ADVERTISEMENT

ಆಪತ್ತು ಬಂದಾಗ ಒಂದಿಷ್ಟು ಅಧ್ಯಾತ್ಮ

ಜಯಲಕ್ಷ್ಮಿ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಸುಮಾರು 45-46 ವರ್ಷಗಳ ಹಿಂದಿನ ಮಾತು. ನಾವು ಹೈದರಾಬಾದಿನಲ್ಲಿದ್ವಿ. ನನ್ನ ಪತಿ ಸ್ನಾನ ಮಾಡುವಾಗ ಜಾರಿ ಬಿದ್ದು ತಲೆಯ ಹಿಂಭಾಗದಲ್ಲಿ ಎಡಭಾಗಕ್ಕೆ ತೀವ್ರವಾದ ಏಟು ಬಿದ್ದು ತುಂಬಾ ರಕ್ತಸ್ರಾವವಾಗಿತ್ತು. ಡಾಕ್ಟರನ್ನು ಕರೆಸಿ ಕೂಡಲೇ ಚಿಕಿತ್ಸೆ ಮಾಡಿಸಿದ್ದೆ.
ಆದರೂ ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆ ಜೋರಾಗಿ ಕೂಗಿಕೊಂಡರು. ಅವರಿಗೆ ಲಕ್ವಾ ಹೊಡೆದು ಬಲಗಾಲು ಹಾಗೂ ಬಲಗೈ ಜೋರಾಗಿ ಎಳೆದೆಳೆದು ಬಿದ್ದುಹೋಯಿತು ಹಾಗೂ ವಾಂತಿಯಾಗಿ ಜ್ಞಾನ ತಪ್ಪಿಹೋಯಿತು. ಕೂಡಲೆ ‘ಉಸ್ಮಾನಿಯಾ’ ಆಸ್ಪತ್ರೆಗೆ ಸೇರಿಸಲಾಯಿತು.

ಇತ್ತ ಮನೆ ಕಡೆ ನನ್ನ ಹಿರಿಯ ಮಗನಿಗೆ ಟೈಫಾಯಿಡ್ ಜ್ವರ ಬಂದು ಎರಡು ದಿನಗಳ ಹಿಂದೆ ನಾಲಿಗೆ ಸಹ ಹೊರಚಾಚಿ ಜ್ಞಾನ ತಪ್ಪಿಹೋಗಿತ್ತು. 2ನೇ ಮಗನಿಗೆ 7 ವರ್ಷ, 3ನೇ ಮಗನಿಗೆ 1 ವರ್ಷ 8 ತಿಂಗಳು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಪತಿಯ ಹೆಸರನ್ನು ‘ಡೇಂಜರಸ್‌ಲಿ ಇಲ್’ ಪಟ್ಟಿಯಲ್ಲಿ ಆಸ್ಪತ್ರೆಯವರು ಪ್ರಕಟಿಸಿದ್ದರು. 2ನೇ ದಿವಸ ತಲೆಯ ಮೂಳೆಯನ್ನು ಕೊರೆದು ಮೆದುಳಿನ ಪಕ್ಕದಲ್ಲಿ ಶೇಖರವಾಗುತ್ತಿದ್ದ ದ್ರವವನ್ನು ತೆಗೆದು ಆಪರೇಷನ್ ಮಾಡಿದರು.  ಕೆಲವು ದಿನಗಳ ನಂತರ ವಾರ್ಡ್‌ಗೆ ಹಾಕಿದರು. ಆದರೆ ಇನ್ನೂ ಜ್ಞಾನ ವಾಪಸ್ಸು ಬಂದಿರಲಿಲ್ಲ. 16 ದಿವಸಗಳ ನಂತರ ಒಂದು ಮಧ್ಯಾಹ್ನ ನಾನು ಗೌರಿಹಬ್ಬದ ದಿನ ಊಟ ಕೊಡಲು ಹೋದಾಗ ಕಣ್ಣು ಬಿಟ್ಟು ತಾವು ಹೊದ್ದಿದ್ದ ಬೆಡ್‌ಷೀಟ್ ಮೇಲೆ ಬರೆದಿದ್ದನ್ನು ‘ಉಸ್ಮಾನಿಯಾ’ ಹಾಸ್ಪಿಟಲ್ ಎಂದು ಕಷ್ಟಪಟ್ಟುಕೊಂಡು ಓದಿದಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಮಾತಾಡಲು, (ತೊದಲದೆ) ಓಡಾಡಲು ಹಾಗೂ ಜ್ಞಾಪಕಶಕ್ತಿ ಯಾವಾಗ ಸರಿ-ಬರುತ್ತೆ ಎಂದು ಚಿಂತೆ ಕಾಡುತ್ತಿತ್ತು. ನನ್ನ ಪತಿ ವಾಯುಸೇನಾ ಪಡೆಯ ಅಧಿಕಾರಿಯಾಗಿದ್ದರಿಂದ ಒಂದು ತಿಂಗಳ ನಂತರ ಪುಣೆ ಮಿಲಿಟರಿ ಆಸ್ಪತ್ರೆಗೇ ಸೇರಿಸಬೇಕಾಯಿತು.

ನಾನು ಸಂಸಾರದ ಜವಾಬ್ದಾರಿಯನ್ನು ನೆಂಟರೊಬ್ಬರಿಗೆ ಒಪ್ಪಿಸಿ, 15 ದಿನಕ್ಕೊಮ್ಮೆ ತಪ್ಪದೆ ಪುಣೆಗೆ ಹೋಗಿ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಿದ್ದೆ. ಹೀಗೆ 6 ತಿಂಗಳ ನಂತರ ಮನೆಗೆ ಬಂದರು. ಆದರೆ, 40 ದಿವಸಕ್ಕೊಮ್ಮೆ ಕೆಳಕ್ಕೆ ಬಿದ್ದು ಜ್ಞಾನ ತಪ್ಪುತ್ತಿತ್ತು. ಇದಕ್ಕೂ 5 ವರ್ಷ ಔಷಧಿ ಕೊಟ್ಟು ಸಂಪೂರ್ಣ ಆರೋಗ್ಯವಂತನನ್ನಾಗಿ ಮಾಡಲಾಯಿತು. ಹೀಗಿದ್ದರೂ ಕಾಯಿಲೆ ಮರುಕಳಿಸದಿರಲು ಇನ್ನೂ 5 ವರ್ಷ ಔಷಧಿ ಕೊಟ್ಟು ಹನ್ನೊಂದನೇ ವರ್ಷ ಕ್ರಮೇಣ ಔಷಧಿಯನ್ನು ಕಡಿಮೆ ಮಾಡುತ್ತಾ ನಂತರ ಸಂಪೂರ್ಣವಾಗಿ ಔಷಧಿಯನ್ನು ನಿಲ್ಲಿಸಲಾಯಿತು. ನಿನಗೊಂದು ಪುನರ್ಜನ್ಮ ಎಂದು ಅವರಿಗೆ ಡಾಕ್ಟರು ಹೇಳುತ್ತಿದ್ದರು. ಇಂತಹ ಸಂದಿಗ್ಧ ಸಂತ್ರಸ್ತ ಪರಿಸ್ಥಿತಿಯಲ್ಲಿ ಸ್ನೇಹಿತರ ಪ್ರೇರಣೆಯ ಮೇರೆಗೆ ನಾನು ಡಿ.ವಿ. ಗುಂಡಪ್ಪನವರ ‘ಜೀವನ ಧರ್ಮ ಯೋಗ’ ಓದಿದೆ.  

ನಮ್ಮ ಜೀವನದಲ್ಲಿ ಮನಸ್ಸು ತಲ್ಲಣವಾಗಿದ್ದಾಗ, ನಮಗೆ ಧೈರ್ಯ ಬೇಕಾದಾಗ, ನಂಬಿಕೆಗಳು ಚದುರಿ, ಅಲ್ಲಾಡುತ್ತಿದ್ದಾಗ, ಭರವಸೆ ಬೇಕಾದಾಗ, ಭವಿಷ್ಯ ಸಂದೇಹದಲ್ಲಿ ಸಿಕ್ಕಿಬಿದ್ದಾಗ, ಶ್ರೀಮದ್ ಭಗವದ್ಗೀತೆಯ ಕನ್ನಡ ಭಾಷೆಯ ವ್ಯಾಖ್ಯಾನವಾದ ಡಿ.ವಿ.ಜಿ.ಯವರ ‘ಜೀವನ ಧರ್ಮಯೋಗ’ ದಾರಿದೀಪವಾಯಿತು. ಅಧ್ಯಾತ್ಮವನ್ನು ಕಬ್ಬಿಣದ ಕಡಲೆ ಎಂದು ಹೇಳುತ್ತಾರೆ. ಆದರೆ ಡಿ.ವಿ.ಜಿ. ಕಬ್ಬಿಣದ ಕಡಲೆಯನ್ನು ಸಂಸ್ಕರಿಸಿ, ಹುರಿಗಡಲೆಯಾಗಿ ಉಣಬಡಿಸಿದ್ದಾರೆ. ನೆಮ್ಮದಿ ಇಲ್ಲದ ಇಂದಿನ ಬಾಳಿಗೆ ಒಂದಿಷ್ಟು ಪ್ರತಿದಿನ ‘ಜೀವನ ಧರ್ಮಯೋಗ’ದ ಪಾರಾಯಣ ಸಮಸ್ಯೆಗೆ ಉತ್ತರವಾಗಬಲ್ಲದು.  ಈ ಪುಸ್ತಕ ನನ್ನನ್ನು ಮಾನಸಿಕ ಒತ್ತಡದಿಂದ ಹಾಗೂ ಆಪತ್ತಿನಿಂದ ಪಾರುಮಾಡಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.