ADVERTISEMENT

ಪುಟ್ಟ ಕಂದನ ಮೇಲೆ ಇರಲಿ ನಿಗಾ...

ರೇಷ್ಮಾ ಶೆಟ್ಟಿ
Published 30 ಡಿಸೆಂಬರ್ 2016, 19:30 IST
Last Updated 30 ಡಿಸೆಂಬರ್ 2016, 19:30 IST
ಚಿತ್ರ: ಸತೀಶ್ ಬಡಿಗೇರ್‌
ಚಿತ್ರ: ಸತೀಶ್ ಬಡಿಗೇರ್‌   

‘ಆಡಿ ಬಾ ಎನ ಕಂದ, ಅಂಗಾಲ ತೊಳೆದೇನೂ, ತೆಂಗಿನಕಾಯಿ ತಿಳಿನೀರ, ತೆಂಗಿನಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನು’ ಇದು ತಾಯಿ ತನ್ನ ಮಗುವಿಗೆ ಹಾಡುವ ಜಾನಪದ ಗೀತೆ. ತಾಯಿ ಮಗುವಿನ ಸುಮಧುರ ಬಾಂಧವ್ಯದ ಸವಿಯನ್ನು ಈ ಹಾಡು ಸಾರುತ್ತದೆ. ಕಾಲ ಬದಲಾಗುತ್ತಿದ್ದಂತೆ ಜೀವನದ ಎಲ್ಲ ರಂಗಗಳೂ ಬದಲಾಗಿವೆ.

ಹಿಂದೆ ತಂದೆ ದುಡಿಯಲು ಹೋಗುತ್ತಿದ್ದರೆ, ತಾಯಿ ಮನೆಯ ಜವಾಬ್ದಾರಿ ವಹಿಸಿಕೊಂಡು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರಬೇಕಿತ್ತು. ಆದರೆ ಇಂದು ಹಾಗಲ್ಲ;  ಮಕ್ಕಳನ್ನು ಹೆರುವುದಷ್ಟೇ ನಮ್ಮ ಜವಾಬ್ದಾರಿ ಎಂದುಕೊಂಡು ಮಗುವನ್ನು ಕೆಲಸದವರ ಕೈಗೆ ನೀಡಿ ತಂದೆ–ತಾಯಿ ತಮ್ಮ ಪಾಡಿಗೆ ತಾವು ಕೆಲಸಕ್ಕೆ ತೆರಳುತ್ತಾರೆ.

ವಾರಾಂತ್ಯದಲ್ಲಿ ಸಿಗುವ ದಿನವನ್ನು ಮಕ್ಕಳೊಂದಿಗೆ ಕಳೆಯಬೇಕು ಎಂಬ ಆಸೆಯಿಂದ ಪಿಕ್‌ನಿಕ್‌ ನೆಪದಲ್ಲಿ ಮಕ್ಕಳನ್ನು ಹೊರಗೆ ಕರೆದ್ಯೊಯುತ್ತಾರೆ. ಆದರೆ ಅದೇ ಹಲವರ ಪಾಲಿಗೆ ಮುಳುವಾಗುತ್ತದೆ. ಹೊರಗಡೆ ಹೋದ ಸಮಯದಲ್ಲಿ ಮಕ್ಕಳು ಸೆಲ್ಫಿ ಕ್ರೇಜ್‌ಗೋ, ಕುತೂಹಲಕ್ಕೋ, ನೀರಿನ ಸೆಳೆತಕ್ಕೋ ಸಿಕ್ಕಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ.

ಮೊದಲಿನಂತೆ ‘ಮಕ್ಕಳಿರಲ್ಲವ್ವಾ ಮನೆ ತುಂಬಾ’ ಎಂಬ ಕಾಲವೂ ಮುಗಿದಿದೆ. ಮನೆಗೊಂದರಂತಿರುವ ಮಕ್ಕಳು ಇಂತಹ ಅನಾಹುತಗಳಲ್ಲಿ ಜೀವ ಕಳೆದುಕೊಂಡಾಗ ತಂದೆ–ತಾಯಿ ಆಘಾತಕ್ಕೊಳಗಾಗುತ್ತಾರೆ. ಮಕ್ಕಳ ಅಕಾಲಮರಣ ಎಂತಹ ಗಟ್ಟಿ ಎದೆಯನ್ನೂ ಒಮ್ಮೆ ನಡುಗಿಸುತ್ತದೆ. ಆದರೆ ಮಕ್ಕಳನ್ನು ನಮ್ಮ ಕಣ್ಣೆದುರೇ ಜೀವ ಕಳೆದುಕೊಳ್ಳುವಂತೆ ಮಾಡಿ ನಂತರ ಅಳುವುದಕ್ಕಿಂತ ಮೊದಲೇ ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಉತ್ತಮ.

ಮಕ್ಕಳಿಗೆ ಪ್ರೀತಿ ತೋರಿದಷ್ಟೇ ಕಾಳಜಿಯನ್ನೂ ತೋರಿದರೆ ಇಂದೂ ನಡೆಯುತ್ತಿರುವ ಎಷ್ಟೋ ದುರಂತಗಳಿಗೆ ಕಡಿವಾಣ ಹಾಕಬಹುದು.
ಇಂದು ಅಸುರಕ್ಷತೆಯ ಕಾರಣದಿಂದ ಮಕ್ಕಳು ಜೀವ ಕಳೆದುಕೊಂಡಿರುವ ಸುದ್ದಿಯೇ  ಟೀವಿ., ದಿನಪತ್ರಿಕೆಗಳಲ್ಲಿ  ವರದಿಯಾಗುತ್ತಿದೆ. ಅದಕ್ಕೆ ತಂದೆ ತಾಯಿ, ಪೋಷಕರು, ಶಾಲೆ ಯಾರು ಹೊಣೆ ಎಂಬುದನ್ನು ನಿರ್ಧರಿಸಲಾಗುವುದಿಲ್ಲ. ಒಂದೊಂದು ದೃಷ್ಟಿಕೋನದಲ್ಲಿ ಒಬ್ಬೊಬ್ಬರು ಹೊಣೆಗಾರರಾಗುತ್ತಾರೆ. ಈ ಮಧ್ಯೆ ಮಕ್ಕಳ ಕಳ್ಳಸಾಗಣೆ ಕೂಡ ಮಕ್ಕಳ ಅಸುರಕ್ಷತೆಯ ಭಾಗವಾಗಿದೆ.

ಮಕ್ಕಳನ್ನು ಆದಷ್ಟು ಸುರಕ್ಷಿತರನ್ನಾಗಿ ಬೆಳೆಸುವುದು  ತಂದೆ–ತಾಯಿಯರ ಜವಾಬ್ದಾರಿ. ಮನೆ, ಶಾಲೆ, ಮಾಲ್‌ – ಹೀಗೆ ಎಲ್ಲ ಕಡೆಯಲ್ಲೂ ಮಕ್ಕಳ ಮೇಲೆ ನಿಗಾ ಇಡುವುದರಿಂದ ಮಕ್ಕಳು ಅಪಘಾತಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಮಕ್ಕಳ ಸುರಕ್ಷತೆಗೊಂದಿಷ್ಟು ಸಲಹೆ
ಮನೆಯಲ್ಲಿ ಇರಬೇಕಾದರೆ ಅನೇಕರು ಮನೆಯನ್ನು ಸುರಕ್ಷತೆಯ ತಾಣ ಎಂದುಕೊಂಡಿರುತ್ತಾರೆ. ಮನೆಯಲ್ಲಿ ಸದಾ ಯಾರಾದರೂ ಇರುತ್ತಾರೆ ಎಂಬ ಕಾರಣಕ್ಕೆ ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ಬಿಡುತ್ತಾರೆ. ಆದರೆ ಮನೆಯ ಒಳಗೂ ಅನೇಕ ಬಾರಿ ಮಕ್ಕಳು ಅನಾಹುತ ಮಾಡಿಕೊಳ್ಳುತ್ತಾರೆ. ಅದನ್ನು ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ.
* ಬಿಸಿನೀರನ್ನು ಮಕ್ಕಳಿಗೆ ಎಟುಕುವ ಜಾಗದಲ್ಲಿ ಇರಿಸಬೇಡಿ.
*  ಕತ್ತಿ, ಚಾಕು, ಬ್ಲೇಡ್‌ನಂತಹ ಹರಿತವಾದ ವಸ್ತುಗಳನ್ನು ಮಕ್ಕಳಿಗೆ ಸಿಗುವ ಹಾಗೆ ಇಡಬೇಡಿ.
*  ಗ್ಯಾಸ್‌, ಸ್ಟವ್‌ನಲ್ಲಿ ಬೆಂಕಿ ಉರಿಯುವಾಗ ಮಕ್ಕಳು ಕೈ ಹಾಕದಂತೆ ನೋಡಿಕೊಳ್ಳಿ.
*  ಮಹಡಿ ಮನೆಯಲ್ಲಿದ್ದರೆ ಮೆಟ್ಟಿಲುಗಳ ಮೇಲೆ ಮಗು ಒಂದೇ ಓಡಾಡದಂತೆ ನೋಡಿಕೊಳ್ಳಿ.
*  ಟೈಲ್ಸ್ ನೆಲವಾದರೆ ಎಣ್ಣೆ ಅಥವಾ ನೀರು ಚೆಲ್ಲದಂತೆ ನೋಡಿಕೊಳ್ಳಿ. ಟೈಲ್ಸ್ ಮೇಲೆ ಬಿದ್ದ ಎಣ್ಣೆ/ನೀರು ಕಾಣುವುದಿಲ್ಲ.
*  ಸೋಪ್‌, ಕೆಮಿಕಲ್‌ನಂತಹ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಿ. ಸೋಪ್‌ನಂತಹ ಬಣ್ಣದ ವಸ್ತುಗಳು ಮಕ್ಕಳನ್ನು ಆರ್ಕಷಿಸುತ್ತವೆ.
*  ಸ್ವಿಚ್‌ರ್ಬೋಡ್‌ಗಳನ್ನು ಆದಷ್ಟು ಮೇಲೆ ಇರಿಸಿ. ಮಕ್ಕಳ ಗಮನ ಅವುಗಳ ಕಡೆಗೆ ತಿರುಗದಂತೆ ನೋಡಿಕೊಳ್ಳಿ.
*  ಮಕ್ಕಳು ಸದಾ ಟಿ.ವಿ,, ಮೊಬೈಲ್‌ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಿ. ಇದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಮಾರ್ಥ್ಯ ವೃದ್ಧಿಯಾಗುತ್ತದೆ.
*  ಡೈನಿಂಗ್‌ ಟೇಬಲ್‌, ಮಂಚದಂತಹ ವಸ್ತುಗಳ ಮೇಲೆ ಪದೇ ಪದೇ ಚಿಕ್ಕ ಮಕ್ಕಳನ್ನು ಒಂಟಿಯಾಗಿ ಕೂರಿಸಬೇಡಿ. ಆ ರೀತಿ ಮಾಡುವುದರಿಂದ ಮಕ್ಕಳ ಯಾರೂ ಇಲ್ಲದ ಸಮಯದಲ್ಲಿ ತಾವು ಅದನ್ನು ಹತ್ತಲು ಪ್ರಯತ್ನಿಸಿ ಬೀಳಬಹುದು.
*  ಹಳ್ಳಿಯ ಮನೆಗಳಾದರೆ ಮನೆಯ ಅಕ್ಕಪಕ್ಕ ಹುಲ್ಲು–ಗಿಡಗಳು ಬೆಳೆದಿರುತ್ತದೆ. ಅಲ್ಲಿ ವಿಷಕ್ರಿಮಿ/ಕೀಟಗಳು ಇರುವ ಸಾಧ್ಯತೆ ಹೆಚ್ಚು. ಹೀಗಾಗಿ ಮಕ್ಕಳನ್ನು ಹೊರಗಡೆ ಹೋಗದಂತೆ ನೋಡಿಕೊಳ್ಳುವುದು ಉತ್ತಮ.
*  ಮನೆಯ ಅಕ್ಕಪಕ್ಕ ಬಾವಿ –ಕೆರೆಗಳಿದ್ದರೆ ಮಕ್ಕಳು ಅತ್ತ ಹೋಗದಂತೆ ನೋಡಿಕೊಳ್ಳಿ.
*  ಮನೆಯ ಒಳಗೆ ಸಂಪ್‌ ಇದ್ದರೆ ಅದನ್ನು ಸದಾ ಮುಚ್ಚಿರುವಂತೆ ನೋಡಿಕೊಳ್ಳಿ.

ಶಾಲೆಗೆ ಕಳುಹಿಸುವಾಗ ಹಾಗೂ ಶಾಲೆಯಲ್ಲಿ
ವಿದ್ಯೆ ಇದ್ದರಷ್ಟೇ ಜೀವನ ಎನ್ನುವುದು ಪ್ರಸ್ತುತಕ್ಕೆ ಸೀಮಿತ. ಇಂದು ದಿನದಲ್ಲಿ  ಸುಮಾರು 8ರಿಂದ 9 ತಾಸು ಮಗು ಶಾಲೆಯಲ್ಲಿ ಕಳೆಯುತ್ತದೆ. ತಮ್ಮ ಮಗು ಉತ್ತಮ ಶಿಕ್ಷಣ ಪಡೆಯಲಿ ಎಂಬ ಧಾವಂತದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಉತ್ತಮ ಶಿಕ್ಷಣ ಸಂಸ್ಥೆಗೆ ಅವರನ್ನು ಸೇರಿಸುತ್ತಾರೆ. ಆದರೆ ತಮ್ಮ ಮಗು ಶಾಲೆಗೆ ಹೋಗಿ ಬರುವಾಗ ಮತ್ತು ಶಾಲೆಯಲ್ಲಿ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ತಂದೆ–ತಾಯಿಯೂ ಆಲೋಚಿಸಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು.
*  ಪ್ರತಿ ದಿನ ಮಗು ಶಾಲೆಯಿಂದ ಬಂದ ತಕ್ಷಣ ಮಗುವಿನ ಬಳಿ ಶಾಲೆಯಲ್ಲಿ ನಡೆದ ಘಟನೆಗಳನ್ನು ಕೇಳಿ ತಿಳಿದುಕೊಳ್ಳಿ. ಅನೇಕ ಕಡೆ ಶಿಕ್ಷಕರೇ ದೌರ್ಜನ್ಯವನ್ನು  ಎಸಗುತ್ತಿರುವುದು ವರದಿಯಾಗುತ್ತಿದೆ. ಅಪರಿಚಿತರು ಯಾರಾದರೂ ಮಾತನಾಡಿಸಿದ್ದರೆ, ಅವರು ಏನಾದರೂ ತಿನ್ನಲು ಕೊಟ್ಟಿದ್ದರೆ ಕೂಡಲೇ ಎಚ್ಚರದಿಂದ ನಡೆದುಕೊಳ್ಳಿ. ಅವರು ಯಾರೆಂದು ಪತ್ತೆ ಮಾಡಿ. ಅಪರಿಚಿತರೊಂದಿಗೆ ಮಗು ಹೇಗೆ ನಡೆದುಕೊಳ್ಳಬೇಕೆಂದು ಅದಕ್ಕೆ ಮನದಟ್ಟು ಮಾಡಿ.
* ಮಗುವನ್ನು ಶಾಲಾವಾಹನದಲ್ಲಿ ಕಳುಹಿಸುವುದಾದರೆ ವಾಹನಚಾಲಕನ ಫೋನ್‌ ನಂಬರ್‌ ಅನ್ನು ಬರೆದಿಟ್ಟುಕೊಳ್ಳಿ. ಚಾಲಕನ ಬಗ್ಗೆ ಅಗತ್ಯ ಮಾಹಿತಿಯನ್ನೂ ಪಡೆದುಕೊಳ್ಳಿ.
*  ನೀವೇ ಹೋಗಿ ಶಾಲೆಯಿಂದ ಕರೆ ತರುವುದಾದರೇ ಶಾಲೆ ಬಿಟ್ಟ ಕೂಡಲೇ ಮಗು ಶಾಲೆಯ ಕಾಂಪೌಂಡ್‌ ದಾಟಿ ಹೊರ ಹೋಗದಂತೆ ಎಚ್ಚರ ವಹಿಸಿ.
* ಶಾಲಾವಾಹನದಲ್ಲಿ ಹೋಗುವಾಗ ಮಗು ಕೈ ಅಥವಾ ತಲೆಯನ್ನು ವಾಹನದ ಕಿಂಡಿಯಿಂದ ಹೊರ ಹಾಕದಂತೆ ನೋಡಿಕೊಳ್ಳಿ.

ಮಾಲ್‌ಗಳಲ್ಲಿ ಮಕ್ಕಳ ಸುರಕ್ಷತೆ
ಇಂದಿನ ಜನರು ಶಾಂಪಿಗ್‌, ಔಟಿಂಗ್ ನೆಪದಲ್ಲಿ ಮಕ್ಕಳೊಂದಿಗೆ ಮಾಲ್‌ಗಳಿಗೆ ಹೋಗುವುದು ಸಾಮಾನ್ಯ. ಮಾಲ್‌ಗಳಿಗೆ ಹೋದರೆ ಶಾಪಿಂಗ್ ಮಾಡುವುದರೊಂದಿಗೆ  ಮಕ್ಕಳು ಇಷ್ಟ ಪಡುವ ಆಟಗಳನ್ನು ಆಡಿಸಿಕೊಂಡು ಬರಬಹುದು ಎನ್ನುವುದು ಅವರ  ವಿಚಾರ.
*  ಮಾಲ್‌ಗಳಲ್ಲಿ ಮಕ್ಕಳ ಕೈ ಹಿಡಿಕೊಂಡೇ ಇರಿ.
*  ಏಕ್ಸ್‌ಲೇಟರ್‌ಗಳಲ್ಲಿ ಮಕ್ಕಳ ಕೈ ಹಿಡಿದುಕೊಳ್ಳಿ. ಮಕ್ಕಳು ಒಬ್ಬೊಬ್ಬರೇ ಏಕ್ಸ್‌ಲೇಟರ್ ಬಳಿ ಓಡಾಡದಂತೆ ನೋಡಿಕೊಳ್ಳಿ.
*  ಲಿಫ್ಟ್‌ನಲ್ಲಿ ಹೋಗುವಾಗ ಎಚ್ಚರ ವಹಿಸಿ. ಕೆಲವೊಮ್ಮೆ ಲಿಫ್ಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಬಾಗಿಲು ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚು.
*  ನೀವು ಅಂಗಡಿಯಲ್ಲಿ ಖರೀದಿ ಮಾಡುತ್ತಿರುವಾಗ ನಿಮ್ಮ ಗಮನ ಬೇರೆಡೆ ಸೆಳೆದು ಮಕ್ಕಳನ್ನು ಕದಿಯುವವರಿದ್ದಾರೆ. ಸದಾ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಿ.
* ಮಾಲ್‌ಗಳಲ್ಲಿ ಮಕ್ಕಳನ್ನು ಅವರ ಪಾಡಿಗೆ ಅವರು ಆಟ ಆಡಿಕೊಂಡಿರಲು ಬಿಟ್ಟು ಬೇರೆಡೆಗೆ ತೆರಳಬೇಡಿ. ಆಗ ಅವರು ನಿಮ್ಮನ್ನು ಹುಡುಕಿಕೊಂಡು ಬೇರೆಡೆಗೆ ತೆರಳಬಹುದು. ಆಗ ಮಗು ನಿಮ್ಮನ್ನು, ನೀವು ಮಗುವನ್ನು ಹುಡುಕುವ ಪಜೀತಿ, ಗಾಬರಿ ಎರಡೂ ಉಂಟಾಗಬಹುದು.

ADVERTISEMENT

ಪ್ರವಾಸಕ್ಕೆ ತೆರಳಿದಾಗ
ಪ್ರವಾಸಕ್ಕೆ ತೆರಳುವಾಗ ಮಕ್ಕಳಿಗೆ ಮೊದಲೇ ಬುದ್ಧಿವಾದ ಹೇಳಿ. ಹೊಸ ಜಾಗಕ್ಕೆ ತೆರಳುವ ಮೊದಲು ಆ ಜಾಗದಲ್ಲಿ  ಹೇಗೆ ಇರಬೇಕು ಎಂಬುದನ್ನು ತಿಳಿಸಿ. ಶೀತಪ್ರದೇಶಕ್ಕೆ ಹೋಗುವುದಾದರೆ ಮಕ್ಕಳಿಗೆ ಆ ಪ್ರದೇಶಕ್ಕೆ ತಕ್ಕುದಾದ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ. 
*  ಪ್ರವಾಸಕ್ಕೆ ಹೋಗುವಾಗ ಮಕ್ಕಳ ಜೊತೆಯಲ್ಲಿಯೇ ಇರಿ. ಅಪರಿಚಿತ ಪ್ರದೇಶದಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಡುವುದು ಸೂಕ್ತವಲ್ಲ.
* ಜಲಪಾತಗಳಿಗೆ ಪ್ರವಾಸಕ್ಕೆ ತೆರಳುವಾಗ ಮಕ್ಕಳನ್ನು ಹರಿಯುವ ನೀರಿನಲ್ಲಿ ಬಿಡಬೇಡಿ. ನೀರಿನ ಸೆಳೆತವನ್ನು ಮಕ್ಕಳ ತಡೆಯುವ ಶಕ್ತಿ ಮಕ್ಕಳಿಗೆ ಇರುವುದಿಲ್ಲ.
* ನೀರು ಹರಿಯುವ ಪ್ರದೇಶದಲ್ಲಿ ಪಾಚಿ ಕಟ್ಟಿಕೊಂಡಿರುತ್ತದೆ. ಕಾಲಿಟ್ಟರೆ ಜಾರಿ ಬೀಳುವ ಸಂದರ್ಭಗಳು ಜಾಸ್ತಿ. ಹಾಗಿದ್ದಾಗ ಮಕ್ಕಳನ್ನು ದಡದಲ್ಲೇ ನಿಲ್ಲಿಸುವುದು ಸೂಕ್ತ.
* ಇಂದು ಮಕ್ಕಳಾದಿಯಾಗಿ  ಅಜ್ಜಂದಿರವರೆಗೆ ಸೆಲ್ಫಿ ತೆಗೆಯುವ ಹುಚ್ಚು ಜಾಸ್ತಿ. ಹಾಗಿದ್ದಾಗ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಒಬ್ಬರನ್ನೇ ಕಳುಹಿಸಬೇಡಿ. ಇದರಿಂದ ಅಪಾಯಗಳೇ ಜಾಸ್ತಿ.
* ಜಲಪಾತದ ತುದಿ, ಗುಡ್ಡದ ತುದಿಯಲ್ಲಿ ಮಕ್ಕಳನ್ನು ನಿಲ್ಲಿಸಿ ಫೋಟೊ ತೆಗೆಯುವ ಸಾಹಸಕ್ಕೆ ಕೈ ಹಾಕಬೇಡಿ.
ಪಾರ್ಕ್‌ನಲ್ಲಿ ಇರಲಿ ಎಚ್ಚರಿಕೆ
* ಪಾರ್ಕ್ ಅಥವಾ ಝೂಗಳಿಗೆ ಮಕ್ಕಳನ್ನು ಒಬ್ಬರೇ ಕಳುಹಿಸಬೇಡಿ.
* ಪಾರ್ಕ್‌ನಲ್ಲಿರುವ ಈಜುಕೊಳದ ಬಳಿ ಮಕ್ಕಳು ಆಟ ಆಡುತ್ತಿದ್ದರೆ ಅವರ ಮೇಲೆ ನಿಗಾ ಇರಿಸಿ. ಆ ಅಪ್ಪಿತಪ್ಪಿ ಮಕ್ಕಳು ಕೊಳದಲ್ಲಿ ಬೀಳಬಹುದು.
*  ಪಾರ್ಕ್‌ನಲ್ಲಿ ಅಲಂಕಾರಕ್ಕಾಗಿ ನಿಲ್ಲಿಸಿದ ಕಂಬ, ಅಥವಾ ಗೋಡೆಯ ಬಳಿ ನಿಂತು ಮಕ್ಕಳು ತಾವೇ ಫೋಟೊ ತೆಗೆಯುವುದನ್ನು ತಪ್ಪಿಸಿ. ಕೆಲವೊಮ್ಮೆ ಅವು ಮೈ ಮೇಲೆ ಬಿದ್ದು ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ.
*  ಪಾರ್ಕ್‌ನಲ್ಲಿರುವ ಪೊದೆಯ ಬಳಿ ಮತ್ತು ಹುಲುಸಾಗಿ ಬೆಳೆದ ಗಿಡಗಳ ಬಳಿ ಮಕ್ಕಳನ್ನು ಬಿಡಬೇಡಿ. ಹಾವು, ಚೇಳು, ಜೇನುನೊಣಗಳು ದಾಳಿಗಳಿಂದ ಆಪಾಯ ಎದುರಾಗುವ ಸಾಧ್ಯತೆ ಹೆಚ್ಚು.
* ಮಕ್ಕಳು ಝೂನಲ್ಲಿ ಪ್ರಾಣಿಗಳ ಬೋನಿನೊಳಗೆ ಕೈ ಹಾಕದಂತೆ ನೋಡಿಕೊಳ್ಳಿ. 

*
ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ
ನಾವು ನಮ್ಮ ಶಾಲೆಯಲ್ಲಿ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯ ನೀಡುತ್ತೇವೆ. ಎಲ್ಲ ಕೊಠಡಿ, ವಾರಾಂಡದಲ್ಲಿ ಸಿ.ಸಿ. ಟೀವಿ. ಕ್ಯಾಮೆರಾ ಅಳವಡಿಸಿದ್ದೇವೆ. ಮಕ್ಕಳನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಮಕ್ಕಳು ವರ್ತನೆ ಇರುತ್ತವೆ. ಅಲ್ಲದೇ ನಮ್ಮ ಶಾಲೆಗೆ ಸೇರುವಾಗಲೇ ಮಕ್ಕಳಿಗೆ ಒಂದು ಐಡಿ ಕಾರ್ಡ್‌ ನೀಡಿದ್ದೇವೆ. ಆ ಐಡಿ ನೀಡಿದರೆ ಮಾತ್ರವೇ ಮಗುವನ್ನು ಹೊರಗೆ ಕಳುಹಿಸುತ್ತೇವೆ. ಇನ್ನೂ ಪಿಕ್‌ನಿಕ್‌ ಹೋಗುವ ಸಂದರ್ಭದಲ್ಲಿ ತಂದೆ ಅಥವಾ ತಾಯಿ ಮಗುವಿನೊಂದಿಗೆ ಬರಲೇಬೇಕು. ಹೀಗಾಗಿ ಪಿಕ್‌ನಿಕ್‌ ಹೋದಾಗ ಅಂತಹ ಸಮಸ್ಯೆಗಳೇನು ಎದುರಾಗುವುದಿಲ್ಲ.
-ಕಾಂತರಾಜು ವಿ.,
ಪ್ರಾಂಶುಪಾಲರು, ವಿಭಾ ಇಂಟರ್‌ನ್ಯಾಷನಲ್ ಶಾಲೆ

*
ಜಾಗೃತಿ ಅಗತ್ಯ
ಇಂದು ನಮ್ಮ ಸಮಾಜದ ಸುತ್ತಮುತ್ತ ನಡೆಯುವ ಆಗುಹೋಗುಗಳನ್ನು ಮಾಧ್ಯಮಗಳು ತಿಳಿಸುತ್ತವೆ. ಇದು ನಮ್ಮಲ್ಲಿ ಸ್ವಯಂ ಜಾಗೃತಿಯನ್ನು ಹುಟ್ಟುಹಾಕಬೇಕು. ಮಕ್ಕಳಿಗೆ ತಿಳಿ ಹೇಳುವುದಕ್ಕಿಂತ ಪೋಷಕರೇ ಜಾಗೃತಿ ವಹಿಸಬೇಕು. ಹೈಪರ್‌ ಆಕ್ಟಿವ್‌ ಇರುವ ಮಕ್ಕಳ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕು. ಯಾವ ಯಾವ ಜಾಗದಲ್ಲಿ ಹೇಗೆ ಜಾಗೃತಿ ವಹಿಸಬೇಕು ಎಂಬುದನ್ನು ತಂದೆ–ತಾಯಿ ಮೊದಲೇ ತಿಳಿದುಕೊಂಡಿರಬೇಕು.
-ಮೋಹನ್‌ ರಾಜು,
ಕ್ಲಿನಿಕಲ್‌ ಸೈಕಾಲಾಜಿಸ್ಟ್‌

*
ಕಾಳಜಿ ತೋರಿಸಿ
ನಾನು ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್‌. ನಾನು, ನನ್ನ ಗಂಡ ಇಬ್ಬರು ದುಡಿಯುವರಾದ ಕಾರಣ ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಬೇಕಿತ್ತು. ಕೆಲವೊಮ್ಮೆ ಓನರ್‌ ಮನೆಯಲ್ಲಿ ಮಗುವನ್ನು ಬಿಟ್ಟು ಹೋಗುತ್ತಿದ್ದೆ. ಟೀವಿ., ಪೇಪರ್‌ನಲ್ಲಿ ನೋಡಿ ಸುದ್ದಿಗಳನ್ನು ಕೇಳಿ ಒಮ್ಮೊಮ್ಮೆ ಭಯವಾಗುತ್ತಿತ್ತು. ಕೆಲವೊಮ್ಮೆ ತಂದೆ–ತಾಯಿಗಳು ಮಕ್ಕಳ ಮೇಲೆ ಪ್ರೀತಿ ತೋರುತ್ತಾರೆ, ಆದರೆ ಕಾಳಜಿ ಮಾಡುವುದಿಲ್ಲ. ಅವರ ಮೇಲೆ ನಿಗಾ ವಹಿಸದೆ ದುಡಿಯುವುದಷ್ಟೇ ಮುಖ್ಯ ಎಂದುಕೊಂಡು ಬದುಕುತ್ತಾರೆ. ಅಂತಹ ಸಂದರ್ಭಗಳಲ್ಲೇ ಇಂತಹ ಅನಾಹುತಗಳು ನಡೆಯುವುದು ಹೆಚ್ಚು.
-ಕಾವೇರಿ, ಸ್ಟಾಫ್ ನರ್ಸ್‌, ಚೆನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.