ADVERTISEMENT

ಸ್ಮಾರ್ಟ್‌ಫೋನ್‌ ಫಿಟ್‌ನೆಸ್‌ ಟ್ರ್ಯಾಕ್‌ ಮಾಡುವಂತಾದರೆ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST
ಸ್ಮಾರ್ಟ್‌ಫೋನ್‌ ಫಿಟ್‌ನೆಸ್‌  ಟ್ರ್ಯಾಕ್‌ ಮಾಡುವಂತಾದರೆ!
ಸ್ಮಾರ್ಟ್‌ಫೋನ್‌ ಫಿಟ್‌ನೆಸ್‌ ಟ್ರ್ಯಾಕ್‌ ಮಾಡುವಂತಾದರೆ!   

ಇದು ಸ್ಮಾರ್ಟ್‌ಫೋನ್‌ಗಳ ಸುಗ್ಗಿಯ ಕಾಲ! ನಾವು ಕುಳಿತಲ್ಲೇ ಎಲ್ಲ ಕೆಲಸಗಳನ್ನು 4 ಅಥವಾ 5 ಇಂಚಿನ ಸ್ಮಾರ್ಟ್‌ಫೋನ್‌ ಮೂಲಕ ಮಾಡಬಹುದಾದ ಕ್ರಾಂತಿಕಾರಿ ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದೇವೆ.

ಮುಂಜಾನೆ ಏಳುವುದರಿಂದ ಹಿಡಿದು ದೈನಂದಿನ ಕೆಲಸಗಳನ್ನು ಮುಗಿಸಿ ತಮ್ಮ ಪ್ರೀತಿ ಪಾತ್ರರಿಗೆ ಶುಭರಾತ್ರಿ ಹೇಳಿ ನೆಮ್ಮದಿಯಾಗಿ ನಿದ್ರಿಸುವವರೆಗೂ ನಮ್ಮ ಜತೆ ಸ್ಮಾರ್ಟ್‌ಫೋನ್‌ಗಳು ಕೆಲಸ ಮಾಡುತ್ತವೆ! ಇದೀಗ ಸ್ಮಾರ್ಟ್‌ಫೋನ್‌ಗಳು ಫಿಟನೆಸ್‌ ಕ್ಷೇತ್ರಕ್ಕೂ ಕಾಲಿಡುವ ಮೂಲಕ ಹೊಸ ವಿಕ್ರಮ ಬರೆದಿವೆ.

ಇನ್ನು ಮುಂದೆ ಫಿಟ್‌ನೆಸ್‌ ಟ್ರ್ಯಾಕಿಂಗ್‌ ಸಾಧನಗಳು ಮಾಡುವ ಕೆಲಸವನ್ನು ಸ್ಮಾರ್ಟ್‌ಫೋನ್‌ಗಳೇ ಮಾಡಲಿವೆ. ಅಂದರೆ ಹೃದಯದ ಬಡಿತ ಮತ್ತು ಉಸಿರಿನ ಏರಿಳಿತದ ದತ್ತಾಂಶಗಳನ್ನು ಸ್ಮಾರ್ಟ್‌ಫೋನ್‌ಗಳೇ ಸ್ವಯಂಚಾಲಿತವಾಗಿ ಸಂಗ್ರಹಿಸಲಿವೆ. ಹಾಗಾಗಿ ನಾವು ಫಿಟ್‌ನೆಸ್‌ ಟ್ರ್ಯಾಕಿಂಗ್‌ ಸಾಧನಗಳನ್ನು ಧರಿಸುವುದಕ್ಕೆ ಇನ್ನು ಮುಂದೆ ಗುಡ್‌ಬೈ ಹೇಳಬಹುದು!

ಸಂಶೋಧಕರು ಈ ನೂತನ ಯೋಜನೆಗೆ ಬಯೋಫೋನ್‌ ಎಂದು ಹೆಸರಿಟ್ಟಿದ್ದಾರೆ. ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಬಯೋಫೋನ್‌ ತಂತ್ರಾಂಶವನ್ನು ಅಳವಡಿಸಿಕೊಂಡರೆ ಸಾಕು, ಅದು  ನಮ್ಮ ದೇಹದಲ್ಲಿನ ಬಯೋಲಾಜಿಕಲ್‌ ಸಂಕೇತಗಳನ್ನು ಸೆರೆ ಹಿಡಿದು ಹೃದಯದ ಬಡಿತ ಮತ್ತು ಉಸಿರಾಟದ ಏರಿಳಿತವನ್ನು ದಾಖಲಿಸಿಕೊಳ್ಳುತ್ತದೆ.

ನಡೆದಾಡುವಾಗ ಅಥವಾ ದೈಹಿಕವಾಗಿ ಕೆಲಸ ಮಾಡುವಾಗ ನಮ್ಮ ದೇಹದಲ್ಲಿ  ಸಾಕಷ್ಟು ಬದಲಾವಣೆಗಳಾಗುವುದರಿಂದ ನಿಖರವಾದ ದತ್ತಾಂಶಗಳನ್ನು ಕಲೆ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ ಜೇವಿಯರ್ ಹೆರ್ನಾಂಡೆಜ್. ನಾವು ಮಲಗಿರುವಾಗ ಅಥವಾ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ದೈಹಿಕ ಬದಲಾವಣೆಯ ದತ್ತಾಂಶಗಳನ್ನು ಪಡೆಯಬಹುದು ಎನ್ನುತ್ತಾರೆ. ಹೆರ್ನಾಂಡೆಜ್‌ ಅಮೆರಿಕದ ಮೆಸಚೂಸೆಟ್ಸ್‌ ತಾಂತ್ರಿಕ ಸಂಸ್ಥೆಯ ಮೀಡಿಯಾ ಲ್ಯಾಬ್‌ನ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಈ ಬಯೋಪೋನ್‌ ಯೋಜನೆಯ ಮುಖ್ಯಸ್ಥರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಈ ಯೋಜನೆ ಅಂತಿಮ ಹಂತದಲ್ಲಿದ್ದು ಹಲವು ಯಶಸ್ವಿ ಪ್ರಯೋಗಗಳನ್ನು ನಡೆಸಿದೆ. ಕೆಲವೇ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದು  ಹೆರ್ನಾಂಡೆಜ್‌ ಹೇಳುತ್ತಾರೆ.

ಪ್ರಯೋಗದ ಹಾದಿ...
ಸಂಶೋಧಕರು ಹಲವು ವ್ಯಕ್ತಿಗಳ ಮೇಲೆ ಪ್ರಯೋಗ ನಡೆಸುವ ಮೂಲಕ ಯಶಸ್ವಿಯಾಗಿದ್ದಾರೆ. ಮೊದಲು ಹತ್ತಾರು ಜನರ ಸ್ಮಾರ್ಟ್‌ಫೋನ್‌ಗಳಿಗೆ ಬಯೋಫೋನ್‌ ತಂತ್ರಾಂಶವನ್ನು ಅಳವಡಿಸಿಕೊಟ್ಟಿದ್ದಾರೆ. ನಂತರ ಅವರನ್ನು ಮಲಗಿಸುವುದು, ಓಡಿಸುವುದು, ಕೆಲವರಿಂದ ಸೈಕಲ್‌ ತುಳಿಸುವುದು ಮತ್ತು ದೈಹಿಕ ಕೆಲಸ ಮಾಡಿಸುವ ಮೂಲಕ ಹೃದಯದ ಬಡಿತ ಮತ್ತು ಉಸಿರಿನ ಏರಿಳಿತದ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಮಲಗಿರುವ ವ್ಯಕ್ತಿಗಳ ನಾಡಿಮಿಡಿತಗಿಂತಲೂ (ಪಲ್ಸ್‌) ಸೈಕಲ್‌ ತುಳಿಯುವವರು, ಓಡುವವರು ಮತ್ತು ದೈಹಿಕ ಕೆಲಸ ಮಾಡುವವರ ಪಲ್ಸ್‌ಗಳಲ್ಲಿ  ವ್ಯತ್ಯಾಸ ಕಂಡು ಬಂದಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರಿಂದ ನಾವು ವಿಶ್ರಾಂತಿ ಪಡೆಯುವಾಗಿನ ಪಲ್ಸ್‌ಗಳಲ್ಲಿ ವ್ಯತ್ಯಾಸ ಕಂಡುಬಂದರೆ ಹೃದಯ ಮತ್ತು ಉಸಿರಾಟದಲ್ಲಿ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಲು ಸಹ ಈ ತಂತ್ರಾಂಶ ನೆರವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಹೃದಯ ಬಡಿತ ಮತ್ತು ಉಸಿರಾಟದ ದತ್ತಾಂಶಗಳ ಮಾಹಿತಿಗಾಗಿ ಫಿಟ್‌ನೆಸ್‌ ಜಾಕೆಟ್‌(ಟ್ರ್ಯಾಕರ್‌)ಗಳನ್ನು ಬಳಸದೇ ಬಯೋಫೋನ್‌ ತಂತ್ರಾಂಶದ ಮೂಲಕ  ನಿರಾತಂಕವಾಗಿ ವ್ಯಾಯಾಮವನ್ನು ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ.

ಫಿಟ್‌ನೆಸ್‌ ಟ್ರ್ಯಾಕರ್‌ ಮತ್ತು ಬಯೋಫೋನ್‌ ಆ್ಯಪ್‌ ಅನ್ನು ತೌಲನಿಕ ಪ್ರಯೋಗಕ್ಕೆ ಒಳಪಡಿಸಿದಾಗ ಈ ಎರಡೂ ಸಾಧನಗಳು ನಿಖರವಾದ ದತ್ತಾಂಶ ನೀಡಿರುವುದಾಗಿ ಹೆರ್ನಾಡೆಂಜ್‌ ಹೇಳುತ್ತಾರೆ.

ಒಟ್ಟಿನಲ್ಲಿ ಹೃದಯ ಬಡಿತ ಮತ್ತು ಉಸಿರಾಟವನ್ನು ಮಾಪನ ಮಾಡಲು ಇತರ ಸಾಧನಗಳಿಗಿಂತ ಸ್ಮಾರ್ಟ್‌ಫೋನ್‌ಗಳೇ ಉತ್ತಮ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇತರೆ ವೈದ್ಯಕೀಯ ಫಿಟ್‌ನೆಸ್‌ ಟ್ರ್ಯಾಕರ್‌ಗಳಿಂತಲೂ ಈ ಆ್ಯಪ್‌ ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆಯಂತೆ. ಗ್ರಾಹಕರು ಇನ್ನು ಮುಂದೆ ಟ್ರ್ಯಾಕರ್‌ಗಳನ್ನು ಧರಿಸದೇ ಸ್ಮಾರ್ಟ್‌ಫೋನ್‌ಗಳನ್ನು ಜೇಬಿನಲ್ಲಿ ಹಾಕಿಕೊಂಡು ನೆಮ್ಮದಿಯಾಗಿ ತಿರುಗಾಡಬಹುದು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT