ADVERTISEMENT

2014ರ ದುರ್ಬಲ ಪಾಸ್‌ವರ್ಡ್‌ 123456

ಬಸೀರ ಅಹ್ಮದ್ ನಗಾರಿ
Published 10 ಫೆಬ್ರುವರಿ 2015, 19:30 IST
Last Updated 10 ಫೆಬ್ರುವರಿ 2015, 19:30 IST

ವಿವಿಧ ತಂತ್ರಾಂಶ ಮತ್ತು ಅಂತರ್ಜಾಲವನ್ನು ಬಳಸಿಕೊಳ್ಳುವವರೆಲ್ಲರೂ ಮನೆ ಕಚೇರಿಗಳಲ್ಲಿನ ಎಲ್ಲ ಗ್ಯಾಜೆಟ್‌ಗಳಿಗೂ ಪಾಸ್‌ವರ್ಡ್‌ಗಳನ್ನು ಬಳಸುವುದು ಅನಿವಾರ್ಯವಾಗಿದೆ. ಆದರೆ, ಈ ಪಾಸ್‌ವರ್ಡ್‌ಗಳಾದರೂ ಸೈಬರ್‌ ದಾಳಿಯಿಂದ ನಮ್ಮನ್ನು ರಕ್ಷಿಸಲು ಅದೆಷ್ಟು ಸಮರ್ಥವಾಗಿವೆ ಎಂಬುದೇ ದೊಡ್ಡ ಪ್ರಶ್ನೆ. ಪರಿಶೀಲಿಸುತ್ತಾ ನಡೆದರೆ ಪಾಸ್‌ವರ್ಡ್‌ಗಳ ಅಸಲೀಯತ್ತು ತೆರೆದುಕೊಳ್ಳುತ್ತದೆ. ಕೆಲವಂತೂ ಮೊದಲ ಒಗೆತಕ್ಕೇ ಬಣ್ಣ ಕಳೆದುಕೊಂಡ ಕಳಪೆ ಗುಣಮಟ್ಟದ ಹೊಸಬಟ್ಟೆಯಂತೆಯೇ ಕಾಣುತ್ತವೆ.

ತಂತ್ರಜ್ಞಾನ ಕ್ಷಣಕ್ಷಣಕ್ಕೂ ವೇಗ ಪಡೆದು ಕೊಂಡು ಮುಂದೆ ಮುಂದೆ ಸಾಗುತ್ತಲೇ ಇದೆ. ಇನ್ನೊಂದೆಡೆ ಅದರ ಸೈಡ್ಎಫೆಕ್ಟ್ (ಪಾರ್ಶ್ವ ಪರಿಣಾಮ) ಎಂಬಂತೆ ಸಾಲು–ಸಾಲು ಸವಾಲುಗಳೂ ಅದೇ ವೇಗದಲ್ಲಿ ಹುಟ್ಟಿಕೊಂಡು ತಂತ್ರಜ್ಞಾನದ ಬಳಕೆದಾರರನ್ನು ಬೆಚ್ಚಿ ಬೀಳಿಸುತ್ತಿವೆ.

ಮುಖ್ಯವಾಗಿ ಸೈಬರ್ ದಾಳಿ. ವಿಶ್ವದ ದೊಡ್ಡಣ್ಣ ಎನಿಸಿಕೊಂಡು ಬೀಗುತ್ತಿರುವ ಅಮೆರಿಕವೇ ಸೈಬರ್ ದಾಳಿಯಿಂದ ಸುರಕ್ಷತೆ ಪಡೆದುಕೊಳ್ಳಲು ಹೊಸ ವರ್ಷದಲ್ಲಿ  ಡಿಜಿಟಲ್‌ ಭದ್ರತಾ ಕೆಲಸಗಳಿಗಾಗಿ 1400 ಕೋಟಿ ಡಾಲರ್‌ (₨86,100 ಕೋಟಿ) ಹಣವನ್ನು ತೆಗೆದಿರಿಸಿದೆ. ಅಂದರೆ ಸೈಬರ್‌ ದಾಳಿ ದಿನೇ ದಿನೇ ಪಡೆದುಕೊಳ್ಳುತ್ತಿರುವ ಭೀಕರತೆಯ ಪ್ರಮಾಣ ಮನದಟ್ಟಾದೀತು.

ತಂತ್ರಜ್ಞಾನ ಲೋಕದ ಪರಿಸ್ಥಿತಿಯೇ ಹೀಗಿರುವಾಗ, ಅದರ ಒಂದು ಅಂಶವೇ ಆಗಿರುವ ಅಂತರ್ಜಾಲ ಲೋಕವೂ ಕೆಲವೊಮ್ಮೆ ಸೈಬರ್‌ ದಾಳಿಗೆ ಸಿಲುಕಿ ಚಳಿ ಜ್ವರ ಬಂದಂತೆ ತತ್ತರಿಸಿಬಿಡುತ್ತದೆ.

ಹ್ಯಾಕರ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಂತ್ರಜ್ಞಾನ ಮತ್ತು ಅಂತರ್ಜಾಲ ಬಳಸಿಕೊಳ್ಳುವ, ಪ್ರತಿಯೊಬ್ಬರೂ ತಮ್ಮ ಮನೆ ಕಚೇರಿಗಳಲ್ಲಿನ ಗಣಕಯಂತ್ರ, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ ಎಲ್ಲದಕ್ಕೂ ಪಾಸ್‌ವರ್ಡ್‌ಗಳನ್ನು ಬಳಸುವುದು ಅನಿವಾರ್ಯವಾಗಿದೆ.

ಆದರೆ, ಈ ಪಾಸ್‌ವರ್ಡ್‌ಗಳಾದರೂ ಸೈಬರ್‌ ದಾಳಿಯಿಂದ ನಮ್ಮನ್ನು ರಕ್ಷಿಸಲು ಬಹಳ ಸಮರ್ಥವಾಗಿವೆಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಪರಿಶೀಲಿಸುತ್ತಾ ನಡೆದಾಗ ಪಾಸ್‌ವರ್ಡ್‌ಗಳ ಅಸಲೀಯತ್ತು ತೆರೆದುಕೊಳ್ಳುತ್ತದೆ. ಕೆಲವಂತೂ ಮೊದಲ ಒಗೆತಕ್ಕೇ ಬಣ್ಣ ಕಳೆದುಕೊಂಡ ಕಳಪೆ ಗುಣಮಟ್ಟದ ಹೊಸಬಟ್ಟೆಯಂತೆಯೂ ಇರುತ್ತವೆ.

ಅಂದರೆ, ನೀವು ನಂಬಿಕೊಂಡಿರುವ ನಿಮ್ಮ ವಿಶ್ವಾಸಾರ್ಹ ಗುಪ್ತಸಂಖ್ಯೆ/ ಗುಪ್ತನಾಮವೇ (ಪಾಸ್‌ವರ್ಡ್) ನಿಮಗೆ ಬಲು ಸುಲಭದಲ್ಲಿ ಮೋಸವಾಗುವಂತೆ ಮಾಡಿರುತ್ತದೆ. ವಂಚಕರು, ಕಿಡಿಗೇಡಿಗಳಿಗೆ ಅದು ಸುಲಭದ ತುತ್ತಾಗಿಬಿಟ್ಟಿರುತ್ತದೆ.

ADVERTISEMENT

ಇಂತಹ ಸಡಿಲವಾದ, ದುರ್ಬಲವಾದ ಪಾಸ್‌ವರ್ಡ್‌ಗಳ ಬಗ್ಗೆ ಅಧ್ಯಯನ ಪ್ರತಿವರ್ಷವೂ ನಡೆಯುತ್ತಿರುತ್ತದೆ. ಕೋಟಿ ಸಂಖ್ಯೆಯ ಪಾಸ್‌ವರ್ಡ್‌ಗಳಲ್ಲಿ ಅತ್ಯಂತ ದುಬರ್ಲವಾದುದು, ಅಸರ್ಥವಾದುದು ಯಾವುದು ಎಂಬುದನ್ನು ಈ ಅಧ್ಯಯನದಲ್ಲಿ ಪಟ್ಟಿ ಮಾಡಲಾಗುತ್ತದೆ.

2014ರ ದುರ್ಬಲ ಪಾಸ್‌ವರ್ಡ್‌
2014ನೇ ಸಾಲಿನ ಅತ್ಯಂತ ದುರ್ಬಲ ಪಾಸ್‌ವರ್ಡ್‌ ಯಾವುದು ಗೊತ್ತಾ?  ಅದು ‘password’ ಎಂಬ ಸರಳ ಪದಕ್ಕಿಂತಲೂ ಬಹಳ ದುರ್ಬಲವಾದದ್ದು.

ಆನ್‌ಲೈನ್‌ ಭದ್ರತಾ ಸಂಸ್ಥೆ ಸ್ಪ್ಯಾಶ್‌ ಡಾಟಾ ಪ್ರಕಾರ ಕಳೆದ ಸಾಲಿನ ಅತಿಕೆಟ್ಟ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ ‘123456’ ಎಂಬ ರಹಸ್ಯ ಕೀಲಿಕೈಯೇ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷವೂ ಇದು ಮೊದಲ ಸ್ಥಾನದಲ್ಲೇ ಇತ್ತು. ‘password’ 2013ರಲ್ಲಿದ್ದಂತೆ 2014ರಲ್ಲೂ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ.

ಅಗ್ರ ಹತ್ತರ ಪಟ್ಟಿಯಲ್ಲಿ ಅಂಕಿಯಾಧಾರಿತ ಪಾಸ್‌ವರ್ಡ್‌ಗಳ ಸಂಖ್ಯೆಯೇ ಐದು. 2013ರಲ್ಲಿ 17ನೇ ಸ್ಥಾನದಲ್ಲಿದ್ದ ‘12345’ ಬಡ್ತಿ ಪಡೆದು, 2014ರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದು ನಾಚಿಕೆ ಪಡುತ್ತಿದೆ.
‘12345678’ ಮೂರನೇ ಹಂತದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. 2013ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕಂಪ್ಯೂಟರ್‌ ಕೀಬೋರ್ಡಿನ ಮೊದಲ ಸಾಲು ಮೂಲಾಕ್ಷರಗಳ ಪಾಸ್‌ವರ್ಡ್‌  ‘qwerty’, ಒಂದು ಸ್ಥಾನ ಕುಸಿದು ಐದನೇ ಸ್ಥಾನದಲ್ಲಿದೆ.

ನೆಚ್ಚಿನ ಕ್ರೀಡೆ, ಕ್ರೀಡಾತಂಡ, ಹುಟ್ಟಿದ ವರ್ಷ, ಮಕ್ಕಳ ಹೆಸರು, ಖ್ಯಾತ ಅಥ್ಲೀಟ್‌, ಕಾರ್‌ ಬ್ರ್ಯಾಂಡ್‌, ಚಲನಚಿತ್ರ ಇತ್ಯಾದಿ ಮೊದಲ 100 ಪಾಸ್‌ವರ್ಡ್‌ಗಳೂ ಸಹ ದುರ್ಬಲ ಸಾರ್ಮರ್ಥ್ಯದ ಪಟ್ಟಿಯಲ್ಲಿವೆ.

ಕಳೆದ ವರ್ಷ 33 ಲಕ್ಷ ಪಾಸ್‌ವರ್ಡ್‌ಗಳು ಬಹಿರಂಗಗೊಂಡಿದ್ದವು. ಇದನ್ನು ಆಧರಿಸಿಯೇ ಸ್ಪ್ಯಾಶ್‌ಡಾಟಾ ಸಂಸ್ಥೆ, ಆನ್‌ಲೈನ್‌ ಭದ್ರತೆಯ ವಿಚಾರದಲ್ಲಿ  ತಜ್ಞರಾಗಿರುವ ಮಾರ್ಕ್‌ ಬರ್ನೆಟ್‌ ಅವರ ಸಹಯೋಗದೊಂದಿಗೆ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.