ADVERTISEMENT

ಮೆಕ್ಕೆಜೋಳದ ಅಡುಗೆ

ನಮ್ಮೂರ ಊಟ

ಸುಧಾ ಎಚ್‌.ಎಸ್.
Published 24 ಜುಲೈ 2015, 19:54 IST
Last Updated 24 ಜುಲೈ 2015, 19:54 IST

ಮೆಕ್ಕೆಜೋಳ ಎಂಬ ಶುದ್ಧ ಕನ್ನಡದ ಪದ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಇಂಗ್ಲಿಷ್‌ ಪದವಾಗಿರುವ ‘ಕಾರ್ನ್’ ಎಂದರೆ ಮಾತ್ರ ಅದು ತಿಳಿಯುತ್ತದೆ. ಅದರಲ್ಲೂ ‘ಸ್ವೀಟ್‌ಕಾರ್ನ್‌’ ಎಂದರೆ ಹೆಚ್ಚಿನವರು, ಮುಖ್ಯವಾಗಿ ಮಕ್ಕಳು ಬಾಯಿ ಚಪ್ಪರಿಸುತ್ತಾರೆ. ಇಂಥ ಮೆಕ್ಕೆಜೋಳದ ಮಹಿಮೆ ಅಪಾರ. ಇದರ ಸೇವನೆಯಿಂದ ಬಹಳಷ್ಟು ಪ್ರಯೋಜನಗಳಿವೆ ಎಂಬುದರ ಜೊತೆಗೆ ಮೆಕ್ಕೆಜೋಳದಿಂದ ತಯಾರಿಸಬಹುದಾದ ಒಂದಿಷ್ಟು ಖಾದ್ಯಗಳನ್ನು ಸುಧಾ ಎಚ್‌.ಎಸ್‌. ಅವರು ಇಲ್ಲಿ ಪರಿಚಯಿಸಿದ್ದಾರೆ.

ಮೆಕ್ಕೆಜೋಳದ ಪುಲಾವ್
ಸಾಮಗ್ರಿ: ಒಂದು ಮೆಕ್ಕೆ ಜೋಳ, 1 ಲೋಟ ಅಕ್ಕಿ, 1ಈರುಳ್ಳಿ, 3 ಹಸಿರು ಮೆಣಸಿನಕಾಯಿ, ಕಾಯಿತುರಿ ಸ್ವಲ್ಪ, 1ಟೊಮೆಟೊ, 1ಕ್ಯಾರೆಟ್, 10 ಬೀನ್ಸ್, 1 ಲೋಟ ನೆನೆಸಿದ ಬಟಾಣಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದಿನಾ ಸೊಪ್ಪು, ಸಣ್ಣ ತುಂಡು ಹಸಿ ಶುಂಠಿ, 2- ಬೆಳ್ಳುಳ್ಳಿ ಎಸಳು,  2 ಟೀ ಚಮಚ ಕೊತ್ತಂಬರಿ ಕಾಳು, ಅರ್ಧ ಟೀ ಚಮಚ - ಗರಂ ಮಸಾಲ ಪುಡಿ, 2 ಲವಂಗ ಹಾಗೂ ದಾಲ್ಚಿನ್ನಿ, ಅರ್ಧ ಚಮಚ  ಅರಶಿಣ ಪುಡಿ, ತಲಾ 10 ಗೋಡಂಬಿ, ದ್ರಾಕ್ಷಿ, ಸ್ವಲ್ಪ ಸಾಸಿವೆ, 4 ಟೀ ಚಮಚ ಅಡುಗೆ ಎಣ್ಣೆ, ರುಚಿಗೆ ಉಪ್ಪು.

ವಿಧಾನ: ಜೋಳದ ಕಾಳುಗಳನ್ನು ಬಿಡಿಸಿಟ್ಟುಕೊಳ್ಳಿ. ಈರುಳ್ಳಿ, ಟೊಮೆಟೊ, ಬೀನ್ಸ್‌ ಸಣ್ಣಗೆ ಹೆಚ್ಚಿ. ಕ್ಯಾರೆಟ್ ತೆಳುವಾಗಿ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆಕಾಯಿಸಿ ಅದಕ್ಕೆ ಕೊತ್ತಂಬರಿ ಕಾಳು, ಲವಂಗ, ದಾಲ್ಚಿನ್ನಿ ಹಸಿ ಮೆಣಸಿನಕಾಯಿ ಕಾಯಿ ಹುರಿದುಕೊಳ್ಳಿ. ಕಾಯಿತುರಿ, ಅರಶಿಣದ ಪುಡಿ, ಸ್ವಲ್ಪ ಕೊತಂಬರಿ ಸೊಪ್ಪು, ಸ್ವಲ್ಪ ಪುದಿನಾ ಸೊಪ್ಪು, ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಎಸಳುಗ, ಗರಂ ಮಸಾಲ ಪುಡಿ ಹಾಗೂ ಮೇಲೆ ಹುರಿದ ಸಾಮಗ್ರಿ ಸೇರಿಸಿ ಸ್ವಲ್ಪ ನೀರಿನಲ್ಲಿ ರುಬ್ಬಿ ಒಂದೆಡೆ ಇಡಿ.

ಕುಕ್ಕರ್‌ಗೆ ಸ್ವಲ್ಪ ಎಣ್ಣೆಹಾಕಿ, ಅದು ಬಿಸಿಯಾದ ಮೇಲೆ ಸಾಸಿವೆ  ಹಾಕಿ. ಅದು ಸಿಡಿದ ಮೇಲೆ  ಟೊಮೆಟೊ, ಈರುಳ್ಳಿ, ನೆನೆಸಿದ ಬಟಾಣಿ, ಬೀನ್ಸ್ ತುಂಡು, ಮೆಕ್ಕೆಜೋಳ, ತುರಿದ ಕ್ಯಾರೆಟ್, ಗೋಡಂಬಿ, ದ್ರಾಕ್ಷಿ  ಹೀಗೆ ಒಂದೊಂದೇ ಹಾಕಿ ಹುರಿಯಿರಿ. ಅದಕ್ಕೆ ಅಕ್ಕಿಯನ್ನೂ ಸೇರಿಸಿ. ಮೇಲೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಇದಕ್ಕೆ ಹಾಕಿ ಉಪ್ಪು ಹಾಗೂ ಮೂರೂ ಕಪ್ ನೀರು ಸೇರಿಸಿ ಮುಚ್ಚಳ ಹಾಕಿ ಮೂರೂ ವಿಸಿಲ್ ಬರುವವರೆಗೆ ಬೇಯಿಸಿದರೆ ಮೆಕ್ಕೆ ಜೋಳ ಪುಲಾವ್‌ ರೆಡಿ.

ಮೆಕ್ಕೆಜೋಳದ ಚಿತ್ರಾನ್ನ
ಸಾಮಗ್ರಿ:
ಒಂದೂವರೆ ಲೋಟ ಅಕ್ಕಿ, ಮುಕ್ಕಾಲು ಲೋಟ ಸ್ವೀಟ್ ಕಾರ್ನ್, 1ನಿಂಬೆ ಹಣ್ಣು, ರುಚಿಗೆ ಉಪ್ಪು, ಕಾಲು ಚಮಚ ಸಕ್ಕರೆ, ಒಗ್ಗರಣೆಗೆ ಎಣ್ಣೆ, 1ಚಮಚ ಉದ್ದಿನ ಬೇಳೆ, ಅರ್ಧ ಚಮಚ  ಸಾಸಿವೆ,  ಚಿಟಿಕೆ ಇಂಗು, ಕಾಲು ಚಮಚ ಅರಿಶಿಣ, 3 ಹಸಿಮೆಣಸು, ಕರಿಬೇವು - ಸ್ವಲ್ಪ.

ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು, ಉದುರಾಗಿ ಅನ್ನ ಮಾಡಿಕೊಳ್ಳಿ. ಅನ್ನವನ್ನು ಒಂದು ಪ್ಲೇಟಿನಲ್ಲಿ ಹರವಿ, ತಣ್ಣಗಾಗಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉದ್ದಿನ ಬೇಳೆ, ಸಾಸಿವೆ, ಇಂಗು ಹಾಕಿ ಸಾಸಿವೆ ಚಟಗುಟ್ಟಿದ ನಂತರ ಅರಿಶಿನ, ಹಸಿಮೆಣಸು, ಕರಿಬೇವು ಹಾಕಿ ಕೈಯಾಡಿಸಿ. ಇದಕ್ಕೆ ಸ್ವೀಟ್ ಕಾರ್ನ್ ಸೇರಿಸಿ 2–3 ನಿಮಿಷ ಬೇಯಲು ಬಿಡಿ. ನಂತರ ಅನ್ನ ಸೇರಿಸಿ ಸ್ವಲ್ಪ ಕೈಯಾಡಿಸಿ, ಅದಕ್ಕೆ ಉಪ್ಪು, ಸಕ್ಕರೆ ಮತ್ತು ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಸಿ.

ಮೆಕ್ಕೆಜೋಳದ ಇಡ್ಲಿ
ಸಾಮಗ್ರಿ: ಒಂದೂವರೆ ಲೋಟ ಮೆಕ್ಕೆ ಜೋಳ, ಮುಕ್ಕಾಲು ಲೋಟ ಉದ್ದಿನ ಬೇಳೆ, ಒಂದು ದೊಡ್ಡ ಚಮಚ ಹುರಿದ ಕಡ್ಲೆಬೇಳೆ, ಐದು ಹಸಿ ಮೆಣಸು, ಎರಡು ಚಮಚ ತುರಿದ ತೆಂಗಿನಕಾಯಿ, ಸ್ವಲ್ಪ ಸಾಸಿವೆ, ಸ್ವಲ್ಪ ಇಂಗು, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ, ರುಚಿಗೆ ಉಪ್ಪು.

ADVERTISEMENT

ವಿಧಾನ: ಮೆಕ್ಕೆಜೋಳ, ಉದ್ದಿನ ಬೇಳೆಗಳನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ನೀರನ್ನು ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿನೊಂದಿಗೆ ರುಬ್ಬಿಕೊಳ್ಳಿ. ಇಡ್ಲಿಯ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ. ಇದಕ್ಕೆ ತೆಂಗಿನ ತುರಿ, ಉಪ್ಪು ಹಾಕಿ ಕಲಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಸಿಡಿಸಿ, ಇಂಗು ಸೇರಿಸಿ. ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ದೊಡ್ಡ ಮತ್ತು ಅಗಲವಾದ ಚಮಚದಿಂದ ಚೆನ್ನಾಗಿ ಕಲಸಿ. ಈ ಹಿಟ್ಟನ್ನು ಇಡ್ಲಿಪಾತ್ರೆಯಲ್ಲಿ ಹಾಕಿ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.