ADVERTISEMENT

ಮನಸ್ಸಿದ್ದಲ್ಲಿ ಮಾರ್ಗ

ನಂದಾ ಕೇಶವ್ ಜಹಗೀರದಾರ್
Published 23 ಜನವರಿ 2015, 19:46 IST
Last Updated 23 ಜನವರಿ 2015, 19:46 IST
ಮನಸ್ಸಿದ್ದಲ್ಲಿ ಮಾರ್ಗ
ಮನಸ್ಸಿದ್ದಲ್ಲಿ ಮಾರ್ಗ   

ಕೆಲಸಕ್ಕೆ ಹೋಗುವ ಮಹಿಳೆಯರಂತೆ ನಮಗೆ ವಾರಾಂತ್ಯದ ರಜೆ ಇಲ್ಲವಾದರೂ ವಾರಕ್ಕೊಂದು ಕಡ್ಡಾಯವಾಗಿ ಸ್ವಯಂಕೃತ ರಜೆ ಘೋಷಿಸಿಕೊಂಡರೆ ಮಾರನೆ ದಿನ ಬೆಲೆ ತೆರಬೇಕಾಗಿರುವುದು ನಾವೇ ಅಲ್ಲವೇ?

ಹಾಗೆಂದ ಮಾತ್ರಕ್ಕೆ ನಾವು ರಜೆ ರಹಿತ ಗೃಹಿಣಿ ಎಂದಲ್ಲ, ಬೆಳಿಗ್ಗೆ ಗಂಡ ಮಕ್ಕಳು ಹೋದ ಮೇಲೆ ಒಂದೆರಡು ಗಂಟೆಗಳ ವಿರಾಮ ಸಿಗುತ್ತದಲ್ಲ? ದಿನದ ಬಹುತೇಕ ಸಮಯದಲ್ಲಿ ಸಿಗುವ ಈ ಥರದ ಇಂಟರ್‌ವೆಲ್‌ಗಳೇ ನನಗೆ ರಜೆಯಂತೆ ಭಾಸವಾಗುತ್ತವೆ.

ಕುಟ್ಟುವ, ಬೀಸುವ, ಬೇಯಿಸುವ, ಸ್ವಚ್ಛಮಾಡುವ, ಒಗೆಯುವ ಹೀಗೆ ಎಲ್ಲಾ ಕೆಸಲಗಳಿಗೂ ಈಗ ಪರ್ಯಾಯವಾಗಿ ಹಲವಾರು ಆಧುನಿಕ ಯಂತ್ರಗಳು ನಮ್ಮ ದೈಹಿಕ ಶ್ರಮವನ್ನು, ಸಮಯವನ್ನು ಉಳಿಸುತ್ತಿವೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಅವಕಾಶಕ್ಕೇನೂ ಕೊರತೆಯಿಲ್ಲ ಎಂಬುದು ನನ್ನ ಅನಿಸಿಕೆ.

‘ಮನಸ್ಸಿದ್ದಲ್ಲಿ ಮಾರ್ಗ’ ಎಂಬುದು ಗೃಹಿಣಿಯರಿಗೆ ಅಕ್ಷರಶಃ ಅನ್ವಯಿಸುವ ಉಕ್ತಿ. ರಜೆ ಇಲ್ಲ ಎನ್ನುವುದಕ್ಕಿಂತ ಸಿಗುವ ಸಮಯದಲ್ಲೇ ರಜೆಯ ಮಜ ಅನುಭವಿಸುವುದು ನಮ್ಮ ಕೈಯಲ್ಲೇ ಇದೆ. ನನಗಾಗಿಯೇ ಮೀಸಲಿರಿಸಿಕೊಳ್ಳುವ ನನ್ನ ವೈಯಕ್ತಿಕ ರಜೆ ಕಳೆಯುವ ರೀತಿ, ದಿನಚರಿಯ ನಿರ್ವಹಣೆಯ ಮಧ್ಯೆಯೂ ನನ್ನ ಮನಸ್ಸಿಗೆ ದೇಹಕ್ಕೆ ವಿರಾಮವನ್ನೂ, ಉಲ್ಲಾಸವನ್ನೂ ನೀಡುತ್ತದೆ.

ಪತ್ರಿಕೆಗಳಿಗೆ ಲೇಖನ ಬರೆಯುವುದು, ನನ್ನ ಅನುಭವಗಳಿಗೊಂದು ರೂಪ ಕೊಟ್ಟು ಕಥೆ ಬರೆಯುವುದು, ಪ್ರಕಟಿತ ಬರಹಗಳನ್ನು ಓದುತ್ತಾ ಬರವಣಿಗೆಯಲ್ಲಿ ಮತ್ತಷ್ಟು ಪ್ರಗತಿ ಕಾಣುವುದು: ಭೂಮಿಕಾದ ಆಯ್ದ ಲೇಖನಗಳನ್ನು ಸಂಗ್ರಹಿಸಿಡುವುದು. ಓದಿನಲ್ಲಿ ಮುಳುಗಿ ಸಂಜೆವರೆಗೂ ಅದೇ ಚಿಂತನೆಯಲ್ಲಿ ತೊಡಗುವುದು. ನನ್ನ ರಜೆಯ ಅವಧಿಯ ಮುಕ್ಕಾಲು ಭಾಗವನ್ನು ಇದಕ್ಕೇ ಮೀಸಲಿಡುತ್ತೇನೆ.

ಉಳಿದಂತೆ ಮಕ್ಕಳಿಗಾಗಿ ಅವರಿಷ್ಟದ ತಿಂಡಿ ತಯಾರಿಸುವುದು, ಅಮ್ಮನ ಜೊತೆ ಆರಾಮವಾಗಿ ಫೋನಿನಲ್ಲಿ ಹರಟುವುದು, ಚೆನ್ನಾಗಿ ನಿದ್ರಿಸುವುದು, ನೆರೆಹೊರೆಯವರೊಡನೆ ಮಾತಿಗಿಳಿಯುವುದು, ಪೇಂಟಿಂಗ್, ಪದಬಂಧ ಬಿಡಿಸುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹೀಗೆ ರಜೆಯ ಅವಧಿ ಕಳೆಯುವ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ನಾನು ಸ್ವತಂತ್ರಳು. ನನಗೆ ಸಮಯದ ಮಿತಿಯಿಲ್ಲ ಮೇಲಾಧಿಕಾರಿಯ ಆಜ್ಞೆ ಇಲ್ಲ. ಇಂತಿಷ್ಟೇ ಅವಧಿಯಲ್ಲಿ ಕೆಲಸ ಮುಗಿಸಲೇಬೆಕೆಂಬ ಧಾವಂತವಿಲ್ಲ. ಜೊತೆಗೆ ಮನೆಯ ಇತರ ಸದಸ್ಯರಿಂದ ಪ್ರಮೋಷನ್ ನಿರೀಕ್ಷೆಗಳೂ ಇಲ್ಲ. ಇದಕ್ಕಿಂತ ರಜೆ ಬೇಕೆ? ಗಡಿಯಾರದ ಮುಳ್ಳು ತಿರುಗುತ್ತಿದ್ದರೇನೇ ಅದಕ್ಕೊಂದು ಬೆಲೆ, ಶೋಭೇ ಅಲ್ಲವೇ? ರಜೆ, ಸಜೆ ಎರಡೂ ನಮ್ಮ ಕೈಯಲ್ಲೇ ಇವೆ. ಗೃಹಕೃತ್ಯಗಳ ನಿರ್ವಹಣೆಯ ಮಧ್ಯೆಯೂ ಗೃಹಿಣಿಯೊಂದಷ್ಟು ನೆಮ್ಮದಿ ಸಿಕ್ಕರೆ ಅದೇ ರಜೆಯ ಕಲ್ಪನೆ ಎಂಬುದು ನನ್ನ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.