ADVERTISEMENT

ಫಿಟಿಂಗ್‌ಗಿಂತ ಕಟಿಂಗ್‌ ಮುಖ್ಯ

ಅರಿವೆಯ ಹರವು

ನಿಷ್ಕಾ
Published 10 ಅಕ್ಟೋಬರ್ 2014, 19:30 IST
Last Updated 10 ಅಕ್ಟೋಬರ್ 2014, 19:30 IST

ಒಮ್ಮೆಲೆ ನೋಡಿದರೆ ಹೆಚ್ಚೂ ಕಡಿಮೆ ಎಲ್ಲ ಒಂದೇ ರೀತಿ ಎನಿಸುವ ಜೀನ್ಸ್‌ನಲ್ಲಿಯೂ ಬಹಳ ವಿಧಗಳಿವೆ. ಪ್ಯಾಂಟಿನ ಕಟ್‌ ಮತ್ತು ಹೊಲಿಗೆಯ ರೀತಿ, ಅದಕ್ಕೆ ಅಲಂಕರಿಸಿದ ಆಭರಣ ಸಹಿತ ಇನ್ನೂ ಹಲವು ಎದ್ದು ಕಾಣುವ ವೈಶಿಷ್ಟ್ಯಗಳಿವೆ. ಗಮನಿಸಿ ನೋಡಿದರೆ ಹೌದೇ ಎನಿಸುತ್ತದೆ. ಅರೆ ಇಷ್ಟೆಲ್ಲ ಇದೆಯಾ ಎನಿಸುವಷ್ಟು ವೈವಿಧ್ಯ ದೊರೆಯುತ್ತದೆ.

ಪ್ಯಾಂಟಿನ ನಡುಪಟ್ಟಿ ಅಥವಾ ಬೆಲ್ಟ್‌ನ ಜಾಗ ಕೂಡ ಎಲ್ಲ ಪ್ಯಾಂಟಿಗೆ ಒಂದೇ ಎಂದಿರುವುದಿಲ್ಲ. ಇನ್ನು ಪಾಕೆಟ್‌ಗಳು, ಕರ್ವ್‌, ಬಣ್ಣ, ನೇಯ್ಗೆ ಎಲ್ಲವೂ ಮುಖ್ಯವಾಗುತ್ತದೆ. ಬರೀ ಫಿಟಿಂಗ್‌ಗಿಂತಲೂ ತಮಗೆಷ್ಟು ಸೂಕ್ತವಾಗಿ ಹೊಂದುತ್ತದೆ ಎಂಬುದು ಬಹಳ ಮುಖ್ಯ.
ಇಟಲಿಯ ಜಿನೋವಾ ಕಾಟನ್‌ ಕಾರ್‌ಡ್ರಾಯ್‌ (corduroy)ಗೆ ಪ್ರಸಿದ್ಧ. ಜಿನೋವಾಗೆ ಫ್ರೆಂಚ್‌ನಲ್ಲಿ ಪರ್ಯಾಯ ಪದವೆಂದರೆ genes. ಬಹುಶಃ ಇದೇ ಪದದಿಂದ ಬಂದಿರಬಹುದು ಜೀನ್ಸ್‌ ಶಬ್ದ. ಜೀನ್ಸ್‌್‌ ಡೆನಿಮ್‌ ಅಥವಾ ಡಂಗರಿ ಬಟ್ಟೆಯಿಂದ ತಯಾರಾಗಿರುತ್ತದೆ. ಅದರಲ್ಲಿ ಶೇ 1ರಿಂದ ಶೇ 2ರಷ್ಟು ಲೈಕ್ರಾ (ಸ್ಪ್ಯಾಂಡೆಕ್ಸ್‌) ಇರುತ್ತದೆ. ಹಾಗಾಗಿ ಬಟ್ಟೆಗೆ ಸ್ಥಿತಿಸ್ಥಾಪಕತ್ವ ಗುಣ ಬರುತ್ತದೆ. ಅದಕ್ಕಾಗೇ ಅದು ಆರಾಮವಾಗಿಯೂ ಇರುತ್ತಲೇ ಹಿಡಿದಿಟ್ಟಂತೆ ಎನಿಸುತ್ತದೆ.

ಯಾವ ಬಣ್ಣ?: ಬ್ಲೂ ಜೀನ್ಸ್‌ ಸಾಮಾನ್ಯವಾಗಿ ಕಂಡುಬರುವ ವಿಧ. ನೈಸರ್ಗಿಕವಾಗಿ ಇಂಡಿಗೊ ಬಣ್ಣ ಬಳಸಿ ಸಾಂಪ್ರದಾಯಿಕ ಬಣ್ಣದ ಜೀನ್ಸ್‌ ತಯಾರಾಗುತ್ತಿತ್ತು. ಆದರೆ ಈಗ ಸಿಂಥೆಟಿಕ್‌ ಇಂಡಿಗೊ ಬಣ್ಣ ಪಡೆದು ಬಣ್ಣಗಾಣುತ್ತಿವೆ ಜೀನ್ಸ್‌ಗಳು. ಒಂದು ಜೊತೆ ಡೆನಿಮ್‌ಗೆ ಕೇವಲ ಕೆಲವೇ ಗ್ರಾಮ್‌ ಬಣ್ಣ ಸಾಕು. ಅಂಥದರಲ್ಲಿ ಅಂದಾಜು ವರ್ಷಕ್ಕೆ 20 ಸಾವಿರ ಟನ್‌ ಇಂಡಿಗೊ ಇದೇ ಉದ್ದೇಶಕ್ಕಾಗೇ ಉತ್ಪಾದನೆಯಾಗುತ್ತದೆ. ಈಗೆ ಹೆಚ್ಚೂ ಕಡಿಮೆ ಎಲ್ಲ ಬಣ್ಣಗಳಲ್ಲೂ ಜೀನ್ಸ್‌ ದೊರೆಯುತ್ತಿವೆ. ಅವುಗಳಿಗೆ ಬಣ್ಣ ಹಾಕುವ ವಿಧಾನವೇ ಬೇರೆ. ಏನೇ ಆಗಲಿ, ಬ್ಲೂ ಜೀನ್ಸ್‌ ಮಾತ್ರ ಅಮೆರಿಕ ಸಂಸ್ಕೃತಿಯ ಪ್ರತೀಕವಾಗಿ ಈಗಲೂ ಯುವಜನರನ್ನು ಹಿಡಿದಿಟ್ಟುಕೊಂಡಿದೆ. ಕ್ಲಾಸಿಕ್‌ ಲುಕ್‌ ಕೊಡುವ ಕಾರಣಕ್ಕೆ ಮಧ್ಯ ವಯಸ್ಸಿನವರಲ್ಲೂ ಬಲುಪ್ರಿಯ.

1963ರಲ್ಲಿ ಲೆವಿ ಸ್ಟ್ರಾಸ್‌ ಮೊದಲೇ ಉಡುಗಿಸಿಟ್ಟ  ಜೀನ್ಸ್‌ ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟದ್ದು. ಇದರಿಂದ ಗ್ರಾಹಕರು ತಮಗೆ ಸರಿಯಾಗಿ ಹೊಂದುವ ಅಳತೆಯ ಜೀನ್ಸ್‌ಅನ್ನೇ ಕೊಳ್ಳಲು ಸಾಧ್ಯವಾಯಿತು.

ಆಸಿಡ್‌ ವಾಶ್‌್: ಬಳಸಿದ ಜೀನ್ಸ್‌ನ ನೋಟಕ್ಕೆ ಆಸಿಡ್‌ ವಾಶ್‌ ಮಾಡಿದ ಜೀನ್ಸ್‌ ಕೊಳ್ಳಬಹುದು. ಅಕ್ರಿಲ್‌ ರೆಸಿನ್‌, ಫಿನಾಲ್‌, ಹೈಪೊಕ್ಲೋರೈಟ್‌, ಪೊಟ್ಯಾಷಿಯಂ ಪರಮಾಂಗನೇಟ್‌, ಕಾಸ್ಟಿಕ್‌ ಸೋಡಾ, ಆಸಿಡ್‌ ಇತ್ಯಾದಿ ರಾಸಾಯನಿಕ ಪದಾರ್ಥ ಬಳಸಿ ವಾಶ್‌ ಮಾಡಿರುತ್ತಾರೆ. ಹಾಕಿ ಹಾಕಿ ಹಳೆಯದಾದ ಜೀನ್ಸ್‌ನಂತೆ ಕಾಣಲು ಸ್ಯಾಂಡ್‌ಬ್ಲಾಸ್ಟಿಂಗ್‌ ತಂತ್ರ ಅನುಸರಿಸುತ್ತಿದ್ದರು. ಇದು ಈಗ ಅಷ್ಟಾಗಿ ಬಳಕೆಯಲ್ಲಿಲ್ಲ. ನೋಡಲೆಂತೊ ಏನೋ, ಬಟ್ಟೆಯ ವಿಧ ಒಂದು ತರಹ ಆದರೆ, ಪ್ಯಾಂಟ್‌ನ ಹೊಲಿಗೆಯ ಲೈನ್‌ಗಳು, ಹೊಲಿಗೆಗೂ ಮೊದಲು ಕತ್ತರಿಸಿ ಕಟ್‌ ಸ್ಟೈಲ್‌ಗಳೆಲ್ಲ ಬಹಳ ಮುಖ್ಯವಾಗಿಬಿಡುತ್ತವೆ.

ಕಟ್‌ ಎಂದರೆ ಬರೀ ಕಾಲಿನ ಶೇಪ್‌ ಅಲ್ಲ, ಕರ್ವ್‌ ಹೇಗಿರಬೇಕು, ಹಿಂಭಾಗದಲ್ಲಿ ಬೆಲ್ಟ್‌ನ ಕೆಳಗೆ ಬರುವ ಯೋಕ್‌ (ಎರಡೂ ಕಾಲು ಕೂಡುವ ಜಾಗದ ಮೇಲೆ ಎಲೆ ಅಥವಾ ಹೃದಯದಾಕಾರದ ಕಟ್‌ಪೀಸ್‌ ಕೂರಿಸಿದ ರೀತಿ); ಪಾಕೆಟ್‌ನ ಸೈಜ್‌ ಮತ್ತು ಶೇಪ್‌; ಹಿಂದಿನ ಪಾಕೆಟ್‌ನ ಮೇಲೆ ಲೋಹದ ಪುಟ್ಟ ಬಟನ್‌ ಅಥವಾ ಇತರ ವಿನ್ಯಾಸದ ಅಲಂಕಾರ; ನಾಲ್ಕು ಪಾಕೆಟ್‌ನ ಪ್ಯಾಂಟೊ, ಐದು ಪಾಕೆಟ್‌ನ ಪ್ಯಾಂಟೊ ಎನ್ನುವುದು; ಪುಟ್ಟ ಕಾಯಿನ್‌ ಪಾಕೆಟ್‌ಗೆ ಜಿಪ್‌ ಇರಬೇಕಾ, ಮುಂದಿನ ಪಾಕೆಟ್‌ ಪ್ಯಾಂಟಿನೊಳಗೇ ಇರಬೇಕಾ ಮೇಲೆ ಹಚ್ಚಿ ಹೊಲಿದಿರಬೇಕಾ ಎನ್ನುವುದೆಲ್ಲ ಬಹಳ ಬಹಳ ಮುಖ್ಯವಾಗುತ್ತವೆ. ಎಲ್ಲವೂ ನಮ್ಮದೇ ಸ್ಟೈಲ್‌ ತೋರಲೆಂದೇ ಇರುತ್ತವಲ್ಲ.

ಸಾಮಾನ್ಯವಾಗಿ ನಡುಪಟ್ಟಿ ಒಂದರಮೇಲೊಂದು ಪದರದ ಡೆನಿಮ್‌ ಹೊಲಿಗೆ ಹಾಕಿದ್ದು ಇರುತ್ತದೆ. ಆದರೆ ಈ ನಡುಪಟ್ಟಿ ಎಲ್ಲಿ ಬರುವಂತೆ ಇರುತ್ತದೆ ಎನ್ನುವುದು ಸ್ಟೈಲ್‌ನ ಪ್ರಮುಖ ಅಂಶ. ಹೈ ರೈಸ್‌ ಮತ್ತು ಸೂಪರ್‌ ಹೈ ರೈಸ್‌ ಪ್ಯಾಂಟ್‌ ಎತ್ತರದ ನಿಲುವಿನವರಿಗೆ ಹೇಳಿದ್ದು. ಸೂಪರ್‌ ಹೈರೈಸ್‌ ಎಂದರೆ ನಡುಪಟ್ಟಿ ನಡುವಿನಿಂದ 1ಇಂಚಿಗಿಂತ ಹೆಚ್ಚು ಮೇಲಿರುತ್ತದೆ. ಹೈರೈಸ್‌ನಲ್ಲಿ ನಡುವಿನಿಂದ 1ಇಂಚು ಮೇಲೆ. ಮೀಡಿಯಂ ರೈಸ್‌ನಲ್ಲಿ ಸರಿಯಾಗಿ ನಡುವಿಗೆ ಬರುವಂತೆ ಇರುತ್ತದೆ.

ಮೀಡಿಯಂನಿಂದ ಲೋರೈಸ್‌ ಎಂದರೆ ಹೊಕ್ಕಳಿನಿಂದ 2–3 ಇಂಚು ಕೆಳಗೆ. ಹೆಚ್ಚಿನ ಬ್ರಾಂಡ್‌ಗಳಲ್ಲಿ ಹೆಣ್ಮಕ್ಕಳಿಗೆ ಹೆಚ್ಚು ಇಷ್ಟವಾದ ವಿಧ ಇದು. ತೆಳುವಾದ ಆಕಾರದ ದೇಹಕ್ಕೆ ಹೇಳಿಸಿದ್ದು. ಸ್ವಲ್ಪ ದೇಹಾಕಾರದ ತಿರುವು ಹೆಚ್ಚಿದ್ದವರು ಮಿಡ್‌ರೈಸ್‌ ಹಾಕುವುದು ಒಳಿತು.
ಲೋರೈಸ್‌ ಹೊಕ್ಕಳಿನಿಂದ ತೀರ ಕೆಳಗೆ ಅಂದರೆ 3–5 ಇಂಚು ಕೆಳಗೆ ಇರುತ್ತದೆ. ಈ ವಿಧವಂತೂ ಚಪ್ಪಟೆ ಹೊಟ್ಟೆಯ ಕೃಶಾಂಗಿಯರಿಗೇ ಸೈ. ಅಲ್ಟ್ರಾ ಲೋರೈಸ್‌ ಇದಂತೂ ದಿಟ್ಟ ಕಾಮೋತ್ತೇಜಕ ಕಟ್‌ಗಳಿದ್ದು, ಬ್ರೆಜಿಲಿಯನ್‌ ಜೀನ್ಸ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಅಷ್ಟೇನೂ ಎತ್ತರವಿರದವರಿಗೆ ಹೆಚ್ಚು ಒಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.