ADVERTISEMENT

ಎಲ್ಲರಂಥವನಲ್ಲ ನನ್ನಪ್ಪ

ಲತಾ ಹೆಗಡೆ
Published 24 ಜುಲೈ 2015, 19:54 IST
Last Updated 24 ಜುಲೈ 2015, 19:54 IST

ಬಾಲ್ಯದಲ್ಲಿ ಸುತ್ತಮುತ್ತಲಿನ ಅಪ್ಪಂದಿರು; ಸಂಬಂಧಿಕರ ಚೌಕಟ್ಟಿನಲ್ಲಿ ಕಾಣಸಿಗುವ ಅಪ್ಪಂದಿರನ್ನು ಗಮನಿಸುವುದೇ ನನ್ನ ಎಳೆಯ ಕಣ್ಣುಗಳ ಕೆಲಸವಾಗಿತ್ತು. ಸದಾ ಸಿಡುಕುವ ‘ದಾದ’  ಆಗಿನ ಕಾಲದ ವಿಜ್ಞಾನ ಪದವೀಧರ; ಅಚ್ಚುಕಟ್ಟುತನಕ್ಕೆ ಹೆಸರುವಾಸಿಯಾದ ಗಂಭೀರ.

ಎಲ್ಲರೂ ಘಂಟಸಾಲ, ಪಿ.ಬಿ. ಶ್ರೀನಿವಾಸ್, ಮುಕೇಶ್, ಮನ್ನಾ ಡೇ , ರಫಿಯ ಹಾಡುಗಳನ್ನು ಕೇಳಲು ಇಷ್ಟ ಪಟ್ಟರೆ ಇವ ಮಾತ್ರ ಮಂದ್ರ ಷಡ್ಜ ಸ್ವರದ ಸೈಗಲ್ ಹಾಡಿನ ಭಕ್ತನಾಗಿದ್ದ.  ನಾಸ್ತಿಕ; ಓದುವ ಚಟವಿದ್ದವ. ಮುಖಕ್ಕೆ ಹೊಡೆದಂತೆ ಹೇಳುವ ನಿಷ್ಠುರವಾದಿ... ಇವನೇಕೆ ಎಲ್ಲರಂತಿಲ್ಲ? ಎಳೆಯ ಮನಕ್ಕೆ ಕೌತುಕ. ಸಾಲದ್ದಕ್ಕೆ ದೇವಸ್ಥಾನದ ಅರ್ಚಕರ ಮಗಳಾದ ಅಮ್ಮನ ನೇಮ ನಿಷ್ಠೆ. ಮಡಿಹುಡಿ ಸಂಪ್ರದಾಯಗಳ ಭರಾಟೆಯ ಚಿತ್ರಣ, ಕೆಳಮಧ್ಯಮ ವರ್ಗ.

ಆಗಿನ ಕಾಲದಲ್ಲಿ ನಶ್ಯ ಹಾಕಿಕೊಳ್ಳುವವರು, ಬೀಡಿ, ಹೆಚ್ಚೆಂದರೆ ಸಿಗರೇಟು ಸೇದುವವರನ್ನು ನೋಡಿದ್ದೆವು. ಅಪ್ಪನಿಗಾವ ಚಟವೂ ಇರಲಿಲ್ಲ. ಆದರೆ ಕೆಲಸದ ನಿಮಿತ್ತ ವರ್ಷಾವಧಿ ಕೋಲ್ಕತ್ತಾದಲ್ಲಿ ಇದ್ದು ಬಂದಾಗ ದಪ್ಪ ಕೋಲಿನ ತುಂಡಿನಂತಹ ಸಿಗಾರ್ ಸೇದುವ ಚಟ ಹತ್ತಿಸಿಕೊಂಡು ಬಂದಿದ್ದ. ಆವ ಸೇದುವಾಗ ಅನ್ಯಗ್ರಹದ ಪ್ರಾಣಿಯೆಂಬಂತೆ ಸಂಬಂಧಿಕರು, ಗೆಳತಿಯರು -ಕಸಿನ್‌ಗಳು ಇಣುಕಿ ನೋಡುತ್ತಾ ಮುಸಿಮುಸಿ ನಗುತ್ತ ಆಡಿಕೊಳ್ಳುವುದು ನನಗಿಷ್ಟವಾಗಿರಲಿಲ್ಲ. ಅಪ್ಪನ ಮೇಲೆ ಕೆಟ್ಟ ಕೋಪ ಹುಟ್ಟಿಸಿತ್ತು. ಇಂತಹ ಅಪ್ಪ ಜ್ಞಾನದ ಆಗರವಾಗಿದ್ದ.

ಯಾವುದೇ ವಿಷಯ ಕೇಳಿದರೂ ಅವನಲ್ಲಿ ಸಮರ್ಪಕ ಉತ್ತರವಿತ್ತು. ಮನೆಯ ಹಿರಿಮಗನಾದ್ದರಿಂದ ತನ್ನ ತಾಯಿಯ ಬಾಣಂತನವನ್ನು ಎಳವೆಯಲ್ಲೇ ಮಾಡಿದ ಅನುಭವವನ್ನು ಆಗಾಗ ಹೇಳಿಕೊಳ್ಳುತ್ತಿದ್ದ. ಪುಟ್ಟ ಅಡುಗೆಮನೆಯಲ್ಲಿ ಮುಕ್ಕಾಲು ಚಂದ್ರಾಕೃತಿಯಲ್ಲಿ ನೆಲದ ಮೇಲೆ ಊಟಕ್ಕೆ ಕುಳಿತುಕೊಳ್ಳುವ ಚಿತ್ರಣದಲ್ಲಿ ಅಪ್ಪನ ಪಕ್ಕದ ಸೀಟು ಫಟಿಂಗ ಚಿಕ್ಕ ಅಣ್ಣನಿಗೇ ಮೀಸಲು. ತರಕಾರಿ ಹೋಳುಗಳನ್ನು ತಿನ್ನದಿದ್ದರೆ ಪೆಟ್ಟು ಗ್ಯಾರಂಟಿ! ಚಿಕ್ಕದಾಗಿ ತುಂಡರಿಸಿದ ಹೋಳುಗಳನ್ನೂ ತಿನ್ನದ ತರಕಾರಿ ದ್ವೇಷಿಗಳು ನಾವಾಗಿದ್ದಾಗ ದೊಡ್ಡದಾಗಿ ಕತ್ತರಿಸಲ್ಪಟ್ಟ ಹೋಳುಗಳನ್ನು ತಿನ್ನಲು ಸಾಧ್ಯವೇ? ದಾದನ ತರ್ಕ ಚಿಕ್ಕದಾಗಿ ಕತ್ತರಿಸಿದರೆ ಪೌಷ್ಟಿಕಾಂಶ ನಾಶ,- ರುಚಿ ಕಡಿಮೆ ಎಂದು. ಅಂದುಕೊಂಡಂತೆ ಅಡುಗೆ ಇರದಿದ್ದರೆ ಅಂದು ಆಯಿಗೆ ಮಂತ್ರಾಕ್ಷತೆ ಇದ್ದದ್ದೇ. ಆಗೆಲ್ಲಾ ಪಾಕಡಾಗಳಾದ ನಾವು ಯಾವುದಾದರೂ ವಿಷಯವನ್ನು ಬೇಕಿದ್ದೋ ಬೇಕಿಲ್ಲದೆಯೋ ಚರ್ಚಿಸಿ ಅವನ ಗಮನ ಸೆಳೆದು ಆಯಿಯನ್ನು ಬಚಾವು ಮಾಡುತ್ತಿದ್ದೆವು.


ಅಂತಹ ಅಪ್ಪನಿಗೀಗ ಭರ್ತಿ ಎಂಬತ್ತಾರು. ಮಾತು ಮಾತಿಗೆ ಸಿಡುಕುವ ಅವನ ಅಂತ:ಕರಣ, ಕಳಕಳಿಯ ಅರಿವು ನಮಗೆಂದೋ ಆಗಿದೆ. ಅವಿಭಕ್ತ ಕುಟುಂಬದ ಜವಾಬ್ದಾರಿಯನ್ನು ಮಹಾನಗರಿಯಲ್ಲಿ ಯಶಸ್ವಿಯಾಗಿ ಒಬ್ಬಂಟಿಗನಾಗಿ ನಿಭಾಯಿಸಿ ನಾಲ್ಕು ಮಕ್ಕಳಾದ ನಮಗೆಲ್ಲರಿಗೂ ಉತ್ತಮ ವಿದ್ಯೆ ಕೊಡಿಸಿದ್ದಕ್ಕೆ ಹ್ಯಾಟ್ಸ್ ಆಫ್. ಹಣದ ಕೊರತೆ, ಜವಾಬ್ದಾರಿಯ ಭಾರ... ಅವನನ್ನು ಮುಂಗೊಪಿಯನ್ನಾಗಿಸಿತ್ತೇನೋ. ಶರೀರ ಮಾತು ಕೇಳದಿದ್ದರೂ ಮೂರನೇ ಕಾಲಿನ ಸಹಾಯದಿಂದ ಈಗಲೂ ಸಮೀಪದ ಲೈಬ್ರರಿಗೆ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ಹೋಗಿ ಜ್ಞಾನದಾಹ ತೀರಿಸಿಕೊಳ್ಳುವ ಅವನ ಪರಿಯೇ ಅದ್ಭುತ. ಉತ್ತಮ ವಿಷಯಗಳನ್ನು ಈಗಲೂ ತನ್ನ ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಾನೆ. ಸ್ವಾಭಿಮಾನಿ.

ಮನೆಗೆಲಸದಲ್ಲಿ ಕೈಲಾಗದ ಅಮ್ಮನಿಗೆ ಸಹಾಯಮಾಡುತ್ತ ಯಾರನ್ನೂ ಅವಲಂಬಿಸದೇ ಸ್ವತಂತ್ರನಾಗಿ ಜೀವಿಸುತ್ತಿದ್ದಾನೆ. ಮಕ್ಕಳಾದ ನಾವು ಅವನಂತೆ ಮುಂಗೋಪಿಗಳಾದರೂ ಎಂತಹ ಪರಿಸ್ಥಿತಿ ಬಂದರೂ ಎದುರಿಸುವ ಛಾತಿ; ಇದ್ದದ್ದರಲ್ಲೇ ಅಚ್ಚುಕಟ್ಟುತನ; ಸರಳ ಜೀವನ; ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅಂತ:ಕರಣ. ಚಟುವಟಿಕೆಯುಕ್ತ ಜೀವನಶೈಲಿ; ಜ್ಞಾನದಾಹವನ್ನೂ  ಬಳುವಳಿಯಾಗಿ ಪಡೆದಿದ್ದೇವೆ. ಹಾಂ! ಮರೆತಿದ್ದೆ, ಇದೀಗ ಅವ ಯಾವುದೋ ನಾಟಕ ಬರೆಯುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT