ADVERTISEMENT

ಸೂಪರ್ ಜೂ.......ಮ್ ಕ್ಯಾಮೆರಾ!

ಕೆ.ಆರ್‌.ಅಶೋಕ್‌
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ಯಾಮೆರಾ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಸ್ವಲ್ಪ ದಿನದ ಮಟ್ಟಿಗೆ ಖರೀದಿಯನ್ನು ಮುಂದೂಡಿ. ಹವ್ಯಾಸಿ ಛಾಯಾಗ್ರಾಹಕರಿಗೆಂದೇ ವಿಶೇಷವಾದ ಜೂಮ್ ಕ್ಯಾಮೆರಾವೊಂದು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭಿಸಲಿದೆ. ನಿಸರ್ಗ ಚಿತ್ರಗಳಿಂದ ಹಿಡಿದು ದೂರದ ಚಂದ್ರನ ಮೇಲಿನ ಕುಳಿಗಳನ್ನೂ ಸ್ಪಷ್ಟವಾಗಿ ಚಿತ್ರೀಕರಿಸಲು ಸಹಾಯ ಮಾಡುವಂಥ ಕ್ಯಾಮೆರಾವೊಂದನ್ನು ನಿಕಾನ್ ಪರಿಚಯಿಸಿದೆ. ಅದೇ ನಿಕಾನ್ ಕೂಲ್‌ಪಿಕ್ಸ್ ಪಿ 1000. ಸೂಪರ್ ಜೂಮ್ ಕ್ಯಾಮೆರಾಗಳಲ್ಲಿ ಹೊಸ ವರ್ಗವನ್ನೇ ಇದು ಸೃಷ್ಟಿಸಲಿದೆ.

ಸೂಪರ್ ಜೂಮ್ ಕ್ಯಾಮೆರಾಗಳೆಂದರೆ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳಷ್ಟೇ. ಡಿಎಸ್ಎಲ್‌ ಆರ್ ಗಳಲ್ಲಿರುವಂತೆ ಇದರಲ್ಲಿ ಲೆನ್ಸ್ ಬದಲಿಸುವ ಅವಶ್ಯಕತೆಯಿರುವುದಿಲ್ಲ. ಡಿಎಸ್ಎಲ್ಆರ್ ಗಳಷ್ಟು ಸ್ಪಷ್ಟ ಚಿತ್ರಗಳು ಇದರಲ್ಲಿ ಮೂಡುವುದಿಲ್ಲ. ಆದರೆ, ನಿಮ್ಮೊಳಗಿನ ಛಾಯಾಗ್ರಾಹಕ ಉತ್ತಮನಾಗಿದ್ದರೆ, ನಿಮ್ಮದೇ ಶೈಲಿಯಲ್ಲಿ ಕೋನಗಳನ್ನು (Angle) ತೆಗೆಯುವ ಕಲೆ ಕರಗತವಾಗಿದ್ದರೆ ಅಥವಾ ಅಪರೂಪಕ್ಕೆ ಚಿತ್ರ ತೆಗೆಯುವ ಹವ್ಯಾಸಿ ನೀವಾಗಿದ್ದರೆ, ದುಬಾರಿ ಬೆಲೆಯ ಪದೇ ಪದೇ ಲೆನ್ಸುಗಳ ಖರೀದಿಗೆ ಹಣ ಬೇಡುವ ಡಿ.ಎಸ್.ಎಲ್.ಆರ್ ಗಿಂತ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳು ಉತ್ತಮ.

50ಎಕ್ಸ್ ಜೂಮ್ ಅನ್ನು ಮೊದಲಿಗೆ ಪರಿಚಯಿಸಿದ್ದು ಕೆನಾನ್ ಎಸ್.ಎಕ್ಸ್ 50. ನಂತರದಲ್ಲಿ ಸೋನಿ 60 ಎಕ್ಸ್ ಜೂಮಿನ ಸೋನಿ ಡಿ.ಎಸ್.ಸಿ ಎಚ್ 400 ಅನ್ನು ಪರಿಚಯಿಸಿತು. ಕೆನಾನ್ ಮತ್ತು ನಿಕಾನ್ ಕಂಪನಿಗಳು ಕೂಡ 60 - 65 ಎಕ್ಸ್ ಝೂಮಿನ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಬಿಟ್ಟಿತು. ನಿಕಾನ್ ಒಂದು ಹೆಜ್ಜೆ ಮುಂದೆ ಹೋಗಿ ನಿಕಾನ್ ಪಿ 900 ಎಂಬ ಸೂಪರ್ ಜೂಮ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಕ್ಯಾಮೆರಾದಲ್ಲಿದ್ದಿದ್ದು 83 ಎಕ್ಸ್ ಜೂಮ್. ಈ ಕ್ಯಾಮೆರಾಗೆ ಸರಿಸಾಟಿಯಾಗುವಂತಹ ಕ್ಯಾಮೆರಾವನ್ನು ಬೇರೆ ಕಂಪನಿಗಳು ಪರಿಚಯಿಸುವ ಮೊದಲು ನಿಕಾನ್ 125 ಎಕ್ಸ್ ಜೂಮ್ ಇರುವ ನಿಕಾನ್ ಕೂಲ್‌ಪಿಕ್ಸ್ ಪಿ 1000 ಅನ್ನು ಪರಿಚಯಿಸಿದೆ.

ADVERTISEMENT

ನಿಕಾನ್ ಪಿ 1000 ವಿಶೇಷತೆಗಳು...
24ಎಂ.ಎಂನಿಂದ 3000ಎಂ.ಎಂವರೆಗೆ ಹರಡಿಕೊಳ್ಳುವ ನಿಕಾನ್‌ ಲೆನ್ಸ್ ಹೊಂದಿರುವ ಕ್ಯಾಮೆರಾವನ್ನು ಮಳೆಗಾಲದಲ್ಲಿ ಜಲಪಾತದ ಚಿತ್ರ ತೆಗೆಯಲೂ ಬಳಸಬಹುದು. ಜಲಪಾತದ ಮತ್ತೊಂದು ಬದಿಯಲ್ಲಿ ಕುಳಿತಿರುವ ಪಕ್ಷಿ ಚಿತ್ರವನ್ನು ತೆಗೆಯಲೂ ಬಳಸಬಹುದು. ಇಷ್ಟೊಂದು ಜೂಮ್ ಹೇಗೆ ಸಾಧ್ಯವಾಗುತ್ತದೆ ಎಂದರೆ ಕ್ಯಾಮೆರಾದಲ್ಲಿನ ಸೆನ್ಸಾರಿನ ಗಾತ್ರ (1/2.3 ಇಂಚು ಅಥವಾ 0.28ಸೆ.ಮಿ) ಡಿ.ಎಸ್.ಎಲ್.ಆರ್ ಗೆ (3.73 - 8.6 ಸೆ.ಮಿ) ಹೋಲಿಸಿದಾಗ ತುಂಬಾ ಚಿಕ್ಕದಾಗಿರುತ್ತದೆ. ಚಿಕ್ಕ ಸೆನ್ಸಾರಿನ ಕಾರಣದಿಂದ ಚಿತ್ರದ ಗುಣಮಟ್ಟದಲ್ಲಿ ಕೊಂಚ ರಾಜಿ ಮಾಡಿಕೊಳ್ಳಲೇಬೇಕು. ನಿಕಾನ್ ಪಿ 1000 ಕ್ಯಾಮೆರಾದಲ್ಲಿ ಮತ್ತಷ್ಟು ಜೂಮ್ ಮಾಡಲು ಡಿಜಿಟಲ್ ಜೂಮ್ ಬಳಸಬಹುದು. ಇದನ್ನು ಬಳಸಿ 12,000 ಎಂ.ಎಂನಷ್ಟು ಜೂಮ್ ಮಾಡಬಹುದಾದರೂ ಚಿತ್ರದ ಗುಣಮಟ್ಟ ಪೂರ್ಣವಾಗಿ ಹಾಳಾಗುತ್ತದೆ.

ನಿಕಾನ್ ಪಿ 900 ಕ್ಯಾಮೆರಾದಲ್ಲಿ ರಾ (RAW) ಫಾರ್ಮ್ಯಾಟಿನಲ್ಲಿ ಚಿತ್ರ ತೆಗೆಯುವ ಅವಕಾಶ ಇರುತ್ತಿರಲಿಲ್ಲ. ಆ ಕೊರತೆಯನ್ನು ನಿಕಾನ್ ಕೂಲ್‌ಪಿಕ್ಸ್ ಪಿ 1000 ನೀಗಿಸಿದೆ. ರಾ ಫಾರ್ಮ್ಯಾಟಿನಲ್ಲಿ ಚಿತ್ರ ತೆಗೆಯುವುದರಿಂದ ಚಿತ್ರವನ್ನು ಉತ್ತಮಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಚಿತ್ರದ ಗುಣಮಟ್ಟ ಹೆಚ್ಚುತ್ತದೆ.

ಈ ಕ್ಯಾಮೆರಾದಲ್ಲಿ ಚಿತ್ರ ತೆಗೆಯುವುದಕ್ಕಷ್ಟೇ ಅಲ್ಲದೆ ವಿಡಿಯೋ ಮಾಡಲೂ ಇದು ಉತ್ತಮ ಕ್ಯಾಮೆರಾ. 4ಕೆ ಯು.ಎಚ್.ಡಿ (ಅಲ್ಟ್ರಾ ಹೆಚ್.ಡಿ) ವಿಡಿಯೊಗಳನ್ನು ಇದರಲ್ಲಿ ಚಿತ್ರೀಕರಿಸಬಹುದು.

ಪ್ರಮುಖ ತಾಂತ್ರಿಕ ಅಂಶಗಳು:
*
16 ಮೆಗಾಪಿಕ್ಸೆಲ್ ಸೆನ್ಸಾರ್.
*ಮಾನಿಟರ್ ಗಾತ್ರ: 8.1 ಸೆ.ಮಿ. ಪೂರ್ಣವಾಗಿ ತಿರುಗಿಸಬಲ್ಲ ಮಾನಿಟರ್ ಇದರಲ್ಲಿದೆ.
*ಅಪರ್ಚರ್: ಎಫ್/ 2.8-8
*ಶಟರ್ ವೇಗ: 1/4000 - 1/30 ಸೆಕೆಂಡುಗಳು. ಬಲ್ಬ್ ಮೋಡ್ ಆಯ್ಕೆ ಕೂಡ ಇದೆ.
*ಐ.ಎಸ್.ಒ: 100 - 1600, 3200, 6400
*ಇಷ್ಟೆಲ್ಲ ವಿಶೇಷತೆಗಳಿರುವ ನಿಕಾನ್ ಕೂಲ್‌ಪಿಕ್ಸ್ ಪಿ 1000 ಕ್ಯಾಮೆರಾದ ಬೆಲೆ ₹50 ಸಾವಿರದ ಆಸುಪಾಸಿನಲ್ಲಿರಬಹುದೆಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.