ADVERTISEMENT

ಅಪರೂಪವಾಗುವ ಅಮ್ಮ ಅತಿಥಿಯಾಗುವ ಅಪ್ಪ

ಮದುವೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಜೂನ್ 2017, 19:30 IST
Last Updated 30 ಜೂನ್ 2017, 19:30 IST
ಅಪರೂಪವಾಗುವ ಅಮ್ಮ ಅತಿಥಿಯಾಗುವ ಅಪ್ಪ
ಅಪರೂಪವಾಗುವ ಅಮ್ಮ ಅತಿಥಿಯಾಗುವ ಅಪ್ಪ   

ನಾವಿಬ್ಬರೂ ಕುಳಿತು ಹೆಣೆದ ಕನಸದು; ಕೈ ಬೆರೆಳುಗಳ ಹೊಸೆದು ಆಕಾಶದಲ್ಲಿ ಚಿತ್ರ ಬರೆದು ಕಲ್ಪಿಸಿಕೊಂಡ ಬದುಕು. ಹಲವು ವರ್ಷದ ಸ್ನೇಹ, ಪ್ರೀತಿ ಇನ್ನೂ ಬಲವಾದ ಬಂಧವಾಗಲಿದೆ ಎಂದು ಸಂಭ್ರಮಿಸಿದ್ದ ಕ್ಷಣವದು. ಗೆಳೆಯ ಗೆಳತಿಯರಾಗಿ ಕಾಣಿಸಿಕೊಳ್ಳುತ್ತಿದ್ದ ನಾವು ಈಗ ಗಂಡ-ಹೆಂಡತಿಯರಾಗಲಿದ್ದೇವೆ. ಬಂಧಗಳ ಹೆಸರೇನಾದರೇನು ನಮ್ಮ ನಡುವಿನ ಭಾವಗಳ ವಿನಿಮಯಕ್ಕೆ ಅಂದುಕೊಂಡವರು. ಎಲ್ಲವೂ ಹಾಗೇಯೇ ಇತ್ತು – ಮದುವೆಯಾದಮೇಲೂ ಸಹ. ಅವನೂ ಹಾಗೇ ಇದ್ದ; ಅದೇ ಪ್ರೀತಿ, ಕಾಳಜಿ, ಕೀಟಲೆ. ಕಳೆದು ಹೋದವಳು ಮಾತ್ರ ನಾನು.

ನನ್ನವನ ಮನೆಗೆ ಬಂದಮೇಲೂ ನಾನಂದುಕೊಂಡದ್ದು ಹೀಗೆ: ಇಷ್ಟು ವರ್ಷ ಕಾಲೇಜು, ಕೆಲಸ ಅಂತ ಹೊರಗಿರುತ್ತಿದ್ದೆ; ಇದೂ ಹಾಗೆ, ಬೇಕೆಂದಾಗ ಹೋಗಿ ಬರಬಹುದು ಎಂದು. ಆದರೆ ಪ್ರತಿ ಬಾರಿ ಊರಿಂದ ಹೋಗುವಾಗ ಕಳಿಸುವಂತೆ ಈಗ ನನನ್ನು ಕಳಿಸುತ್ತಿಲ್ಲ; ಕುಂಕುಮ, ಸಣ್ಣ ಉಡುಗೊರೆ – ಹೀಗೆ ಸಣ್ಣ ಬದಲಾವಣೆಗಳು. ಮೊದಲೆಲ್ಲ ಮನೆಗೆ ಬಂದರೆ ಬೇಕೆಂದಾಗ ಗೆಳೆಯರೊಡನೆ ಸುತ್ತಲು ಸಿಟಿಗೆ ಹೋಗುತ್ತಿದ್ದೆ, ಡಬ್ಬದಲ್ಲಿನ ಹಣವನ್ನ ಆರಾಮಾಗಿ ತೆಗೆದುಕೋಳ್ಳುತ್ತಿದ್ದೆ. ಅಮ್ಮನೊಡನೆ ಶಾಪಿಂಗ್ ಹೋಗಿ ಹಟಮಾಡಿ ಬೇಕಿದ್ದನ್ನೆಲ್ಲ ಕೇಳಿ ಪಡೆಯುತ್ತಿದ್ದೆ. ತಿಂಗಳಿಗೆ ಮುಂಚೆಯೇ ಅಪ್ಪನೊಡನೆ ಜಗಳವಾಡಿ ಬರ್ತ್‌–ಡೇಗೆ ಡ್ರೆಸ್ ಕೊಡಿಸಿಕೊಳ್ಳುತ್ತಿದ್ದೆ. ನಾನೇ ದುಡಿಯುವಂತಾದರೂ ಹಾಗೆಯೇ ಪೀಡಿಸುತ್ತಿದ್ದ ನನಗೆ ಮದುವೆಯಾದ ಮೇಲೆ ಶಾಪಿಂಗ್‌ನಲ್ಲಿ ನನ್ನ ಮತ್ತು ಅಮ್ಮನ ಅಕೌಂಟ್ ಮೆಲ್ಲನೆ ಬದಲಾಗಿದ್ದು ತಿಳಿಯಲೇ ಇಲ್ಲ. ಈ ಸಣ್ಣ ಬದಲಾವಣೆಗಳೇ ಕುಗ್ಗಿಸುತ್ತಿವೆ ನನ್ನನ್ನು, ‘ನಾನೇನು ಹೊರಗಿನವಳೇ’ ಎಂದು ಕಿರುಚುವಂತೆ ಮಾಡುತ್ತಿವೆ.

ಈಗಲೂ ಅಪ್ಪ–ಅಮ್ಮನನ್ನು ನಾನಿರುವ ಮನೆಗೆ ಬನ್ನಿ ಅಂತ ಕರೆಯೋಲ್ಲ ನಾನು. ನನಗೆ ಮನೆಗಳು ಬೇರೆ ಎನ್ನುವುದು ಗೊತ್ತಷ್ಟೆ. ಆದರೆ ಆ ರೀತಿ ಕರೆದು ನನ್ನಪ್ಪ, ಅಮ್ಮನನ್ನು ಅತಿಥಿಗಳನ್ನಾಗಿಸಲು ನನಗಿಷ್ಟವಿಲ್ಲ. ನೋಡಬೇಕೆನಿಸಿದಾಗ ಬರಲಿ, ನಾನೂ ಹೋಗುತ್ತೇನೆ; ಕರೆದು ಹೇಳಲು ಬಂಧುಗಳಲ್ಲ ಅವರು. ಮದುವೆಗೆ ಮುಂಚಿನ ನನ್ನಾಪ್ತ ಬಂಧುಗಳಾರನ್ನೂ ನಾನು ಮನೆಗೆ ಕರೆಯೋಲ್ಲ. ಹಾಗೆ ಕರೆದರೆ ನನ್ನ ಮನಸ್ಸಿಗೆ ಅವರು ಹೊರಗಿನವರೆಂಬ ಭಾವ ಬರುತ್ತದೆ. ಇಷ್ಟು ದಿನ ಹೇಗಿತ್ತೋ, ಈಗಲೂ ಹಾಗೆ ಇರಬೇಕೆಂಬ ಹಂಬಲ ನನ್ನದು. ಯಾವುದಾದರೂ ಸಮಾರಂಭಕ್ಕೆ ಹೋದರೆ, ಅಲ್ಲಿಗೆ ಅಪ್ಪ–ಅಮ್ಮನೂ ಬಂದಿದ್ದರೆ, ‘ನಮ್ಮ ಫ್ಯಾಮಿಲಿ ಫೋಟೊದಲ್ಲಿ ಅವರಿಲ್ಲ ಯಾಕೆ? ನಾವೇನು ಬೇರೆ ಬೇರೆಯೇ?’ – ಇಂತಹ ಚೌಕಟ್ಟುಗಳು ನಮ್ಮ ಇಂದಿನ ಪೀಳಿಗೆಯ ಹುಡುಗಿಯರಿಗೆ ಕಟುವಾಗಿ ಕಾಣುತ್ತಿವೆ.

ADVERTISEMENT

ಈಗ ನನ್ನೊಳಗೆ ಮೂಡುತ್ತಿರುವ ಭಾವಗಳು ಎಲ್ಲ ಹುಡುಗಿಯರಿಗೂ ಬರುತ್ತದೆಯೇ? ನನ್ನ ಸುತ್ತಲಿನ ಕೆಲವು ಸಾಂಪ್ರದಾಯಿಕ ಹೆಣ್ಣುಗಳಂತೂ ‘ಇವಾವುದೂ ಒಂದು ವಿಷಯವೇ ಅಲ್ಲ; ಎಲ್ಲ ಹುಡುಗಿಯರ ಬಾಳಿನಲ್ಲಿ ಇವು ಸಾಮಾನ್ಯ’ ಎನ್ನುವಂತೆ ಇರುತ್ತಾರೆ. ಅವರಿಗೂ ಹಾಗನಿಸಿಲ್ಲವೇ? ಭಾವನೆಗಳೇ ಇಲ್ಲವೇ? ಅಥವಾ ಅಂಥ ಬಾಂಧವ್ಯವೇ ಅಪ್ಪ–ಅಮ್ಮಂದಿರ ಜೊತೆ ಇರಲಿಲ್ಲವೆ? ಗೊತ್ತಿಲ್ಲ! ಆದರೆ ಇಂದಿನ ಕಾಲದ ಹುಡುಗಿಯರು ನಾವು,  ಹೆತ್ತವರಿಗೆ ಒಬ್ಬರು ಅಥವಾ ಇಬ್ಬರು ಮಕ್ಕಳೇ ಇರುವ ಕಾರಣ ಹೆಚ್ಚಿನ ನಂಟು ನಮಗೆ ನಮ್ಮವರ ಜೊತೆ ಬರುವುದಕ್ಕೆ ಸಾಧ್ಯವೇ ಇಲ್ಲವೇನೋ? ಎಲ್ಲದಕ್ಕೂ ಸಮಯ ಬೇಕು. ಬದಲಾವಣೆಗಳಿಗೆ ಹೊಂದಿಕೊಳ್ಳಲು ನೆರವಾಗುವ, ಸಮಯ ನೀಡುವ ಸಂಗಾತಿ ಸಿಕ್ಕರೆ ಅದು ಅದೃಷ್ಟವೇ ಸರಿ.

ಈ ಬಾರಿ ನಿರ್ಧರಿಸಿದ್ದೇನೆ - ಮನೆಗೆ ಹೋಗಿ ಬರುವಾಗ ತಾತ, ಅಜ್ಜಿಯ ಸಮೇತ ಎಲ್ಲರಿಗೂ ಹೇಳಬೇಕು, ’ತಿರುಗಿ ಹೋಗುವಾಗ ನನಗೇನೂ ಕೊಡಬೇಡಿ; ನನಗೆ ಬೇಕಾದ ತಿಂಡಿಯನ್ನ ನಾನೇ ಕೇಳಿ ಮಾಡಿಸಿಕೊಳ್ಳುತ್ತೇನೆ; ಬೇಕಾದ ವಸ್ತುವನ್ನ ಕೇಳಿ ಪಡೆದುಕೊಳ್ಳುತ್ತೇನೆ; ನನಗೆ ಮೊದಲಿನ ನನ್ನ ಸ್ವಾತಂತ್ರ್ಯವನ್ನ ನೀಡಿ; ನನ್ನ ಪಾಡಿಗೇ ಬಿಡಿ. ನಿಮ್ಮ ಹಳೆಯ ಸಂಪ್ರದಾಯಗಳ ಹೆಸರಲ್ಲಿ ನನ್ನನ್ನ ಹೊರಗಿನವಳಾಗಿ ಮಾಡಬೇಡಿ’ ಎಂದು. ಇವೆಲ್ಲವೂ ಅವನಿಗೆ ಅರ್ಥವಾಗುತ್ತಿದೆ. ನನ್ನೊಳಗೆ ನಡೆದಿರುವ ಯುದ್ವೂಧ ತಿಳಿಯುತ್ತಿದೆ. ‘ನಿನಗೆ ಹೇಗೆ ಬೇಕೋ ಹಾಗಿರು’ ಎಂದು ನನ್ನೊಡನೆ ನಿಂತಿದ್ದಾನೆ.

ಇವೆಲ್ಲ ಕೇಳಿದರೆ ‘ಈಗಿನ ಕಾಲದವರೇ ಹೀಗೆ – ಏನೂ ಅರ್ಥ ಮಾಡಿಕೊಳ್ಳಲ್ಲ, ಸಂಪ್ರದಾಯ–ಪದ್ಧತಿಗಳಿಗೆ ಬೆಲೆಯೇ ನೀಡೊಲ್ಲ’ ಎಂದು ನಿಮಗೆ ಎನಿಸಬಹುದು. ನಾವು ಎಲ್ಲ ಸಂಪ್ರದಾಯಗಳಿಗೂ ಹಿನ್ನೆಲೆಯನ್ನು ಹುಡುಕುತ್ತೇವಷ್ಟೆ, ಅವನ್ನು ವಿರೋಧಿಸುವುದಿಲ್ಲ; ಸಂಪ್ರದಾಯಗಳು ಬಾಂಧವ್ಯಗಳನ್ನು ಗಟ್ಟಿಗೊಳಿಸಬೇಕು, ಸಡಿಲಿಸಬಾರದು ಎನ್ನುವವರು.

ನೂತನರಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.