ADVERTISEMENT

ಜ್ಯೋತಿಷಿಗಳನ್ನು ನಂಬಬೇಕೇ?

ಪದ್ಮಜಾ ಸುಂದರೇಶ್
Published 19 ಡಿಸೆಂಬರ್ 2014, 19:30 IST
Last Updated 19 ಡಿಸೆಂಬರ್ 2014, 19:30 IST

ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮಗನಿಗೆ ಇದ್ದಕ್ಕಿದ್ದಂತೆ ‘ಬ್ರೇನ್’ ಟ್ಯೂಮರ್ ಆಗಿದೆಯೆಂಬ ಸುದ್ದಿ ಬಂದಾಗ, ನಮ್ಮ ಜಂಘಾಬಲವೇ ಉಡುಗಿ ಹೋಗಿತ್ತು. ಆ ಕ್ಷ್ಷಣದಲ್ಲಿ ನೆನಪಿಗೆ ಬಂದ ದೇವರುಗಳಿಗೆಲ್ಲ ಹರಕೆ ಕಟ್ಟಿಕೊಳ್ಳುತ್ತ ಬೆಂಗಳೂರಿಗೆ ಧಾವಿಸಿದ್ದೆವು. ಅವನನ್ನು ಪರೀಕ್ಷಿಸಿದ ಸರ್ಜನ್, ಟ್ಯೂಮರ್ ಆಪರೇಶನ್ ಮಾಡಲಾರದಂತಹ ಜಾಗದಲ್ಲಿ ಕಂಡುಬಂದಿದೆ, ಅವನಿಗೆ ಕೊಡಬಹುದಾದ ಚಿಕಿತ್ಸೆ ಎಂದರೆ ರೇಡಿಯೇಷನ್ ಮತ್ತು ಕೀಮೋಥೆರಪಿ ಮಾತ್ರ ಎಂದರು. ಆದರೆ ರೇಡಿಯೇಷನ್ ಕೊಡುವ ಪೂರ್ವಸಿದ್ಧತೆಯಲ್ಲಿ ಇರುವಾಗಲೇ ಅವನ ಮೆದುಳಿನಲ್ಲಿ ಊತ ಕಂಡು ಬಂದಿತ್ತು.

‘ನಿಮ್ಮ ಮಗನ ಜೀವ ಉಳಿಯಬೇಕಾದರೆ ಆದಷ್ಟೂ ಶೀಘ್ರವಾಗಿ ಆಪರೇಷನ್ ಮಾಡಲೇಬೇಕು’ ಎಂದು ಅದೇ ಸರ್ಜನ್ ಹೇಳಿದಾಗ ನಮಗೆ ಒಪ್ಪದೆ ಬೇರೆ ದಾರಿ ಇರಲಿಲ್ಲ. ಆಪರೇಷನ್ ಯಶಸ್ವಿಯಾದಾಗ ದೇವರು ಇನ್ನೂ ನಮ್ಮ  ಪಾಲಿಗಿದ್ದಾನೆ ಎಂದುಕೊಳ್ಳುತ್ತ ಸಮಾಧಾನ ಹೊಂದಿದ್ದೆವು. ಆದರೆ ಆ ಸಮಾಧಾನ ಹೆಚ್ಚು ಕಾಲ ಉಳಿಯಲಿಲ್ಲ. ನಮ್ಮ ಮಗ ಇನ್ನೂ ಐ.ಸಿ.ಯು ನಲ್ಲಿ ಇರುವಂತೆಯೇ ನನ್ನ ಪತಿ ತೀವ್ರವಾದ ಹೃದಯಾಘಾತದಿಂದ ಮೃತರಾದರು.

ವಿಪರ್ಯಾಸವೆಂದರೆ ಆ ಸುದ್ದಿಯನ್ನು ಮಗನಿಗೆ ಹೇಳುವಂತೆಯೇ ಇರಲಿಲ್ಲ. ಅವನ ಆರೋಗ್ಯ ತುಂಬ ಸೂಕ್ಷ್ಮವಾಗಿದೆ. ತಂದೆಯ ಸಾವಿನ ಸುದ್ದಿಯನ್ನು ಈಗ ತಿಳಿಸಿದರೆ ಮಾನಸಿಕ ಆಘಾತವಾಗಬಹುದು ಎಂದು ವೈದ್ಯರು ಎಚ್ಚರಿಕೆ ಕೊಟ್ಟಾಗ ನಾವು ಸುಮ್ಮನಿರಲೇಬೇಕಾಯಿತು.  ಕೊನೆಗೂ ಒಂದು ದಿನ ವಿಷಯ ಬಯಲಾದಾಗ ಅವನು ಬಿಕ್ಕಿ,ಬಿಕ್ಕಿ ಅತ್ತ. ‘ನೀವೆಲ್ಲ ಮೋಸಗಾರರು, ಏನಾದರೂ ನನಗೆ ವಿಷಯ ತಿಳಿಸಬೆಕಾಗಿತ್ತು. ಈಗ ನನಗೆ ಅಣ್ಣನನ್ನು ತೋರಿಸಲು ನಿಮ್ಮಿಂದ ಸಾಧ್ಯವಾಗುತ್ತದೆಯಾ?’ ಎಂದು ಕೇಳಿದಾಗ ನಮ್ಮ ಬಳಿ ಉತ್ತರವಿರಲಿಲ್ಲ.

ನಿತ್ಯ ಮನೆಯಿಂದ ಓಡಾಡಿಕೊಂಡೇ ರೇಡಿಯೇಷನ್,ಕೀಮೋತೆರಪಿ ಚಿಕಿತ್ಸೆ ಪಡೆದ. ಅವು ಮುಗಿಯುವಷ್ಟರಲ್ಲಿ ಅವನ ಆರೋಗ್ಯ ಬಹಳ ಮಟ್ಟಿಗೆ ಸುಧಾರಿಸಿತ್ತು. ತಾನೇ ಹತ್ತಿರದ ಪಾರ್ಕ್‌ಗೆ ತಿರುಗಾಡಲು ಹೋಗುತ್ತಿದ್ದ, ಫ್ರೆಂಡ್ಸ್ ಜೊತೆ ಸಿನಿಮಾ, ಹೋಟೆಲ್‌ಗಳಿಗೂ ಹೋಗುತ್ತಿದ್ದ. ಇನ್ನು ಕೆಲವೇ ದಿನಗಳಲ್ಲಿ ಕೆಲಸಕ್ಕೂ ಹೋಗುತ್ತಾನೆಂಬ ಭರವಸೆ ನಮಗುಂಟಾಗಿತ್ತು. ಈ ಮಧ್ಯೆ ಅವನ ಗ್ರಹಗತಿಗಳು ಹೇಗಿವೆ ಎಂದು ತಿಳಿಯಲು ಅವನ ಜಾತಕವನ್ನು ಹಲವು ಜ್ಯೋತಿಷಿಗಳಿಗೆ ತೋರಿಸಿದ್ದೆವು. ಅದನ್ನು ನೋಡಿದವರೆಲ್ಲರೂ ‘ಅವನ ರಾಶಿಯ ಮೇಲೆ ಶನಿಯ ಪ್ರಭಾವ ಬಹಳವಾಗಿದೆ, ಆದ್ದರಿಂದ ಶನಿಶಾಂತಿ ಮಾಡಿಸಿದರೆ ಒಳ್ಳೆಯದು, 2014 ಏಪ್ರಿಲ್ ವರೆಗೆ ಆರೋಗ್ಯದಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತವೆ. ಮೇ ತಿಂಗಳಿನಿಂದ ಅವನು ಪೂರ್ತಿ ಗುಣಮುಖನಾಗುತ್ತಾನೆ’ ಎಂದರು. ನಾವು ಶನಿ ಶಾಂತಿಯಷ್ಟೇ ಅಲ್ಲದೆ ಆಯುಷ್ ಹೋಮ, ಮೃತ್ಯುಂಜಯ ಹೋಮಗಳನ್ನೂ, ವಿಶೇಷ ಪೂಜೆಗಳನ್ನೂ ಮಾಡಿಸಿದೆವು.

ಆದರೆ ನಮ್ಮೆಲ್ಲರ ನಿರೀಕ್ಷೆ ಹುಸಿಯಾಗುವಂತೆ ಟ್ಯೂಮರ್ ಮತ್ತಷ್ಟು ಹರಡಿ ಅವನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಅದರಿಂದ ಚೇತರಿಸಿಕೊಳ್ಳದ ನಮ್ಮ ಮಗ ಒಂದು ಬೆಳಿಗ್ಗೆ ನಮ್ಮೆಲ್ಲರ ಎದುರಿಗೇ ಶಾಶ್ವತವಾಗಿ ಕಣ್ಣು ಮುಚ್ಚಿದ. ಯಾರೊಬ್ಬ ಜ್ಯೋತಿಷಿಯ ಭವಿಷ್ಯವೂ ನಿಜವಾಗಲಿಲ್ಲ. ‘ಹಾಗಾದರೆ ಜ್ಯೋತಿಷಿಗಳು ಹೇಳುವುದೆಲ್ಲ ಸುಳ್ಳೇ? ಮುಂದೇನಾಗುತ್ತದೆ ಎಂದು ತಿಳಿಯದಿದ್ದರೂ ನಮಗೆ ಸುಳ್ಳು ಭರವಸೆಗಳನ್ನು ಏಕೆ ಕೊಡಬೇಕಿತ್ತು? ದೇವರು ಇದ್ದಿದ್ದೇ ನಿಜವಾದರೆ ನಾವು ಅವನಲ್ಲಿಟ್ಟ ನಂಬಿಕೆ ಏಕೆ ಸುಳ್ಳಾಯಿತು? ಎಷ್ಟೆಲ್ಲ ಪೂಜೆ ಪುನಸ್ಕಾರಗಳನ್ನು ಮಾಡಿದ್ದರೂ ದೇವರೇಕೆ ನಮ್ಮ ಪಾಲಿಗೆ ನಿಷ್ಕರುಣಿಯಾದ’ ಎಂಬ ಉತ್ತರವಿಲ್ಲದ ಪ್ರಶ್ನೆಗಳು ಪದೇ ಪದೇ ಕಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.