ADVERTISEMENT

ಭಾವಚಿತ್ರಗಳ ಭಾವನಾಲೋಕದಲ್ಲಿ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017 ಮೆಚ್ಚುಗೆ ಗಳಿಸಿದ ಪ್ರಬಂಧ

ಸ್ಮಿತಾ ಅಮೃತರಾಜ್
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಭಾವಚಿತ್ರಗಳ ಭಾವನಾಲೋಕದಲ್ಲಿ
ಭಾವಚಿತ್ರಗಳ ಭಾವನಾಲೋಕದಲ್ಲಿ   
ಹಿಂದಿನ ಕಾಲದ ಮನೆಗಳಿಗೆ ನಾವೆಲ್ಲಾ ಭೇಟಿ ಕೊಟ್ಟೇವೆಂದರೆ, ಹಜಾರಕ್ಕೆ ಹೊಕ್ಕ ತಕ್ಷಣ, ಪಡಸಾಲೆಯಲ್ಲಿ ಅರೆಗಳಿಗೆ ಕುಳಿತ ಶಾಸ್ತ್ರ ಮುಗಿಸಿ, ಆಳೆತ್ತರದ ಗೋಡೆಯುದ್ದಕ್ಕೂ ಕಟ್ಟು ಹಾಕಿದ ಭಾವಚಿತ್ರಗಳನ್ನು ಗಮನಿಸುತ್ತಾ ನಿಂತು ಬಿಡುತ್ತೇವೆ. ಇಲ್ಲವೇ ಅದುವೇ ನಮ್ಮನ್ನು ಗಮನಿಸುವಂತೆ ಮಾಡುತ್ತವೆ.
 
ಸಾಮಾನ್ಯವಾಗಿ ಗತಿಸಿಹೋದ ಹಿರಿಯ ತಲೆಗಳ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಕಟ್ಟು ಹಾಕಿ, ಅದಕ್ಕೆ ಗಂಧದ ಹಾರ ಹಾಕಿ ಗೋಡೆಯ ಮೇಲೆ ಮೊಳೆ ನೆಟ್ಟು ಅದರ ಮೇಲೆ ನೇತು ಹಾಕಿಟ್ಟುಬಿಡುತ್ತಿದ್ದರು. ಆ ಫೋಟೊಗಳನ್ನು ನೋಡುನೋಡುತ್ತಲೇ ಆ ಭಾವಚಿತ್ರದೊಳಗೆ ಹುದುಗಿಕೊಂಡ ಅಜ್ಜನ ಪೊದೆ ಮೀಸೆ, ಅಗಲವಾದ ಹಣೆಯೊಳಗೆ ಪಡಿಮೂಡಿದ ನಿರಿಗೆಯೊಳಗೆ ಅವರ ಗತ್ತು, ಗಾಂಭೀರ್ಯ ಎಲ್ಲವನ್ನೂ ಮನಸ್ಸು ಲೆಕ್ಕಾಚಾರ ಹಾಕಿಕೊಂಡೇ ಕುಳಿತು ಬಿಡುತ್ತಿತ್ತು. ಅಲ್ಲೇ ಎಡಪಕ್ಕದಲ್ಲಿ ಕಟ್ಟು ಹಾಕಿಸಿದ ಅಜ್ಜಿಯ ಸೌಮ್ಯ ಮುಖ. ಅಜ್ಜ ಅಜ್ಜಿಯ ಬದುಕಿನ ಕತೆಗಳನ್ನು ಯಾರೂ ಹೇಳದೆಯೂ ನಮ್ಮ ಮುಂದೆ ಆ ಚಿತ್ರಗಳು ಅನೇಕ ಚಿತ್ರಣಗಳನ್ನು ಕಟ್ಟಿಕೊಡುತ್ತಹೋಗುತ್ತಿದ್ದವು. ಇನ್ನು ಆ ಪಟದ ಎದುರಿನ ಗೋಡೆಯಲ್ಲಿ, ಆ ಮನೆಯ ದಂಪತಿಗಳ ಮದುವೆಯ ಸಂದರ್ಭದ ಫೋಟೊ, ಮತ್ತೆ ಆ ಮನೆಗೆ ಬಂದ ಪುಟ್ಟ ಕಂದನ ಹೊಟ್ಟೆ ಮಗುಚಿ ತೆವಳಲು ಶುರು ಮಾಡಿದಾಗಿನ ಫೋಟೊ, ಇನ್ನು ಅಪರೂಪಕ್ಕೆಂಬಂತೆ ಆ ಮನೆಯ ಯಾರೋ ಸಂಬಂಧಿಯೊಬ್ಬರ ತಲೆಗೆ ಟೊಪ್ಪಿ ಇಟ್ಟು, ಕರಿ ಗೌನು ಹಾಕಿ ನಿಂತ ಡಿಗ್ರಿ ಸರ್ಟಿಫಿಕೇಟ್ ತೆಗೆದುಕೊಳ್ಳುವಾಗಿನ ಫೋಟೊ. ಇವಿಷ್ಟೇ ಬೆರಳೆಣಿಕೆಯಷ್ಟು ಇರುತ್ತಿದ್ದ ಕಪ್ಪು–ಬಿಳುಪಿನ ಛಾಯಾಚಿತ್ರಗಳು ಅನೇಕ ಬೆರಗಿನ ಲೋಕವನ್ನೂ, ಕೊಂಚ ಕುತೂಹಲವನ್ನೂ  ನೆಳಲು-ಬೆಳಕಿನಂತೆ ನಮ್ಮ ಮುಂದೆ ತೆರೆದಿಡುತ್ತಾ ಹೋಗುತ್ತಿದ್ದವು.
 
ಹೀಗೆ ಭಾವಚಿತ್ರವೆಂಬುದು ಅಂದಿನಿಂದ ಇಂದಿನವರೆಗೂ ಯಾವುದೋ ಒಂದು ಕೌತುಕವನ್ನು, ತಣಿಯದ ಅಚ್ಚರಿಯೊಳಗಿನ ನವಿರು ಭಾವವನ್ನು ಈವರೆಗೂ ಕಾಯ್ದಿಟ್ಟುಕೊಂಡು ಬಂದಿದೆಎಂದರೆ ಸುಳ್ಳಲ್ಲ. ತದನಂತರ  ಆಲ್ಬಂಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ನಂತರ ಹೆಚ್ಚಿನ ಚಿತ್ರಗಳೆಲ್ಲಾ ಅದರೊಳಗೆ ಅಲಂಕರಿಸಿ ಬಿಡುತ್ತಿದ್ದವು. ಆಗೆಲ್ಲಾ ನೆಂಟರಿಷ್ಟರು ಮನೆಗೆ ಬಂದಾಕ್ಷಣ ಮನೆಯಾಕೆ, ಮನೆಯೊಳಗೆ ಒಳಗಿನ ಕೆಲಸಕ್ಕೆ ಅಡುಗೆಮನೆಗೆ ಸೇರಿಕೊಳ್ಳೋದಿಕ್ಕೆ ಮುಂಚೆ, ಅತಿಥಿಗಳಿಗೆ ಬೇಸರವಾಗದಿರಲೆಂದು ಆಲ್ಬಂ ಅನ್ನು ಅವರ ಮುಂದೆ ತೆರೆದಿಟ್ಟು ಹೋಗುತ್ತಿದ್ದಳು. ಬಂದವರಿಗೆ ಇವುಗಳನ್ನೆಲ್ಲಾ ನೋಡಲು ಆಸಕ್ತಿ ಇದೆಯೋ ಇಲ್ಲವೋ ಅದರ ಗೋಜಿಗೆ ಹೋಗದೆ, ಇದು ಔಪಚಾರಿಕತೆಯ ಮತ್ತೊಂದು ಭಾಗವೇನೋ ಎಂಬಂತೆ ಈ ಕೆಲಸವೊಂದು ಯಾಂತ್ರಿಕವಾಗಿ ಮಾಡಿಬಿಡುತ್ತಾರೆ.
 
ಇನ್ನು ಇಂತಹ ಬೇಸರ ನೀಗಿಸುವ ಕೆಲಸವನ್ನು, ನೆನಪುಗಳನ್ನು ಮೊಗೆದು ಕೊಡುವ ಸಂಭ್ರಮವನ್ನು, ಕೆಲವೊಮ್ಮೆ ಸಾಕ್ಷ್ಯಗಳಿಗೂ ಪುರಾವೆ ದಕ್ಕಿಸಿಕೊಡುವ ಭಾವಚಿತ್ರದ ಜನಕ ಫೋಟೊಗ್ರಾಫರ್ ಎಂಬ  ಅಸಾಮಾನ್ಯ ಕಲಾವಿದನಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಅವನೊಬ್ಬ ಜನಾದರಣೀಯ ವ್ಯಕ್ತಿಯಾಗಿ ಎಲ್ಲರ ಗೌರವಕ್ಕೆ ಪಾತ್ರನಾಗಿ ಬಿಡುತ್ತಿದ್ದ. ಯಾವಾಗಲಾದರೋ ಒಮ್ಮೆ ಬರುವ ನಾಮಕರಣಕ್ಕೋ, ವೀಳ್ಯಶಾಸ್ತ್ರಕ್ಕೋ, ಮದುವೆಗೋ ಅವನ ಹಾಜರಿ ತೀರಾ ಅಗತ್ಯವಿದ್ದುದರಿಂದಲೋ ಏನೋ, ಅವನಿಗೊಂದು ನಮಸ್ಕಾರವಂತೂ ಪುಕ್ಕಟೆ ಸಿಕ್ಕೇ ಸಿಗುತ್ತಿತ್ತು. ನಮ್ಮ ಎಳವೆಯ ಶಾಲಾದಿನಗಳಲ್ಲಿ ಏಳನೇ ತರಗತಿಯ ಮಕ್ಕಳಿಗೆ ಮಾತ್ರ ಫೋಟೊ ತೆಗೆಸಿಕೊಳ್ಳುವ ಭಾಗ್ಯ. ನಾವೆಲ್ಲಾ ಪೊಡಿ ಮಕ್ಕಳು. ಏಳನೇ ತರಗತಿಗೆ ಕಾಲಿಡುವವಲ್ಲಿಯವರೆಗೆ ಅವರನ್ನು ಆ ದಿನ ಆಸೆಗಣ್ಣಿನಿಂದ ನೋಡುತ್ತಿದ್ದೆವು. ಅದು ಆಗ ಕಲರ್ ಫೋಟೊಗಳ ಜಮಾನ ಬೇರೆ. ಫೋಟೋ ತೆಗೆಯಲೋಸುಗವೇ ನಾವೆಲ್ಲಾ ರಂಗುರಂಗಿನ ಕಲರ್ ಬಟ್ಟೆ ಖರೀದಿಸುತ್ತಿದ್ದೆವು. ಅಗತ್ಯಕ್ಕಿಂತ ಹೆಚ್ಚೇ ಮುಖಕ್ಕೆ ಪೌಡರ್ ಬಳಿದುಕೊಂಡು, ಎರಡು ಜಡೆಗೆ ಕೆಂಪು ರಿಬ್ಬನ್ ಬಿಗಿದುಕೊಂಡು, ದೊಡ್ಡ ಡೇಲ್ಯ ಹೂವನ್ನು ಫೋಟೊಕ್ಕೆ ಬೀಳುವಷ್ಟು ಎದುರುಗಡೆ ಸಿಕ್ಕಿಸಿಕೊಂಡು, ಟೀಚರ್ ಬಳಿ ನಿಂತು ಕೊಂಡು ಫೋಟೋ ತೆಗೆಸಿಕೊಳ್ಳೋದಿಕ್ಕೆ ಪೈಪೋಟಿ. ಆದರೆ ಒಂದೇ ಒಂದು ಬಾರಿ ನಮ್ಮನ್ನೆಲ್ಲಾ ನಿಲ್ಲಿಸಿ ಫೋಟೊ ಕ್ಲಿಕ್ಕಿಸುವ ಕಾರಣ ಆಚೆ ಈಚೆ ಯಾರಾದರೂ ಇಬ್ಬರಿಗೆ ಮಾತ್ರ ಟೀಚರ ಬಳಿ ನಿಂತುಕೊಳ್ಳುವ ಪರಮ ಭಾಗ್ಯ. ಅಂತೂ ಇಂತೂ ಮನೆಯವರ ಜೊತೆ ಕಾಡಿ ಬೇಡಿ ಹಣ ಗಿಟ್ಟಿಸಿಕೊಂಡು, ಆ ಭಾವಚಿತ್ರವನ್ನು ಕೊಂಡುಕೊಂಡು ಅದನ್ನು ಜತನದಲ್ಲಿರಿಸಿಕೊಳ್ಳುವುದೇ ಒಂದು ಪುಳಕದ ಸಂಗತಿ. ಬೆಳೀತಾ ಹೋದ ಹಾಗೆ ಭಾವಚಿತ್ರವೂ ನಮ್ಮ ಬದುಕಿನ ಭಾವದಂತೆ ಅಂಟಿಕೊಂಡೇ ಬರುತ್ತಿರುವುದು ಒಂದು  ದೊಡ್ಡವಿಸ್ಮಯ. ಈ ಪೋಟೊದ ಗೀಳು ನಮ್ಮನ್ನೆಲ್ಲಾ ಅದೆಷ್ಟು ಅಮರಿಕೊಂಡು ಬಿಟ್ಟಿತ್ತು ಎಂದರೆ, ನಾವೇ ಗೆಳತಿಯರ ದಂಡು ಕಟ್ಟಿಕೊಂಡು ಸ್ಟುಡಿಯೋಕ್ಕೆ ಹೋಗಿ ಫೋಟೊ ತೆಗೆಸಿಕೊಂಡು ಬರುವಲ್ಲಿಯವರೆಗೆ. ಮುಖ ಹೇಗೇ ಇರಲಿ, ತಮ್ಮ ತಮ್ಮ ಮುಖವನ್ನು ಪ್ರೀತಿಸದವರು ಯಾರಿದ್ದರೆ ಹೇಳಿ? ಫೋಟೊ ತೆಗೆಯುವುದು, ಅದನ್ನು ಎರಡೆರಡು ಬಾರಿ ನಾವೇ ನೋಡಿ ಮೆಚ್ಚುಗೆ ಸೂಚಿಸುವುದು, ನಮ್ಮಷ್ಟು ಪರಮ ಸುಂದರಿಯರು ಮೂಜಗದೊಳಗೆ ಯಾರೂ ಇರಲ್ಲಿಕ್ಕಿಲ್ಲವೆಂಬಂತೆ ನಮಗೆ ನಾವೇ ತಾರೀಫು ಕೊಟ್ಟುಕೊಳ್ಳುವುದು. ಹೀಗೇ ತರಾವರಿ ಮುದಗೊಳಿಸುವ ಸಂಗತಿಗಳು. ಇಂತಿಪ್ಪ ನಮ್ಮ ಲೋಕದಲ್ಲಿ ಫೋಟೊದ ಅಚ್ಚಿಗೆ ಬೀಳುವ ಹುಚ್ಚು ಎಷ್ಟಿತ್ತೆಂದರೆ ಇದಕ್ಕೆ ಯಾರೂ ಹೊರತಾಗಿಲ್ಲವೆಂಬುದು ಬಂದು ಹೋಗುವ ಕತ್ತಲು ಬೆಳಕಿನಷ್ಟೇ ನಿಚ್ಚಳ ಸತ್ಯ. ಯಾವುದೇ ಕಾರ್ಯಕ್ರಮ ಆಗಿರಲಿ, ಫೋಟೊಗ್ರಾಫರ್ ಇಲ್ಲದೆ ಕಾರ್ಯಕ್ರಮವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವನ ಹಾಜರಿ ಅಗತ್ಯವಿತ್ತು. ಫೋಟೊಗ್ರಾಫರ್ ಸಿಗಲಿಲ್ಲವೆಂದು ಕಾರ್ಯಕ್ರಮ ಮುಂದೂಡಿದ ಪ್ರಸಂಗಗಳು ಅದೆಷ್ಟೋ. ಅಂತೂ ಇಂತೂ ಭಾವ ಚಿತ್ರ ಇದ್ದರಷ್ಟೇ ಆ ಕಾರ್ಯಕ್ರಮಕ್ಕೆ ಅಪೂರ್ವ ಕಳೆ ಮತ್ತು ಅಮೂಲ್ಯ ಬೆಲೆಯೆಂಬುದು ಆವತ್ತಿಗೂ ಇವತ್ತಿಗೂ ಯಾವ ಕಾಲಕ್ಕೂ ಸಲ್ಲುವ ಮಾತು.
 
ಒಮ್ಮೆ ಹೀಗಾಗಿತ್ತು. ನನ್ನ ಅಣ್ಣನೊಬ್ಬ ಶಾಲೆಗೆ ಹೋಗಲೋಸುಗ ನೆಂಟರ ಮನೆಯಲ್ಲಿ ಉಳಿದುಕೊಂಡವನಿಗೆ ಸಿಕ್ಕಾಪಟ್ಟೆ ಮನೆಯ ನೆನಪು ಹತ್ತಿ, ಮನೆಗೆ ಹೋದರೆ ಅಲ್ಲಿಂದ ವಾಪಸು ಕಳಿಸುತ್ತಾರೆಂಬ ಹೆದರಿಕೆಗೆ, ಯಾರಿಗೂ ಹೇಳದೆ ಭಂಡ ಧೈರ್ಯದಿಂದ  ಕಣ್ಣು ತಪ್ಪಿಸಿ, ನಾನು ಶಾಲೆಗೆ ಹೋಗುತ್ತಿದ್ದ ಅಜ್ಜಿಯ ಮನೆಗೆ ಬಂದು ಬಿಟ್ಟಿದ್ದಾನೆ. ನಮಗೀಗ ರಜೆಯೆಂದು ಹೇಳಿದ ಅವನ ಸುಳ್ಳು ನೆವವನ್ನು ನಿಜವೆಂದೇ ನಂಬಿ ಅವನಿಗೆ ರಾಜೋಪಚಾರ ಮಾಡುತ್ತಿದ್ದೆವು.
 
ಆಗೆಲ್ಲಾ ಫೋನ್‌ಗಳು ತೀರಾ ವಿರಳವಾಗಿದ್ದ ಕಾಲ. ಕಾಣೆಯಾದ ಅಣ್ಣನನ್ನು ಅವರೆಲ್ಲಾ ಹುಡುಕಿ ಹುಡುಕಿ ದುಃಖದಿಂದ ಪೇಪರ್‌ನಲ್ಲಿ ಅವನ ಭಾವಚಿತ್ರ ಹಾಕಿ, ಈ ಮುಖದ ಹುಡುಗನನ್ನು ಕಂಡವರು ದಯವಿಟ್ಟು ತಿಳಿಸಿ –  ಅಂತ ಪ್ರಕಟನೆ ಕೊಟ್ಟಿದ್ದಾರೆ. ಇದ್ಯಾವುದರ ಪರಿವೇ ಇಲ್ಲದ ನನ್ನಣ್ಣ ಆರಾಮವಾಗಿ ಒಂದಷ್ಟು ದಿನ ಇದ್ದವನನ್ನು ನನ್ನ ಮಾವ ಬಸ್ಸು ಹತ್ತಿಸಿ ಕಳುಹಿಸಿ ಬರುವಾಗ ತಂದಿದ್ದ ಸಾಮಾನು ಕಟ್ಟಿದ ಪತ್ರಿಕೆಯಲ್ಲಿ ಅವನ ಫೋಟೊ ಕಂಡು ಗಾಬರಿ ಬಿದ್ದು, ಆಗಲೇ ಬಸ್ಸು ಹತ್ತಿ ಒಂದು ದಿನ ಇಡೀ ಪ್ರಯಾಣ ಮಾಡಿ ಅವನ ಇರುವಿಕೆಯನ್ನು ಸಾಬೀತುಪಡಿಸಿ ಬಂದಿದ್ದಾರೆ. ಈಗ ಅದೇ ಮಗುವಿನಂತ ಮನಸಿನ ಅಣ್ಣ ಅನಾರೋಗ್ಯದ ಕಾರಣ ಅತಿ ಚಿಕ್ಕ ಪ್ರಾಯದಲ್ಲೇ ತೀರಿಕೊಂಡು ಮತ್ತೆ ಭಾವಚಿತ್ರದ ಕಟ್ಟಿನೊಳಗೆ ಮಾಸದ ನಗು ಬೀರುತ್ತಾ ನಿಂತು ಕೊಂಡ ಅವನನ್ನು ನೋಡುವಾಗಲೆಲ್ಲಾ ಮನಸ್ಸು ಹನಿಗಣ್ಣಾಗಿ ದುಃಖ ಉಮ್ಮಳಿಸಿ ಬರುತ್ತದೆ. ಇನ್ನು ಅವನನ್ನು ಹುಡುಕುವುದೆಂತು ಅಂತ ಹೃದಯ ಭಾರವಾಗುತ್ತದೆ.
ಈ ಹಿಂದೆ ಕಂಪ್ಯೂಟರ್, ಇಂಟರ್ನೆಟ್‌ನ ಗಂಧ–ಗಾಳಿಯೂ ಸೋಕದ ನಮ್ಮೂರಿನಲ್ಲಿ ಮೊದಲು ಮದುವೆಯ ಮಾತುಕತೆ ನಡೆಯುತ್ತಿದ್ದದ್ದು ದಲ್ಲಾಳಿ ತರುವ ಭಾವಚಿತ್ರದ ಮೂಲಕವೇ. ಭಾವಚಿತ್ರ ನೋಡಿ ಪರವಾಗಿಲ್ಲ ಅನ್ನಿಸಿದರೆ, ಮತ್ತೆ ಮುಂದಿನ ಮಾತುಕತೆ. ಕೆಲವೊಮ್ಮೆ ಸುಂದರ ಫೋಟೊ ನೋಡಿ ಮರುಳಾಗಿ ನೇರ ಮುಖಾಮುಖಿಯಾದಾಗ ಮನಸು ಹುಳ್ಳಗೆ ಮಾಡಿಕೊಂಡು ಅಲ್ಲಿಗೇ ಇತಿಶ್ರೀ ಹಾಡಿದ ಪ್ರಸಂಗಗಳು ಅದೆಷ್ಟೋ.
 
ಹೀಗೆ ಒಪ್ಪಿಗೆಯಾಗದೇ ಇದ್ದ ಪಕ್ಷದಲ್ಲಿ, ಸಂಬಂಧ ಬೆಸೆಯದ ಮೇಲೆ ಭಾವಚಿತ್ರದ ಮೇಲೆ ಯಾತರ ಅನುಬಂಧ ಅಂತ ಭಾವಚಿತ್ರವನ್ನು ವಾಪಸು ಕಡ್ಡಾಯವಾಗಿ ಕಳುಹಿಸಿಕೊಡಬೇಕಿತ್ತು. ಅದರೂ ಅಮೋಘವಾಗಿ ಫೋಟೊ ಹೊಡೆದ ಫೋಟೊಗ್ರಾಫರ್‌ನ ಕೈಚಳಕಕ್ಕೆ ಒಂದು ಬಾರಿಯಾದರೂ ನಮೋ ನಮೋ ಎನ್ನಲೇ ಬೇಕು.
 
ಬೆಲೆಬಾಳುವಂತಹ ಭಾವಚಿತ್ರಗಳು ಈಗ ಅಂತ ದುಬಾರಿಯೇನಲ್ಲ, ಜೊತೆಗೆ ಫೋಟೊ ಕ್ಲಿಕ್ಕಿಸುವ ಕೆಲಸ ಈಗ ಅಂತ ತ್ರಾಸದಾಯಕವೂ ಅಲ್ಲ. ಬೇಕು ಬೇಕಾದ ಹಾಗೆ ಬೇಕೆಂದರಲ್ಲಿ ನಮಗೆ ನಾವೇ ಫೋಟೊಗ್ರಾಫರ್‌ಗಳಾಗಬಹುದು. ಸಮಯ ಸಂದರ್ಭ ಬಂದಾಗ ಯಾರ ಜೊತೆಗೂ ಎಗ್ಗಿಲ್ಲದೇ ನಿಂತು ಫೋಟೊ ಹೊಡೆಸಿಕೊಳ್ಳಬಹುದು. ಕ್ಷಣಕ್ಕೊಂದು, ಗಳಿಗೆಗೊಂದು ತೆಗೆದ ಫೋಟೊಗಳನ್ನು ಕಟ್ಟು ಹಾಕಿಸಿಕೊಂಡು ಕುಳಿತರೆ ನೆಲ, ಗೋಡೆ, ಅಟ್ಟ ಎಲ್ಲೆಂದರಲ್ಲಿ ನಮ್ಮದೇ ಪ್ರತಿರೂಪಗಳ ಹಾವಳಿಯಾಗಬಹುದು. ಮನೆ ತುಂಬಾ ಆಲ್ಬಂಗಳ ಕಟ್ಟೇ ಮೇಲೇರಿ ನಿಲ್ಲಬಹುದು. ಇಷ್ಟೆಲ್ಲಾ ಸಂಗತಿಗಳಿಗೆ ಯಾರೂ ತಲೆಕೆಡಿಸಿಕೊಳ್ಳದೆ, ನಮ್ಮನ್ನು ನಾವು ಪ್ರತಿ ಭಾರಿ ಹೊಸತೆಂಬಂತೆ ಸಿಂಗರಿಸಿಕೊಂಡು, ವಾಟ್ಸ್‌ಅಪ್, ಫೇಸ್ಬುಕ್, ಪ್ರೊಫೈಲ್ ಗೋಡೆಗಳಿಗೆ ಮೊಳೆ ಹೊಡೆಯದೆ ಗಳಿಗೆಗೊಂದರಂತೆ ಫೋಟೋ ತೂಗಿಸುತ್ತಾ, ಮತ್ತೆ ಮತ್ತೆ ಫೋಟೊ ಕ್ಲಿಕ್ಕಿಸುತ್ತಲೇ  ಇರುತ್ತೇವೆಂಬುದು ಮಾತ್ರ ಈ ಕ್ಷಣದ ಸತ್ಯ.
ಈಗೀಗ ಭಾವಚಿತ್ರಗಳು ನಮ್ಮ ಭಾವಕೋಶದಿಂದಾಚೆಗೆ ಜಿಗಿದು ಲೋಕಪರ್ಯಟನೆಗೆ ತೊಡಗಿವೆ. ಹುಟ್ಟು ಹಬ್ಬವೆಂದೋ, ಮದುವೆಯಾಗಿ ಇಂತಿಷ್ಟು ವರ್ಷ ಅಂತಲೋ ಅಂತ ನೆವಗಳಿಟ್ಟುಕೊಂಡು, ನಾವು ಈ ಭೂಮಿ ಮೇಲೆ ಇನ್ನೂ ಬದುಕಿದ್ದೇವೆ ಎಂಬ ಅಸ್ತಿತ್ವವನ್ನು ಸಾಬೀತು ಪಡಿಸಲೋಸುಗವೆಂಬಂತೆ ಅದನ್ನು ಪತ್ರಿಕೆಗಳಲ್ಲಿ ಮುದ್ರಿಸುವ ಕಾತರ. ಇನ್ನು ಮೊದಲ ಪುಟದಲ್ಲಿ ನಮ್ಮ ಫೋಟೊ ಕಂಡರೆ ಇಂತಿಷ್ಟು, ಎರಡನೇ ಪುಟಕ್ಕೆ ಇಂತಿಷ್ಟು, ಕೊನೇ ಪುಟಕ್ಕೆ ಇಂತಿಷ್ಟು ಅಂತ ನಮ್ಮದೇ ಪಟಕ್ಕೆ ನಾವುಗಳೇ ಬೆಲೆ ತೆತ್ತು ನಮ್ಮನ್ನು ನಾವು ಮಾರಿಕೊಳ್ಳುತ್ತಿದೇವೆಯೋ ಏನೋ. ಅಂತು ಯಾರು ನೋಡದೆಯೂ, ಯಾರು ಓದದೆಯೂ ಮರು ದಿನ ಯಾರು ಯಾರದೋ ಬಚ್ಚಲೊಲೆಯ ಉರಿಯೊಳಗೆ ಉರಿದು ಹೋಗುವ ಪರಿವೆಯೇ ಇಲ್ಲದೆ. ಆದರೂ ಯಾವ ಶಿಫಾರಸ್ಸುಗಳಿಲ್ಲದೆ, ನಮ್ಮ ಸಾಧನೆಯ ಫೋಟೊಗಳು ಪತ್ರಿಕೆಯಲ್ಲಿ ಅಚ್ಚಾದರೆ ಅದಕ್ಕಿಂತ ದೊಡ್ಡ ಖುಷಿ ಬೇರೆಯಿಲ್ಲವೆಂಬಂತೆ ಸಂಭ್ರಮಿಸಿ ಬಿಡುತ್ತೇವೆ. ನಿನ್ನ ಫೋಟೊ ಪತ್ರಿಕೆಯಲ್ಲಿ ನೋಡಿದೆವು ಅಂದಾಕ್ಷಣ, ನಿರ್ಲಿಪ್ತ ಮುಖ ಮಾಡಿಕೊಂಡರೂ ಒಳಗೊಳಗೆ ಖುಷಿಯ ಅಲೆ. ಇನ್ನು, ಜನಪ್ರತಿನಿಧಿಗಳ, ರಾಜಕಾರಣಿಗಳ, ದೊಡ್ಡ ದೊಡ್ಡ ಭಾವಚಿತ್ರಗಳನ್ನು ಪ್ರತಿದಿನ ನೋಡುತ್ತಾ  ನೋಡುತ್ತಾ ಅವರೆಲ್ಲಾ ನೆರೆಮನೆಯವರಂತಾಗುತ್ತಿದ್ದಾರೆ. ಆದರೆ ಅದೇ ನೆರೆಹೊರೆಯವರು ಬಲು ದೂರದವರಾಗುತ್ತಿದ್ದಾರೆ.
 
ಒಂದೊಮ್ಮೆ ಹುಡುಗ ಹುಡುಗಿಯರು ಒಬ್ಬರನ್ನೊಬ್ಬರ ಫೋಟೊ ಇಟ್ಟುಕೊಳ್ಳುವುದೇ ದೊಡ್ಡ ಅಪರಾಧ ಎನ್ನುವಂತಿತ್ತು. ಪುಸ್ತಕದ ಎಡೆಯಲ್ಲೋ, ಕಬ್ಬಿಣದ ಸಂದೂಕಿನೊಳಗೋ ಭದ್ರವಾಗಿ ಬಚ್ಚಿಟ್ಟ ಫೋಟೋಗಳು, ಪ್ರಮಾದವಶಾತ್ ಕಣ್ತಪ್ಪಿನಿಂದ ಯಾರದೋ ಕಣ್ಣಿಗೆ ಬಿತ್ತೋ, ದೊಡ್ಡ ಗುಲ್ಲು ರದ್ದಾಂತವಾಗಿ, ಅದು ಹರಿದು ತಿಪ್ಪೆ ಸೇರಿಯೋ, ಅಡುಗೆಮನೆಯ ಉರಿಯೊಳಗೆ ಉರಿದೋ ದಂತಕಥೆಯಾಗಿಬಿಡುತ್ತಿತ್ತು. ಆದರೂ ಕಣ್ಣೀರು ಸುರಿಸುತ್ತಲೇ ಹೃದಯದ ಕಟ್ಟಿನಿಂದ ನಮ್ಮ ಭಾವಚಿತ್ರಗಳನ್ನ ಹೇಗೆ ಸುಟ್ಟು ಹಾಕುತ್ತೀರಿ ನೋಡುವ – ಅಂತ ತುಂಬಿದ ಕಣ್ಣಿನೊಳಗೆ ಸುಟ್ಟು ಹಾಕುವಷ್ಟು ಪ್ರಶ್ನೆ  ಹರಿಯಬಿಡುತ್ತಿದ್ದರು. ವಯೋಸಹಜವಾದ ರಂಗುರಂಗಿನ ಕನಸಿಗೆ ಅಪರಾಧಿ ಪಟ್ಟ ಕಟ್ಟಿದ ಮಾತ್ರಕ್ಕೆ, ಭಾವನೆಗಳನ್ನು ಕಟ್ಟಿಟ್ಟುಕೊಳ್ಳಲಾದೀತೇ? ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಭಾವಚಿತ್ರವೊಂದು ಬದುಕಿನ ಸೆಲೆಯಂತೆ, ಅಪರಿಮಿತ ಪ್ರೀತಿಯ ಸಂಕೇತವಾಗಿ ಗೋಪ್ಯವಾಗಿ ಕಾಡುವ ಸಂಗತಿಯಾಗಿ ಬಿಡುತ್ತಿತ್ತು. ಮುಂದೊಮ್ಮೆ ಹಿರಿಯರ ಒಪ್ಪಿಗೆ ಮುದ್ರೆ  ಅವರುಗಳಿಗೆ ಬಿದ್ದರೆ ಸರಿ, ಇಲ್ಲದಿದ್ದರೆ, ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿಗೆಯೊಳಗೆ ಭಾವಚಿತ್ರವೂ ತುಕ್ಕು ಹಿಡಿದು ಮಸುಕು ಮಬ್ಬಾಗಿ ಉಸಿರುಗಟ್ಟಿ ತಪಿಸುತ್ತಾ ಕಾಲದ ನಾಗಾಲೋಟದಲ್ಲಿ ಮರೆವಿಗೆ ಸಲ್ಲುವಾಗ, ಹೀಗೆ ಎಷ್ಟೊಂದು ಭಾವಚಿತ್ರಗಳ ಅವಸಾನವಾಗಿದೆಯೋ ಅವರವರ ಭಾವಕ್ಕಷ್ಟೇ ಗೊತ್ತು.
 
ಇನ್ನು ಸಭೆ–ಸಮಾರಂಭಗಳಲ್ಲಿ ಇದರ ಕತೆ ಕೇಳಬೇಕು ಅಂದರೆ ಒಮ್ಮೆ ಒಂದು ಸುತ್ತು ಮದುವೆ ಮಂಟಪಕ್ಕೆ ಹಾಕಿ ಬರಬೇಕು. ಫೋಟೊಕ್ಕೆ ನಿಲ್ಲುವ ನೆಂಟರಿಷ್ಟರ ಹಾವಭಾವಗಳೊಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು. ಬಹುಶಃ ಮದು ಮಕ್ಕಳಿಗೂ ಅಂತಹ ಉತ್ಸಾಹವಿರಲಿಕ್ಕಿಲ್ಲವೇನೋ. ಸ್ಟೈಲಾಗಿ, ಸ್ಮೈಲ್ ಕೊಟ್ಟು ಫೋಟೊಕ್ಕೆ ಫೋಸ್ ಕೊಟ್ಟು ಬಂದ ನಂತರವೂ ಅವರ ತಲೆಯೊಳಗೆ ಅದೇ ಗುಂಗಿ ಹುಳು. ಮದುವೆ ಮನೆಯವರ ತಲೆ ಕಂಡಾಗಲೆಲ್ಲಾ, ಫೋಟೊ ಕ್ಲೀನ್ ಆಯ್ತಾ? ಒಮ್ಮೆ ನೋಡೊಕೆ ಕೊಡಿ ಆಯ್ತಾ ಅಂತ ಪದೇ ಪದೇ ಕೇಳುವ ಪರಿಗೆ, ಅವರಿಗೆ ಇವರನ್ನೆಲ್ಲಾ ಯಾವ ಕರ್ಮಕ್ಕೆ ಫೋಟೊಕ್ಕೆ ನಿಲ್ಲಿಸಿದ್ದೇವಪ್ಪಾ ಅಂತ ಕಿರಿ ಕಿರಿ ಆಗದೇ ಇರಲು ಸಾಧ್ಯವೇ? ಇನ್ನು ಅಲ್ಲೂ ಕೆಲವೊಮ್ಮೆ ಮಜಾ ಕೇಳಬೇಕು, ನಿಮ್ಮನ್ನು ಎಲ್ಲೋ ನೋಡಿದಂತಿದೆಯಲ್ಲಾ! – ಅಂದಾಗ ಹೆಮ್ಮೆಯ ಜೊತೆಗೆ ನವಿರು ನವಿರು ಭಾವ. ಹ್ಮಾಂ! ಈಗ ನೆನಪಿಗೆ ಬಂತು ನೋಡಿ, ಮೊನ್ನೆ ಫೇಸ್ ಬುಕ್‌ನೊಳಗೆ ಫೋಟೊ ಅಪ್‌ಲೋಡ್ ಮಾಡಿದ್ದೀರಲ್ಲ? ಅದರಲ್ಲಿ ಎಷ್ಟೊಂದು ಚೆಂದಕ್ಕೆ ಕಾಣಿಸ್ತಿದ್ರಿ. ಈಗ ನೋಡಿದ್ರೆ ಅದರಲ್ಲಿ ಇದ್ದಷ್ಟು ಕಲರು, ಫಿಗರ್ ಎರಡೂ ಇಲ್ಲ. ಅಲ್ಲಿದ್ದ ಹಾಗೆ ಪೂರ್ತಿಯಾಗಿ ನೀವಿಲ್ಲವೇ ಇಲ್ಲ ಅಂತ ಏಕ್‌ದಂ ಕಣ್ಣಿಗೆ ಖಾರದ ಪುಡಿ ತಣ್ಣಗೆ ಎರಚಿದ ಹಾಗೆ ಹೇಳಿದ್ರೆ, ಕಣ್ಣಲ್ಲಿ ನೀರೂರದೇ ಇರುತ್ತದೆಯಾ? ಇವರಿಗೇನೋ ನಂಜು ಅಂತ ಒಳಗೊಳಗೆ ಹಲ್ಲು ಮಸೆದವರು ಅದೆಷ್ಟು ಮಂದಿಯೋ.
 
ಕಾಲೇಜು ಓದಲು ದೂರದ ಊರಿನಲ್ಲಿ ಹಾಸ್ಟೇಲ್ ಸೇರಿದ ನನ್ನ ಮಗಳು, ಹಾಸ್ಟೇಲ್‌ಗೆ ಹೋಗುವಾಗ ಪುಸ್ತಕಕ್ಕಿಂತ ಹೆಚ್ಚಾಗಿ ಮನೆಯೊಳಗಿದ್ದ ಎಲ್ಲಾ ಆಲ್ಬಂಗಳನ್ನು ಕೊಂಡೊಯ್ದಿದ್ದಾಳೆ. ‘ಯಾಕೆ ಇಷ್ಟೆಲ್ಲಾ? ಓದೋದಿಕ್ಕೆ ಇಲ್ಲವಾ? ಫೋಟೊ ನೋಡಿಕೊಂಡೇ ಕಾಲ ಕಳೆಯೋದಾ’ ಅಂತ ಗದರಿದರೆ, ‘ನೆನಪಾಗುವಾಗ ನಿಮ್ಮನ್ನೆಲ್ಲಾ ನೋಡಲು ಬೇಕಲ್ಲಾ?’– ಅಂತ ರಾಗ ಕೊಯ್ಯುತ್ತಾಳೆ. ಒಂದೊಮ್ಮೆ ನಾನೂ ಇದೇ ಕೆಲಸ ಮಾಡಿರುವೆನಲ್ಲವೇ? ಭಾವಚಿತ್ರದ ಬಂಧ ನನ್ನಿಂದ, ಅವಳಿಂದ ಹೀಗೆ ಪರಂಪರೆಯನ್ನು ಉಳಿಸುವ ಕೊಂಡಿಯಾಗಿ, ಹೇಳಿಕೊಂಡಷ್ಟೂ ಮುಗಿಯದ ಭಾವಚಿತ್ರದ ಭಾವಯಾನ ಸಾಗುತ್ತಲೇ ಹೋಗುತ್ತಿದೆ. ಭಾವಗಳು ಬದಲಾಗುತ್ತಲೇ ಇದ್ದರೂ, ಭಾವಚಿತ್ರದೊಳಗಿನ ರೂಪುಗಳು ಬದಲಾದರೂ, ಕ್ಲಿಕ್ಕಿಸಿದ ನಮ್ಮದೇ ಪಟವನ್ನು ಯಾಕೋ ಎರಡೆರಡು ಭಾರಿ ದಿಟ್ಟಿಸುವ ವಾಂಛೆಯಿಂದ ಯಾರೂ ಹೊರತಾಗಿಲ್ಲವೇನೋ?.
 
ಈಗಂತೂ ಹೇಳಿ ಕೇಳಿ ಡಿಜಿಟಲ್ ಯುಗ. ಸ್ಮಾರ್ಟ್ ಫೋನ್‌ಗಳು ನಮ್ಮ ಅಂಗೈಯೊಳಗೆ ಬಂದು ನಿಂತ  ಮೇಲೆ ಫೋಟೊಗ್ರಾಫರ್‌ಗಳು ನಮ್ಮ ಭಿತ್ತಿಚಿತ್ತದಿಂದ, ಭಾವಲೋಕದಿಂದ, ಹೆಚ್ಚೇಕೆ? ಹೆಚ್ಚು ಕಡಿಮೆ ನಮ್ಮ ಊರಿನಿಂದಲೇ ಕಣ್ಮರೆಯಾಗುತ್ತಿದ್ದಾರೆ. ಎಲ್ಲರೂ ಈಗ ಸ್ವಯಂಘೋಷಿತ ಫೋಟೊಗ್ರಾಫರ್‌ಗಳೇ ಆಗಿ, ನಿಮಿಷಕ್ಕೊಂದು ಫೋಟೊಗಳನ್ನು ನಮಗೆ ನಾವೇ ಕ್ಲಿಕ್ಕಿಸುತ್ತಾ, ಅದನ್ನು ಫೇಸ್ಬುಕ್, ವಾಟ್ಸ್‌ಪ್‌ಗಳಿಗೆ ಹರಿಯಬಿಡುತ್ತಾ, ಭಾವಚಿತ್ರದೊಳಗೆ ಭಾವುಕತೆಯೇ ಇಲ್ಲದೆ ಕಟ್ಟಿನಾಚೆಗೆ ನಿಂತು ಹೇಳ ಹೆಸರಿಲ್ಲದವರಾಗುತ್ತಿದ್ದೇವೆಯಾ ಅಂತ ಅನ್ನಿಸತೊಡಗಿದಾಗ, ಸಂಭ್ರಮದಾಚೆಗಿನ ನಿರ್ಭಾವುಕ ಮನಸಿನ ಬಗ್ಗೆ ಪಿಚ್ಚೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.