ADVERTISEMENT

ಅಂಗೈ ಅಂದಕೆ...

ಪವಿತ್ರಾ
Published 2 ಜನವರಿ 2015, 19:30 IST
Last Updated 2 ಜನವರಿ 2015, 19:30 IST

ಸೌಂದರ್ಯ ಎಂದರೆ ಮುಖದ ಸೌಂದರ್ಯ ಮಾತ್ರವಲ್ಲ. ದೇಹದ ಎಲ್ಲ ಅಂಗಾಂಗಗಳೂ ಸುಂದರವಾಗಿರುವುದು ಅಷ್ಟೇ ಮುಖ್ಯ. ದೇಹದ ಪ್ರತಿಯೊಂದು ಅಂಗಾಂಗಗಳಿಗೆ ಪ್ರತ್ಯೇಕ ಆರೈಕೆಯ ಅಗತ್ಯವಿದೆ. ಕಾಲಿನಷ್ಟೇ ಕೈಯ ಕಾಳಜಿಯೂ ಮಾಡಬೇಕಾಗುತ್ತದೆ.

ಇಂದು ಕೈಯ ಆರೈಕೆಗಾಗಿ ಬೇರೆ ಬೇರೆ ರೀತಿಯ ಮೆನಿಕ್ಯೂರ್‌ಗಳು ಸೆಲೂನ್‌ನಲ್ಲಿವೆ. ಇದರ ನೈಲ್ ಆರ್ಟ್ ಕೂಡ ಚಾಲ್ತಿಯಲ್ಲಿವೆ. ಸ್ಮೈಲಿ, ಲವ್ ಸಿಂಬಲ್, ಹೂವಿನ ಚಿತ್ತಾರ ಮಾಡುವುದಲ್ಲದೇ, ಉಡುಪಿಗೆ ತಕ್ಕ ವಿವಿಧ ಬಣ್ಣದ ಉಗುರು ಬಣ್ಣವನ್ನು ಬಳಸುವುದು ಈಗಿನ ಟ್ರೆಂಡ್ ಆಗಿದೆ.

ಮನೆ ಕೆಲಸ, ಕಂಪ್ಯೂಟರ್ ಕೀಲಿಮಣೆ ಮೇಲೆ ಓಡುವ ಬೆರಳು, ಆಗಾಗ ಸಂಗಾತಿ, ಸ್ನೇಹಿತರಿಗೆ ಸಂದೇಶ ಕಳುಹಿಸುವುದು ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ನಮ್ಮ ಕೈ ಬ್ಯುಸಿ ಆಗಿರುತ್ತದೆ. ಅವುಗಳಿಗೂ ಒಂದಷ್ಟು ಪ್ರೀತಿಯ ಆರೈಕೆ ಬೇಕಾಗುತ್ತದೆ. ದಣಿದ ಬೆರಳುಗಳ ಆರೈಕೆಗೆ ಬೇಕಾಗಿರುವ ಮೆನಿಕ್ಯೂರ್‌ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಮೆನಿಕ್ಯೂರ್ ಉಪಯೋಗ
* ನಿಯಮಿತವಾಗಿ ಮೆನಿಕ್ಯೂರ್ ಮಾಡಿಕೊಳ್ಳುವುದರಿಂದ ಉಗುರು ಸುತ್ತು ಆಗುವುದನ್ನು  ಕಡಿಮೆ ಮಾಡಿಕೊಳ್ಳಬಹುದು.
* ಕ್ರೀಮ್‌ನಿಂದ ಮಸಾಜ್ ಮಾಡುವುದರಿಂದ ಬೆರಳುಗಳ ರಕ್ತ ಸಂಚಲನಕ್ಕೆ  ಸಹಾಯವಾಗುತ್ತದೆ. ಕೈ ಚರ್ಮ ಮೃದುವಾಗುವುದರ ಜತೆಗೆ ಆರೋಗ್ಯಯುತವಾಗಿ  ಕಂಗೊಳಿಸುತ್ತದೆ.
* ಮೆನಿಕ್ಯೂರ್‌ನಲ್ಲಿ ಬೇಸ್ ಮತ್ತು ಟಾಪ್ ಕೋಟ್‌ಗಳು ಅತ್ಯಗತ್ಯ ಪಾಲಿಷ್  ಹಚ್ಚಿಕೊಳ್ಳುವುದರಿಂದ ಉಗುರುಗಳನ್ನು ಉತ್ತಮ ಸ್ಥಿತಿಯಲ್ಲಿಡಬಹುದು. ಆದ್ದರಿಂದ  ಯಾವಾಗಲೂ ಗುಣ ಮಟ್ಟದ ಪಾಲಿಷ್ ಹಚ್ಚುವುದನ್ನು ಮರೆಯದಿರಿ.

 ನೀವೂ ಮಾಡಿ

* ಉಗುರುಗಳನ್ನು ಕಚ್ಚುವುದನ್ನು ಮೊದಲು ನಿಲ್ಲಿಸಿ. ಉಗುರುಗಳನ್ನು ಕಚ್ಚುವುದು ಅಥವ  ಉಗುರಿನ ಹಿಂದೆ ಸೇರಿದ ಕೊಳೆಯನ್ನು ಒರಟಾಗಿ ಕ್ಲೀನ್ ಮಾಡಲು ಹೋದರೆ ಅದರಿಂದ  ಉಗುರಿನ ತುದಿಗಳ ಮೇಲೆ ಒತ್ತಡವುಂಟಾಗಿ ಮುರಿಯುವ ಸಾಧ್ಯತೆ ಇರುತ್ತದೆ.
* ಏನನ್ನಾದರೂ ಸ್ವಚ್ಛ ಮಾಡಬೇಕಾದಾಗ ಯಾವಾಗಲೂ ರಬ್ಬರ್ ಗ್ಲೌಸ್ಗಳನ್ನು ಹಾಕಿಕೊಳ್ಳಿ.
* ನೀರಿನಿಂದ ಒದ್ದೆಯಾದ ಉಗುರಿನ ಬಗ್ಗೆ ಕಾಳಜಿ ವಹಿಸಿ. ನೀವು ಹೆಚ್ಚು ಹೊತ್ತು  ನೀರಿನಲ್ಲಿದ್ದಾಗ ಉಗುರುಗಳು ದುರ್ಬಲ ಆಗುತ್ತವೆ. ಏಕೆಂದರೆ ಉಗುರುಗಳು ನೀರನ್ನು    ಹೀರಿಕೊಳ್ಳುತ್ತವೆ. ಆದ್ದರಿಂದ ಸ್ನಾನ ಮಾಡಿದ ನಂತರ ಅಥವಾ ನೀರನ್ನು ಬಳಸಿ ಕೆಲಸ  ಮಾಡಿದ ನಂತರ ಕೈ ಬೆರಳನ್ನು ಮೃದುವಾದ ಬಟ್ಟೆಯಿಂದ ಒರೆಸಿರಿ.
* ಹೆಚ್ಚು ಹೆಚ್ಚು ಪೋಷಕಾಂಶ ಇರುವ ಆಹಾರ ಸೇವಿಸಿ. ಸಮತೋಲನ ಡಯೆಟ್ ಮತ್ತು  ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಬಹುದು.
* ವಾರಕ್ಕೆ ಮೂರು ಬಾರಿ ತುಸು ಬಿಸಿ ನೀರಿನಲ್ಲಿ ಉಗುರುಗಳನ್ನು ಅದ್ದಿ ಹಾಗೇ ಮಸಾಜ್  ಮಾಡಿಕೊಳ್ಳಿ.
* ಮಲಗುವಾಗ ಬೆರಳುಗಳಿಗೆ ಸ್ವಲ್ಪ ಎಣ್ಣೆ ಸವರಿಕೊಂಡು ಮಲಗಿದರೆ ಉಗುರುಗಳು  ನೈಸರ್ಗಿಕವಾಗಿ ಹೊಳಪು ಪಡೆಯುತ್ತದೆ.
* ನಿಂಬೆಸಿಪ್ಪೆಯಿಂದ ಉಗುರು ಮತ್ತು ಉಗುರಿನ ಸುತ್ತಲ ಚರ್ಮವನ್ನು ಚೆನ್ನಾಗಿ ಮಸಾಜ್  ಮಾಡಿಕೊಳ್ಳಬೇಕು. ಇದು ಉಗುರು ಹಳದಿ ಬಣ್ಣಕ್ಕೆ ತಿರುಗುವುದನ್ನೂ ತಡೆಯುತ್ತದೆ.
* ನಿಂಬೆರಸದೊಂದಿಗೆ ಆಲಿವ್ ಎಣ್ಣೆ ಬೆರೆಸಿ ಮಸಾಜ್ ಮಾಡಿಕೊಂಡರೆ ಬೆರಳುಗಳು  ಮಾತ್ರವಲ್ಲ, ಕೈಗಳೂ ಸುಂದರವಾಗುತ್ತದೆ.

ಯಾವಾಗಲೂ ನೈಲ್ ಪಾಲಿಶ್‌ ಬೇಡ

ತಿಂಗಳಿಗೆ ಎರಡು ಬಾರಿಯಾದರೂ ನಿಮ್ಮ ಕೈಗಳಿಗೆ ಆರೈಕೆ ಮಾಡಿ.  ಉಗುರುಗಳು ಶುದ್ಧತೆ ಮತ್ತು ಸೌಂದರ್ಯದ ಸಂಕೇತ. ಆದ್ದರಿಂದ ಉಗುರುಗಳನ್ನು ಸುಂದರವಾಗಿಟ್ಟುಕೊಳ್ಳುವುದು ತುಂಬ ಮುಖ್ಯ. ಮೆನಿಕ್ಯೂರ್ ಆಕರ್ಷಕ ಉಗುರು ಪಡೆಯಲು ಸಹಾಯ ಮಾಡುತ್ತೆ.
ಈಗ ಫ್ರೆಂಚ್ ಮೆನಿಕ್ಯೂರ್ ಜನ ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ನೈಲ್ ಆರ್ಟ್ ಕೂಡ ಇದೆ. ಮದುವೆ ಅಥವಾ ಪಾರ್ಟಿ ಸಂದರ್ಭದಲ್ಲಿ ಇದನ್ನು ಮಾಡಿಸಿಕೊಂಡರೆ ತುಂಬ ಚೆನ್ನಾಗಿ ಕಾಣುವಿರಿ. ಯಾವಾಗಲೂ ನೈಲ್ ಪಾಲಿಶ್ ಹಾಕಿಕೊಳ್ಳಬೇಡಿ. ಇದು ಉಗುರುಗಳನ್ನು ಒಳಗಿನಿಂದಲೇ ಒಣಗುವಂತೆ ಮಾಡುತ್ತದೆ. ಹಾಗೆಯೇ ನೈಲ್ ಪಾಲಿಶ್ ಬ್ರಾಂಡ್ಗಳನ್ನೂ ಬದಲಿಸಬೇಡಿ.
–ರೋಗರ್, ಗ್ರೀನ್‌ಟ್ರೆಂಡ್ ಸಲೂನ್ ಬ್ಯೂಟಿ ತಜ್ಞ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.