ADVERTISEMENT

ಮಳೆಯಲ್ಲಿ ಮರೆಯಲಾಗದ ಉಪಚಾರ

ದಾನೇಶ್ವರಿ ಬಿ.ಸಾರಂಗಮಠ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಮೊದಲೇ ಶಾಲೆಗೆ ಹೋಗೂದಕ್ಕ ಲೇಟಾಗಿತ್ತು. ಸಾಲದ್ದಕ್ಕೆ ಮೊದಲ ಅವಧಿ ನಂದೇ. ಮಕ್ಳು ಕಾಯ್ತಿರ್ತಾರ ಅಂತ ಧಾವಂತದಿಂದ ಮಾರುದ್ದ ಹೆಜ್ಜೆ ಹಾಕುತ್ತಾ ಅರ್ಧ ದಾರಿ ಹೋಗಿದ್ದೆ, ಅಷ್ಟರಲ್ಲಿಯೇ ಗುರುತಾಯಿಯವರ ಸ್ವಲ್ಪ ಬರ್ತೀರೇನು? ಅಂತ ಪರಿಚಯದ ಅಜ್ಜಿ ಕರೀತು. ಏನ ಮಾಡ್ಲಪ್ಪ  ಲೇಟಾದ್ರ ಅಲ್ಲಿ ಬೈಸಿಕೋಬೇಕು, ಈ ಅಜ್ಜಿ ಯಾಕ ಕರದ್ಲೋ ಅನಕೋತ, ಬಿರ್ರನೆ ಮನೆಯೊಳಗೆ ಹೋದವಳ ಹಿಂದೆ ಹೋದೆ. ಆಕೆ ಸೀದಾ ಬಚ್ಚಲು ಮನೆಗೆ ನಡೆದ್ಲು. ಅಲ್ಯಾಕ ಹೋತು ಅಜ್ಜಿ, ಏನಾದ್ರೂ ಸಹಾಯ ಬೇಕಿತ್ತೇನೋ ಅನಕೋತ ಆಕಿಯ ಹಿಂದ ನನ್ನ ವ್ಯಾನಿಟಿ ಬ್ಯಾಗು, ಛತ್ರಿ, ಪುಸ್ತಕ ಸಮೇತ ಗಾಬರಿಯಿಂದಲೇ ಹೋದೆ. ಅಯ್ಯ! ಅವನ್ನ ಅಲ್ಲೆ ಪಡಸಾಲ್ಯಾಗ ಇಟ್ಟು ಕೈಕಾಲು ಮುಖ ತಕ್ಕೋ ಬರ್ರಿ ಅಂತ ತಣ್ಣಗಿನ ಸ್ವರದಲ್ಲಿ ನುಡಿದು ತಂಬ್ಯಾಗ ನೀರ ಹಿಡಕೊಂಡು ಕಾಲಿಗೆ ನೀರ ಹಾಕಿಯೇ ಬಿಟ್ಲು.

ಹಚ್ಚಿದ ಪೌಡರ ಪರಿಮಳ ಸಹಿತ ಹೋಗಿಲ್ಲಾ. ಮತ್ತ ಮುಖ ತೊಳಿ ಅಂತಾಳಲ್ಲ ಅನಕೋವಷ್ಟರಲ್ಲಿ ವಸ್ತ್ರ ಕೊಟ್ಟು, ಕುರ್ಚಿ ಹಾಕಿದ್ಲು. ನನಗ ಹಿಂದು, ಮುಂದು ವಿಚಾರ ತಿಳಿಯದೆ ಯಾಕಜ್ಜಿ ಏನಾಗಬೇಕಿತ್ತು ಎಂದೆ. ಅಯ್ಯ ಶ್ರಾವಣ ಮಾಸ, ಪಂಚಮಿಗೆ ನಾಗಪ್ಪಗ ಹಾಲು ಹಾಕೇನಿ, ಸ್ವಾಮ್ಯಾರ್‌ನ  ಕರ್ದು ಊಟ ಮಾಡಿಸಿದ ಮ್ಯಾಲೆ ನಮ್ಮ ಊಟ.  ಸ್ವಾಮಿಗೋಳ ಮನಿ ಅಡ್ಡಾಡಿ ಬಂದೆ. ಯಾರೂ ಸಿಗಲಿಲ್ಲ. ಏನ ಮಾಡಬೇಕೋ ಗೊತ್ತಗಲಿಲ್ಲ. ಸ್ವಾಮ್ಯಾರು ಬರಲಾರದೆ ಉಣ್ಣಾಕ ಮನಸ್ಸಿಲ್ಲ. ನಮ್ಮ ಹಿರಿಯರಿಂದ ಪಾಲಿಸಿಕೊಂಡು ಬಂದೇವಿ.

ಅದ್ಕ ಮನಿ ಹೊರಗ ಯಾರಾದ್ರೂ ಭೇಟಿ ಆಗ್ತಾರೇನು ಅಂತ ನೋಡಿಕೋತ ನಿಂತಿದ್ದೆ, ನೀವು ಸಿಕ್ಕಬಿಟ್ರಿ. ಬಾಳ ಛಲೋ ಆತವ ಯವ್ವಾ. ಆಕೆಯ ಖುಷಿಯ ಮಾತು ಕೇಳಿ ನಾನು ಹೌಹಾರಿ ಹೋದೆ. ಪ್ರಸಾದ ಸ್ವೀಕರಿಸಾಕ ಈ ಅಜ್ಜಿ ನನ್ನ ಕರದಾಳ. ಹೊಟ್ಟೆ ತುಂಬಾ ಉಂಡು ಬಂದ ನನಗ ಮಾತನಾಡಾಕ ಅವಕಾಶವಿಲ್ಲದ ಹಾಗೆ ಕರ್ಚಿಕಾಯಿ, ಅಂಟು, ಉಂಡಿ, ಕಡಲೆಕಾಳು ಒಗ್ಗರಣೆ ತಂದು ಕೊಟ್ಲು. ಆಕೆಯ ಪ್ರೀತಿಯ ಒತ್ತಾಯಕ್ಕೆ ಮಣಿದು ಒಂದು ಉಂಡಿ ಮಾತ್ರ ತಿಂದು, ಈಗಿನ ಕಾಲದೊಳಗ ಇದ್ನ ಎಲ್ಲಿ ನಡೆಸಲಿಕ್ಕೆ ಆಗುತ್ತದೆ. ದೇವರಿಗೆ ಎಡೆ ಹಿಡಿದು ನಮಸ್ಕಾರ ಮಾಡಿಬಿಟ್ರ ಮುಗೀತು. ಹೀಗೆಲ್ಲಾ ಕಾಯೋ ಕೆಲಸ ಯಾಕೆ? ಅಲ್ಲದ ನೀವು ವಯಸ್ಸಾದವರು  ಅಂದೆ.

ಅರೇ ಎಂತಾಕಿಯವ್ವ ನೀನು. ದೊಡ್ಡ ಹಬ್ಬ ಐತಿ. ನಮ್ಮ ಹಿರಿಯರಿಂದ ಪಾಲಿಸಿಕೊಂಡು ಬಂದಾರ. ನನ್ನ ಜೀವ ಇರೋತನ್ಕ ಪಾಲಿಸ್ತೀನಿ. ಎಂದವಳ ನಂಬಿಕೆಗೆ  ಧಕ್ಕೆ ತರುವ ಮನಸ್ಸು ಮಾಡಲಿಲ್ಲ. ಬದಲಾದ ಕಾಲಘಟ್ಟ, ಯಾಂತ್ರಿಕ ಜೀವನ, ವಿಭಕ್ತ ಕುಟುಂಬ, ಅವಸರದ ಬದುಕುಗಳಿಂದ ಪಟ್ಟಣ, ಮಹಾನಗರಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಜೀವನ ಬದಲಾಯಿಸಿಕೊಂಡಿದ್ದೇವೆ. ಆದರೆ ಹಳ್ಳಿಗಳಲ್ಲಿ, ಹಿರಿಯ ಜೀವಗಳಲ್ಲಿ ಇನ್ನೂ ಇಂತಹ ನಂಬಿಕೆಗಳು ಉಳಿದುಕೊಂಡಿವೆ. ಅಜ್ಜಿಯ ನಿಷ್ಕಲ್ಮಶ ಪ್ರೀತಿಗೆ ಮಾರ್ನುಡಿಯದೆ ಬೇಡವೆಂದರೂ ಆಕೆ ಪ್ರೀತಿಯಿಂದ ಕೊಟ್ಟ  ಹತ್ತು ರೂಪಾಯಿಯ ದಕ್ಷಿಣೆ ಸ್ವೀಕರಿಸಿ ಬದುಕಿದೆಯಾ ಬಡಜೀವವೇ ಎಂದು ಶಾಲೆಗೆ ಹೊರಟೆ. ಧೋ, ಧೋ ಎಂದು ಸೋನಿ ಮಳಿ ಸುರಿಲಾರದ ಬ್ಯಾಸಿಗಿ ಬಿಸಿಲ್ನಂಗ ಬಿಸಿಲ್ದಾಗ ಬಂದ ಈ ಶ್ರಾವಣ ಪಂಚಮಿಗೆ ಅಜ್ಜಿ ನನ್ನ ಮನಸ್ಸನ್ನಾವರಿಸಿದ್ಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.