ADVERTISEMENT

ಮತ್ತೆ ಮತ್ತೆ ನೆನಪಾಗುವ ಶ್ರಾವಣ...

ನಳಿನಿ ಟಿ.ಭೀಮಪ್ಪ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಶ್ರಾವಣ ಮಾಸ ವರ್ಷಕ್ಕೊಮ್ಮೆ ಮಾತ್ರವಲ್ಲ,  ನನ್ನ ತಂಗಿಯ ಹುಬ್ಬಿನ ಮೇಲೆ ಇರುವ ಒಂದಿಂಚಿನ ಗಾಯದ ಗುರುತನ್ನು ನೋಡಿದಾಗಲೆಲ್ಲಾ ಶ್ರಾವಣ ನೆನಪಾಗುತ್ತದೆ. ಶ್ರಾವಣದಲ್ಲಿ ಬರುವ ನಾಗರ ಪಂಚಮಿಯನ್ನು ಉತ್ತರ ಕರ್ನಾಟಕದಲ್ಲಿ ಅದೆಷ್ಟು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.  ಹುಬ್ಬಳ್ಳಿಯ ಭಾರತ್ ಮಿಲ್ಲಿನಲ್ಲಿ ಅಪ್ಪ ಎಂಜಿನಿಯರಾಗಿ ಕೆಲಸಕ್ಕೆ ಸೇರಿದಾಗ ಚಿತ್ರದುರ್ಗದಿಂದ ಕುಟುಂಬ ಹುಬ್ಬಳ್ಳಿಗೆ ಶಿಫ್ಟಾಯಿತು. ನಮಗೋ ಊರು, ಭಾಷೆ, ಆಚರಣೆಗಳು ಎಲ್ಲಾ ಹೊಸದು. ಶ್ರಾವಣದಲ್ಲಿ ಹುಬ್ಬಳ್ಳಿಗೆ ಕಾಲಿಟ್ಟ ನಂತರ ಬಂದ ಮೊದಲ ಹಬ್ಬ ನಾಗರಪಂಚಮಿ. 

ಕ್ವಾರ್ಟಸ್ಸಿನಲ್ಲಿ ಪ್ರತಿಯೊಬ್ಬರ ಮನೆ ಮುಂದೆ ಹಾಯುವಾಗಲೂ ಬೆಲ್ಲದ ಪಾಕ, ತುಪ್ಪದ ಘಮಲು, ಕರಿದ ತಿಂಡಿಗಳ ಸುವಾಸನೆ ಬಾಯಲ್ಲಿ ನೀರೂರಿಸುತ್ತಿತ್ತು.  ಹಬ್ಬದ ದಿನ ಎಲ್ಲರ ಮನೆಯಿಂದಲೂ ಉಂಡೆ, ಚಕ್ಕುಲಿ, ನಿಪ್ಪಟ್ಟುಗಳ ತಾಟು ಬಂದಾಗ ಕಣ್ಣರಳಿಸಿ ನೋಡಿದ್ದೆವು. ಕೇವಲ ರವೆಉಂಡೆ, ತಂಬಿಟ್ಟಿನ ಉಂಡೆ ತಿಂದು ಗೊತ್ತಿದ್ದ ನಮಗೆ ಇಷ್ಟೊಂದು ಬಗೆಬಗೆಯ, ರುಚಿಕರವಾದ ಉಂಡೆಗಳನ್ನು ನೋಡಿಯೇ ದಂಗಾಗಿದ್ದೆವು. ಅದೆಂತಹ ರುಚಿ.  ನಮ್ಮ ಮನೆಯಲ್ಲೂ ಉಂಡೆ ಮಾಡಬೇಕೆಂದು ಹಠ ಮಾಡಿದ್ದೆವು. ಅಮ್ಮ  ಪಕ್ಕದ ಮನೆಯವರ ಹತ್ತಿರ ಹೇಳಿಸಿಕೊಂಡು ಮಾಡುವವರೆಗೂ ನಮಗೆ ಸಮಾಧಾನವಿರಲಿಲ್ಲ.

ಕ್ವಾರ್ಟಸ್ಸಿನಲ್ಲಿದ್ದ ಒಂದು ದೊಡ್ಡ ಬೇವಿನ ಮರಕ್ಕೆ ಜೋಕಾಲಿಯನ್ನು ಕಟ್ಟಿದ್ದರು. ಒಂದು ಕಟ್ಟಿಗೆ ತುಂಡಿಗೆ ಎರಡೂ ಬದಿಯಲ್ಲಿ ಹಗ್ಗ ಕಟ್ಟಿ ಮರದ ಕೊಂಬೆಗೆ ಕಟ್ಟಿದ್ದರು. ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ಎದುರು ಬದುರಾಗಿ ಕಟ್ಟಿಗೆಯ ಮೇಲೆ ನಿಂತು ಜೋರಾಗಿ ಜೀಕುತ್ತಾ ಆಡುತ್ತಿದ್ದೆವು.  ಹೀಗೆ ಆಡುತ್ತಿರುವಾಗ ನನ್ನ ಪುಟಾಣಿ ತಂಗಿ ಜೋಕಾಲಿಗೆ ಅಡ್ಡ ಬಂದುಬಿಟ್ಟಿದ್ದಳು. ಚೂಪು ಕಟ್ಟಿಗೆಯ ಭಾಗ ಹುಬ್ಬಿನ ಭಾಗಕ್ಕೆ ಬಡಿದು ಚಿಕ್ಕ ಹಳ್ಳದಂತಾಗಿ ರಕ್ತ ಬಳಬಳನೆ ಹರಿಯಲು ಆರಂಭಿಸಿತು. ನಾವಿಬ್ಬರೂ ಸ್ನೇಹಿತೆಯರು ಜೋಕಾಲಿ ಇಳಿದು ಮನೆಯಲ್ಲಿ ಬಯ್ಯುತ್ತಾರೆಂದು ಹೆದರಿ ಒಬ್ಬರ ಮನೆಯ ಕೊಟ್ಟಿಗೆಯಲ್ಲಿ ಅಡಗಿ ಕುಳಿತಿದ್ದೆವು.  ಇತ್ತ ತಂಗಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಏಟು ಬಿದ್ದ ಜಾಗಕ್ಕೆ 5-6 ಹೊಲಿಗೆಗಳನ್ನು ಹಾಕಿದ್ದರು. ಸದ್ಯ ಕಣ್ಣಿಗೆ ಏನೂ ಅಪಾಯವಾಗಲಿಲ್ಲವಲ್ಲಾ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು. 

ಮನೆಗೆ ಬಂದ ಮೇಲೆ ನಾನೆಲ್ಲೂ ಕಾಣದಿದ್ದುದನ್ನು ನೋಡಿ ಎಲ್ಲರಿಗೂ ಆತಂಕ ಶುರುವಾಯಿತು. ಸ್ನೇಹಿತೆಯ ಮನೆಯವರೂ ಸಹ ಆಗಲೇ ಹುಡುಕಲು ಆರಂಭಿಸಿದ್ದರು. ನಮ್ಮ ಸ್ನೇಹಿತರು ನಾವು ಅಡಗಿಕೊಳ್ಳುವ ಜಾಗಗಳಲೆಲ್ಲಾ ಹುಡುಕುತ್ತಾ ‘ನಿಮ್ಮಮ್ಮ ಬೈಯ್ಯೋಲ್ವಂತೆ, ಹೊಡಿಯೋಲ್ವಂತೆ, ನೀವಿಬ್ಬರೂ ಮನೆಗೆ ಬರಬೇಕಂತೆ’ ಎಂದು ಕೂಗುತ್ತಿದ್ದರು.  ಆಗ ಧೈರ್ಯ ಬಂದು ಕೊಟ್ಟಿಗೆಯಿಂದ ಹೊರಬಂದು ಮನೆ ಸೇರಿದೆವು.  ಬ್ಯಾಂಡೇಜ್ ಕಟ್ಟಿಕೊಂಡು ಉಂಡೆ ತಿನ್ನುತ್ತಿದ್ದ ತಂಗಿಯನ್ನು ನೋಡಿ ಸಮಾಧಾನವಾಗಿತ್ತು.  ಬೆದರಿದ್ದ ನನಗೂ ಅಮ್ಮ ಸ್ವಾಂತನ ಹೇಳಿ ಉಂಡೆ ಕೊಟ್ಟಳು.

ಈ ಘಟನೆ ನಡೆದು 30 ವರ್ಷಗಳಾದರೂ ಈಗಲೂ ತಂಗಿಯ ಗಾಯದ ಗುರುತನ್ನು ನೋಡಿದಾಗ ಶ್ರಾವಣ ಮತ್ತೆ ಮತ್ತೆ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.