ADVERTISEMENT

ಧ್ಯಾನ ಬೇಡ, ಸಂತಸ ಇರಲಿ...

ಸ್ವಸ್ಥ ಬದುಕು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 19:30 IST
Last Updated 22 ಆಗಸ್ಟ್ 2014, 19:30 IST

ಯಾವುದೇ ಭಾಷೆಯಲ್ಲಿನ ಅತ್ಯಂತ ಕ್ಷುಲ್ಲಕವಾದ ಪದಗಳೆಂದರೆ, ನನಗೆ ಬೇಸರವಾಗುತ್ತಿದೆ ಎನ್ನುವುದು.

ಮತ್ತೊಬ್ಬ ವ್ಯಕ್ತಿಯಿಂದ, ಯಾವುದೋ ಕೆಲಸದಿಂದ ಇಲ್ಲವೇ ಬದುಕಿನಿಂದ ಬೇಸರವಾದಂತೆ ನಿಮಗೆ ಅನಿಸುತ್ತದೆ. ಆದರೆ, ನೀವು ನಿಮ್ಮಿಂದಲೇ ಬೇಸರಗೊಂಡಿರುತ್ತೀರಿ. ನೀವು ಎಂಬ ಪವಾಡದಿಂದ ನಿಮಗೇ ಬೇಸರವಾದರೆ ಹೇಗೆ? ನಿಮ್ಮ ಸೌಂದರ್ಯ, ವೈಶಿಷ್ಟ್ಯ ನಿಮಗೆ ಅರ್ಥವಾಗಿಲ್ಲ ಎಂದರ್ಥ. 

*ಮೊದಲು, ನಿಮ್ಮನ್ನು ನೀವು ಕೆಳಕ್ಕೆ ಇಳಿಸಿಕೊಳ್ಳುವುದನ್ನು ಬಿಡಿ. ನಿಮ್ಮೊಳಗಿನಿಂದ ಹೊರಗಿನವರೆಗೆ ಒಳ್ಳೆಯದೇ ತುಂಬಿಕೊಂಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀವು ನಿತ್ಯದ ಬದುಕಿನಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತೀರಿ. ಪಾಲಕ, ಸಹೋದರ, ಸಹೋದರಿ, ಮಗು, ಸ್ನೇಹಿತ, ಸಂಗಾತಿ, ಉದ್ಯೋಗಿ, ಮಾಲೀಕ, ಆತಿಥೇಯ, ಆಟಗಾರ... ಇತ್ಯಾದಿ. ನೀವು ನಿರ್ವಹಿಸುವ ಎಲ್ಲ ಪಾತ್ರಗಳನ್ನು ಪಟ್ಟಿ ಮಾಡಿ. ನಿಮಗೇ ಆಶ್ಚರ್ಯವಾಗುತ್ತದೆ.

ಮನುಷ್ಯನಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುವುದರ ಜತೆಗೆ ನೀವೊಬ್ಬ ಬೆಳಕು, ಸಂಭ್ರಮ, ಪ್ರೀತಿ, ಶಾಂತಿ, ಸೌಹಾರ್ದ, ಬುದ್ಧಿ ತುಂಬಿದ ಚೈತನ್ಯವೂ ಹೌದು. ಆಧ್ಯಾತ್ಮಿಕ ಸ್ಥಿತಿಯಲ್ಲಿರುವ ಈ ಚೈತನ್ಯಕ್ಕೆ ಸಂಘರ್ಷ, ಸಿಟ್ಟು, ಪೈಪೋಟಿ ಇತ್ಯಾದಿ ಯಾವುದೇ ಋಣಾತ್ಮಕ ಭಾವನೆಗಳೂ ಇರುವುದಿಲ್ಲ. ಈ ಅದ್ಭುತ ಚೈತನ್ಯವೇ ನೀವು. ನನ್ನ ಜೀವನದಲ್ಲಿ ಒಳ್ಳೆಯದು ಘಟಿಸುವುದಿಲ್ಲ. ನಾನು ಅರ್ಹನಾಗಿಲ್ಲ ಎಂಬ ಮನೋಭಾವ ಬಿಡಿ.

*ಬೇಸರವಾಗಿದೆ ಎಂದವರಿಗೆ ಧ್ಯಾನ ಮಾಡಿ ಎಂದು ನಾನು ಹೇಳುವುದಿಲ್ಲ. ‘ಧ್ಯಾನ ಮಾಡುವುದು ಬೇಸರದ ಸಂಗತಿಯೇ. ಖುಷಿ, ಖುಷಿಯಾಗಿ ಧ್ಯಾನ ಮಾಡಲು ಸಾಧ್ಯವೇ? ನೀವು ಮೌನವಾಗಿ ಕುಳಿತು ಮನಸ್ಸನ್ನು ಖಾಲಿ ಮಾಡಿಕೊಳ್ಳಿ ಎಂದು ಹೇಳುತ್ತೀರಿ. ಅದರಲ್ಲಿ ಅಂತಹ ಮಜಾ ಏನಿದೆ’ ಎಂದು ಅವರು ನನ್ನನ್ನು ಪ್ರಶ್ನಿಸುತ್ತಾರೆ. ಅವರಿಗೆ ನಾನು ಧ್ಯಾನ ಬೇಡಿ. ಆಂತರಿಕ ಶಾಂತಿ ರೂಢಿಸಿಕೊಳ್ಳಿ ಎನ್ನುತ್ತೇನೆ.

ಖುಷಿಯಾದ ಆಲೋಚನೆ ಮಾಡುತ್ತಲೇ ಹಾಸಿಗೆಯಿಂದ ಏಳಿ. ಖುಷಿಯಾಗಿ ಮಲಗಿ. ನಿತ್ಯವೂ ನಾವು ತೆರೆಯುವ ಹಾಗೂ ಮುಚ್ಚುವ ಬಾಗಿಲು ನಮ್ಮ ಬದುಕನ್ನು ನಿರ್ಧರಿಸುತ್ತದೆ. ನಿಮ್ಮ ಬದುಕಿನಲ್ಲಿ ಸಂತಸವನ್ನು ಹಾಸುಹೊಕ್ಕಾಗಿಸಿ. ಬೆಳಿಗ್ಗೆ ಎದ್ದ ಕೂಡಲೇ ಆ ದಿನ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ನೆನಪಿಸಿಕೊಳ್ಳುವುದಕ್ಕಿಂತ ನಿಮ್ಮ ಇಷ್ಟ ದೈವವನ್ನು ನೆನಪಿಸಿಕೊಳ್ಳಿ. ಶಾಂತಿ, ಸಂತಸ ಇತ್ಯಾದಿ ಪದಗಳನ್ನು ಮನನ ಮಾಡಿ ಅಥವಾ ಕೃತಜ್ಞತಾ ಪೂರ್ವಕವಾದ ಪ್ರಾರ್ಥನೆ ಸಲ್ಲಿಸಿ. ನನಗೆ ನೆನಪಿರುವ ಬೆಳಗ್ಗೆ ಹೇಳುವ ಪ್ರಾರ್ಥನೆ ಇಲ್ಲಿದೆ.

‘ಪ್ರೀತಿಯ ಸೂರ್ಯ, ಬದುಕೆಂಬ ಉಡುಗೊರೆಗಾಗಿ ಧನ್ಯವಾದಗಳು. ಈ ಪ್ರಯಾಣದಲ್ಲಿ ನಾನು ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು. ಅವರು ನನಗೆ ಸ್ಫೂರ್ತಿ ನೀಡುತ್ತಾರೆ. ನನ್ನನ್ನು ಬೆಳೆಸುತ್ತಾರೆ. ಪ್ರೀತಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ. ನನ್ನ ಬದುಕು ಎಷ್ಟೊಂದು ಅರ್ಥಪೂರ್ಣವಾಗಿದೆ ಎಂಬುದನ್ನು ಅವರು ನನಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.’ ಈ ಪ್ರಾರ್ಥನೆ ಹೇಳಿಕೊಂಡಾಗ ಮನಸ್ಸು ಉಲ್ಲಸಿತವಾಗುತ್ತದೆ. ಅದರ ಯೋಚನಾ ಶಕ್ತಿ ಹೆಚ್ಚುತ್ತದೆ. ಉತ್ಸಾಹ, ಸಂಭ್ರಮ ತಾನಾಗಿಯೇ ಬರುತ್ತದೆ.

*ಆ ದಿನ ಮಾಡಬೇಕಾದ ಅತ್ಯಂತ ಕಷ್ಟದ ಕೆಲಸದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ನೀವು ಮುಂದಕ್ಕೆ ಹಾಕುತ್ತ ಹೋದಂತೆ ಸಂತಸ ಕಡಿಮೆಯಾಗುತ್ತದೆ. ಆ ಕೆಲಸವನ್ನು ಮಾಡಿ ಮುಗಿಸಿದಾಗ ಸಂತಸ ಹೆಚ್ಚುತ್ತದೆ. ಕೆಲಸ ಮಾಡುತ್ತ ಹಾಡಿ. ಮಾಧುರ್ಯ ಮತ್ತು ಲಯ ಮನದೊಳಗೆ ಇಳಿದಾಗ ಬುದ್ಧಿ ಚುರುಕಾಗುತ್ತದೆ.

*ಮಾನಸಿಕವಾಗಿ ಹಗುರವಾಗಲು ಸೂಕ್ತ ಪ್ರಮಾಣದಲ್ಲಿ ತಿನ್ನಿ. ಕಡಿಮೆಯಾದರೆ ಹಸಿದುಕೊಂಡಿರುತ್ತೀರಿ. ಹೊಟ್ಟೆ ಬಿರಿಯುವಂತೆ ತಿಂದಾಗ ಆಲಸಿಗಳಾಗಿರುತ್ತೀರಿ.
ಸಂತಸದ ಸೂತ್ರ: ನಿಮ್ಮ ಹೊಟ್ಟೆ ತುಂಬುವಷ್ಟು ತಿನ್ನಿ. ನೀವೇ ಭಾರವಾಗುವಷ್ಟು ಅಲ್ಲ.

*ಬೋರಾಗುತ್ತಿದೆ... ಎಂಬ ಭಾವ ನಿಮ್ಮೊಳಗೆ ಸುಳಿಯುತ್ತಿದೆ ಎಂದಾಗ ನನ್ನ ಬದುಕೇ ಅದ್ಭುತ ಅಂದುಕೊಳ್ಳಿ. ಉತ್ಸಾಹದ ಗಾಳಿ ಯಾವಾಗಲೂ ಬೀಸುತ್ತಲೇ ಇರುತ್ತದೆ ಎಂಬ ರಾಮಕೃಷ್ಣ ಪರಮಹಂಸರ ಮಾತುಗಳನ್ನು ನೆನಪಿಸಿಕೊಳ್ಳಿ.

ಇಬ್ಬರು ಮಾವಿನ ಹಣ್ಣು ಬೆಳೆಗಾರರ ಕಥೆಯೊಂದು ಇಲ್ಲಿದೆ. ಹಕ್ಕಿಗಳು ತನ್ನ ಮಾವಿನ ಮರದ ಮೇಲೆ ಕುಳಿತು ಹಿಕ್ಕೆ ಹಾಕುತ್ತಿವೆ ಎಂದು ಒಬ್ಬ ಬೆಳೆಗಾರ ಯಾವಾಗಲೂ ಸಿಟ್ಟಿಗೆದ್ದಿರುತ್ತಿದ್ದ. ನಿತ್ಯವೂ ಆ ಹಿಕ್ಕೆಗಳನ್ನು ಗುಡಿಸಿ ಚೀಲದಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಿದ್ದ. ಆದ್ದರಿಂದ ಆತನ ಮನೆಯಲ್ಲಿ ದುರ್ನಾತವಿರುತ್ತಿತ್ತು. ಆತನ ಕುಟುಂಬ ಸದಸ್ಯರು ಇದರಿಂದ ಬೇಸತ್ತಿದ್ದರು. ಎರಡನೇ ರೈತ ಆ ಹಿಕ್ಕೆಗಳನ್ನು ಹಾಗೆಯೇ ಬಿಡುತ್ತಿದ್ದ. ಪಕ್ವವಾದ ಮಾವಿನ ಹಣ್ಣುಗಳನ್ನು ಮಾತ್ರ ಮನೆಗೆ ಒಯ್ಯುತ್ತಿದ್ದ. ಆದ್ದರಿಂದ ಆತನ ಮನೆಯಲ್ಲಿ ಸದಾ ಮಾವಿನಹಣ್ಣಿನ ಸುವಾಸನೆ ಇರುತ್ತಿತ್ತು. ಮನೆಯಲ್ಲಿ ಎಲ್ಲರೂ ಖುಷಿಯಾಗಿರುತ್ತಿದ್ದರು.

ಹಾಗೆಯೇ ಹಿಂದೆ ಆದ ಕೆಟ್ಟ ಘಟನೆಗಳನ್ನು, ನೋವು ಕೊಡುವ ವಿಚಾರಗಳನ್ನು ಎಂದಿಗೂ ನೆನಪಿಸಿಕೊಳ್ಳಬೇಡಿ. ಅವು ಭೂತದಲ್ಲಿಯೇ ಹುದುಗಿಹೋಗಲಿ. ಹಳೆಯ ಘಟನೆ ನೆನಪಿಸಿಕೊಳ್ಳುವುದರಿಂದ ಎಲ್ಲರೂ ಸಿಟ್ಟಿಗೇಳುತ್ತಾರೆ. ಖಿನ್ನರಾಗುತ್ತಾರೆ. ಹಿಂದೆ ನಡೆದ ಸಂತಸದ ಸಂಗತಿಗಳನ್ನು ಮಾತ್ರ ನೆನಪಿಸಿಕೊಳ್ಳಿ. ಸಿಹಿಯಾದ, ಸುವಾಸನೆ ಬೀರುವ ನೆನಪಿನ ಉಡುಗೊರೆಯನ್ನು ನಿಮ್ಮ ಕುಟುಂಬಕ್ಕೆ ನೀಡಿ. ಸೌಹಾರ್ದವೇ ತುಂಬಿದ ಎಲ್ಲರೂ ಇಷ್ಟಪಡುವ ವ್ಯಕ್ತಿಯಾಗಿ. ಬದುಕಿನ ಸುಂದರ ಕ್ಷಣಗಳನ್ನು ಗುರುತಿಸಿ. ನಿಮ್ಮೊಳಗಿನಿಂದ ಸಂತಸ ಉಕ್ಕಿ  ಹರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.