ADVERTISEMENT

ಈ ಅಮೃತಧಾರೆ...

ಮಮತಾ ಎಚ್.ಎಸ್ /ಸುರೇಶ ಎಸ್.ವಿ.
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST

ಆಗಸ್ಟ್‌ 1ರಿಂದ 7 ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಕ್ಕಳಲ್ಲಿ ಜೀವನಿರೋಧಕ ಶಕ್ತಿ ಹೆಚ್ಚಿಸುವ ಎದೆ ಹಾಲು ಕೇವಲ ಹೊಟ್ಟೆ ತುಂಬಿಸಲಷ್ಟೇ ಅಲ್ಲ, ಆರೋಗ್ಯ ಮತ್ತು ಆಯುಷ್ಯ ಹೆಚ್ಚಿಸಲೂ ಎನ್ನುವುದು ನೆನಪಿರಲಿ. 

ಎದೆಹಾಲು ಅಮೃತಕ್ಕೆ ಸಮಾನ. ಇದು ಅಕ್ಷರಶ: ನಿಜವಾದ ಅಮೃತಧಾರೆ. ತಾಯ ಹೃದಯಾಂತರಾಳದಿಂದ ಉಕ್ಕುವ ಆ ವಾತ್ಸಲ್ಯಧಾರೆಗೆ ಸರಿಸಮಾನವಾದುದು ಬೇರಾವುದೂ ಸಿಗಲಾರದು. ಜೀವವನ್ನು ಪೊರೆದು ಒಂದಡೀ ಬದುಕಿಗೆ ಭದ್ರ ಬುನಾದಿ ಹಾಕಿ ಕೊಡುವ ಅಮ್ಮನ ಅಕ್ಕರೆಯ ಸವಿಸಕ್ಕರೆಯ ಆ ಒಂದೊಂದು ಹನಿಯೂ ಈ ಭೂಮಿಯ ಮೇಲೆ ಮಗುವಿನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಅಂತಹ ಅಮ್ಮನ ಅತ್ಯಮೂಲ್ಯ ಅಮೃತಧಾರೆಯಿಂದ ವಂಚಿತರಾಗಿ ಬಿಟ್ಟರೆ? ಆ ಜೀವ ಕಳೆದುಕೊಳ್ಳುವುದಕ್ಕೆ ಬೇರೇನು ಬಾಕಿ ಉಳಿದೀತು?

ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬರೇ ದುಡಿದರೆ ಜೀವನ ಸಾಗಿಸುವುದು ಕಷ್ಟಕರವಾಗಿರುವುದರಿಂದ ಮಹಿಳೆ ಸಹ ಮನೆಗೆ ಸೀಮಿತವಾಗದೆ ಹೊರಗಡೆ ಹೋಗಿ ದುಡಿಯುವುದು ಸಹಜವಾಗಿದೆ.

ದುಡಿಯುವ ತಾಯಂದಿರು ಮಗುವಿನ ಪುಟ್ಟ ಹೊಟ್ಟೆಯನ್ನು ತುಂಬಿಸಲಾಗದೆ, ಕೊರಗುತ್ತಾರೆ. ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ತಾಯಂದಿರು ತನ್ನ ಉತ್ಪಾದಕ ಹಾಗೂ ಜೀವೋತ್ಪಾದಕ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಎಳೆಯ ಕಂದಮ್ಮಗಳಿಗೆ ಶ್ರೇಷ್ಠ ಪೋಷಣೆ ಮತ್ತು ಪೌಷ್ಠಿಕಾಂಶ ಒದಗಿಸಬೇಕು. ದುಡಿಯುವ ಮಹಿಳೆಯರು ಮನೆಯಲ್ಲಿದ್ದಾಗ ಆರು ತಿಂಗಳವರೆಗೆ ಸಂಪೂರ್ಣ ಎದೆಹಾಲು ಕುಡಿಸಬೇಕು ಮತ್ತು ಕೆಲಸಕ್ಕೆ ಹೋದಾಗಲೂ ಮಗುವಿಗೆ ಎದೆಹಾಲು ಸಿಗುವಂತೆ ಹಾಲನ್ನು ಹಿಂಡಿ ತೆಗೆದಿಡಬೇಕು. ಇದರಿಂದ ಹಾಲು ಕಡಿಮೆಯಾಗದೇ ಹೆಚ್ಚಾಗಲು ಪೂರಕವಾಗುತ್ತದೆ.

ಎದೆಹಾಲು ಹಿಂಡಿ ತೆಗೆಯುವ ವಿಧಾನ
ಪ್ರತಿಯೊಬ್ಬ ದುಡಿಯುವ ಮಹಿಳೆ ಪ್ರತಿ ಎರಡರಿಂದ ಮೂರು ಗಂಟೆಗಳಿಗೊಮ್ಮೆ ಎದೆಹಾಲನ್ನು ಹಿಂಡಿ ತೆಗೆಯುವ ವಿಧಾನ ಕಲಿತಿರಬೇಕು. ಇದರಿಂದ ಆಗುವ ಅನುಕೂಲಗಳೆಂದರೆ

*ಹಾಲು ಸೋರುವುದಿಲ್ಲ.

*ಹಾಲು ಸಂಗ್ರಹಿಸಿದರೆ ಮತ್ತೆ ಬಳಸಲು ಸಾಧ್ಯ. ಇದರಿಂದ ತಾಯಿ ಮತ್ತು ಮಗುವಿಗೆ ಅನುಕೂಲ. ಸ್ತನ ಊದಿಕೊಂಡಿರುವಾಗ, ಸೋಂಕಿರುವಾಗ ಹಿಂಡಿ ತೆಗೆಯಬೇಕು. ಮತ್ತು ವಿಶೇಷ ಅಗತ್ಯಗಳಿದ್ದಲ್ಲಿ ಸಂಗ್ರಹಿಸಿಡಬೇಕು. ಮಗು ಕಾಯಿಲೆಯಾಗಿ ಆಸ್ಪತ್ರೆಯಲ್ಲಿದ್ದರೆ, ತಾಯಿ ದೂರದಲ್ಲಿ ಕೆಲಸದಲ್ಲಿದ್ದರೆ ಹಾಲು ಹಿಂಡಿ ತೆಗೆದು ಕಳಿಸಬಹುದು.

*ಎದೆಹಾಲನ್ನು ತೆಗೆಯುವುದಕ್ಕೆ ಮುಂಚೆ ಕೈಗಳನ್ನು ಸೋಪು, ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

*ದೊಡ್ಡ ಬಾಯಿ ಮತ್ತು ಮುಚ್ಚಳವಿರುವ ಬಟ್ಟಲನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಒಣಗಿಸಿರಬೇಕು. ತೇವದ ಅಂಶವಿರಬಾರದು. ಆರಾಮವಾಗಿ ನಿಂತು ಅಥವಾ ಕುಳಿತು ಮೊಲೆ ತೊಟ್ಟಿನ ಕೆಳಗೆ ಬಟ್ಟಲನ್ನು ಹಿಡಿದು ಕಿರುಡನ್ನು ಒತ್ತಿ ತೆಗೆಯಬೇಕು. ಹಾಲನ್ನು ಕೈಯಿಂದ ಹಿಂಡಿ ತೆಗೆಯಲು ಸಮಯ ಹಿಡಿಯುತ್ತದೆ, ಪ್ರಾರಂಭದಲ್ಲಿ ಹಾಲು ಬರದೇ ಹೋಗಬಹುದು ಆದರೆ ಕ್ರಮೇಣ ಕಿರುಡದ ಕೆಳಗಿನ ಹಾಲಿನ ಕೋಶಗಳನ್ನು ಪದೇ ಪದೇ ಒತ್ತಿದಾಗ ಹಾಲು ಬರಲು ಪ್ರಾರಂಭಿಸುತ್ತದೆ. ಎರಡು ಸ್ತನಗಳ ಹಾಲು ತೆಗೆಯಲು ಕನಿಷ್ಠ 20 ನಿಮಿಷಗಳು ಬೇಕಾಗುತ್ತದೆ 24 ಗಂಟೆಗಳಲ್ಲಿ ಸರಾಸರಿ ಎಂಟು ಸಲ ಹಾಲು ಹಿಂಡಿ ತೆಗೆಯಬಹುದು.

ಹಿಂಡಿ ತೆಗೆದ ಹಾಲನ್ನು ಮುಚ್ಚಳವಿರುವ ಸ್ವಚ್ಛ ಬಾಟಲಿಯಲ್ಲಿ ಸಂಗ್ರಹಿಸಿ, ಕೋಣೆ ಉಷ್ಣಾಂಶದಲ್ಲಿ 8 ಗಂಟೆ ಮತ್ತು ಫ್ರಿಡ್ಜ್‌ನಲ್ಲಿಟ್ಟಿರೆ 24 ಗಂಟೆಯ ಒಳಗೆ ಬಳಸಬಹುದು. ಸಂಗ್ರಹಿಸಿದ ಹಾಲು ಬಳಸುವಾಗ ಕುದಿಸಬೇಡಿ. ಬೆಚ್ಚಗೆ ಮಾಡಲು ಬಿಸಿ ನೀರಿನಲ್ಲಿ, ಹಾಲಿರುವ ಪಾತ್ರೆಯನ್ನು ಸ್ವಲ್ಪ ಸಮಯ ಇಟ್ಟು ಕೋಣೆಯ ಉಷ್ಣಾಂಶಕ್ಕೆ ಬಂದ ನಂತರ ಅಲುಗಾಡಿಸಿ ಮಿಶ್ರಮಾಡಿ ಕುಡಿಸಿ.

*ಹಿಂಡಿ ತೆಗೆದ ಹಾಲನ್ನು ಹೊಳಲೆ, ಚಮಚ ಅಥವಾ ನೇರವಾಗಿ ಲೋಟದಿಂದ ಕುಡಿಸಬಹುದು.

*ಬಾಟಲಿಯಲ್ಲಿ ಹಾಕಿ ಕುಡಿಸಬೇಡಿ.

ನಿಮ್ಮ ಮಗು ಮನೆಯಲ್ಲಿದ್ದರೆ ಮನೆಯವರಿಗೆ ತೋರಿಸಿ ಕುಡಿಸುವಂತೆ ಹೇಳಿ, ಇಲ್ಲವೇ ಡೇ ಕೇರ್‌ಗೆ ಮಗುವನ್ನು ಬಿಡುವುದಾದರೆ ಮಗುವಿನ ಜೊತೆ ಕೊಟ್ಟು ಕಳುಹಿಸಿ. ಆಗ ನಿಮ್ಮ ಮಗು ನಿಮ್ಮ ಎದೆ ಹಾಲು ಕುಡಿದು ಬೆಳೆಯುತ್ತದೆ. ಇದಕ್ಕೆ ಒಂದು ಜೀವವನ್ನೂ ಪೊರೆಯುವ ಶಕ್ತಿ ಇರುವುದರಿಂದ ಎದೆಹಾಲು ಹಾಳು ಮಾಡಬೇಡಿ.

ದುಡಿಯುವ ತಾಯಂದಿರಿಗೆ ಕಿವಿಮಾತು
ಎದೆಹಾಲನ್ನು ಹಿಂಡಿ ತೆಗೆಯುವುದನ್ನು ರೂಢಿಸಿಕೊಳ್ಳಿ. ಕೆಲಸಕ್ಕೆ ಹೋಗುವ ಮೊದಲು ಮಗುವಿಗೆ ಹಾಲು ಕುಡಿಸಿ, ಕೆಲಸದಿಂದ ಬಂದ ತಕ್ಷಣ ಮೊದಲು ಮಗುವಿಗೆ ಹಾಲು ಕುಡಿಸಿ, ರಾತ್ರಿ ಮಲಗುವ ಮೊದಲು ಹಾಗೂ ನಡು ರಾತ್ರಿಯಲ್ಲಿ ಹಾಲು ಕುಡಿಸಿ. ರಜಾ ದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಹೆಚ್ಚುಸಲ ಎದೆಹಾಲನ್ನು ಕುಡಿಸಿ. ಕೆಲಸದ ಸಮಯದಲ್ಲಿ ಒತ್ತಡ, ದಣಿವಿಗೆ ಅವಕಾಶ ಕೊಡಬೇಡಿ. ಸಾದಾಬಟ್ಟೆ ಧರಿಸುವುದಕ್ಕಿಂತ ಚಿತ್ರಗಳಿರುವ ಉಡುಪುಗಳನ್ನು ತೊಡಿ, ಆಕಸ್ಮಾತ್ ಹಾಲು ಉಕ್ಕಿದಾಗ ಗೊತ್ತಾಗುವುದಿಲ್ಲ ಮತ್ತು ಹಿಂಡಿ ತೆಗೆಯಲು ಅನುಕೂಲವಾಗುವಂತಹ ಉಡುಪು ಧರಿಸಿ.

ಕೃಷಿ ಮುಂತಾದ ಸಂಘಟಿತವಲ್ಲದ ಕ್ಷೇತ್ರದಲ್ಲಿ ದುಡಿಯುವ ಮಹಿಳೆಯರು ಕೆಲಸಕ್ಕೆ ತಡವಾಗಿ ಹಿಂದಿರುಗಬಹುದು ಅಥವಾ ಮಗುವನ್ನೂ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು. ತಾಯಿ ಊಟದ ಬಿಡುವು ಮತ್ತು ಕಾಫಿ ಬಿಡುವಿನಲ್ಲಿ ಮಗುವಿನ ಹತ್ತಿರಕ್ಕೆ ಹೋಗಿ ಹಾಲೂಡಿಸಿ ಬರಬೇಕು. ಮಗುವು ಕಚೇರಿಯ ಹತ್ತಿರವೇ ಇದ್ದಲ್ಲಿ ಬಿಡುವಿನ ವೇಳೆಯಲ್ಲಿ ಮಗುವನ್ನು ಕಚೇರಿಯ ಹತ್ತಿರ ಕರೆದುಕೊಂಡು ಬಂದು ಮಗುವಿಗೆ ಹಾಲೂಡಿಸಿದ ನಂತರ ಹಿಂದಿರುಗಲು ವ್ಯವಸ್ಥೆ ಮಾಡಿ ಆರು ತಿಂಗಳಿನ ನಂತರ ಎದೆಹಾಲಿನ ಜೊತೆಗೆ ಮನೆಯಲ್ಲಿ ತಯಾರಿಸಿದ ಪೂರಕ ಆಹಾರವನ್ನು ಪ್ರಾರಂಭಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.