ADVERTISEMENT

ಚಿತ್ತಾರದ ಕೊಡೆಯ ಹುಡುಗಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2016, 19:30 IST
Last Updated 15 ಜುಲೈ 2016, 19:30 IST
ಚಿತ್ತಾರದ ಕೊಡೆಯ ಹುಡುಗಿ
ಚಿತ್ತಾರದ ಕೊಡೆಯ ಹುಡುಗಿ   

ಸುಡು ಬಿಸಿಲ ಬೇಗೆಗೆ ಕಾದು ಬೆಂಡಾದ ಭೂಮಿ ಹನಿ ನೀರಿಗಾಗಿ  ಕಾದು ಪರಿತಪಿಸುತ್ತದೆ. ಮಳೆಹನಿ ಬಿದ್ದ ಕೂಡಲೇ ಭೂಮಿಯ ಒಡಲಿನಲ್ಲಿ ಹಸಿರು ಚಿಗುರೊಡೆಯುತ್ತದೆ. ನನಗೂ ಮಳೆ ಎಂದರೆ ಮೊದಲಿನಿಂದಲೂ ಅದೇನೋ ಆಪ್ತಭಾವ. 

ತುಂತುರಾಗಿ ಹನಿಸಿ ಒಮ್ಮೆಲೆ ಜೋರಾಗಿ ಭೋರ್ಗರೆವ ಮಳೆ ನನ್ನಲ್ಲೆನೋ ಹೊಸ ಚೈತನ್ಯ ಮೂಡಿಸುತ್ತಿತ್ತು. ಅರೆಮಲೆನಾಡಿನ ಭಾಗದವಳಾದ ನನಗೆ ಮಳೆ ಎಂದರೆ ಎಂದೋ ಒಮ್ಮೆ ಕಾಣುವ ದೀಪಾವಳಿ ಪಟಾಕಿಯಲ್ಲ. ಮೇ ತಿಂಗಳ ಅಂತ್ಯವಾಗುವುತ್ತಿದ್ದಂತೆ ಮಳೆರಾಯನ ಆಗಮನವಾಗುತ್ತಿತ್ತು. ಅಲ್ಲಿಂದ ಆರಂಭವಾದ ಮಳೆ ನಿಲ್ಲುವುದು ಸೆಪ್ಟೆಂಬರ್ ಮಧ್ಯಭಾಗದಲ್ಲೇ. ನನಗೆ ಪ್ರತಿ ಮಳೆಗಾಲದಲ್ಲೂ ಹೊಸ ಛತ್ರಿ ತೆಗೆದುಕೊಂಡೇ ಅಭ್ಯಾಸ.

ಪ್ರತಿ ವರ್ಷದ ಜೂನ್ ಒಂದರಂದು ನನ್ನ ಬಳಿ ಹೊಸ ಬ್ಯಾಗ್‌, ಹೊಸ ಛತ್ರಿ, ಹೊಸ ಚಪ್ಪಲಿ ಇರಲೇಬೇಕಿತ್ತು. ಚಿಕ್ಕದಿನಿಂದಲೂ ಬಣ್ಣದ ಕೊಡೆಯ ಮೇಲೆ ವಿಶೇಷ ಪ್ರೀತಿ. ಪ್ರತಿ ವರ್ಷವೂ ಬೇರೆ ಬೇರೆ ಬಣ್ಣದ ಕೊಡೆಯ ಬೇಡಿಕೆ ಇಡುತ್ತಿದ್ದೆ. ಇಷ್ಟೇಲ್ಲ ಬೇಡಿಕೆ ಇಟ್ಟು ಅಜ್ಜನೊಂದಿಗೆ ಪೇಟೆಯೆಲ್ಲ ಸುತ್ತಿ ಬಣ್ಣದ ಕೊಡೆ ತಂದರೂ ಕೂಡ ಸಾಧಾರಣ ಮಳೆಯಲ್ಲಿ ಕೊಡೆ ಬಿಡಿಸುತ್ತಿರಲಿಲ್ಲ.

ಎಲ್ಲಿ ಕೊಡೆ ಹಾಳಾಗುತ್ತೋ, ಅಷ್ಟೇಲ್ಲ ಸುತ್ತಾಡಿ ಶ್ರಮಪಟ್ಟು ತಂದ ಛತ್ರಿ ಹಾಳಾದರೆ ಮತ್ತೆ ಹೊಸದು ಕೊಡಿಸುವುದಿಲ್ಲ ಎಂಬ ಭಯಕ್ಕೆ ಮಳೆಯಲ್ಲೇ ನನೆದು ಬರುತ್ತಿದ್ದೆ. ಹೊಸ ಕೊಡೆಯ ಮೇಲಾದರೆ ಹನಿ ನೀರು ತುಂತುರಾಗಿ ನಿಲ್ಲುತ್ತದೆ. ಅದು ಹೊಸತು ಎಂದು ಎಲ್ಲಿರಿಗೂ ಗೊತ್ತಾಗುತ್ತದೆ.

ಇನ್ನೂ ಪ್ರತಿದಿನ ಕೊಡೆ ಉಪಯೋಗಿಸಿದರೆ ಅದು ಹಳೆಯದಾಗಿ ತುಂತುರು ಹನಿ ನಿಲ್ಲುವುದಿಲ್ಲ ಎಂಬ ದುಃಖಕ್ಕೆ ಕೊಡೆಯನ್ನೇ ಬಿಡಿಸುತ್ತಿರಲಿಲ್ಲ. ಹೀಗೆ ಅನೇಕ ಮಳೆಗಾಲವನ್ನು ಹೊಸ ಕೊಡೆಯಾಗಿಯೇ ಇರಬೇಕು ಎಂಬ ಭಾವದಿಂದ ಕಳೆದಿದ್ದೆ. ಹೀಗಿದ್ದಾಗ ಒಮ್ಮೆ ಟೀವಿಯಲ್ಲಿ ಸುಂದರ ಯುವತಿಯ ಚಿತ್ತಾರವಿರುವ ಚೆಂದದ ಕೊಡೆಯೊಂದನ್ನು ಕಂಡೆ. ಆ ಕೊಡೆ ನನ್ನ ಮನಸ್ಸನ್ನು ಹೊಕ್ಕು ಬಿಟ್ಟಿತ್ತು.

ಅಂತಹದೇ ಕೊಡೆ ನನಗೆ ಬೇಕು ಎಂದು ಬಳಹಷ್ಟು ಹುಡುಕಾಡಿದೆ. ಕೊಡೆ ಸಿಗಲಿಲ್ಲ. ಎಲ್ಲೆಲ್ಲೋ ಯಾರ್‍್ಯಾರ ಬಳಿಯಲ್ಲೋ ಹೇಳಿ ಅಂತಹದೇ ಕೊಡೆ ಬೇಕೆಂದು ಹುಡುಕಾಡಿದ್ದೆ. ಆ ಕೊಡೆ ಸಿಗದೇ ಬೇರೆ ಕೊಡೆ ಬೇಡವೇ ಬೇಡ ಎಂದು ನಿರ್ಧರಿಸಿದ್ದೆ. ದ್ವಿತೀಯ ವರ್ಷದ ಪದವಿಯಿಂದ, ಸ್ನಾತಕೋತ್ತರ ಪದವಿ ಮೊದಲನೇ ವರ್ಷದವರೆಗೆ ಕೊಡೆಯಿಲ್ಲದೇ ಅವರಿವರ ಕೊಡೆಯಲ್ಲೇ ಆಶ್ರಯ ಪಡೆದು ಮೂರು ವರ್ಷ ತಳ್ಳಿದ್ದೆ.

ಆದರೂ ಆ ಬಣ್ಣದ ಕೊಡೆಯಲ್ಲಿ ಹುಡುಗಿಯನ್ನು ಚಿತ್ರಿಸಿದ್ದ ಕೊಡೆಯ ಹುಡಕಾಟ ನಿಲ್ಲಿಸಿರಲಿಲ್ಲ. ಹೀಗೆ ದ್ವಿತೀಯ ಎಂಸಿಜೆಯ ಆರಂಭದಲ್ಲಿ  ಸುಮ್ಮನೆ ಉಜಿರೆ ಪೇಟೆಯಲ್ಲಿ ಸುತ್ತಾಡುತ್ತಿದ್ದಾಗ ಅಂಗಡಿಯೊಂದರಲ್ಲಿ ಬಣ್ಣ ಬಣ್ಣದ ಕೊಡೆಗಳನ್ನು ನೇತು ಹಾಕಿದ್ದರು. ಯಾಕೋ ಮನಸ್ಸಿನಲ್ಲಿ ನನ್ನ ಮನಕ್ಕಂಟಿದ ಚಿತ್ತಾರದ ಕೊಡೆ ಸಿಗಬಹುದೇನೋ ಎಂಬ ಭಾವ.

ಒಳಹೊಕ್ಕು ಎಲ್ಲ ಕೊಡೆಗಳನ್ನು ಬಿಡಿಸಿ ಬಿಡಿಸಿ ನೋಡಿದೆ. ಉಹೂಂ, ಅಲ್ಲಿಯೂ ಸಿಗಲಿಲ್ಲ, ಇನ್ನೇನೂ ಹೊರಗಡೆ ಬರಬೇಕು ಎಂದು ನಿರಾಶೆಯಿಂದ ತಿರುಗಿದೆ. ಅಲ್ಲೇ ಮೂಲೆಯಲ್ಲಿ ತಿಳಿ ಹಸಿರುಬಣ್ಣದ ಕೊಡೆಯೊಂದಿತ್ತು. ಸುಮ್ಮನೆ ಬಿಡಿಸಿ ನೋಡಿದೆ, ಅರೇ? ಅನ್ನಿಸಿತ್ತು.

ಕಾರಣ ಆ ಕೊಡೆ ನನ್ನ ಕನಸಿನ ಕೊಡೆಯಾಗಿತ್ತು. ಕೊನೆಗೂ ಸಂತಸದಿಂದ ಅವರು ಕೇಳಿದಷ್ಟು ಹಣ ನೀಡಿ ಕೊಡೆ ಖರೀದಿಸಿದ್ದೆ. ಅಂತೂ ನನ್ನ ಕನಸಿನ ಕೊಡೆ ನನ್ನದಾಗಿತ್ತು.  ಹೀಗೆ ಈ ಕೊಡೆಗೂ, ಮಳೆಗೂ ನನಗೂ ಇದ್ದ ನಂಟು ಚಿತ್ತಾರದ ಕೊಡೆಯಲ್ಲಿ ಅಂಟಿಕೊಂಡಿತ್ತು.
-ರೇಷ್ಮಾ ಶೆಟ್ಟಿ

***

‘ಕೊಡೆಯೊಂದಿಗೆ ಹಾರಿ ಕಾಮನಬಿಲ್ಲನ್ನೇರಿ’
ನಮ್ಮೂರಿನ ಗೊರಗು ನೇಯುವ ಕೈಗಳು ಮಾಯವಾದಂತೆ ಕೊಡೆಗಳು ತಲೆಯೆತ್ತಿದವು. ಗೊರಗು ಗೊತ್ತಲ್ಲವೇ? ಬೆತ್ತವನ್ನು ಉದ್ದುದ್ದ ಸೀಳಿ, ಪಳಗಿದ ಕೈಗಳು ನರ್ತಕಿಯ ಹೆಜ್ಜೆಯಂತೆ ಅತ್ತಿಂದಿತ್ತ ಚಲಿಸಿ ಸಲೀಸಾಗಿ ಹೆಣೆಯುತ್ತಿದ್ದ ಮುರದಂತಹ ಗೊರಗು. ಗೊರಗನ್ನು ತಲೆಗಾಗಿ ನೇತುಬಿಟ್ಟು ಬೆನ್ನಿಗೆ ಅಂಟಿಸಿ ಬಾಗಿ ನಡೆದರೆ ಮಳೆಗೇನು ಗಾಳಿಗೂ ಹೆದರಬೇಕಿಲ್ಲ.

ಯುದ್ಧಕ್ಕೆ ಸನ್ನದ್ಧನಾದ ಯೋಧನಿಗೆ ಉಕ್ಕಿನ ಕವಚವಾದರೆ, ಉಳುವ ರೈತನಿಗೆ ಗೊರಗೇ ಕವಚ. ಗೊರಗುಗಳಿಗೆ ಆಯುಸ್ಸೂ ಹೆಚ್ಚು. ಗೊರಗುಗಳು ತಮ್ಮನ್ನು ನೇಯ್ದವರು ಬದುಕಿದಷ್ಟು ವರ್ಷ ಜೀವಿಸಿದ ನಿದರ್ಶನಗಳೂ ಉಂಟು. ಅವುಗಳಿಗೆ ಬೇಸಿಗೆಯಲ್ಲಿ ವಿಶ್ರಾಂತಿ. ಅಟ್ಟದಲ್ಲಿನ ಅವರ ಆ ಏಕಾಂತವನ್ನು ಭಂಗಮಾಡಿ ಮಕ್ಕಳಾದ ನಾವು ಅವರೊಳಗೆ ಮನೆಯಾಟ, ಅಡುಗೆಯಾಟ ಆಡುತ್ತಿದ್ದೆವು.

ಇಷ್ಟು ಆತ್ಮೀಯವಾದ ಗೊರಗುಗಳನ್ನು ಮರೆತು ಹೇಗೆ ನನ್ನ ಒಲವು ಕೊಡೆಗಳತ್ತ ತಿರುಗಿತೋ? ‘ಛೀ, ಗೊರಗು ಹೊದ್ದು ಶಾಲೆಗೆ ಹೋಗ್ತಾರಾ?’ ಎಂದು ಛೇಡಿಸಿದ ಅಮ್ಮನ ಮಾತಿನಿಂದಲೋ ಅಥವಾ ಅಣಬೆಗಳಂತೆ ತೋರಿದ ಕೊಡೆಗಳ ಆಕಾರದಿಂದಲೋ ತಿಳಿಯದು. ಕೊಡೆಗಳ ಬಣ್ಣದಿಂದಂತೂ ಅಲ್ಲವೇ ಅಲ್ಲ. ಕಾರಣ ಆಗೆಲ್ಲ ಊರಲ್ಲಿ ಉದ್ದದ ಕಪ್ಪುಕೊಡೆಗಳೇ ಹೆಚ್ಚು. ಬಣ್ಣದ ನಾಜೂಕು ಕೊಡೆಗಳು ನಮ್ಮೂರ ಮಳೆ ಗಾಳಿಗೆ ಮುರಿದು ಮೂಲೆ ಸೇರುತ್ತಿದ್ದವು.

ನಮ್ಮೂರಿನ ಗಾಳಿ ಎಂದರೆ ಎಂತಹ ಗಾಳಿ! ಇಲ್ಲಿನ ಊರಿನ ಹೆಸರೇ ‘ಗಾಳಿಬೀಡು’. ಸಾಧಾರಣ ಕೊಡೆಗಳು ಗಾಳಿಯ ಆರ್ಭಟಕ್ಕೆ ಮಗುಚಿ ತಾವರೆಯಾಗಿ ಮುದುಡಿ ಹಿಪ್ಪೆಯಾಗುತ್ತವೆ. ಕೊಡೆಗಳು ಮಾತ್ರವಲ್ಲ ಮನೆಗಳ ಹೆಂಚೇ ಎಷ್ಟೋ ಬಾರಿ ಹಾರಿ ಹೋದ್ದದ್ದಿದೆ. ಕೆಲವು ಹಿರಿಯರು, ಕೊಡೆಯನ್ನು ಭದ್ರವಾಗಿ ಹಿಡಿದುಕೊಳ್ಳದಿದ್ದರೆ ಮಕ್ಕಳೂ ಅದರೊಂದಿಗೆ ಹಾರಿ ಹೋಗುತ್ತಾರೆ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಆಗ ನನಗೆ ಅವರ ಮಾತಿನಿಂದ ಭಯವಾಗುತ್ತಿದ್ದರೂ, ದೂರದ ಲೋಕಕ್ಕೆ ಹಾರಿ ಹೋಗುವ ಕನಸೂ ಕಾಣುತ್ತಿದ್ದೆ.

ಹೀಗಿರುವಾಗೊಮ್ಮೆ ತಿಳಿ ಬಿಸಿಲು, ಮೋಡವನ್ನು ಮೆಲ್ಲನೆ ಅತ್ತ ಸರಿಸಿ ನಮ್ಮೂರಿಗೆ ಬಂದಿತು. ಮಳೆಗಾಲದಲ್ಲಿ ಇಲ್ಲಿ ಬಿಸಿಲು ಬರುವುದು ಬಹಳ ಅಪರೂಪ. ಬಿಸಿಲು ಬಂದ ಬೆನ್ನಲ್ಲೇ ಕಾಮನಬಿಲ್ಲು ಬಾಗಿ ಬಣ್ಣದ ಕಣ್ಣುಗಳನ್ನು ಪಿಳಿಪಿಳಿ ಅರಳಿಸಿ ನೋಡಿತು.

ಮೂಲೆಯಲ್ಲಿದ್ದ ಕಪ್ಪುಬಣ್ಣದ ಅಜ್ಜಕೊಡೆಯನ್ನು ಅರಳಿಸಿ ಮೆಲ್ಲನೆ ಹೊರನಡೆದೆ. ಮಳೆ ತುಸುವೇ ಜಿನುಗುತ್ತಿತ್ತು. ಗಾಲ್ಫ್ ಮೈದಾನದತ್ತ ನಡೆದೆ. ಮೈದಾನ ಕಾಮನಬಿಲ್ಲಿನ ಹಸಿರುಬಣ್ಣವನ್ನು ಕದ್ದು ಕಳ್ಳನಂತೆ ಮಲಗಿತ್ತು. ಮರಗಳು ಬಹಳ ಕಡಿಮೆ ಇರುವ ಆ ಮೈದಾನದಲ್ಲಿ ಗಾಳಿಯ ಓಟ ಜೋರಿತ್ತು. ನನ್ನ ಕೈಯಲ್ಲಿದ್ದ ಕೊಡೆ ಓಲಾಡಿತು. ಕ್ಷಣಮಾತ್ರದಲ್ಲಿ ಕೊಡೆ ನನ್ನನ್ನೆಳೆದುಕೊಂಡು ಆಕಾಶದಲ್ಲಿ ಹಾರುತ್ತಿತ್ತು.

ಮೇಲೆ ತೇಲುತ್ತ ಕಾಮನಬಿಲ್ಲನು ಏರಿ ಕೆಂಪು ಅರಿಶಿಣ ಬಣ್ಣಗಳನ್ನು ಬೊಗಸೆಯಲ್ಲಿ ತುಂಬಿ ಅಮ್ಮನಿಗೆ ಒಯ್ಯಲು ಕೈ ಮುಂದೆ ಮಾಡಿದೆ. ಮುಖದ ಮೇಲೆ ಪಟಪಟನೆ ಮಳೆಹನಿ ರಾಚಿತು. ಎಚ್ಚೆತ್ತು ನೋಡಿದೆ. ನನ್ನ ಕೊಡೆ ಆಕಾಶದಲ್ಲಿ ಬಲೂನಿನಂತೆ ಹಾರುತ್ತಿತ್ತು. ಅಂದಿನಿಂದ ನನಗೆ ಕಪ್ಪುಕೊಡೆಗಳೆಂದರೆ ಬಹಳ ಪ್ರೀತಿ. ಅವನ್ನು ಕಂಡಾಗ ಇದು ಕಳೆದುಹೋದ ಕೊಡೆಯಾಗಿರಬಹುದೇ ಎನಿಸುತ್ತದೆ.
-ಚರಿತಾ ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT