ADVERTISEMENT

ಕಾಫಿ ಹೌಸ್ ಗದ್ಯ

ಸಂಗಮಿತ್ರ ಬೆಂಗಳೂರು
Published 6 ಮಾರ್ಚ್ 2015, 19:30 IST
Last Updated 6 ಮಾರ್ಚ್ 2015, 19:30 IST
ಕಾಫಿ ಹೌಸ್ ಗದ್ಯ
ಕಾಫಿ ಹೌಸ್ ಗದ್ಯ   

ಕೆಂಪನೆ ಬೆರಳುಗಳ ತುದಿ ಅವಾಗವಾಗ ನೋಡಿಕೊಳ್ಳುತ್ತಾ ಮಾತು ಪೋಣಿಸುತ್ತಿದ್ದ ಆ ಹುಡುಗಿಯ ಮುಖ ಸ್ವಲ್ಪ ಪೇಲವವಾಗಿತ್ತು. ಉಳಿದಿಬ್ಬರು ನೋಡುವಷ್ಟು ನೋಡಿ, ದನಿ ತಗ್ಗಿಸಿ, “ಹೇಯ್  ಲೇಡಿ ಮ್ಯಾಕ್‌ಬೆತ್, ಏನು ಹಬ್ಬಕ್ಕೆ ಎರಡು ದಿನ ಮುಂಚೇನೇ ಓಡಿಬಂದಿದ್ದೀಯಾ? ‘ರೆಡ್ ಅಲರ್ಟ್’ ಅನೌನ್ಸ್ ಆಯ್ತಾ?” ಅಂತ ಛೇಡಿಸಿದರು.
ನನ್ನ ಕಿವಿ ನೆಟ್ಟಗಾಯಿತು.

ಐದು ದಿನ ‘ಅನುಭವಿಸಿ’ ಇವತ್ತು ವಿರಾಮ ನನಗೆ ನಾನೇ ಕೊಟ್ಟುಕೊಂಡು, ಆ ಕಾಫೀ ಡೇಯಲ್ಲಿ ಕೂತಿದ್ದೆ. ಗೆಳತಿಯ ಜತೆ ಶಾಪಿಂಗ್ ಹೋಗುವುದು ಗುರಿ. ಆಗ ಬಂದರು, ಈ ಮೂವರು. ಅದ್ಯಾವುದೋ ಸೋಪಿನ ‘ಜನಸಾಮಾನ್ಯ ರೂಪದರ್ಶಿ’ಗಳಂತೆ ಕಾಂತಿ ಸೂಸುವ ಚರ್ಮದ, ನುಣುಪು ಕೂದಲಿನ, ಜೀನ್ಸು ಜಾಕೆಟ್ಟುಗಳಲ್ಲಿ ಹುದುಗಿರುವ ತರುಣಿಯರು. ಒಂದು ಟೇಬಲ್ ದಾಟಿ ಕೂತವರ ಸಂಭಾಷಣೆ ಆಲಿಸಿ, ಸರಳವಾಗಿ, ಪತ್ರಿಕಾಭಾಷೆಯಲ್ಲಿ ಬರೆದಿದ್ದೇನೆ

ತ.1. (ಪೇಲವ ಮುಖದವಳು): ಹ್ಞೂಂ.. ಅಲ್ಲಿ ಆ ಹಳ್ಳಿಯಲ್ಲಿ, ನೀರು, ಪಾರು ಇಲ್ಲದೆ ಅವಸ್ಥೆ ಅಂತ ಬಂದೆ. ಒಂದೊಂದ್ಸಾರಿಗೇ ನಮಗೆ ಇಷ್ಟು ಬೇಜಾರು, ಸುಸ್ತು ಆಗುತ್ತೇ ಅಂದರೆ, ಅಲ್ಲೇ ಸದಾಕಾಲ ಇರೋರ ಕತೆ ಏನು ಅಂತ. ಇಂಟರ್‌ನೆಟ್‌ನಲ್ಲಿ ಯಾರೋ ಬರೆದಿದ್ದರು: “ದೇಶದ ಘನತ್ಯಾಜ್ಯ ಅಂದರೆ ಬೆಟ್ಟದಂತೆ ಪೇರಿಸಿದ, ಬಳಸಿ ಬಿಸಾಡಿದ ‘ಸ್ಯಾನಿಟರಿ ನ್ಯಾಪ್‌ಕಿನ್’ಗಳ ಚಿತ್ರವೇ ಕಣ್ಮುಂದೆ ಬರುತ್ತೆ’’ ಅಂತ.. ನನಗೂ ಹಾಗೇ ಅನ್ನಿಸ್ತು.

ತ.2. : ‘ಸತ್ಯಮೇವ ಜಯತೇ’ಲೂ ಇದು ಪ್ರಸ್ತಾಪ ಆಯ್ತಲ್ಲಾ? ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆ ಹೆಚ್ಚಿದಂತೆ ಅವುಗಳನ್ನು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಡಿಸ್‌ಪೋಸ್ ಮಾಡುವುದು ಘನತ್ಯಾಜ್ಯ ವಿಲೇವಾರಿಯ ಅತಿ ಮುಖ್ಯ ಸಮಸ್ಯೆ ಆಗಿದೇಂತ.

ತ.3. : ಹೌದಲ್ವ? ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು. ನಮಗೂ, ಈಗ ಯೋಚಿಸಿದರೆ, ನಮ್ಮ ಸ್ಕೂಲ್ ಡೇಸ್‌ಅನ್ನು ಅವು ಎಷ್ಟೊಂದು ‘ಕೇರ್ ಫ್ರೀ’ ಮಾಡಿದ್ದವು ಅನ್ನಿಸೋಲ್ವ?.

ತ.1.: ಸದ್ಯ, ನಾವು ದೊಡ್ಡವರಾಗೋ ವೇಳೆಗೆ, ಲೂಪ್, ಬೆಲ್ಟ್ ಫಜೀತಿ ಎಲ್ಲ ಮುಗಿದು, ನೀಟಾಗಿ ಯೂಸ್ ಮಾಡಬಹುದಿತ್ತು. ತೊಳೆದು, ಕಸದ ತೊಟ್ಟಿಗೆ ಹಾಕಿ ನಿರಾಳವಾಗುತ್ತಿದ್ದೆವು. ಈಗ, ಮನೆ ಮನೆಯಿಂದ ಕಸ ಸಂಗ್ರಹಣೆ ಶುರುವಾಗಿರುವಾಗ, ಡಿಸ್‌ಪೋಸ್ ಮಾಡೋದು ಎಷ್ಟೊಂದು ಮುಜುಗರ ತರುತ್ತೆ...

ತ.2.: ಹೌದಮ್ಮ, ಏನೇನೋ ಹೇಳ್ತಾರೆ, ‘ಪೇಪರ್ ಬ್ಯಾಗ್‌ಗಳಲ್ಲಿ ಸುತ್ತಿ, ಅದರ ಮೇಲೆ ಕೆಂಪು ಕ್ರಾಸ್ ಮಾರ್ಕ್ ಹಾಕಿದರೆ ಕಸ ಕೊಂಡೊಯ್ಯುವ ರಿಕ್ಷಾ ಹುಡುಗನಿಗೆ ಅದನ್ನು ತೆಗೆಯಬಾರದು ಅಂತ ಸೂಚನೆ ಸಿಗುತ್ತೆ’ ಅಂತ. ರಾಶಿ ರಾಶಿ ಮನೆಗಳಿರೋ ಅಪಾರ್ಟ್‌ಮೆಂಟ್‌ಗಳಲ್ಲಿ, ಲೇಡೀಸ್ ಹಾಸ್ಟೆಲ್, ಪೀಜಿಗಳಲ್ಲಿ, ಪ್ರತಿಯೊಬ್ಬರೂ ಹೀಗೆ ಮಾಡ್ತಾರೆ ಅನ್ನೋ ಖಾತ್ರಿ ಇದೆಯಾ?

ತ.3 : ಎಲ್ಲರೂ ಮಾಡ್ತಾರೆ ಅಂತಿಟ್ಟು ಕೊಳ್ಳೋಣ ... ಆಮೇಲೆ ಮಂಡಗದ್ದೆಯಲ್ಲೋ, ಇನ್ಯಾವುದೋ ಹಳ್ಳಿಯಲ್ಲೋ ನಿರ್ಮಾಣವಾಗುತ್ತಲ್ಲ, ಮಲೀನ ಪ್ಯಾಡ್‌ಗಳ ಬೆಟ್ಟ? ಹೇಗೆ ಕರಗಿಸೋದು?

ತ.1: ಅದನ್ನು, ಸಣ್ಣ ಸಣ್ಣ ಹಳ್ಳಿಗಳಲ್ಲಿ, ಒಂದು ಸಾರ್ವಜನಿಕ ಜಾಗದಲ್ಲಿ ಸುಟ್ಟುಹಾಕುವ ‘ಇನ್‌ಸಿನೆರೇಟರ್’ ವ್ಯವಸ್ಥೆ ಮಾಡಬಹುದು. ಆದರೆ ತಮ್ಮ ಸ್ಥಿತಿ ‘ಸಾರಿ ಹೇಳುತ್ತದೆ’ ಎನ್ನುವ ಕಾರಣಕ್ಕಾಗಿ ಅನೇಕ ಮಹಿಳೆಯರು ಅಲ್ಲಿಗೆ ಹೋಗುವುದಿಲ್ಲ. ತಮ್ಮ ತಮ್ಮ ಮನೆಗಳಲ್ಲೇ, ಹಿತ್ತಲಲ್ಲೋ, ಮತ್ತೆಲ್ಲೋ, ಸುಡುವುದೇ ಸುಲಭ. ಆದರೆ ಅದು ಪರಿಸರಕ್ಕೆ ಮಾರಕ. ಹೀಗಾಗಿ ಹಳ್ಳಿ ಹೆಣ್ಣುಮಕ್ಕಳಿಗೆ ಬಟ್ಟೆಯೇ ಬೆಟರ್ ಅನ್ಸೋದು...

ತ.3: ಮನೆಯಲ್ಲೇ ಇರೋರು, ಅಥವಾ ಮನೆಯಿಂದ ಕೆಲಸ ಮಾಡೋರಿಗೆ ಸರಿ... ಸದಾ ಟ್ರಾವೆಲ್ ಮಾಡೋ ನನ್ನಂಥವರಿಗೆ?

ತ.1: ಪ್ಯಾಡ್ ಮತ್ತು ಹತ್ತಿ ಬಟ್ಟೆ... ಎರಡನ್ನೂ ಯುಕ್ತವಾಗಿ ಬಳಸಬೇಕು ಕಣ್ರೇ... ಅದೇ ಪರಿಣಾಮಕಾರಿ ಅಂತ ಓದಿದೆ. ಉದಾಹರಣೆಗೆ ಟೀನೇಜರ್ಸ್... ಅವರಿಗೆ ಆರಂಭದ ವರ್ಷಗಳಲ್ಲಿ ಬಟ್ಟೆ ಬಳಸೋ ವ್ಯವಧಾನ, ವೇಳೆ, ಶಾಲೆಗಳಲ್ಲಿ ಅದರ ವಿಲೇವಾರಿಗೆ ಸೂಕ್ತ ವ್ಯವಸ್ಥೆ... ಹೀಗೆ ಯಾವ ಅನುಕೂಲವೂ ಇರೋಲ್ಲ. ಬರಬರುತ್ತಾ...

ತ.2: ಬರಬರುತ್ತಾ ಏನು? ಬಳಸಿ ಬಿಸಾಡುವ ಸಾಧನವೇ ಅಭ್ಯಾಸವಾಗಿಬಿಡುತ್ತೆ.  ಈಗ ನಮಗೆಲ್ಲ ಹಾಗೇ ಅಲ್ಲವ ಆಗಿರೋದು?

ತ.1: ಊಹೂಂ, ಹ್ಞೂಂ ಬಟ್ಟೆ ಅಂದ್ರೆ ಹಿಂದೆ ಬಳಸುತ್ತಿದ್ದ ಹಾಗಲ್ಲ. ಹತ್ತಾರು ಮರುಬಳಕೆಗೆ ಯೋಗ್ಯವಾದ, ಹತ್ತಿಬಟ್ಟೆಯ ಪ್ಯಾಡ್‌ಗಳನ್ನು, ವಿಂಗ್, ತಳದಲ್ಲಿ ಒತ್ತಿ ಕೂರಿಸುವ ಗಮ್ ಎಲ್ಲ ಇರುವ, ಕಲಾತ್ಮಕವಾಗಿಯೂ ಕಾಣುವ- ಪಾಂಡಿಚೆರಿಯ ಒಂದು ಎನ್‌ಜಿಓ ತಯಾರಿಸಿದೆಯಂತೆ.. ಇವುಗಳ ಬಗ್ಗೆ ಎಲ್ಲರಿಗೂ ಮಾಹಿತಿ ಸಿಕ್ಕು, ಜಾಗೃತಿ ಮೂಡಿ..

ತ.2 ; ಜತೆಗೆ, ಮೆನ್ಸಸ್ ಟೈಮ್‌ನಲ್ಲಿ ಶುಚಿತ್ವ ಕಾಪಾಡೋದು ಎಷ್ಟು ಮುಖ್ಯ, ಮಹಿಳೆಯರ, ಗರ್ಭಾಶಯ, ಗರ್ಭನಾಳ ಎಲ್ಲವನ್ನೂ ಒಳಗೊಂಡಿರುವ- ರೀಪ್ರೊಡಕ್ಟಿವ್ ಟ್ರಾಕ್ ಇನ್‌ಫೆಕ್ಷನ್ (ಆರ್‌ಟಿಐ), ಸೆರ್‌ವಿಕಲ್-ಗರ್ಭಕೊರಳಿನ-ಕ್ಯಾನ್ಸರ್ ತಡೆಗಟ್ಟಲು ಅದು ಎಷ್ಟು ಸಹಕಾರಿ ಅನ್ನೋ ಮಹತ್ವದ ವಿಷಯವೂ...

ತ.3: ಈಗಾಗಲೇ ಇದೆಲ್ಲ, ಸರಕಾರಿ/ಸ್ವಯಂಸೇವಾ ಸಂಸ್ಥೆಗಳ ಯೋಜನೆಗಳಲ್ಲಿ, ಕೆಲವು ಕಡೆ ಪರಿಣಾಮಕಾರಿಯಾಗಿ, ಇನ್ನು ಕೆಲವು ಕಡೆ ಸುಮಾರಾಗಿ ಜಾರಿಗೊಂಡಿರುವ ಸಾಧ್ಯತೆ ಇದ್ದೇ ಇದೆ... ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮಹಿಳೆಯರು ಇದನ್ನೆಲ್ಲ ಅವರವರ ಹಳ್ಳಿಯಲ್ಲಿ ಸಾಕಷ್ಟು ಪ್ರಚಾರ ಮಾಡ್ತಾರೆ ಅಂತ ನಮ್ಮ ಕೆಲಸದಾಕೆ ಹೇಳ್ತಿದ್ದರು...ಈ ‘ಸೆಲ್ಫ್ ಹೆಲ್ಪ್ ಗ್ರೂಪ್’ ಅಂತ ಇರ್‌್ತಾವಲ್ಲ, ಅವರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕೆಯ ಮಷೀನ್ ಕೊಟ್ಟು ತರಬೇತಿ ನೀಡುತ್ತಾರಂತೆ. ಅವರು ಇದನ್ನು ಒಂದು ಉದ್ಯಮವಾಗಿ ಮಾಡಿಕೊಂಡು, ಕಡಿಮೆ ಬೆಲೆಯಲ್ಲಿ (ರೂಪಾಯಿಗೆ ಒಂದು ನ್ಯಾಪ್‌ಕಿನ್) ಅವನ್ನು ಅಲ್ಲಿನ ಮಹಿಳೆಯರಿಗೆ ಒದಗಿಸುತ್ತಾರೆ. ಅಷ್ಟೇ ಅಲ್ಲ, ಬಟ್ಟೆ ಬಳಸುವುದೇ ಅನುಕೂಲಕರ ಎನ್ನುವವರಿಗೆ ಅದನ್ನು ಸರಿಯಾದ ಕ್ರಮದಲ್ಲಿ ಶುಚಿಗೊಳಿಸಿ ಬಳಸಬೇಕಾದ ಅಗತ್ಯವನ್ನು, ಒಂದೇ ತುಂಡನ್ನು ಮೂರು-ನಾಲ್ಕಕ್ಕಿಂತ ಹೆಚ್ಚು ಸಾರಿ ಬಳಸಬಾರದು ಎನ್ನುವ ಅಂಶವನ್ನು ವಿವರಿಸುತ್ತಾರಂತೆ...

ತ.1: ಇಂಟೆರೆಸ್ಟಿಂಗ್ ಅಂದ್ರೆ, ಇಡೀ ದೇಶದಲ್ಲಿ ಮಹಿಳೆಯರು ಶೇ 100ರಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಬಳಸುವಂತಾಗಬೇಕು ಎಂದು ಶ್ರಮಪಟ್ಟು, ಸುಲಭ ಬೆಲೆಗೆ ಅವನ್ನು ತಯಾರಿಸುವ ಮಷೀನ್ ಕಂಡುಹಿಡಿದದ್ದು ತಮಿಳುನಾಡಿನ ಅರುಣಾಚಲಂ ಮುರುಗನಂಥನ್ ಎಂಬ ವ್ಯಕ್ತಿ. ಅವರದಂತೂ ಒಳ್ಳೆ ಇನ್‌ಸ್ಪೈರಿಂಗ್ ಸ್ಟೋರಿ. ತಿಂಗಳ ಸ್ರಾವದ ಸಮಯದಲ್ಲಿ ತನ್ನ ಹೆಂಡತಿ ಚಿಂದಿಬಟ್ಟೆ ಬಳಸುತ್ತ ಹೆಣಗಾಡುವುದು ಆತನಿಗೆ ಕೆಟ್ಟೆನಿಸುತ್ತೆ. ಏನಿದು? ಈ ಸಮಯದಲ್ಲಿ ಏನೇನು ದೈಹಿಕವಾಗಿ ಆಗುತ್ತೆ ಅಂತ ಕಂಡ ಕಂಡ ಹೆಂಗಸರನ್ನೆಲ್ಲ ಕೇಳಿ ಅವರಿಂದ ಬೈಸಿಕೊಳ್ಳುತ್ತಾರೆ. ತಾನೇ ಒಂದು ಕೃತಕ ಯುಟೆರೆಸ್ ತಯಾರಿಸಿ, ಅದನ್ನು ಒಂದು ಸಾರಿ ಒತ್ತಿದರೆ ಒಂದು ಸ್ವಲ್ಪ ಸ್ರಾವವಾಗುವಂತೆ ‘ಮುಟ್ಟಿನ’ ಅನುಭವ ಪಡೆದುಕೊಳ್ಳುತ್ತಾರೆ. ಮೇಕೆ ರಕ್ತವನ್ನು, ಹೆಪ್ಪುಗಟ್ಟದಂತೆ ರಾಸಾಯನಿಕವಾಗಿ ‘ಟ್ರೀಟ್’ ಮಾಡಿ  ಬಳಸಿ. ಕಡೆಗೆ, ನಾಲ್ಕು ಹಂತಗಳಲ್ಲಿ ಕೆಲಸ ಮಾಡುವ ಕಡಿಮೆ ವೆಚ್ಚದ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕೆ ಯಂತ್ರ ಕಂಡುಹಿಡಿಯುತ್ತಾರೆ. ಹೀರಿಕೊಳ್ಳುವ ಗುಣದ ವುಡ್ ಪಲ್ಪ್ (ಮರದ ತಿರುಳು) ಅನ್ನು ಹರಡಿ, ಮಡಚಿ, ಜೋಡಿಸಿ, ಉಗಿಯ ಒಲೆಗಳಲ್ಲಿ ಅವನ್ನು ಕ್ರಿಮಿರಹಿತ ಮಾಡಿ ಉತ್ಪಾದಿಸುವ ಈ ಪ್ಯಾಡ್ ಈಗ ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಡೆ ಬಳಕೆಯಲ್ಲಿದೆ... ‘ಅಷ್ಟೇನೂ ವಿದ್ಯಾಭ್ಯಾಸ ಇಲ್ಲದ ಆದರೆ ಅದ್ಭುತ ಪ್ರತಿಭೆಯ ಅರುಣಾಚಲಂ ಯಾವ ಡಿಸೈನಿಂಗ್ ಸ್ಕೂಲ್‌ನಲ್ಲಿ ಕಲಿತರು?’ ಎಂದು ಸಖೇದಾಶ್ಚರ್ಯಪಡುತ್ತ ಆಧುನಿಕ ಕಾರ್ಪೊರೇಟ್ ಸಂಸ್ಥೆಗಳು ಅವರನ್ನು ಕೊಂಡಾಡುತ್ತ್ತಿವೆ...

ತ.2 ಮತ್ತು 3: ವಾವ್! ಅಂಥವರೇ ಯಾರಾದರೂ ಈಗ ವಿಲೇವಾರಿಗೂ ಒಂದು ಮಂತ್ರ ಕಂಡುಹಿಡಿಯಬೇಕು ನೋಡು. ಅಥವಾ ಅವು ಮಣ್ಣಲ್ಲಿ ಮಣ್ಣಾಗುವಂತೆ ಬಯೊ ಡೀಗ್ರೇಡಬಲ್ ಮಟೀರಿಯಲ್
ಬಳಸಬೇಕು...

ತ.1: ಅದೂ ಒಂದು ಸಾಧ್ಯತೆ. ಹೆಂಪ್ (  ಅನ್ನೋ ಹೆಸರಿನ ಒಂದು ಬಗೆಯ ಹುಲ್ಲು, ವಾಟರ್‌ಹಯಾಸಿಂತ್ ಅಂತ ಕರೆಯಲಾಗುವ, ತುಂಬ ಹೀರುವ ಗುಣದ (ಕೆರೆಗಳನ್ನೆಲ್ಲ ನುಂಗಿ ನೀರುಕುಡಿದುಬಿಡುತ್ತವಿವು) ಸಸ್ಯ... ಇಂಥವನ್ನೆಲ್ಲ ಬಳಸುವ ಪ್ರಯೋಗಗಳು ನಡೆದಿವೆ ಅಂತಲೂ ಓದಿದೆ...

ತ.೨ ಮತ್ತು ೩: ಗ್ರೇಟ್! ನಿನ್ನ ರಿಸರ್ಚ್ ಜಾರಿಯಲ್ಲಿಡು. ಸದ್ಯಕ್ಕೆ ಒಂದು ಕಾಫಿ ಹೀರುವ.
(ನಾವಿಬ್ಬರೂ ಕಾಫಿ ಹೀರಿದೆವು. ‘ವ್ಹಿಸ್‌ಪರ್’ ಇದ್ದ ಶಾಪಿಂಗ್ ಲಿಸ್ಟ್ ನೋಡುತ್ತಾ ನಾನು ಗೊಂದಲಕ್ಕೆ ಬಿದ್ದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.