ADVERTISEMENT

ಅಪ್ಪ ನನಗೆ ಎಂದೂ ತೀರದ ಆಸ್ತಿ

ಕೆ.ನಾಗರತ್ನಮ್ಮ, ಮರಿಯಮ್ಮನಹಳ್ಳಿ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಇಬ್ಬರು ತಾಯಂದಿರ ಮಗಳು ನಾನು. ಹಡೆದ ತಾಯಿ ಅವ್ವ. ಪಡೆದ ತಾಯಿ ಅಪ್ಪ. ಅಪ್ಪನಲ್ಲಿಯೂ ಅವ್ವ ಇದ್ದಳು. ಅಂತೆಯೇ ಹೆಂಗರುಳಿನ ಅಪ್ಪನ ಮಾತನ್ನು ನಾನೆಂದೂ ಮೀರಲಿಲ್ಲವೇನೋ? ಆತನ ವಾತ್ಸಲ್ಯದಲ್ಲಿ ಬಂಧಿಯಾಗಿದ್ದಷ್ಟೂ ಕಾಲ ಆ ಬಂಧನದಲ್ಲಿ ನಿರ್ಭಯವಿತ್ತು.

ಆತ ಹೆಜ್ಜೆ ಇಡು ಎಂದಲ್ಲಿ ಹೆಜ್ಜೆ ಇಟ್ಟೆ. ‘ಈ ದಾರಿ ಸರಿ ಇಲ್ಲ ಮಗಳೇ...’ ಎಂದರೆ ಆ ದಾರಿಯ ಕದವನ್ನೇ ಶಾಶ್ವತವಾಗಿ ಮುಚ್ಚಿಬಿಟ್ಟೆ. ಪುಟ್ಟ ಪೋರಿಯಾಗಿದ್ದ ನನ್ನ ಕೈ ಬೆರಳಿಡಿದು ರಂಗಭೂಮಿ ಅಂಗಳದತ್ತ ನಡೆಸಿ ಕೊಂಡು ಬಂದ. ರಂಗಭೂಮಿ ಹೂವಿನ ಹಾಸಿಗೆ ಅಲ್ಲ. ಅಲ್ಲಿ ಏನಿದ್ದರೂ ಅರ್ಧ ಬೆಳಕು, ಅರ್ಧ ಕತ್ತಲು. ನೋಡುವವರ ಕಣ್ಣಿಗೆ ಚಂದದ ಬಣ್ಣ, ಎದೆಯೊಳಗೆ ಕುದಿಯುವ ಸುಣ್ಣ.

ನಮ್ಮಂತಹ ತುಂಡು ಹೊಲ ಇದ್ದ ಬಡ ಕುಟುಂಬದಿಂದ ಬಂದ ಅಪ್ಪಂದಿರೆಲ್ಲ ತಮ್ಮ ಮಕ್ಕಳು ಮೇಷ್ಟ್ರಾಗಬೇಕು, ಗುಮಾಸ್ತನಾಗಬೇಕು ಅಥವಾ ಕೊಟ್ಟ ಮನೆಗೆ ಮದುವೆ ಮಾಡಿಕೊಂಡು ಹೋಗಬೇಕು ಅಂತ ಆಸೆ ಪಟ್ಟರೆ- ನನ್ನಪ್ಪ ಮಗಳು ’ಕಲಾವಿದೆ’ ಆಗಲೆಂದು ಪಣತೊಟ್ಟ! ಗುರಿಯಿಟ್ಟ ಅರ್ಜುನನಿಗೆ ಹಕ್ಕಿಯ ಕಣ್ಣು ಮಾತ್ರ ಕಾಣುವಂತೆ ಮಾಡಿದ ದ್ರೋಣಾಚಾರ್ಯ. ಅದರಂತೆ ನನ್ನಪ್ಪ ನನಗೆ ರಂಗಭೂಮಿ ಮಾತ್ರ ಕಾಣುವಂತೆ ಮಾಡಿದ.

ದಲಾಲಿ ಅಂಗಡಿಯಲ್ಲಿ ಗುಮಾಸ್ತನಾಗಿದ್ದ ಅಪ್ಪನಿಗೆ ನನಗೆ ನನ್ನ ತಮ್ಮ ತಂಗಿಯರ ಓದಿಗೆ ಮನೆಯಲ್ಲಿ ಕರೆಂಟ್ ದೀಪ ಹಾಕಿಸುವ ಶಕ್ತಿ ಇರಲಿಲ್ಲ. ಕತ್ತಲೆ ಕಳೆಯಲು ಬುಡ್ಡಿದೀಪ ಸಾಕು ಮಗಳೆ ಎಂದು ರಂಗಭೂಮಿಯ ಬೆಳಕು ನೀಡಿದ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಅಂದಿನ ಸ್ಥಿತಿಯಲ್ಲಿ ದೊಡ್ಡವಳಾದ ನಾನು ಶಾಲೆಗೆ ಹೋಗಹತ್ತಿದೆ. ಅಲ್ಲಿ ಉಚಿತವಾಗಿ ಕೊಡುತ್ತಿದ್ದ ಎರಡು ರೊಟ್ಟಿ ತಂದು ನಾಲ್ವರು ತಂಗಿಯರಿಗೆ ಹಾಗೂ ಒಬ್ಬ ತಮ್ಮನಿಗೆ ಪೇಡಾದಂತೆ ಹಂಚುತ್ತಿದ್ದೆ. ಕೆಲವೊಮ್ಮೆ ನನಗೇ ಏನೂ ಉಳಿಯುತ್ತಿರಲಿಲ್ಲ. ನಾನು ನೀರು ಕುಡಿದು ಮಲಗಿದಾಗ ಅಪ್ಪನ ಬಿಕ್ಕಳಿಕೆ, ನನ್ನ ಎದೆಯಲ್ಲಿ ನೂರು ನದಿಯಾಗಿ ಹರಿಯುತ್ತಿತ್ತು.

ಅಪ್ಪನಿಗೆ ಅಸ್ತಮಾ. ಚಳಿ ಮಳೆಯಲ್ಲೇ ಏರು ಉಸಿರು ಹಾಕುತ್ತ ಹಳ್ಳಿಗಾಡಿನ ಪ್ರೇಕ್ಷಕರ ಮಧ್ಯೆ ಕುಳಿತು ನನ್ನ ನಾಟಕ ನೋಡಿದ. ಸರಿ ತಪ್ಪುಗಳ ತಿದ್ದಿ ಹೇಳಿದ. ವಿಮರ್ಶೆ ಮಾಡಿದ. ಯಾರ ಕಾಕ ದೃಷ್ಟಿಯೂ ನನ್ನ ಮೇಲೆ ಬೀಳದಂತೆ ಕಾವಲು ಕಾಯ್ದ. ನಾಟಕ ಮುಗಿಸಿ ಬೆಳಗಿನ ಜಾವ ಮನೆಗೆ ಬಂದಾಗ ಬಿಸಿನೀರು ತಂದು ಕೊಟ್ಟ, ತಲೆ ಒರೆಸಿದ. ನೀರಲ್ಲಿ ಬೆಲ್ಲ ಬೆರೆಸಿ ಸಿಹಿ ನೀರು ಕುಡಿಸಿದ. ಬೆಚ್ಚಗೆ ಹೊದಿಸಿ, ತಟ್ಟಿ ಜೋಗುಳ ಹಾಡಿದಂತೆ ಮಾತಾಡಿಸುತ್ತಲೇ ಮಲಗಿಸಿದ. ರಾತ್ರಿ ಯೆಲ್ಲಾ ನಿದ್ದೆಗೆಟ್ಟ ನನ್ನನ್ನು ಯಾರೂ ಎಬ್ಬಿಸಬಾರದು ಎಂದು ಬಾಗಿಲಿಗೆ ಕಾವಲು ಕುಳಿತ. ‘ಕುರುಕ್ಷೇತ್ರ’ ನಾಟಕ ಆಡುತ್ತೀ ಮಗಳೆ... ಜೀವನವೂ ಕುರುಕ್ಷೇತ್ರವಲ್ಲವೆ? ಅಂಕದ ಪರದೆ ಜಾರಿದರೆ ನಾಟಕ ಮುಗಿಯುವು ದಿಲ್ಲವೆ? ಹಾಗೇ ನಿನ್ನ ಕಷ್ಟಗಳಿಗೆ ಕೊನೆ ಇದೆ...’ ಎಂದು ಭವಿಷ್ಯ ನುಡಿದ.

‘ಸಂಸಾರ’ ಎಂಬ ಹೆಸರಿನ ನಾಟಕದ ಮೂಲಕ ನನ್ನನ್ನು ರಂಗಕ್ಕೆ ನೂಕಿದ ಅಪ್ಪ ತನ್ನ ಸಂಸಾರವನ್ನೂ ನನ್ನ ತಲೆ ಮೇಲೆ ಹೊರಿಸಿದ. ಹಾಗೆಂದೇ ಈಗ ನನ್ನ ಸಂಸಾರ ಎಂದರೆ ಮರಿಯಮ್ಮನಹಳ್ಳಿ ಮಹಿಳಾ ವೃತ್ತಿ ಕಲಾವಿದರ ಸಂಘವನ್ನು ಹೊತ್ತು ನಡೆಯುತ್ತಿರುವ ತೃಪ್ತಿ ನನಗೆ ಸಿಕ್ಕಿದೆ. ತಮ್ಮನ ಜತೆಗೆ ನನ್ನನ್ನೂ ಒಂದು ಗಂಡು ಎಂದು ಭಾವಿಸಿ ಆಸ್ತಿಯಲ್ಲಿ ಪಾಲು ಮಾಡಿ ಕೊಟ್ಟ ಅಪ್ಪ ನನಗೆ ಎಂದೂ ತೀರದ ಆಸ್ತಿ.

ಆತನಿಗೊಂದು ಹಿರಿದಾಸೆ. ನನ್ನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವವರು ನನಗೆ ಸಿಕ್ಕಬೇಕಿತ್ತು ಎಂದು. ಆತ ಬದುಕಿರುವವರೆಗೆ ಆ ಕೊರಗು ಹುಳದಂತೆ ಆತನನ್ನು ಕೊರೆಯುತ್ತಿತ್ತು. ಅಪ್ಪ ಇತ್ತ ಇಹಲೋಕದಿಂದ ಕಣ್ಮರೆಯಾದ ತಕ್ಷಣವೇ- ಅಪ್ಪನ ಕರುಣೆಯ ಸ್ನೇಹ ನನಗೆ ಸಿಕ್ಕಿತು.

ಅಪ್ಪ ಬದುಕಿದ್ದಾಗ ಸಿಕ್ಕಿದ್ದರೆ ನಿಶ್ಚಿಂತೆಯಿಂದ ಕಣ್ಣು ಮುಚ್ಚುತ್ತಿದ್ದನೇನೋ. ಯಾವುದೋ ಊರಲ್ಲಿ ಸನ್ಮಾನ ಮಾಡಿದ್ದನ್ನು, ಅವರು ಕೊಟ್ಟ ಮಸುಕಾದ ಸರ್ಟಿಫಿಕೇಟ್‌ಅನ್ನೇ ತನ್ನ ಪಂಚೆಯ ಸೆರಗಲ್ಲಿ ಮುಚ್ಚಿಕೊಂಡು ನನಗೆ ಗುಬ್ಬಿ ವೀರಣ್ಣ ಪ್ರಶಸ್ತಿಯೇ ಬಂದುಬಿಟ್ಟಿದೆ ಎಂಬಷ್ಟು ಹೆಮ್ಮೆಯಿಂದ ಊರೆಲ್ಲ ಸಾರುತ್ತಿದ್ದ. ಇಂದು ನನಗೆ ದೊರೆತ ಹಲವಾರು ಪುರಸ್ಕಾರಗಳನ್ನು ಅಪ್ಪ ಬದುಕಿರುವಾಗಲೇ ಕಂಡಿದ್ದರೆ ಆಕಾಶದಲ್ಲಿ ತೇಲುತ್ತಿದ್ದ ನೇನೋ. ಅಷ್ಟಕ್ಕೂ ಆತ ರಂಗಭೂಮಿಗೇ ಕರೆ ತರದಿದ್ದರೆ ನನಗೆ ಇಂತಹ ಭಾಗ್ಯ ಎಲ್ಲಿ ಸಿಗುತ್ತಿತ್ತು? ಅಂತೆಯೇ ಈಗ ಪಡೆದ ಭಾಗ್ಯ, ಅನುಭವಿಸಿದ ಕಷ್ಟ ಎಲ್ಲವೂ ಅಪ್ಪನ ಕಾಣಿಕೆಯೇ.

ನೋವಾದಾಗ ಅವ್ವಾ.. ಎನ್ನುವುದು ಪ್ರಕೃತಿ ಧರ್ಮ. ಆದರೆ ನನ್ನ ಪಾಲಿಗೆ ಅಪ್ಪಾ... ಎನ್ನುವ ಶಬ್ಧವೇ ಮೊದಲು ಬರುತ್ತದೆ. ಅಪ್ಪನ ಋಣ ನನ್ನ ರಕ್ತದ ಕಣಕಣದಲ್ಲಿ ಬೆರೆತಿರುವುದೇ ಇದಕ್ಕೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.