ADVERTISEMENT

ಪ್ರಸೂತಿ ಸೌಲಭ್ಯಗಳ ಅನ್ವಯ

ಡಾ.ಗೀತಾ ಕೃಷ್ಣಮೂರ್ತಿ
Published 24 ಜುಲೈ 2015, 19:54 IST
Last Updated 24 ಜುಲೈ 2015, 19:54 IST

ಮಹಿಳಾ ಪರ ಕಾನೂನುಗಳನ್ನು ಅಕ್ಷರಶಃ ಅನ್ವಯಿಸುವುದರಿಂದಾಗಿ ಅನೇಕ ಬಾರಿ ಮಹಿಳೆಯರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯದೆ ಅವರು ಅನ್ಯಾಯಕ್ಕೆ ಒಳಗಾಗುತ್ತಾರೆ. ಎಲ್ಲರೂ ನ್ಯಾಯಾಲಯದ ಮೊರೆ ಹೊಕ್ಕು ನ್ಯಾಯ ದೊರಕಿಸಿಕೊಳ್ಳುವುದು ಸಾಧ್ಯವಿಲ್ಲ.

ಬಹಳಷ್ಟು ಮಂದಿ ನ್ಯಾಯಾಲಯ ಪ್ರಕ್ರಿಯೆಯಿಂದ ದೂರವೇ ಉಳಿಯಲು ಬಯಸುತ್ತಾರೆ. ಹಾಗಾಗಿ ಮೌನವಾಗಿ ಅನ್ಯಾಯವನ್ನು ಸಹಿಸುವವರ ಸಂಖ್ಯೆಯೇ ಹೆಚ್ಚು. ಪ್ರಸೂತಿ ರಜೆಗೆ ಸಂಬಂಧಿಸಿದಂತೆ ಪ್ರಸೂತಿ ಸೌಲಭ್ಯ ಅಧಿನಿಯಮ,1961 ದೇಶಾದ್ಯಂತ ಜಾರಿಯಲ್ಲಿದ್ದರೂ ಸಂಸ್ಥೆಗಳು ಒಂದಲ್ಲ ಒಂದು ಕಾರಣವನ್ನು ತೋರಿಸಿ ತಮ್ಮ ಸಂಸ್ಥೆ ಈ ಅಧಿನಿಯಮದ ವ್ಯಾಪ್ತಿಗೆ ಬರುವುದಿಲ್ಲವೆಂದು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಆ ಕಾರಣಕ್ಕೆ ತಾವು ತಮ್ಮ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗೆ ಈ ಕಾನೂನಿನ ಅಡಿಯಲ್ಲಿ ಕಡ್ಡಾಯವಾಗಿ ನೀಡಬೇಕಾದ ಸೌಲಭ್ಯಗಳನ್ನು ನೀಡದೇ ತಪ್ಪಿಸಿಕೊಳ್ಳುತ್ತಾರೆ. ಇಂಥ ಪ್ರಕರಣಗಳು ಅನೇಕ ಇರಬಹುದಾದರೂ ನ್ಯಾಯಾಲಯದ ಮುಂದೆ ಬಂದಿರುವುದು ಕೆಲವು ಮಾತ್ರ.

ಈ ಕಾನೂನಿನ ಪ್ರಕಾರ ಪ್ರಸೂತಿ ರಜೆಯ ಅವಧಿಯಲ್ಲಿ ಮಹಿಳೆಗೆ ಸಂದಾಯ ಮಾಡಬೇಕಾದ ಪ್ರಸೂತಿ ಸೌಲಭ್ಯದ ಹಣವನ್ನು ಮಹಿಳೆ ರಜೆ ಪಡೆದ ಹಿಂದಿನ ಮೂರು ಕ್ಯಾಲೆಂಡರ್ ತಿಂಗಳುಗಳಲ್ಲಿ ಆಕೆ ಪಡೆದ ಸರಾಸರಿ ಮಜೂರಿಯ ಆಧಾರದ ಮೇಲೆ ಅವಳ ದೈನಿಕ ಮಜೂರಿಯನ್ನು ಲೆಕ್ಕ ಹಾಕಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ಮಹಿಳಾ ಉದ್ಯೋಗಿಗೆ ನೀಡಲಾಗುವ ಪ್ರಸೂತಿ ರಜೆ 12 ವಾರಗಳು. ಈ ಹನ್ನೆರಡು ವಾರಗಳಿಗೆ ಪ್ರಸೂತಿ ಸೌಲಭ್ಯ ಸಂದಾಯ ಮಾಡುವಾಗ ವಾರದಲ್ಲಿ ಆರು ದಿನಗಳಂತೆ ಲೆಕ್ಕ ಮಾಡಿ ಸೌಲಭ್ಯವನ್ನು ಸಂದಾಯ ಮಾಡಬೇಕೋ ಅಥವಾ ವಾರದಲ್ಲಿ ಏಳು ದಿನಗಳೆಂದು ಲೆಕ್ಕ ಹಾಕಿ ಸೌಲಭ್ಯ ಸಂದಾಯ ಮಾಡಬೇಕೋ ಎಂಬ ಪ್ರಶ್ನೆ ಎದುರಾಗುತ್ತದೆ. ಆಗ ಮಾಲೀಕರ ಆಯ್ಕೆ ಯಾವಾಗಲೂ ಆರು ದಿನಗಳು ಎಂದೇ ಆಗಿರುತ್ತದೆ.

ಏಕೆಂದರೆ, ಆರು ದಿನಗಳಂತೆ ಲೆಕ್ಕ ಹಾಕಿದರೆ ನಿಯೋಜಕನಿಗೆ ಹಣ ಉಳಿತಾಯ, ಏಳು ದಿನಗಳಂತೆ ಲೆಕ್ಕ ಹಾಕಿದರೆ ಮಹಿಳೆಗೆ ಸ್ವಲ್ಪ ಹೆಚ್ಚಿನ ಅನುಕೂಲ. ದಿನಗೂಲಿ ಲೆಕ್ಕದಲ್ಲಿ ಮಜೂರಿ ಪಡೆಯುವ ಅಥವಾ ಕಡಿಮೆ ವೇತನ ಪಡೆಯುವ ಲಕ್ಷಾಂತರ ಮಹಿಳೆಯರಿಗೆ ಇದು ಅನ್ವಯವಾಗುತ್ತದೆ ಮತ್ತು ಅವರು ಪಡೆಯುವ ಮಜೂರಿಯೂ ಸಹ, ಅನುಕೂಲಕರ ಜೀವನಕ್ಕೆ ಬೇಕಾದ ಹಣದ ಮಾನದಂಡದಿಂದ ಹೇಳುವುದಾದರೆ, ಅತ್ಯಲ್ಪವೆಂದೇ ಹೇಳಬೇಕು. ಆದರೆ ಸಂಸ್ಥೆಗಳು ಕಾನೂನನ್ನು ಅವಳಿಗೆ ಅನುಕೂಲವಾಗುವ ಹಾಗೆ ವ್ಯಾಖ್ಯಾನಿಸುವ ಬದಲು ತಮಗೆ ಅನುಕೂಲವಾಗುವಂತೆಯೇ ವ್ಯಾಖ್ಯಾನಿಸುತ್ತಾರೆ. ವಾರದಲ್ಲಿ ವಾಸ್ತವವಾಗಿ ಕೆಲಸ ಮಾಡುವ ದಿನಗಳು ಆರು ದಿನಗಳಾದ್ದರಿಂದ, ವಾರಕ್ಕೆ ಏಳು ದಿನಗಳೆಂದು ಲೆಕ್ಕ ಮಾಡುವ ಬದಲು, ಆರು ದಿನಗಳ ಲೆಕ್ಕದಲ್ಲಿ ಹನ್ನೆರಡು ವಾರಗಳಿಗೆ(12><6) ಅವರಿಗೆ ಮಜೂರಿ ಸಂದಾಯ ಮಾಡುತ್ತಾರೆ.

ಇಂಥ ಒಂದು ಪ್ರಶ್ನೆ ಕೇರಳ ಉಚ್ಚ ನ್ಯಾಯಾಲಯದ ಮುಂದೆ ಬಂತು. ಮಲಯಾಳಂ ನೆಡುತೋಪು ಸಂಸ್ಥೆಯಲ್ಲಿ ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಮೇಲೆ ಹೇಳಿದಂತೆಯೇ ವಾರಕ್ಕೆ ಆರು ದಿನಗಳ ಲೆಕ್ಕದಲ್ಲಿ ಪ್ರಸೂತಿ ಸೌಲಭ್ಯವನ್ನು ಹನ್ನೆರಡು ವಾರಗಳಿಗೆ ನೀಡಲಾಗಿತ್ತು. ಪರಿಶೀಲನೆಯ ಸಮಯದಲ್ಲಿ ಇದನ್ನು ಗಮನಿಸಿದ ನೆಡುತೋಪು ಪರಿವೀಕ್ಷಕರು ವಾರಕ್ಕೆ ಏಳು ದಿನಗಳಂತೆ ಲೆಕ್ಕಹಾಕಿ ಅವರಿಗೆ ಕೊಡಬೇಕಾಗಿಬರುವ ಬಾಕಿ ಹಣವನ್ನು ಸಂದಾಯ ಮಾಡುವಂತೆ ಆದೇಶ ಹೊರಡಿಸಿದರು. ಆದರೆ ಮಾಲೀಕರು ಇದನ್ನು ಪ್ರಶ್ನಿಸಿ ಕೇರಳ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದರು. (ಮಲಯಾಲಂ ಪ್ಲಾಂಟೇಶನ್ಸ್ ಲಿಮಿಟೆಡ್ ವಿ ನೆಡುತೋಪುಗಳ ಪರಿವೀಕ್ಷಕರು, ಕೇರಳ ಉಚ್ಚ ನ್ಯಾಯಾಲಯ, ಡಿಸೆಂಬರ್, 20, 1974).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.