ಲಿಕ್ಕಿಸಿದರೆ ಅದು ಮತ್ತೆ ಅವರ ಖಾತೆಯ ಮೂಲಕ ಅವರ ಫೇಸ್‌ಬುಕ್‌ ಗೆಳೆಯರಿಗೆಲ್ಲಾ ಹಬ್ಬುತ್ತದೆ.

ಹನಿ ಬಿದ್ದರೆ ಸಾವಿರವಾಗಿ ಬೆಳೆಯುವ ಈ ಮಾಲ್‌ವೇರ್‌ ರಕ್ತಬೀಜಾಸುರನಿದ್ದಂತೆ. ಕ್ಲಿಕ್ಕಿಸುತ್ತಾ ಹೋದಷ್ಟೂ ಬೆಳೆಯುವ ಸೈಬರಾಸುರ ಮಾಲ್‌ವೇರ್‌. ಬಳಕೆದಾರರ ಮಾಹಿತಿ ಕದ್ದು ಮಾಲ್‌ವೇರ್‌ ಹಬ್ಬುವುದು ವೃತ್ತಿನಿರತ ಹ್ಯಾಕರ್‌ಗಳ ಕೆಲಸ. ಹೀಗೆ ಸೈಬರ್‌ ದಾಳಿ ನಡೆಸುವುದೇ ಇವರ ಕಸುಬು. ಉಚಿತ ತಂತ್ರಾಂಶ ಬಳಕೆಯ ಸಂದರ್ಭದಲ್ಲಿ ಬಳಕೆದಾರರು ನೀಡುವ ಮಾಹಿತಿಯೇ ಈ ಹ್ಯಾಕರ್‌ಗಳಿಗೆ ಬಂಡವಾಳ.

ಮಾಲ್‌ವೇರ್‌ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಚಾಲಾಕಿ ಹ್ಯಾಕರ್‌ಗಳು ಅವುಗಳನ್ನು ಯಾವುದಾದರೂ ಮಾರ್ಗಗಳ ಮೂಲಕ ಹರಿಬಿಡುತ್ತಲೇ ಇರುತ್ತಾರೆ. ಹೀಗಾಗಿ ತಂತ್ರಜ್ಞಾನದ ಬಳಕೆದಾರರಿಗೆಲ್ಲಾ ಮಾಲ್‌ವೇರ್‌ನ ಆತಂಕ ಇದ್ದಿದ್ದೆ. ಸೈಬರ್‌ ಕ್ಷೇತ್ರ ಬೆಳೆದಂತೆ ಇಂತಹ ಆತಂಕಗಳೂ ಸಹಜ. ಹೀಗಾಗಿ ಮಾಲ್‌ವೇರ್‌ ಬಗ್ಗೆ ಹೆಚ್ಚು ಜಾಗರೂಕರಾಗಬೇಕಾದ್ದು ಅಗತ್ಯ.

ಮಾಲ್‌ವೇರ್‌ ದಾಳಿಗೆ ತುತ್ತಾಗದಿರಲು ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನೀವು ಬಳಸುತ್ತಿರುವ ಆ್ಯಪ್‌ಗಳು ಇಲ್ಲವೆ ತಂತ್ರಾಂಶಗಳು ಸುರಕ್ಷಿತವಾದುವೇ ಎಂಬುದನ್ನು ಬಳಕೆಗೆ ಮುನ್ನವೇ ಪರೀಕ್ಷಿಸಿಕೊಳ್ಳಿ. Norton, Fireeye ಮೊದಲಾದ ಆ್ಯಂಟಿ ವೈರಸ್‌ ತಂತ್ರಾಂಶಗಳನ್ನು ಬಳಸಿಕೊಂಡು ಈ ಸುರಕ್ಷತೆಯ ಪರೀಕ್ಷೆ ಮಾಡಬಹುದು.

ನಿಮಗೆ ಬರುವ ಯಾವುದೇ ಸಂದೇಶ ತೆರೆಯುವ ಮೊದಲು ಅದರ ಯುಆರ್‌ಎಲ್‌ ಲಿಂಕ್‌ ಏನು ಎಂಬುದನ್ನು ಸರಿಯಾಗಿ ನೋಡಿ. ವಿಡಿಯೊ ಲಿಂಕ್‌ ಎಂದು ಬಂದಿರುವ ಸಂದೇಶವನ್ನು ಸುರಕ್ಷಿತ ಬ್ರೌಸರ್‌ ಮೂಲಕ ತೆರೆದು ನೋಡಿ. ಒಂದು ವೇಳೆ ನಿಮಗೆ ಬಂದಿರುವ ಸಂದೇಶದ ಲಿಂಕ್‌ ರಿಸ್ಕ್‌ ಎಂದು ಕಂಡುಬಂದಲ್ಲಿ ಆ ಸಂದೇಶ ತೆರೆಯದಿರುವುದೇ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.