ADVERTISEMENT

ಅಪ್ಪ ಎಂಬ ಬದುಕಿನ ಸಡಗರ

ನಿನ್ನಂಥ ಅಪ್ಪ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ಅಪ್ಪ ಎಂಬ ಬದುಕಿನ ಸಡಗರ
ಅಪ್ಪ ಎಂಬ ಬದುಕಿನ ಸಡಗರ   

‘ಅಪ್ಪ ಎಷ್ಟು ಮುಗ್ಧನೆಂದರೆ ಯಾವ ಕಪಟವನ್ನೂ ಅರಿಯದವನು. ಪರರು ಹಾಗಿರಬಹುದೆಂದೂ ಕಲ್ಪಸಲಾರನು. ಅತೀ ಚಿಕ್ಕ ಸಂತಸಕ್ಕೂ ಹೃದಯದುಂಬಿ ನಗುವನು. ಸಣ್ಣ  ನೋವು ನಿರಾಶೆಗಳಿಗೂ ಆಕಾಶವೇ  ಕಳಚಿ ಬಿದ್ದಂತೆ ಒದ್ದಾಡುವನು. ಆದರೆ ನನಗೆ ತಿಳಿವಳಿಕೆ ಬಂದಂತೆ, ಅಸಹನೀಯವಾದ ಆಘಾತಗಳಿಂದ ಜರ್ಜರಿತನಾಗುತ್ತ, ಸಾವಿನ ಸಮೀಪದ ದಿನಗಳಲ್ಲಿ ಒಬ್ಬ ಸಂತನೇ ಆಗಿದ್ದ’ ಎನ್ನುವ ಲೇಖಕಿ ಶಶಿಕಲಾ ವೀರಯ್ಯ ಸ್ವಾಮಿ ವಸ್ತ್ರದ ಅವರು ತಮ್ಮ ತಂದೆಯ ಜೊತೆಗಿನ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

***
ಬಾಳ ಸಂಪುಟದಲ್ಲಿ
ಬಾಲ್ಯವೆಂಬುದು ಒಂದು
ಅಳಿಸಲಾರದ ಮಧುರ ಭಾವಗೀತೆ
– ಚೆನ್ನವೀರ ಕಣವಿ

ಈ ಭಾವಗೀತೆಯನ್ನು ರಸಗೀತೆಯಾಗಿಸುವಲ್ಲಿ ಅಪ್ಪನ ಪಾಲು ಬಹು ದೊಡ್ಡದಿತ್ತು. ಅಪ್ಪ ನನ್ನ ಬಾಲ್ಯವನ್ನು ಸಮೃದ್ಧಿಗೊಳಿಸಿದ್ದ. ನನ್ನಿಡೀ ಮನೋಲೋಕದ ಚೇತನಕ್ಕೆ ಅಪ್ಪ ಜೀವಸೆಲೆಯಾಗಿದ್ದ. ಜೀವದ್ರವವಾಗಿದ್ದ.

ಐದು ಜನ ಹೆಣ್ಣುಮಕ್ಕಳು, ಮೂರು ಜನ ಗಂಡುಮಕ್ಕಳನ್ನು ಪಡೆದ ಅಪ್ಪ ತುಂಬು ಸಂಸಾರಿ, ಮಮತಾಮಯಿ. ತಾಯ್ತನ ಕೇವಲ ಹೆಣ್ಣುಮಕ್ಕಳ ಸೊತ್ತಲ್ಲ ಎಂದು ನಾನು ಅನುಭವಿಸಿದ್ದು ಕುಟುಂಬವತ್ಸಲನಾದ ಅಪ್ಪನ ಆರ್ದ್ರ ಅಂತಃಕರಣದಲ್ಲಿ ಮಿಂದಾಗ. ಅವ್ವ–ಅಪ್ಪ ಶಿಕ್ಷಕರಾಗಿದ್ದರು.

ಇದ್ದೂರಲ್ಲೇ ನೌಕರಿ ಇತ್ತು. ಸ್ವಂತ ಮನೆ ಇತ್ತು. ವರ್ಷಕ್ಕೆ ಸಾಕಾಗಿ ಉಳಿಯುವಷ್ಟು ಬೆಳೆ ಬರುವ ಎರಡು ಹೊಲಗಳಿದ್ದವು. ಇವೆಲ್ಲಕ್ಕಿಂತ ಹೆಚ್ಚಾಗಿ ಅಪ್ಪನ ಹೃದಯ ಶ್ರೀಮಂತವಾಗಿತ್ತು. ಇನ್ನೂ ಎಂಟು ಜನ ಮಕ್ಕಳಾದರೂ ಹುರುಪಿನಿಂದ ಬೆಳೆಸುವಷ್ಟು ಅಕ್ಷಯ ವಾತ್ಸಲ್ಯ ಅಪ್ಪನಲ್ಲಿತ್ತು.

ಬದುಕಿನ ಕಟುವಾಸ್ತವಗಳ ಮಧ್ಯೆಯೂ ಜೀವನೋತ್ಸಾಹ ಬತ್ತದಂತೆ ಬದುಕಿನ ಬಗ್ಗೆ ಬೆಚ್ಚನೆಯ ಪ್ರೀತಿಯನ್ನು ಕಳೆದುಕೊಳ್ಳದಂತೆ ಕಲಿಸಿದ್ದೇ ಅಪ್ಪನ ಆ ಮಾರ್ದವ ವ್ಯಕ್ತಿತ್ವ. ‘ನಿನ್ನಂಥ ಅಪ್ಪಾ ಇಲ್ಲಾ’ ಎಂಬ ಹಾಡು ಕೇಳಿದಾಗಲೆಲ್ಲ ನನ್ನ ಅಪ್ಪನಿಗಾಗೇ ಅದನ್ನು ರಚಿಸಿರಬೇಕೇನೋ ಅನಿಸುವುದು.

ಬಾಲ್ಯದಲ್ಲಿ ಅವನು ಮಕ್ಕಳನ್ನು  ಪ್ರೀತಿಸಿದ, ಲಾಲಿಸಿದ, ಪಾಲಿಸಿದ ಆ ಅಪೂರ್ವ ಚಿತ್ರಮಾಲೆಯೇ ಸಾಕು. ಹೊಕ್ಕುಳಲ್ಲಿ ಹೂ ಅರಳಿದಂಥ ಗಾಢ ವ್ಯಾಮೋಹದ ಮಮತೆಯನ್ನು ನಾವು ನಮ್ಮ ಮಕ್ಕಳಿಗೆ ನೀಡಲಾರೆವೇನೋ.

ಅಪ್ಪನ ವ್ಯಕ್ತಿತ್ವದಲ್ಲಿ ಎಂಥ ದೂರಾಲೋಚನೆ ಇತ್ತೆಂದರೆ,  ಎಲ್ಲ ಹೆಣ್ಣುಮಕ್ಕಳಿಗೂ 18 ತುಂಬುತ್ತಲೇ ಬೇಗ ಬೇಗ ಮದುವೆ ಮಾಡಿ ಮುಗಿಸಿದ. ಯಾವಾಗಲೂ ಬಾಯ್ತುಂಬ ನಗುತ್ತ, ನಮ್ಮೆಲ್ಲರನ್ನೂ ನಗಿಸುತ್ತ, ಮನೆಯನ್ನು ನಂದನವನವಾಗಿಸಿದ್ದ. ಕರ್ಮಯೋಗಿಯಂತಿದ್ದ ಅಪ್ಪ, ಒಂದೇ ಒಂದು ಗಳಿಗೆಯೂ ಸುಮ್ಮನೇ ಕುಳಿತ ಚಿತ್ರ ಇಂದಿಗೂ ನನ್ನ ನೆನಪಿಗೆ ಬರುತ್ತಿಲ್ಲ.

ಶಾಲೆ, ಅಲ್ಲಿಂದ ಮನೆಗೆ ಬಂದರೆ, ದೊಡ್ಡ ಕೊಡವನ್ನು ಹೆಗಲ ಮೇಲೆ ಹೊತ್ತು ಸೇದುವ ಬಾವಿಯಿಂದ ನೀರು ತರುವುದು, ಮಾಳಿಗೆಯ ಮೇಲಿನ ಹುಲ್ಲು ಕಿತ್ತು ಅದನ್ನು ವೇದಿಕೆಯಂತೆ ಸಾಪು ಮಾಡುವದು, ಅಟ್ಟವನ್ನು ಜೋಡಿಸುವುದು, ಸುಣ್ಣದ ಗೋಡೆಯನ್ನು ಮೆತ್ತುವುದು, ಮನೆಯಲ್ಲಿದ್ದ ಆಕಳ–ಕರುಗಳ ಉಪಚಾರ, ಸಕಾಲಕ್ಕೆ ಊಟ, ಅದೂ ನಿಯಮಿತ ಆಹಾರ, ನಿಯಮಿತ ಸಮಯಕ್ಕೆ ನಿಗದಿತ ನಿದ್ದೆ.

ಎದ್ದು ಮಧ್ಯಾಹ್ನದ ಶಾಲೆ. ಸಾಯಂಕಾಲ ಶಾಲೆಯಿಂದ ಬಂದು ಹತ್ತಿರದಲ್ಲಿದ್ದ ಹೊಲದ ಕಡೆಗೆ ಹೋಗಿ ಬರುವನು ಇಲ್ಲವಾದರೆ ಒಂದು ವಾಕಿಂಗು. ದಿನವೂ ಬಜಾರಿಗೆ ಹೋಗಿ ನಮ್ಮ ಗೋಪಿಗೆ ಹುಲ್ಲಿನ ಹೊರೆಯನ್ನು ಹೊರಿಸಿಕೊಂಡು ಬರುವನು. ಈ ಗೋಪಿ, ಸಣ್ಣ ಕರುವಾಗಿದ್ದಾಗ ಅಪ್ಪನೊಂದಿಗೇ ಜಾಸ್ತಿ ಇರುತ್ತಿತ್ತು. ಹೀಗೆ ಮೊದಲ ಪಾಠ ಕಲಿಸಿದ್ದೇನೆಂದರೆ ಒಂದರೆ ಕ್ಷಣವೂ ಬಿಡುವಿಲ್ಲದೇ ಕೆಲಸದಲ್ಲಿ ನಿರತರಾಗಬೇಕು ಎನ್ನುವುದು.

ಶಿಸ್ತಿನ ಶಿಪಾಯಿ ಅಪ್ಪ, ಶಾಲೆಯ ಹೆಡ್‌ಮಾಸ್ತರ ಆಗಿದ್ದಾಗ ಅವ್ವ ಅಲ್ಲೇ ಶಿಕ್ಷಕಿ. ಒಮ್ಮೆ ಅವ್ವ ಶಾಲೆಗೆ ತಡಮಾಡಿ ಹೋದಾಗ ಹೊರಗೇ ನಿಲ್ಲಿಸಿದ್ದನಂತೆ. ‘ಹೇಣ್ತಿ ಇದ್ರ ಮನ್ಯಾಗ, ಇಲ್ಲಿ ಮಾತ್ರ ನೀನೂ ಎಲ್ಲಾರಂಗ ಶಿಸ್ತ ಪಾಲಿಸಬೇಕು’ ಅಂದನಂತೆ.

ಪ್ರಾಮಾಣಿಕತೆ–ಅಲ್ಪ ತೃಪ್ತಿ ಅವನ ವ್ಯಕ್ತಿತ್ವದ ಭಾಗಗಳಾಗಿದ್ದವು. ಅಪ್ಪ, ತನಗೆ ಬರಬೇಕಾದ ನೆಲವನ್ನು ತನ್ನ ಚಿಕ್ಕಪ್ಪ ಮೋಸ ಮಾಡಿದಾಗಲೂ ನೊಂದುಕೊಂಡು ಸಹಿಸಿಕೊಂಡವನು. ಎಷ್ಟು ಮುಗ್ಧನೆಂದರೆ ಎಲ್ಲರನ್ನೂ ನಂಬುವನು. ಕಪಟವನ್ನು ಕಲ್ಪಿಸಿಯೂ ಅರಿಯನು. 

ಸುಳ್ಳು ಹೇಳುವುದೆಂದರೆ ಪಾಪ ಮಾಡಿದಂತೆ, ಆತ್ಮಗೌರವಕ್ಕೇ ಅವಮಾನ ಮಾಡಿದಂತೆ, ಎದುರಿನವರನ್ನು ಮೋಸಗೊಳಿಸಿದಂತೆ ಎಂದು ಬದುಕಿದವನು. ಜೀವನೋತ್ಸಾಹ ಎಷ್ಟು ಉಕ್ಕುತ್ತಿತ್ತೆಂದರೆ, ಅದನ್ನು ಮಕ್ಕಳೂ ಅನುಭವಿಸಬೇಕು, ಬದುಕನ್ನು ಇಡಿಯಾಗಿ ಪ್ರೀತಿಸಬೇಕು ಎಂದು ಅದಕ್ಕಾಗಿ ಇಡೀ ಆಯುಷ್ಯವನ್ನು ತೇದವನು.

ನಮ್ಮ ಎರಡು ಹೊಲಗಳಲ್ಲಿ ಬ್ಯಾಕೋಡದ ಹೊಲವೂ ಒಂದು. ಇದು ಊರಿಂದ 2–3 ಕಿ.ಮೀ. ದೂರದಲ್ಲಿತ್ತು. ಅಲ್ಲಿ ಬೆಳೆಯುವ ಸೇಂಗಾ, ಹೆಸರು, ‘ತೊಗರಿಯ ಹಸಿಕಾಯಿಗಳನ್ನು ತಿನ್ನಲು ಆಶೆಯಾದರೆ, ನಾನು ಇಬ್ಬರು ತಂಗಿಯರು ತಯಾರು.

ಚಿಕ್ಕಂದಿನ ಉತ್ಸಾಹಕ್ಕೆ ಆ ದೂರ ದೂರವಲ್ಲ; ಆದರೂ ಮಕ್ಕಳು ನಡೆದರೆ ಕಾಲು ನೋಯುತ್ತವೆಂದು ಪಾಳಿಯ ಮೇಲೆ 8–6–4 ವರ್ಷಗಳ ನಮ್ಮನ್ನು ಹೆಗಲ ಮೇಲೆ ಹೊತ್ತಕೊಂಡು ಹೊಲಕ್ಕೆ ಕರೆದೊಯ್ಯುತ್ತಿದ್ದ. ಹೊಲದಲ್ಲಿ ನಾವು ತಿರುಗಾಡುವಾಗ ತಾನು ಮರದ ಕೆಳಗೆ ಕುಳಿತು ವಚನಗಳನ್ನು ಹಾಡುತ್ತಿದ್ದ. ಅಪ್ಪನಿಗೆ ಹಾರ್‍ಮೋನಿಯಂ ಬಾರಿಸಲು ಬಹಳ ಚನ್ನಾಗಿ ಬರುತ್ತಿತ್ತು. ನನಗೂ ಕಲಿಸುತ್ತಿದ್ದ. ಸಂಜೆಗಳಲ್ಲಿ ಕೊಳಲು ಬಾರಿಸುತ್ತ ಮಾಳಿಗೆಯ ಮೇಲೆ ಕುಳಿತರೆ ನಾವೆಲ್ಲಾ ಗೊಂಬೆಗಳು!

ತಾಲೂಕು ಕೇಂದ್ರವಾದ ನಮ್ಮೂರಿನಲ್ಲಿ ಜನವರಿ 26, ಆಗಸ್‌್ಟ–15, ನವೆಂಬರ–01 ರಂದು ಧ್ವಜವಂದನೆಗಳಾದರೆ, ನಾನು–ತಂಗಿ ಸುವರ್ಣಳೇ ‘ಜನಗಣಮನ’ ಹಾಡಲು ಧ್ವಜಕಟ್ಟೆಯ ಬಳಿ ಶಿಸ್ತಾಗಿ ನಿಲ್ಲುತ್ತಿದ್ದೆವು. ಹಾಡು ರಾಗಬದ್ಧವಾಗಿ ಬಂದರೆ ಸರಿ. ನಗು ನಗುತ್ತಾ ಮಾತನಾಡಿಸುವನು.

ಸ್ವಲ್ಪ ಬೇಸೂರಾದರೆ, ಹಾಡು ಮುಗಿದೊಡನೆ ಅಲ್ಲೇ ಬಂದು ‘ಬುದ್ಧಿ, ಎಲ್ಲಿಟ್ಮೇರೆವಾ? ಛಂದಗೆ ಹಾಡಾಕ ಏನಾಗೇದ ಧಾಡಿ?’ ಎನ್ನುವನು. ಗೆಳತಿಯರೆದುರು ಬೈಸಿಕೊಂಡೆವಲ್ಲ ಎಂದು ನಮಗೆ ಕಣ್ಣಂಚಿನಲ್ಲಿ ನೀರು! ‘ಇರ್ಲಿ ಬರ್ರಿ ಬರ್ರಿ ಮನಿಗ್ಹೋಗೂನು. ಛಂದಗೆ ಹಾಡಬೇಕವಾ ತಾಯದೇರs’ ಎಂದು ರಮಿಸುತ್ತ ಮನೆಗೆ ಕರೆದೊಯ್ಯುವನು. 

ನನಗೆ ಹಾರ್ಮೋನಿಯಂ ಕಲಿಸಲು ಒಬ್ಬರು ಅಂಧಮಾಸ್ತರರು ಮನೆಗೆ ಬರುತ್ತಿದ್ದರು. ತಿಂಗಳಿಗೆ ಐದು ರೂ. ಪಗಾರ ಅವರಿಗೆ. ಹೊಸರಾಗವನ್ನು ಬರೆಸುವಾಗ ಅವರು ‘ರಾಗಾ ಬರಕೋರಿ’ ಅಂದರು. ‘ತಲ ಕಾಂಬೋದರಿ’ ಅಂದು ‘ಆದಿತಾಳಂ’ ಎಂದು ಬರೆಸಿದರು. ಗುರುಗಳ ಮಗಳೆಂದು, ನನಗಿಂತ ದೊಡ್ಡವರಾಗಿದ್ದ ಅವರು ನನ್ನನ್ನು ಬಹುವಚನದಲ್ಲಿ ಸಂಬೋಧಿಸುತ್ತಿದ್ದರು. ರಾಗ–ತಾಳಗಳ ಕೊನೆಗೆ ಅವರು ರಿ–ರಿ ಸೇರಿಸಿದ್ದನ್ನು ಹಾಗೇ ಬರೆದುಕೊಂಡಿದ್ದನ್ನು ತೋರಿಸಿ ಅಪ್ಪನಿಂದ ಬೈಸಿಕೊಂಡಿದ್ದೆ.

ADVERTISEMENT

ಪೇಟಿ ಗುರುಗಳಿಗೆ ಅಪ್ಪ, ‘ಅಕಿ ನಿಮಗಿಂತ ಸಣ್ಣಾಕಿ, ಶಿಷ್ಯಳು, ಹಂಗೆಲ್ಲಾ ಬಹುವಚನದಾಗ ಮಾತಾಡಿಸಬಾರದು’ ಎಂದು ತಾಕೀತು ಮಾಡಿದ. ಈ ಪೇಟಿ ಗುರುಗಳಿಗೆ ಎಲ್ಲ ಹಬ್ಬ–ಹುಣ್ಣಿವೆಗಳಲ್ಲಿ ನಮ್ಮಲ್ಲೇ ಊಟವಾಗುತ್ತಿತ್ತು. ಅಂಚೆಪೇದೆಯನ್ನು ಅಪ್ಪ ಊಟಕ್ಕೆ ಕರೆಯುತ್ತಿದ್ದ. ಒಮ್ಮೆ ಜಿಲ್ಲಾ ವಚನಗಾಯನ ಸ್ಪರ್ಧೆಯಲ್ಲಿ ನಾನು ಬಸವಣ್ಣನವರ ‘ತಂದೆ ನೀನು, ತಾಯಿ ನೀನು...’ ವಚನವನ್ನು ಚೂರೂ ತಾಳ ತಪ್ಪದಂತೆ ಪೇಟಿಯಲ್ಲಿ ಬಾರಿಸಿ ಹಾಡಿ ಪ್ರಥಮ ಬಂದಿದ್ದೆ.

ಅಪ್ಪನ ಹಿಗ್ಗು ಹೇಳತೀರದು. ‘ಯಾರಿಗೂ ಹೇಳಬ್ಯಾಡs– ತಾಯೀ’ ಅಂತ ಒಂದು ಪಾವಲಿ (25 ಪೈಸೆ) ಕೊಟ್ಟಿದ್ದ,  ಮುಚ್ಚಿ ನನಗದೇ ನಿಧಿಯಾಗಿತ್ತು. ಅದನ್ನು ಖರ್ಚು ಮಾಡದೇ ಬಹಳ ದಿನ ಉಳಿಸಿಕೊಂಡಿದ್ದೆ.

ನಮ್ಮೂರಲ್ಲಿ ಬಯಲಾಟಗಳು ಬಹಳ. ರಾತ್ರಿ 10–11ಕ್ಕೆ ಸುರುವಾದರೆ, ಬೆಳಗಿನ ಎಳೆಬಿಸಿಲು ಬೀಳುವವರೆಗೂ ಆಟ. ಮಕ್ಕಳಿಗೆ ಅದನ್ನು ತೋರಿಸುವ ಹುರುಪು ಅಪ್ಪನಿಗೆ. ಅಂದು ನಮ್ಮನ್ನು ರಾತ್ರಿ 9 ಘಂಟೆಗೇ ಮಲಗಿಸಿ ತಾನು ಮಾತ್ರ 11 ಘಂಟೆವರೆಗೆ ಎಚ್ಚರವಿದ್ದು ಆ ಮೇಲೆ ನಮ್ಮನ್ನೆಲ್ಲಾ ಎಬ್ಬಿಸಿ, ಚಳಿಗಾಲವಾಗಿದ್ದರೆ, ಎಲ್ಲರಿಗೂ ತಲೆಗೆ ಒಂದೊಂದು ಪಾವಡಾ ಕಟ್ಟಿ ಸ್ವೆಟರು ಹಾಕಿ, ಒಂದೆರಡು ಚಾದರು–ಜಮಖಾನಿ ಹಿಡಿದುಕೊಂಡು ಚಾವಡಿಗೋ, ಬಜಾರಿನ ಮುಖ್ಯ ಸ್ಥಳಕ್ಕೋ ಕರೆದೊಯ್ಯುವನು.

ಸಾಯಂಕಾಲವೇ ಬಂದು ತಾನು ಕಾದಿರಿಸಿದ ಎತ್ತರದ ಜಾಗದಲ್ಲಿ ಎಲ್ಲರನ್ನೂ ಕೂಡಿಸುವನು. ದ್ರೌಪದಿಯ ಸುಂದರ ಪಾತ್ರಧಾರಿ ವೇದಿಕೆಯ ಪಕ್ಕಕ್್ಕೆ ಬಂದು, ಸೀರೆಯನ್ನು ಮೇಲೇರಿಸಿ, ಒಳಚಡ್ಡಿಯ ಜೇಬಿನಲ್ಲಿರುವ ಬೀಡಿ ತೆಗೆದು ಸೇದುತ್ತ ಕಣ್ಣು ಮಿಚ್ಚಿದರೆ, ನಮಗೆಲ್ಲಾ ಪಿಸಿಪಿಸಿ ನಗು.

ಆಟದಲ್ಲಿ ಮೈಮರೆತು ನಾವು ರಾತ್ರಿ 2–3ರ ನಸುಕಿಗೆ ತೂಕಾಡಿಸುವಂತಾದರೆ, ಅಪ್ಪ ಆಟ ನೋಡುವದನ್ನು ಬಿಟ್ಟು, ನಮ್ಮನ್ನು ಎಬ್ಬಿಸಿ, ಮುಖ ತೊಳೆದು, ನೀರು ಕುಡಿಸಿ, ‘ಇನ್ನ ಮ್ಯಾಲೆ ರಾಕ್ಷಸಾ ಬರ್ತಾನಾ, ದೇವರು ಬರ್‍ತಾವು ಮಕ್ಕೋಬ್ಯಾಡ್ರಿ’ ಎಂದು ನಿದ್ದೆಗೆ ಜಾರದಂತೆ ಕುತೂಹಲವನ್ನು ಎಚ್ಚರಗೊಳಿಸುವನು.

ಸುರಾ–ಸುರರ ಬಗ್ಗೆ ಸಮಾನವಾದ ಭೀತಿ ಇದ್ದ ನಾವು ಕಣ್ಣುಬಿಟ್ಟುಕೊಂಡು ಕಾಯುವೆವು. ಆಟ ಮುಗಿಸಿ ಮನೆಗೆ ಬಂದು ಮಲಗಿದಾಗ ನಿದ್ದೆಯಲ್ಲೂ ಬಯಲಾಟದ ಪಾತ್ರಗಳು. ‘ಎಲೈ ಸಾರಥೀ, ದೂರ ನಿಲ್ಲು ಹೊಲಸು ನಾರುತೀ....’ ಎಲೈ ಅರಸೇ, ಮೂರು ಕಾಲಿನ ಹೊರಸೇ... ಇಂಥ ಸಂಭಾಷಣೆಗಳು ಮಾತ್ರ ಮರುದಿನ ನಮ್ಮ ಬಾಯಲ್ಲಿರುತ್ತಿದ್ದವು.

ನಮ್ಮೂರಿನಲ್ಲಿ ಹೆಣ್ಣುಮಕ್ಕಳು ದೊಡ್ಡವರಾದರೆ, ಗರ್ಭಿಣಿಯರಿಗೆ ಕುಬುಸದ (ಸೀಮಂತ) ಕಾರ್‍ಯಾ ಮಾಡಿದರೆ, ಸೀಗೀ– ಗೌರೀ ಹುಣ್ಣಿವೆಗಳಲ್ಲಿ; ಆರತಿಗೆಂದು ಹೆಣ್ಣುಮಕ್ಕಳು ಮನೆಗೆ ಕರೆಯಲು ಬಂದರೆ ಅಪ್ಪನಿಗೇ ಉಮೇದು ಜಾಸ್ತಿ.

‘ತಂಗಿದೇರs ಆರತೀಗಿ ಕರ್‍ಯಾಕ ಬಂದಾರಾ, ಲಗೂನಾ ಹೋಗಿ ಬರ್ರೆವಾ’ ಎಂದು ಕಳಿಸುವನು. ಅಲ್ಲಿ ಜಾನಪದ ಹಾಡುಗಳ ಸುಗ್ಗಿಯೋ ಸುಗ್ಗಿ. ಹಾಡುಗಾರರಲ್ಲಿ ಪೈಪೋಟಿ, ಎಂಥೆಂಥಾ ಹಾಡುಗಳು: ಹೆಣ್ಣಿನ ತವರಿನ ಹಂಬಲ, ತಾಯ್ತನದ ಉತ್ಕಟ ಆಕಾಂಕ್ಷೆ, ಸವತಿಯ ಕಾಟ, ಪತಿಯ ಔದಾಸೀನ್ಯ–ಪ್ರೀತಿಗಳು, ಅತ್ತೆಯ ಉಪಟಳ, ಬಸಿರಿಯ ಬಯಕೆಗಳು, ರಾಮಾಯಣ–ಮಹಾಭಾರತದ ಪ್ರಸಂಗಗಳು, ಹಬ್ಬದ ಆಚರಣೆಗಳು ಒಂದಕ್ಕಿಂತ ಒಂದು ರೋಚಕ, ಮನವನ್ನು  ಪುಲಕಿತಗೊಳಿಸುವಂಥವು.

ಆ ಕಿಶೋರಾವಸ್ಥೆಯಲ್ಲಿ: ಅತ್ಯಂತ ಮಾರ್ದವವಾದ; ಹದಕ್ಕೆ ತಕ್ಷಣ ಪಕ್ಕಾಗುವ ಆ ವಯಸ್ಸಿನಲ್ಲಿ, ನಾನು ಭಾವುಕಳಾಗಿ ಬೆಳೆದದ್ದು, ನನ್ನನ್ನು ರೂಪಿಸಿದ್ದು, ಕವಿತ್ವದ ಚೈತನ್ಯಕ್ಕೆ ಬೇರು ಬಿಡಿಸಿದ್ದು, ಈ ಎಲ್ಲಕ್ಕೆ ಮೂಲ ಸೆಲೆಯಾಗಿ ಈ ಹಾಡುಗಳು, ನಾಟಕ–ಬಯಲಾಟಗಲೇ ಇರಬೇಕೇನೋ ಎಂದು ನನಗೀಗಲೂ ಅನ್ನಿಸುವುದಿದೆ. 

***
ಅಪ್ಪನ ವ್ಯಕ್ತಿತ್ವದ ಮಾಧ್ಯಮ, ಅವನ ತುಂಬು ತಾಯ್ತನ ‘ತಾಯೀ’ – ‘ತಂಗೀ’ ಅನ್ನದೇ ಹೆಣ್ಣುಮಕ್ಕಳನ್ನೂ, ಬೇರೆ ಹೆಣ್ಣುಮಕ್ಕಳನ್ನೂ ಹಾಗೆ ಮಾತಾಡಿಸಿ ಗೊತ್ತೇ ಇಲ್ಲ. ಚಳಿಗಾಲದ ಬೆಳಗುಗಳಲ್ಲಿ ನಾವು ನಾಲ್ಕು ಜನ ಸಹೋದರಿಯರು (ಕೊನೆಯ ತಂಗಿ ಇನ್ನೂ ಚಿಕ್ಕದು) ಎದ್ದೊಡನೆ ಧಾವಿಸಿ ಅಡುಗೆ ಮನೆಗೋಡಿ ಹಂಡೆಯನ್ನು ಹೂತಿರುವ ದೊಡ್ಡ ಒಲೆಯ ಕಟ್ಟೆಯ ಮೇಲೆ ಎರಡೂ ಬದಿಗೆ ಇಬ್ಬರು, ಒಲೆಯ ಬದಿಗೆ ಇಬ್ಬರು, ಜಾಗ ಹಿಡಿಯುತ್ತಿದ್ದೆವು.

ಕೈಕಾಲುಗಳನ್ನು ಒಲೆಯ ಬಿಸಿಗೆ ಒಪ್ಪಿಸಿ ಅಂದು ನಮ – ನಮಗೆ ಬಿದ್ದ ಕನಸುಗಳನ್ನು ಹೇಳಿಕೊಳ್ಳುತ್ತ ಹರಟುತ್ತ ಆ ಥಂಡಿಯ ದಿನಗಳಲ್ಲಿ ಒಲೆಯೆದುರು ಮೈ ಕಾಸಿಕೊಳ್ಳುವ ಪರಮ ಸುಖದಲ್ಲಿ ಮೈ ಮರೆಯುತ್ತಿದ್ದೆವು.

ಅವ್ವ ಅದೇ ಸಮಯದಲ್ಲಿ ಜಬರಿಸಿ ಏನಾದರೂ ಕೆಲಸಕ್ಕೆ ಕರೆದರೆ, ಅಪ್ಪ, ‘ಇರ್ಲಿ ಬಿಡs ಥಂಡ್ಯಾಗೇನು ಕೆಲಸ ಮಾಡ್ತಾವು ಪಾಪ ..... ಸ್ವಲ್ಪ ಕಾಸಿಗೊಳ್ಳಿ, ನಾಳಿ ಗಂಡನ ಮನ್ಯಾಗ ಇದ್ದs   ಇರತೈತಲ್ಲ ಕೆಲಸ ಮಾಡೂದು’ ಅನ್ನುವನು. ಶಿವರಾತ್ರಿಯಂದು ನಾನು ಉಪವಾಸ ಮಾಡಿದರೆ ಇಡೀ ದಿನ ರಾಜೋಪಚಾರ.

‘ತಂಗಿದ್ಯಾರಿಗಿ ಏನೂ ಕೆಲಸ ಹಚ್ಚಬ್ಯಾಡಾ ಪಾಪಾs  ಇವತ್ತು, ಹನಿ ನೀರಿಲ್ಲದೇ ಉಪವಾಸ ಅದಾವು’ ಎಂದು ಅವ್ವನಿಗೆ; ‘ತಂಗಿದೇರ ಚಕ್ಕಾ (ಚೌಕಾಬಾರ) ಆದ್ರಾ, ಗಜಗಾ ಆಡ್ರಿ, ಹೊತ್ತ ಹೋಗ್ತದ. ಪುಸ್ತಕಾ ಓದ್ರಿ, ಮಧ್ಯಾಹ್ನದಾಗ ನಿದ್ದಿ ಮಾಡಿ ಏಳ್ರಿ. ಉಪವಾಸ ಇದ್ದದ್ದು ಗೊತ್ತಾಗೂದಿಲ್ಲಾ’ ಎನ್ನುವನು. ಮಕ್ಕಳು ಉಪವಾಸದಿಂದ ನಲುಗಬಾರದೆಂದು ಈ ಒದ್ದಾಟ!

ಬೇಸಿಗೆಯಲ್ಲಿ ನಾವೆಲ್ಲಾ ಮಾಳಿಗೆಯ ಮೇಲೆ ಮಲಗುವುದು ರೂಢಿ. ಎಲ್ಲರಿಗೂ ಬೇರೆ ಬೇರೆ ದಿಂಬು ಚಾದರಗಳು. ಅವುಗಳಲ್ಲಿ ಗೊಂದಲವಾಗಬಾರದೆಂದು ಎಲ್ಲಕ್ಕೂ ಮೂಲೆಯಲ್ಲಿ ಅವರವರ ಹೆಸರುಗಳು. ಹಾಸಲು ಎಲ್ಲರಿಗೂ ಒಂದೇ ವಿಶಾಲವಾದ ದಪ್ಪದ ಜಮಖಾನಿ.

ನಮ್ಮ ಚಾದರುಗಳಲ್ಲದೇ ಥಂಡಿಯಾಗಿರಬಾರದೆಂದು ಮೇಲೆ ಎಲ್ಲರಿಗೂ ಸಾಲುವಷ್ಟು ಒಂದೇ ದೊsಡ್ಡ ಜಮಖಾನ. ಅದರ ಎರಡೂ ಮೇಲ್ತುದಿಗಳನ್ನು ಎತ್ತರಿಸಿ ಕಟ್ಟಿದ್ದರಿಂದ ನಾವು  ಡೇರೆಯೊಳಗೆ ಹೊಕ್ಕಂತೆ ಒಳಸೇರಬೇಕು. ತಲೆ ಮಾತ್ರ ಹೊರಗಿರಿಸಿ ಕಥಾ ಕಾಲಕ್ಷೇಪ ಮಾಡುವುದು. 

ಚಿಕ್ಕೆಗಳನ್ನು ನೋಡುತ್ತ ‘ಇವು ಅಜ್ಜನ ಕಣ್ಣುಗಳು, ಇವು ಮುತ್ಯಾನ ಕಣ್ಣುಗಳು, ನಮ್ಮನ್ನೆ ನೋಡಾಕತ್ತಾರ ನೋಡ್ರಿ’ ಎಂದು ತೀರಿಕೊಂಡ ಹಿರಿಯರ ಪಟ್ಟಿ ಹೇಳುವುದು. ಇಲ್ಲವೇ ನಸುಗತ್ತಲಲ್ಲಿ ಸರಿಯಾಗಿ ಕಾಣಿಸದೇ ‘ನಂದು ತಲೆ ಗಿಂಬು’, ‘ನಂದು ಚಾದರಾ’ ಎಂದು ಕಿತ್ತಾಡುವುದು. ಕೆಳಗೆ ಊಟ ಮಾಟುತ್ತಿದ್ದ ಅಪ್ಪನಿಗೆ ಮೇಲಿಂದಲೇ ದೂರು.

ಒಬ್ಬರೂ ಅಪ್ಪನಿಗೆ ಹೇಳಿದವರಿಲ್ಲ. ಅಪ್ಪಾ, ನೋಡಪ್ಪಾ, ಇಂಥಾ, ನನ್ನ ಚಾದರ ತಗೊಂಡಾನಾ’ ದಿನನಿತ್ಯ ಅದನ್ನು ಕೇಳುವ ಅಪ್ಪ ‘ಊಟಾನರೇ, ಮಾಡ್ಯ್ಲಾ .... ಬ್ಯಾಡಾs  ತಂಗಿಬೇಡ’ ಅನ್ನುವನು. ಅಲ್ಲಿಗೆ ಎಲ್ಲರೂ ಗಪ್‌ಚಿಪ್‌.

ಶಾಲೆಯಲ್ಲೂ ದುಡಿದು ಮನೆಯಲ್ಲೂ ದುಡಿದು ಎಂಟು  ಮಕ್ಕಳನ್ನು ಹೊತ್ತು ಹೆತ್ತು ಸಾಕುವದರಲ್ಲಿ ಅವ್ವ ಸುಸ್ತು. ಅದರಿಂದಾಗೇ ಅವಳು ಸ್ವಲ್ಪ ಸಿಡುಕು. ಈ ಸಿಡುಕು ಒಮ್ಮೊಮ್ಮೆ ವಿನಾ ಕಾರಣದ ಬೈಗಳಾಗುತ್ತಿತ್ತು. ಬೈದರೆ, ನಾನು ಊಟವನ್ನೂ ಮಾಡದೇ ಅಳುತ್ತ ಅಪ್ಪನ ದಾರಿ ಕಾಯುತ್ತ ತಲೆಬಾಗಿಲ ಬಳಿ ಇದ್ದ ಜೇಳಜಿಯಲ್ಲೇ ಕುಳಿತಿರುತ್ತಿದ್ದೆ.

ಅಪ್ಪ ಬರುವುದು ತಡವಾದರೆ ಅಳುವನ್ನು ಚಾಲ್ತಿಯಲ್ಲಿಡುವುದು ಕಷ್ಟವಾಗುತ್ತಿರಲಿಲ್ಲ. ಆದರೂ ಪರಿಣಾಮಕಾರಿಯಾಗಿರಲೆಂದು ಮುಸು ಮುಸು ಮುಂದುವರಿಸುತ್ತಿದ್ದೆ. ಅಪ್ಪನ ಬೂಟಿನ ಸಪ್ಪಳವಾದರೆ ನಾನು, ಅಳು ತಾರಕಕ್ಕೇರುವದು ಅಪ್ಪ ಧಾವಿಸಿ ಬಂದು ವಿಚಾರಿಸುತ್ತಿದ್ದ.

‘ಯಾಕs  ನಮ್ಮ  ಅವ್ವಗ ಬೈದಿಯಂತ?’ ಅವ್ವ ಮಕ್ಕಳನ್ನೂ ನೌಕರಿಯನ್ನೂ ಮನೆಯನ್ನೂ ಸಂಬಾಳಿಸಿದ್ದೇ ಹೆಚ್ಚು. ಅದರಲ್ಲೇ ಸಮಯ ಉಳಿಸಿಕೊಂಡು ಬಾಗಿಲು ಪರದೆ, ಟೇಬಲ್‌ ಕ್ಲಾತು, ಸ್ವೆಟರು, ನನ್ನ ತಂಗಿಯರ ಬಿಳಿಯ ಫ್ರಾಕುಗಳ ಮೇಲೆ ಬಣ್ಣ ಬಣ್ಣದ ಕಸೂತಿ–ಲೇಸುಗಳು ಇವನ್ನೆಲ್ಲ ಹಾಕುತ್ತಿದ್ದಳು.

ಮುತ್ತಿನಂಥ ಅಕ್ಷರಗಳನ್ನು ಬರೆಯುತ್ತಿದ್ದಳು. ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಅವಳಿಗೆ ಗೆಳತಿಯರು ಬಹಳ. ಎಲ್ಲ ವಿಧದ ತಿಂಡಿ –ಅಡುಗೆಗಳನ್ನು ರುಚಿಕಟ್ಟಾಗಿ ಮಾಡುತ್ತಿದ್ದಳು. ಬೇಸಿಗೆ ರಜೆಯಲ್ಲಿ ಒಂದಿನವೂ ಖಾಲಿ ಇರುತ್ತಿರಲಿಲ್ಲ. ಶ್ಯಾವಿಗೆ ಸಂಡಿಗಿ – ಕುರುಡಗಿ– ಸೌತೆಬೀಜ, ಸರಡಿ–ಹಪ್ಪಳ– ಉಪ್ಪಿನಕಾಯಿ–ಗುಳಂಬ–ಮಸಾಲಿ ಖಾರ – ಹೀಗೆ ವರ್ಷಕ್ಕಾಗುವಷ್ಟನ್ನು ಮಾಡುವುದರಲ್ಲಿ ವ್ಯಸ್ತಳಾಗುತ್ತಿದ್ದಳು. ಅಪ್ಪನಿಗೆ ಗೊತ್ತಾಗದಂತೆ ಕದ್ದು ಸ್ಟೀಲಿನ ಬಾಂಡಿ ಖರೀದಿಸುತ್ತಿದ್ದಳು.

‘ಗಂಡಸರಿಗೇನು ಗೊತ್ತಾಗುತದ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಳು. ಆದರೆ ಎಲ್ಲ ಮಕ್ಕಳು ‘ತನಗಿಂತ ಅಪ್ಪನನ್ನೇ ಹೆಚ್ಚು ಪ್ರೀತಿಸುತ್ತಾರೆ’ ಎಂಬ ನೋವು ಅವಳಿಗೆ ಕೊನೆಯವರೆಗೂ ಇತ್ತು.

ಅಟ್ಟದ ಮೇಲಿನ ಸಾಮಾನು ಜೋಡಿಸುವನು. ಗೋಣಿಚೀಲದಿಂದ ಜೋಳವನ್ನು ಅಳೆದು ತೆಗೆಯುವಾಗ ಕೆಳಗೆ ಚಲ್ಲಿದ ಪ್ರತಿಕಾಳನ್ನೂ ಬೇಸರವಿಲ್ಲದೇ ಆರಿಸುವನು. ಚಾಪೆಕೆಳಗೆ ಬಟ್ಟೆಯ ಅಂಚನ್ನು ಹೊಲಿಯುವನು. ತಾನೇ ಪ್ರತಿ ಆಯ್ತವಾರ (ಆದಿತ್ಯವಾರ) ಸಂತೆಗೆ ಹೋಗುವನು. ಎರಡೂ ಕೈಗಳಲ್ಲಿ ಭಾರವಾದ ಕೈಚೀಲಗಳು, ಹೆಗಲ ಮೇಲೆ ಕಬ್ಬನ ಗಳಗಳು. ತನ್ನ ಮಧ್ಯಾಹ್ನದ ನಿದ್ದೆಯಾದ ಮೇಲೆ ಚಾ ಕುಡಿದು, ಕಬ್ಬು ಸುಲಿದು ಸಣ್ಣ ಸಣ್ಣ ತುಂಡು ಮಾಡಿ ತಿನ್ನಿಸುವನು. 

ಆ ವರ್ಷ ಬೇಸಿಗೆ ರಜೆಯಲ್ಲಿ ಬಂದಾಗ ತೀರಾ ಹಣ್ಣಾಗಿದ್ದ. ‘ತಾಯೀ ಯಾಕೋ ಮೈ ಕೈ ನೂಸಾಕತ್ತಾವು (ನೋಯತ್ತಿವೆ) ನೋಡಪಾ’ ಅಂದ. ಅವತ್ತು ಮೈಗೆಲ್ಲ ಬಿಸಿ ಕೊಬ್ಬರಿ ಎಣ್ಣೆ ಹಚ್ಚಿ, ಬಿಸಿ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿಸಿದೆ. ಖುಷಿಯಿಂದ ನಗುನಗುತ್ತ ಎಳೆ ಮಗುವಿನಂತೆ ಎರೆಸಿಕೊಂಡ.

ನೀರು ಮುಗಿಯುವವರೆಗೆ ನಗುತ್ತಲೇ ಇದ್ದ. ಸಾಬೂನು ಹಚ್ಚುವಾಗ ಅಪ್ಪನ ಕುತ್ತಿಗೆಯ ಎಲುಬಿನ ಸಂದಿಯಲ್ಲಿ ಸಾಬೂನೇ ನಿಂತು ಬಿಟ್ಟಿತು. ‘ಎಷ್ಟು ಸೊರಗನಿ ನೋಡ ತಾಯೀ, ಸಬಕಾರ ಕಳದೇ ಹೋತು’ ಎಂದು ಅದಕ್ಕೂ ನಗುವನು.

ಊಟ ಮಾಡಿ ಮಲಗಿ ನಿದ್ದೆ ಎದ್ದಮೇಲೆ, ‘ಇವತ್ತ ಮೈ  ಹಗೂರಾಗಿ, ಆಗದೀ ಆರಾಮ. ನಿದ್ದಿ ಆತ ನೋಡವಾ’ ಎಂದು ಅಪ್ಪ ಮನಪೂರ್ವಕವಾಗಿ ಹೇಳಿದರೆ ಸೇವೆಯ ಸಂತೃಪ್ತಿಯಿಂದ ಮನಸ್ಸು ತುಂಬುವುದು. ಪ್ರತಿಯೊಂದಕ್ಕೂ ಮೆಚ್ಚುಗೆ ಸೂಸುವುದರ ಮಹತ್ವ ಅಪ್ಪನಿಗೆ ತಿಳಿದಿತ್ತು.

ಅಪ್ಪ ಎಷ್ಟು ಮುಗ್ಧನೆಂದರೆ ಯಾವ ಕಪಟವನ್ನೂ ಅರಿಯದವನು. ಪರರು ಹಾಗಿರಬಹುದೆಂದೂ ಕಲ್ಪಸಲಾರನು. ಅತಿ ಚಿಕ್ಕ ಸಂತಸಕ್ಕೂ ಹೃದಯದುಂಬಿ ನಗುವನು. ಸಣ್ಣ  ನೋವು ನಿರಾಶೆಗಳಿಗೂ ಆಕಾಶವೇ  ಕಳಚಿ ಬಿದ್ದಂತೆ ಒದ್ದಾಡುವನು.

ಆದರೆ ನನಗೆ ತಿಳಿವಳಿಕೆ ಬಂದಂತೆ, ಅಸಹನೀಯವಾದ ಆಘಾತಗಳಿಂದ ಜರ್ಜರಿತನಾಗುತ್ತ, ಸಾವಿನ ಸಮೀಪದ ದಿನಗಳಲ್ಲಿ ಒಬ್ಬ ಸಂತನೇ ಆಗಿದ್ದ. ನನ್ನ ನಂತರದ ತಂಗಿ ಸುವರ್ಣ ಮೂರು ಚಿಕ್ಕ ಮಕ್ಕಳ ತಾಯಿ, ಅನಾರೋಗ್ಯದಿಂದ ತೀರಿಕೊಂಡಾಗ ನಾವೆಲ್ಲಾ ಅವಳ ಊರು ಮುರುಡಿಗೆ ಸಂಸ್ಕಾರಕ್ಕೆ ಹೋಗಿದ್ದೆವು. ಅಪ್ಪ ಅಳಲೂ ಆಗದೆ ಗರಬಡಿದವನಂತೆ ಅಸಹಾಯಕ ಮಗುವಿನಂತೆ ಮಾತಿಲ್ಲದೇ ಕುಳಿತಿದ್ದ.

ಈ ತಂಗಿ, ನಾನು ಮತ್ತು ಇನ್ನೊಬ್ಬ ತಂಗಿ ಭಾರತಿ; ಚಿಕ್ಕವನಿದ್ದಾಗ ದೀಪಾವಳಿಯ ಆಯುಧಪೂಜೆಗೆಂದು, ಬಜಾರಿನ ತುಂಬ ಅಂಗಡಿಪೂಜೆಗೆಂದು ಹೋಗುತ್ತಿದ್ದೆವು. ಅಂಗಡಿಗಳ ಮಾಲಕರು ‘ಹಾಡಿ’ ರೆಂದರೆ ಹಾಡಿ, ಜಂಗಮರ ಮಕ್ಕಳೆಂದು ಅವರು ಕೊಟ್ಟ ದಕ್ಷಿಣೆಯ ಹಣವನ್ನೂ ಪಟಾಕ್ಷಿಗಳನ್ನೂ ಎಣಿಸುತ್ತ ಇನ್ನೂ ಹೆಚ್ಚಿಗೆ ಸಂಗ್ರಹಿಸಲು ಬಜಾನಿನಲ್ಲೇ ಸುತ್ತಾಡುತ್ತಿದ್ದೆವು.

ತಡವಾಗಿದ್ದರೂ ಅಪ್ಪ ಊಟ ಮಾಡದೇ ನಮಗಾಗಿ ಕಾದು ಕಾದು ಕೊನೆಗೆ ಇಡೀ ಪೇಟೆಯನ್ನೆಲ್ಲ ಜಾಲಾಡಿ, ನಮ್ಮನ್ನು ಪತ್ತೆ ಮಾಡಿ ಮನೆ ಸೇರುವಾಗ ರಾತ್ರಿ ಹನ್ನೊಂದಾಗುವುದು. ಹಸಿವು ತಿರುಗಾಟಗಳಿಂದ ಅಪ್ಪ ದಣಿದಿದ್ದರೂ ಎಂದೂ ಹೊಡೆದವನಲ್ಲ. ನಾವು ಉಂಡು ಹಾಸಿಗೆ ಸೇರಿದ ಮೇಲೆ ತಾನು ಉಣ್ಣುವನು.

‘ಜಾತ್ರಿಗಿ ಹೋಗೂನ್ರ್ಯಾ? ಅಂತ ನಮಗಿಂತ ಹೆಚ್ಚಿನ ಉತ್ಸಾಹದಿಂದ ತಯಾರಾಗುವನು. ಬಸ್ಸು ಟ್ರೇನುಗಳ ಆ ಗದ್ದಲದಲ್ಲಿ, ಸ್ಥಳ ಕಾದಿರಿಸುವುದಕ್ಕೆ ತನ್ನ ಗಾಂಧೀ ಟೊಪ್ಪಿಗೆಯನ್ನಿಟ್ಟು ಎಷ್ಟೊ ಸಲ ಕಳೆದು ಕೊಂಡಿದ್ದಾನೆ. ಆದರೂ ಚಿಕ್ಕವರನ್ನು ಕಿಟಕಿಗಳಿಂದ ತೂರಿಸಿ ದೊಡ್ಡವರೊಂದಿಗೆ ಬಾಗಿಲ ಬಳಿ ಬರುವನು.

‘ಪಾಪರೀ, ಆ ತಂಗೀಗಿ ಜ್ವರಾ ಬಂದಾವು. ಸ್ವಲ್ಪ ಪುಣ್ಯ ಕಟಗೋರಿ’ ಎಂದು ದೀನ ಮುಖ ಮಾಡಿ, ಪುಸಲಾಯಿಸುತ್ತಾ ಮಾತಾಡಿಕೊಂಡೇ ನಮ್ಮನ್ನು ಹತ್ತಿಸಿ ತಾನೂ ಹತ್ತುವನು. ಎಲ್ಲರಿಗೂ ಕುಳಿತುಕೊಳ್ಳಲು ಜಾಗ ಸಿಕ್ಕರೆ. ಖುಷಿಯಿಂದ ಮುಖ ಊರಗಲವಾಗುವುದು.

ಜಾಗ ಸಿಗದಿದ್ದರೆ ಊರು ಬರುವವರೆಗೆ ಅದಕ್ಕಾಗಿ ಪರಿಪರಿಯಾಗಿ ಪರದಾಡುವನು. ಜಾತ್ರೆಯಲ್ಲಿ ತೂಗು ತೊಟ್ಟಲು, ತಿರುಗುಗಾಡಿ ಎಲ್ಲಾ ಹತ್ತಿಸಿ ತೋರಿಸಿ, ಚೂರುಮುರಿ–ಬೆಂಡು–ಬೆತ್ತಾಸು, ಬಾಂಬೆಮಿಠಾಯಿ ಕೊಡಿಸಿ ಬಿಸಿ ಬಿಸಿ ಭಜಿ ಕೊಡಿಸಿ ನೀರು ಕುಡಿಸಿ ಹೆಣ್ಣು ಮಕ್ಕಳಿಗೆ ಬಳೆ–ರಿಬ್ಬನ್ನು, ಗಂಡುಹುಡುಗರಿಗೆ ಬಣ್ಣದ ಕನ್ನಡಕ–ಪ್ಲಾಸ್ಟಿಕ್‌ ವಾಚು ಕೊಡಿಸುವನು.

ರಾತ್ರಿ ಹೊತ್ತಿಗೆ ಸೋತು ಸುಸ್ತಾಗಿ ಮನೆಗೆ ಮರಳಿದರೂ, ಮಕ್ಕಳು ಉಮೇದಿಪಟ್ಟರೆಂದು ನಗುನಗುತ್ತಲೇ ಇರುವನು. ಜೀವನದ ಸಮಸ್ತ ಸಂತೋಷಗಳನ್ನು ಮಕ್ಕಳು ಸಂಪೂರ್ಣವಾಗಿ ಅನುಭವಿಸಬೇಕು. ಅದಕ್ಕಾಗೇ ತಾನು ತಂದೆಯಾಗಿರುವುದು ಎಂದು ಅಪ್ಪ ಭಾವಿಸಿದಂತಿತ್ತು.

ಮಕ್ಕಳ ಸುಖ–ಶಾಂತಿಗಳ ಹೊರತು ತನಗಾಗೇ ಪ್ರತ್ಯೇಕವಾದ ಸುಖಗಳಿವೆ ಎಂದು ಅಪ್ಪ ತಿಳಿದಂತಿರಲಿಲ್ಲ. ನೆರೆಹೊರೆಯವರಿಗೂ  ಹಾಗೇ  ತಂದೆಯ ಸ್ಥಾನದಲ್ಲೇ ಇದ್ದ. ಶಾಲೆಯಲ್ಲಿ. ಅಂತಃಕರಣ–ಶಿಸ್ತುಗಳ ಆಡಳಿತಗಾರನಾಗಿದ್ದ, ಪ್ರತಿಯೊಂದು ವಿಷಯದ ಬಗ್ಗೆಯೂ ಪರಿಜ್ಞಾನವಿತ್ತು.

ಸಾಮಾನ್ಯ ಶಿಕ್ಷಕನಾಗಿದ್ದರೂ ಊರಿನಲ್ಲಿ ವರ್ಚಸ್ಸು ಇತ್ತು.  ಗೌರವ ಇತ್ತು. ವಿಜಯದಶಮಿಯ ದಿನ ‘ಗುರುಗಳು ಐನೋರು’ ಎರಡೂ ಆಗಿದ್ದ ಅಪ್ಪನಿಗೆ ‘ಬನ್ನಿ ಪತ್ರೆಯನ್ನು ಕೊಡಲು ಊರಿನ ಅನೇಕ ಹಿರಿಯರು, ಪ್ರತಿಷ್ಟಿತರು, ವ್ಯಾಪಾರಿಗಳು ಬಂದರೆ ಮನೆ ಜಾತ್ರೆಯಾಗುತ್ತಿತ್ತು.

ಮರು ದಿವಸ ಬೆಳಿಗ್ಗೆ ಮನೆ ಕಸ ಬಳಿದರೆ 3–4 ಬುಟ್ಟಿಗಳಷ್ಟು ಬನ್ನಿ ಎಲೆಗಳು ಇರುತ್ತಿದ್ದವು. ತನ್ನ ಸುತ್ತ ಇದ್ದವರ ಬದುಕೆಲ್ಲ ಬಂಗಾರವಾಗಿಸಿದ್ದ ಅಪ್ಪ. ಈಗ ಅಂಥ ಹಬ್ಬಗಳೂ ಇಲ್ಲ. ಅವನ್ನೆಲ್ಲ ಸಂಭ್ರಮದಿಂದ ತೋರಿಸುವ ಅಪ್ಪನೂ ಇಲ್ಲ .... ಬದುಕಿನ ಸಡಗರಗಳೆಲ್ಲ ಅಪ್ಪನೊಂದಿಗೇ ಮುಗಿದವೋ ಎನೋ!!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.