ADVERTISEMENT

ಮಳೆಗೆ ಜೊತೆಯಾದ ಕೊಡೆ...

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಮಳೆಗೆ ಜೊತೆಯಾದ ಕೊಡೆ...
ಮಳೆಗೆ ಜೊತೆಯಾದ ಕೊಡೆ...   

ಕೊಡೆ ಎಂದಾಕ್ಷಣ ನೂರಾರು ನೆನಪುಗಳು ಮನದಲ್ಲಿ ತೆರೆದುಕೊಳ್ಳುತ್ತದೆ. ನಾನು ಬೆಳೆದದ್ದು ಉತ್ತರ ಕನ್ನಡದ ಒಂದು ಸಣ್ಣ ಹಳ್ಳಿಯಲ್ಲಿ. ಅವಿಭಕ್ತ ಕುಟುಂಬದಲ್ಲಿ.ನಮ್ಮನೆಯಲ್ಲಿ ಮಳೆಗಾಲದ ಸಿದ್ಧತೆ ಭರದಿಂದಲೇ ಸಾಗುತ್ತಿತ್ತು.

ಬಿರುಬೇಸಿಗೆಯಲ್ಲಿಯೇ ಅಮ್ಮ, ದೊಡ್ಡಮ್ಮಂದಿರು ಕಾಳು-ಕಡಿಗಳನ್ನೆಲ್ಲ ಒಣಗಿಸಿ ಭದ್ರವಾಗಿ ಡಬ್ಬದಲ್ಲಿ ತುಂಬಿಡುತ್ತಿದ್ದರು. ಅಪ್ಪ, ದೊಡ್ಡಪ್ಪ ಅಟ್ಟದ ಮೇಲಿದ್ದ ಕೊಡೆಗಳನ್ನು ತೆಗೆದು ಯಾವುದನ್ನು ಉಪಯೋಗಿಸಬಹುದು? ಯಾವುದನ್ನು  ರಿಪೇರಿ ಮಾಡಬೇಕು? – ಎಂದು ಪರೀಕ್ಷಿಸುತ್ತಿದ್ದರು.

ತುಂಬ ಚಿಕ್ಕವರಾದ ನಮಗೆಲ್ಲ ‘ಮಕ್ಕಳೇ!., ಜೋರು ಮಳೆ, ಗಾಳಿಯಲ್ಲಿ ನಿಮಗೆ ಕೊಡೆ ಮತ್ತು ನಿಮ್ಮ ಶಾಲೆಯ ಚೀಲ ಎರಡನ್ನೂ ಸಂಭಾಳಿಸಲು ಆಗುವುದಿಲ್ಲ.  ಜಾರಿ ಬಿದ್ದು ಸಮವಸ್ತ್ರವೆಲ್ಲ ಕೆಸರಾಗಿ, ನಿಮಗೂ ಪೆಟ್ಟಾಗುತ್ತದೆ.

ನೀವೆಲ್ಲ ಈ ವರ್ಷ ಕಂಬಳಿಕೊಪ್ಪೆಯಲ್ಲಿಯೇ  (ಮಳೆಯಲ್ಲಿ ಉಪಯೋಗಿಸಲೆಂದೇ ಇರುವ ಒಂದು ಜಾತಿಯ ಕಂಬಳಿ) ಶಾಲೆಗೆ ಹೋಗಿಬನ್ನಿ’ ಎಂದುಬಿಡುತ್ತಿದ್ದರು. ಅವರ ಮಾತು ಕೇಳಿ ನಮ್ಮಗಾಗುತ್ತಿದ್ದ ನಿರಾಸೆ ಅಷ್ಟಿಷ್ಟಲ್ಲ. ಆಸೆಯ ಕಣ್ಣಿನಿಂದ ‘ಈ ಕೊಡೆ ನನಗೆ, ಆ ಕೊಡೆ ನಿನಗೆ’ ಎಂದು ಗುಸುಗುಸು ಮಾತನಾಡುತ್ತಿದ್ದ ನಾವು ಅಳುವುದೊಂದೇ ಬಾಕಿ.

ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಕೊಡೆ ಹಿಡಿದು ಶಾಲೆಗೆ ಹೋಗುವ ಅದೃಷ್ಟ ದೊರಕಿತು. ಅದನ್ನು ಬಿಡಿಸಿಕೊಂಡು ಶಾಲೆಗೆ ಹೋದರೆ ಎಲ್ಲಿ ಹಾಳಾಗಿಬಿಡಬಹುದು ಎಂದು ಸಣ್ಣ ಮಳೆಯಿದ್ದರೆ ಹಾಗೆಯೇ ಓಡಿ ಶಾಲೆಗೆ ಸೇರಿಕೊಳ್ಳುತ್ತಿದ್ದೇವು.

ಕೊಡೆ ತೆಗೆದುಕೊಂಡು ಶಾಲೆಗೆ ಬರುತ್ತಾರೆ ಎಂದರೆ ಆ ಕಾಲದಲ್ಲಿ ಉಳಿದವರಿಗಿಂತ ಸ್ವಲ್ಪ ಶ್ರೀಮಂತರು ಎಂದೇ ಲೆಕ್ಕ. ಆ ಕೊಡೆಯ ಜೊತೆ ನಮಗೂ ಸ್ವಲ್ಪ ಜಾಸ್ತಿ ಮರ್ಯಾದೆ ಸಿಗುತ್ತಿತ್ತು. ತರಗತಿಯ ಒಳಗೆ ಕೊಡೆ ಒಯ್ಯುವಂತಿರಲಿಲ್ಲ. ಅದನ್ನು ಹೊರಗೆ ಇಡಬೇಕಿತ್ತು. ಶಾಲೆಯ ಒಳಗಿದ್ದರೂ ಹೊರಗೆ ಇಟ್ಟಿರುವ ಕೊಡೆಯದೇ ಚಿಂತೆ.

ಯಾರಾದರೂ ಕದ್ದುಬಿಟ್ಟರೆ ಎಂಬ ಭಯಕ್ಕೆ ಕೊಡೆಗಳಿಗೆ ಏನಾದರೊಂದು ಗುರುತು ಮಾಡುತ್ತಿದ್ದೆವು. ನನ್ನ ಕೊಡೆಗೆ ಕಸೂತಿಯಲ್ಲಿ ಹೆಸರು ಬರೆದು ಸುತ್ತಲೂ ಹೂ-ಬಳ್ಳಿಗಳನ್ನು ಬಿಡಿಸಿ ಅದರ ಅಂದವನ್ನು ಹೆಚ್ಚಿಸುತ್ತಿದ್ದೆ. 

ಈಗ ನಲವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರೂ ಮಳೆ ಎಂದಾಕ್ಷಣ ಊರಿಗೆ ಹೋಗಲು ಮನಸು ಹಾತೋರಿಯುತ್ತದೆ. ‘ಜೋರು ಮಳೆ, ನಿನ್ನ ನೆನಪಾಗುತ್ತಿದೆ.ಮಳೆ ನೋಡಲು ಬರೋದಿಲ್ವಾ?’ ಎಂದು ಅತ್ತಿಗೆಯ ಫೋನ್‌ ಬಂದ ತಕ್ಷಣ ತಕ್ಷಣ ಕಚೇರಿಗೆ ರಜೆ ಹಾಕಿ ಊರಿಗೆ ಓಡುತ್ತೇನೆ.

ಮಳೆಯಲ್ಲಿ ಕೊಡೆ ಹಿಡಿದು ಸೀರೆಯನ್ನು ಮೊಣಕಾಲವರೆಗೆ ಎತ್ತಿಕೊಂಡು, ಮಣ್ಣಿನ ರಸ್ತೆಯ ನಡುವಿನಲ್ಲಿ ನೀರು ಹಾರುವಂತೆ  ಬಡಿಯುತ್ತ, ಒಬ್ಬಳೇ ಹಾಡು ಹೇಳಿಕೊಂಡು ಹೊಳೆಯ ದಡಕ್ಕೆ ಹೋಗಿ ಕೆಂಪು ನೀರನ್ನು ನೋಡುತ್ತಾ ಮೈ ಮರೆಯುತ್ತೇನೆ. ಇಂಥ  ಹಳ್ಳಿಯಲ್ಲಿ ನನ್ನ ಹುಟ್ಟಿಸಿದ ಆ ದೇವನನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.