ADVERTISEMENT

ಜಾತ್ರೆ ಎಂಬ ಬದುಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಮೇ 2017, 19:30 IST
Last Updated 3 ಮೇ 2017, 19:30 IST
ಚಿತ್ರ: ಪ್ರವರ ಕೊಟ್ಟೂರು
ಚಿತ್ರ: ಪ್ರವರ ಕೊಟ್ಟೂರು   

ಯಪ್ಪಾ...! ಅದೆಷ್ಟು ಮಂದಿ, ಏನ್ ಸುದ್ದಿ!! ನನ್ನ ಕಣ್ಣಿಲೆ ನೋಡಿದಷ್ಟೂ ಬರೀ ಮಂದಿನ ಮಂದಿ... ಒಬ್ರ, ಇಬ್ರ... ಲಕ್ಷಗಟ್ಟಲೇ ಮಂದಿ ಸೇರಿತ್‌ ನೋಡ್ರಿ... ನೆತ್ತಿ ಮ್ಯಾಲ ಮನಗಂಡ ಖಡಕ್ ಬಿಸಿಲು... ಗಂಡು ಮಕ್ಳ ತೆಲಿ ಮ್ಯಾಲ ಟೊಪ್ಪಿಗಿ, ಹೆಣ್ಣ ಮಕ್ಳ ತಲ್ಯಾಗ ಹೂವ, ಹುಡುಗ್ರು ಹುಡಗ್ಯಾರು ಹರೆಯದವ್ರು ಹರಸವ್ರು ಹಣ್ಣ ಹಣ್ಣ ಮುದುಕ್ರು ಮುದುಕ್ಯಾರು ಎಲ್ಲಾರೂ ಹೊಸ ಹೊಸ ಅರಬಿ ತೊಟ್ಟು ಇದ್ದ ಬಿದ್ದ ಒಡವಿ ಎಲ್ಲಾ ಮೈಮ್ಯಾಲ ಹೇರ್ಕೊಂಡು ನೆರದಿದ್ರು. ಒಂದ್ ಸಣ್ಣ ಇರುವಿನೂ ಆ ಗದ್ದಲ್ದಾಗ ಹಾದ ಹೊರಗ ಬರು ಹಂಗsss ಇದ್ದಿದಿಲ್ಲ ನೋಡ್ರಿ...

ಅಂತಾದ್ರಾಗ... ಮಂದಿಗೆಲ್ಲ ದೂಡಕೋತ ಸರಸ್ಕೋತ ಮುಂದ ಮುಂದ ಹೋಗುದು ಒಂದ ಹರ ಸಾಹಸ, ಅಂತಾ ಗದ್ದಲ್ದಾಗ ಜಾತ್ರೆಲ್ಲಾ ಅಡ್ಡಾಡುದು ಅಂದ್ರ, ಎಲ್ಲಿ ಇರಲಾರ್ದ ಹಿಗ್ಗು ನೋಡ್ರಿ... ಅಂತಾ ಜಾತ್ರ್ಯಾಗ ಎಲ್ಲಾ ಅಂಗಡಿ ತಿರಗಕೋತ ಯಾವ್ಯಾವ  ಅಂಗಡ್ಯಾಗ ಏನೇನ ಸಾಮಾನ್ ಬಂದಾವ್ ಅಂತ ನೋಡ್ಕೊಂತ, ಚೌಕಾಸಿ ಮಾಡ್ಕೊಂತ, ಹಂಗss ಮುಂದಕ್ಕ ಹೋಗಿ, ಒಂದ ಥಂಡೇಗಾರ ಕೈಯಾಗ ಹಿಡ್ಕೊಂಡು ಬಾಯ್ಯಾಗ ಹೀರ್ಕೋಂತ, ಇನ್ನೊಂದ ಕೈಯಾಗ ಗಿರಗಿಟ್ಲಿ ಹಿಡ್ಕೊಂಡ ಅದಕ್ಕ ಗಾಳಿ ಹಾಕ್ಕೊಂತ, ಅದ್ರ ಜೋಡಿ ನಾನೂ ತಿರಗಕೋಂತ ಹೊಂಡುದ್ರಾಗss ನಮ್ಮ ಸಾಹೇಬ ಕಾಕಾ ಬಂದಾನ. ಹೂ... ಸಾಹೇಬ ಕಾಕಾss ದರ ವರ್ಸ ಜಾತ್ರ್ಯಾಗ ಗರ್ದಿ ಗಮ್ಮತ್ತ ಆಡಸ್ತಾನ್ಲ ಅವ್ನ... ಆ ಕಾಕಾನ ಕೂಡ ಮಾತ್ಯಾಡಿ, ನಾನೂ, ಆ ಇಟ್ಟss ತೂತದಾಗ ನನ್ನ ಕಣ್ಣ ಇಟ್ಟು ಬಾಯ್ ತೆರ್ಕೊಂಡ ಗರ್ದಿ ಗಮ್ಮತ್ತ ನೋಡಿ ಕುಣದ್ಯಾಡಿ ಬಿಟ್ಟ್ಯಾ ನೋಡ್ರಿ...

ಅದss ಖುಷಿಯೊಳಗ ಮುಂದ ಹೊಕ್ಕಿನಿ!... ಹಾರಾಡಕತ್ತಾವ, ಬಣ್ಣ ಬಣ್ಣದ ಪುಗ್ಗಾ! ಬಿಟ್ಟೀನಾ  ನಾ... ಅದರಾಂದ ಒಂದು ತಗೊಂಡ ಹಾರಸ್ಕೊಂತ ನಡದ್ರsss ಬತ್ತ ನೋಡ್ರಿ, ಇಟ್ಟೊತನಾ ಹುಡಕ್ಲಾಕತ್ತ ಚಕ್ರ ಗಾಣ!! ಅದ್ರಾಗ ಕುಂಡ್ರುದು ಅಂದ್ರನೂ ಒಂದ್ ಮಜಾ... ಅದರಾಗ ಕುಂತು, ಮ್ಯಾಲ ಹೋದಾಗ, ಪುರಾ ಜಾತ್ರಿ ಎಲ್ಲಾ ನೋಡೂದು ಅಂದ್ರss ಸ್ವರ್ಗನ ನನ್‌ ಮುಂದ... ಅಟ್ಟೆಲ್ಲಾ ಕುಣದ್ಯಾಡಕೋತ ಮಂದಿಗೆಲ್ಲಾ ಕೈ ಬೀಸ್ಕೋತ, ತೆಳಗ ನಿತ್ತ ಸಣ್ಣ ಹುಡುಗ್ರಿಗೆಲ್ಲಾ ನಾನಾ ನಮ್ನಿ ಅಣಕಿಸ್ಕೊಂತ ಮಜಾ ಮಾಡುದ್ರಾಗ, ನಿತ್ತ ನೋಡ್ರಿ ಈ ಚಕ್ರಗಾಣ... ಅದರಾಂದ ಇಳ್ದು... ಮತ್ತ ಒಂದಿಸ ಮಂದಿ ಗೆಳತ್ಯಾರ್ನ ಮಾಡ್ಕೊಂಡು ಎಲ್ಲಾ ಅಂಗಡ್ಯಾಗ ಹಣಕಿ ಹಾಕ್ಕೊಂತ ಹೊಂಟೆ.

ADVERTISEMENT

ಎಲ್ಲಾ ಬಳಿ ಸರ ಸಾಮಾನ ನೊಡ್ಕೋತ, ಎತ್ತಲಾರ್ದ ದೊಡ್ಡದ ನಮ್ಮಾಯಿ ಮೇಲಮುಸ್ಕಿ ಸೀರ್ಯಾನ ಲಂಗ ಹಾಕ್ಕೊಂಡ. ಹಾದ್ಯಾನ ಮಂದಿಗೆಲ್ಲಾ ಮಾತಾಡಸ್ಕೊಂತ ಮನಿ ಸೇರಿದ್ರ, ಮನಿ ತುಂಬಾ ಜಾತ್ರಿ ಹಿಡಿಸಬಿಡುದು. ನಾಳಿ ಜಾತ್ರ್ಯಾಗ ಏನೇನ್ ಮಾಡುದು ಅಂತ ವಿಚಾರ ಮಾಡ್ಕೋತ, ಬೆಂಡ್ ಬತ್ತಾಸ ತಿಂದು ಕುಣದ್ಯಾಡಿ ಜಾತ್ರಿ ಮಾಡುದು ಅಂದ್ರ ನಮ್ಮ  ಬಾಲ್ಯದಾಗ ಒಂದ ಬಾರಿ ಹಬ್ಬ. ಖುಷಿ. ಸಡಗರ. ಏನೇನೆಲ್ಲಾ... ಆ ಜಾತ್ರಿ, ಬದುಕಿಗಿ ಭಾಳ ಹತ್ರ ನೋಡ್ರಿ...
-ಸುಕೃತಾ ಪಟ್ಟಣಶೆಟ್ಟಿ ಸಿಂದಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.