ADVERTISEMENT

ವಿಡಿಯೊ ಎಡಿಟಿಂಗ್‌ಗೆ ಮೂವಿ ಮೇಕರ್‌

ದಯಾನಂದ ಎಚ್‌.ಎಚ್‌.
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST

ವಿಶೇಷ ಸಂದರ್ಭಗಳನ್ನು ವಿಡಿಯೊದಲ್ಲಿ ಹಿಡಿದಿಡುವುದು ಹಲವರ ರೂಢಿ. ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಮಾಡಿ ಅದನ್ನು ಹಾಗೆಯೇ ಡಿವೈಸ್‌ನಲ್ಲಿ ಉಳಿಸಿಕೊಳ್ಳುವ ಬದಲು ವಿಡಿಯೊ ತುಣುಕುಗಳನ್ನು ಎಡಿಟ್‌ ಮಾಡಿ ವಿಶೇಷ ಸಂದರ್ಭವನ್ನು ಅವಿಸ್ಮರಣೀಯಗೊಳಿಸಬಹುದು.

ವಿಡಿಯೊ ಎಡಿಟಿಂಗ್‌ಗೆ ಹಲವು ಸಾಫ್ಟ್‌ವೇರ್‌ಗಳಿವೆ. ಸರಳ ವಿಧಾನದ ಮೂಲಕ ವಿಡಿಯೊ ಎಡಿಟಿಂಗ್‌ ಮಾಡಲು ಹಲವು ಉಚಿತ ಸಾಫ್ಟ್‌ವೇರ್‌ಗಳೂ ಈಗ ಲಭ್ಯ. ಅವುಗಳ ಪೈಕಿ ವಿಂಡೋಸ್‌ ಮೂವಿ ಮೇಕರ್‌ ಕೂಡ ಒಂದು. ಮೂವಿ ಮೇಕರ್‌ ಮೂಲಕ ವಿಡಿಯೊ ಎಡಿಟಿಂಗ್‌ ಮಾಡುವುದು ಸುಲಭ ಹಾಗೂ ಸರಳ.

ಮೊದಲು ನಿಮ್ಮ ಪಿಸಿಗೆ ಮೂವಿ ಮೇಕರ್‌ ಸಾಫ್ಟ್‌ವೇರ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ. ಮೂವಿ ಮೇಕರ್‌ ಸಾಫ್ಟ್‌ವೇರ್‌ಅನ್ನು ಯಾವುದೇ ಬ್ರೌಸರ್‌ ಮೂಲಕ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಮೊದಲು ನಿಮ್ಮಲ್ಲಿರುವ ವಿಡಿಯೊ ಫೈಲ್‌ಗಳನ್ನು ಒಂದೆಡೆ ಸೇರಿಸಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಫೈಲ್‌ಗಳಿದ್ದರೆ ಅವನ್ನು ಪಿಸಿಗೆ ಟ್ರಾನ್ಸ್‌ಫರ್‌ ಮಾಡಿಕೊಳ್ಳಿ. ನೀವು ಎಡಿಟ್‌ ಮಾಡಬೇಕೆಂದಿರುವ ವಿಡಿಯೊ ಫೈಲ್‌ಗಳೆಲ್ಲವೂ ಒಂದೇ ಫೈಲ್‌ನಲ್ಲಿದ್ದರೆ ಎಡಿಟಿಂಗ್‌ ಸುಲಭ.

ವಿಡಿಯೊ ಎಡಿಟ್‌ ಮಾಡಲು ಮೂವಿ ಮೇಕರ್‌ ತೆರೆಯಿರಿ. Homeನಲ್ಲಿ ಕಾಣುವ Add videos and photos ಮೇಲೆ ಕ್ಲಿಕ್ಕಿಸಿ ವಿಡಿಯೊ ಫೈಲ್‌ಗಳನ್ನು ಸೆಲೆಕ್ಟ್‌ ಮಾಡಿಕೊಳ್ಳಿ. ನೀವು ಎಡಿಟಿಂಗ್‌ಗೆ ಆರಿಸಿಕೊಂಡ ವಿಡಿಯೊ ಫೈಲ್‌ಗಳು ಪ್ರಿಪೇರ್‌ ಆಗಲು ಕೆಲ ನಿಮಿಷಗಳ ಸಮಯ ತೆಗೆದುಕೊಳ್ಳುತ್ತವೆ.

ಎಡಿಟಿಂಗ್‌ಗೆ ವಿಡಿಯೊ ಫೈಲ್‌ಗಳು ಪ್ರಿಪೇರ್‌ ಆದ ಬಳಿಕ ಯಾವ ಯಾವ ದೃಶ್ಯ ಎಷ್ಟು ಬೇಕೋ ಅಷ್ಟನ್ನು ಕತ್ತರಿಸಲು Edit ಮೇಲೆ ಕ್ಲಿಕ್ಕಿಸಿ Split ಅಥವಾ Trim ಟೂಲ್‌ ಬಳಸಿ.

ವಿಡಿಯೊ ಫೈಲ್‌ಗಳನ್ನು ಟ್ರಿಮ್‌ ಮಾಡಿದ ಬಳಿಕ ಅದಕ್ಕೊಂದು ಶೀರ್ಷಿಕೆ ನೀಡಲು Title ಮೇಲೆ ಕ್ಲಿಕ್ಕಿಸಿ. ಇಂಗ್ಲಿಷ್‌ನಲ್ಲಿ ಮಾತ್ರವಲ್ಲದೆ ಕನ್ನಡದಲ್ಲೂ (ಯುನಿಕೋಡ್‌) ಶೀರ್ಷಿಕೆ ನೀಡಬಹುದು. ಅಲ್ಲದೆ, ಫಾಂಟ್‌ ಸ್ಟೈಲ್‌ ಕೂಡ ಬದಲಿಸಿಕೊಳ್ಳಬಹುದು. ನಿಮ್ಮ ವಿಡಿಯೊ ಫೈಲ್‌ಗೆ ಕ್ಯಾಪ್ಷನ್‌ ಕೂಡ ನೀಡಬಹುದು. ಇದಕ್ಕಾಗಿ caption ಮೇಲೆ ಕ್ಲಿಕ್ಕಿಸಿ. 

ವಿಡಿಯೊ ತುಣುಕುಗಳು ಮಾತ್ರವಲ್ಲದೆ ವಿಡಿಯೊ ಜತೆಗೆ ಫೋಟೊಗಳನ್ನೂ ಸೇರಿಸಬಹುದು. ವಿಡಿಯೊ ತುಣುಕುಗಳನ್ನು ಎಡಿಟ್‌ ಮಾಡಿದ ಬಳಿಕ ಅದಕ್ಕೆ ಹೊಂದುವಂಥ ಮ್ಯೂಸಿಕ್‌ ಫೈಲ್‌ ಕೂಡ ಸೇರಿಸಬಹುದು. ಇದಕ್ಕಾಗಿ Add music ಮೇಲೆ ಕ್ಲಿಕ್ಕಿಸಿ.

ವಿಡಿಯೊ ಎಡಿಟ್‌ ಮಾಡಿ, ಮ್ಯೂಸಿಕ್‌ ಫೈಲ್‌ ಸೇರಿಸಿ, ಶೀರ್ಷಿಕೆ, ಕ್ಯಾಪ್ಷನ್‌, ಕ್ರೆಡಿಟ್‌ ನೀಡಿದ ಬಳಿಕ Save Movie ಮೇಲೆ ಕ್ಲಿಕ್ಕಿಸಿದರೆ ನಿಮ್ಮ ವಿಡಿಯೊ ಫೈಲ್‌ ರೆಂಡರ್‌ ಆಗಿ ಸೇವ್‌ ಆಗುತ್ತದೆ. ಮೂವಿ ಮೇಕರ್‌ ಸಾಫ್ಟ್‌ವೇರ್‌ ಡೌನ್‌ಲೋಡ್‌ ಮಾಡಲು ಈ ಲಿಂಕ್ ಬಳಸಿ: bit.ly/2hJ5T6w

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.