ADVERTISEMENT

ಇಳಿಸಂಜೆಯಲಿ ಸ್ಮರಣೆಯೊಂದೇ ಆಸರೆ

ರೇಶ್ಮಾ ಅಮರನಾಥ ಪುಠಾಣೆ
Published 9 ಅಕ್ಟೋಬರ್ 2015, 19:30 IST
Last Updated 9 ಅಕ್ಟೋಬರ್ 2015, 19:30 IST

ಬಾಳಿನ ನೌಕೆಯಲ್ಲಿ ಸಂಗಾತಿಗಳಿಲ್ಲದೇ ಒಬ್ಬರೇ ಪಯಣಿಸುವುದು ನಿಜಕ್ಕೂ ಅತೀ ಕಷ್ಟ. ರಾಜಕಾರಿಣಿಗಳು, ಚಲನಚಿತ್ರ ನಟರು ಏನೇ ಮಾಡಿದರೂ ಅದು ಸಾಮಾನ್ಯ ವಿಷಯ. ಆದರೆ ಅದೇ ಒಬ್ಬ ಸಾಮಾನ್ಯ ಮನುಷ್ಯ ಮಾಡಲು ಆಗದು. ಸಮಾಜ ಅದನ್ನು ಮಾಡಲು ಬಿಡದು. ಅವರು ಸಮಾಜವನ್ನು ಎದುರಿಸಿ ಏನೇ ಮಾಡಿದರೂ ಅವರಿಗೆ ಸಮಾಜದಲ್ಲಿ ಮಾನ್ಯತೆ ಸಿಗದು. ಅಸ್ಪೃಶ್ಯರಂತೆ ಜೀವನ ಕಳೆಯಬೇಕಾಗಬಹುದು. ಅದೂ ಅಲ್ಲದೇ ಪುನರ್‌ವಿವಾಹ ಒಳ್ಳೆಯದೇ ಆದರೂ ಮಕ್ಕಳಿದ್ದವರಿಗೆ ಮತ್ತು ಮಧ್ಯ ವಯಸ್ಸು ದಾಟಿದವರಿಗೆ ಇದು ಸಾಧ್ಯವಾಗದು.

ಅದಕ್ಕೆ ಉದಾಹರಣೆಯಾಗಿ ನನ್ನ ಜೀವನದ ಅತೀ ಮುಖ್ಯ ವ್ಯಕ್ತಿಗಳಾದ ಎರಡು ಹಿರಿ ಜೀವಗಳು ಇದ್ದಾರೆ, ಅವರೇ ನನ್ನ ತಂದೆ ಮತ್ತು ನನ್ನ ಅತ್ತೆ.  ನನ್ನ ತಂದೆ ಮೂವತ್ತೇಳು ವರ್ಷಗಳ ಸುದೀರ್ಘ ಸಮಯವನ್ನು ನನ್ನ ತಾಯಿಯೊಡನೆ ಕಳೆದರು. ತಂದೆ ಅರವತ್ತರ ಹೊಸಿಲಲ್ಲಿದ್ದಾಗ ಅಮ್ಮ ಅಗಲಿದರು. ಜೀವನವೇ ಶೂನ್ಯ ಎಂಬಂತೆ ಮಾತಿಲ್ಲದೇ ಮೌನವನ್ನೇ ತನ್ನ ಸಂಗಾತಿ ಮಾಡಿಕೊಂಡಿದ್ದರು. ಅಮ್ಮ ಹೋದ ಕೂಡಲೇ ಅವರಿಗೆ ರಕ್ತದೊತ್ತಡ ಶುರುವಾಯಿತು.

ಮೊಮ್ಮಕ್ಕಳ ನೆನಪಲ್ಲಿ ನೋವು ಮರೆತರು ಅಂತ ನಮಗೆ ಅನಿಸುವ ಮೊದಲೇ ಏಕಾಂತದಲ್ಲಿ ಮತ್ತೆ ತನ್ನ ಸಂಗಾತಿಯ ನೆನಪಿಸಿ ಮೌನಿಯಾಗಿ ಬಿಡುತ್ತಾರೆ. ಅವರ ಭಾವಚಿತ್ರದ ಎದುರಿಗೆ ಎಷ್ಟೋ ಹೊತ್ತು ಕಳೆಯುತ್ತಾರೆ. ತಂದೆಯವರಿಗೆ ಯಾವಾಗಲೂ ಅಮ್ಮನ ನೆನಪೇ ಆಸರೆ. ಅದಕ್ಕೆ ಅವರು ಏಕಾಂತದಲ್ಲಿದ್ದಾಗ ಯಾವಾಗಲೂ ಈ ಹಿಂದಿ ಚಿತ್ರಗೀತೆಯನ್ನು ಕೇಳುತ್ತಿರುತ್ತಾರೆ. ‘ಮೈ ಜಹಾಂ ಭಿ ರಹೂ,  ಮೈ ಕಹೀಂ ಭಿ ರಹೂ,  ತೇರಿ ಯಾದ ಸಾಥ ಹೈ’. 

ನನ್ನ ಅತ್ತೆ ಮದುವೆಯಾದ ಹತ್ತು ವರ್ಷಗಳಲ್ಲೇ ನನ್ನ ಮಾವ ಬಾರದ ಲೋಕಕ್ಕೆ ತೆರಳಿದರು. ಆಗ ಮೂವರು ಚಿಕ್ಕ ಮಕ್ಕಳನ್ನು ನೋಡಿ ಅತ್ತೆಗೆ ಆಕಾಶವೇ ಕಳಚಿ ಬಿದ್ದಂತಹ ಅನುಭವ. ಮೂವತ್ತರ ಹರೆಯದಲ್ಲೇ ಪತಿಯನ್ನು ಕಳೆದುಕೊಂಡು ಅನುಕಂಪ ಆಧಾರಿತ ಸರ್ಕಾರಿ ಸೇವೆಗೆ ಸೇರಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ದಡಕ್ಕೆ ಸೇರಿಸುವುದರಲ್ಲೇ ಅವರ ಜೀವನ ಸಂಧ್ಯಾಕಾಲಕ್ಕೆ ತಲುಪಿತ್ತು.

ಮಕ್ಕಳಿಗಾಗಿ  ತನ್ನ ಜೀವನವನ್ನೇ ಮುಡಿಪಾಗಿಟ್ಟ ನನ್ನ ಅತ್ತೆಗೆ ಎಂದೂ ಯಾರ ಸಹಾಯ, ಆಸರೆ ಬೇಕೆನಿಸಲೇ ಇಲ್ಲ. ಆಗ ಮಕ್ಕಳ ಜವಾಬ್ದಾರಿ ಮಾವ ಇಲ್ಲದೇ ನಿರ್ವಹಿಸುವುದೇ ಅವರ ಜೀವನದ ಮುಖ್ಯ ಗುರಿಯಾಯಿತು ಹಾಗೂ ಒಂದೇ ಗುರಿಯಾಗಿತ್ತು. ಆ ಗುರಿ ಸಾಧಿಸುವ ಕಡೆಗೆ ತನ್ನ ಲಕ್ಷ್ಯವೆಲ್ಲ ಇಟ್ಟಿದ್ದ ಅವರಿಗೆ ತನ್ನ ಬಗ್ಗೆ ಯೋಚಿಸಲು ಆಗಲೇ ಇಲ್ಲ.  ಈಗ ಜೀವನದ ಈ ಘಟ್ಟದಲ್ಲಿ ಅವರಿಗೆ ಸಂಗಾತಿಯ ನೆನಪೊಂದೇ ಸಾಕು. ಮಾವನ ನೆನಪಲ್ಲೇ ದಿನಗಳನ್ನು ಕಳೆದ ಅವರಿಗೆ ಆಸರೆಯಾಗಿರುವುದು ಸಂಗಾತಿಯ ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.