ADVERTISEMENT

ರಜೆಗೊಂದಿಷ್ಟು ನನ್ನ ತಯಾರಿ...

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ, ಚಿತ್ರ: ರಂಜು ಪಿ.
ಸಾಂದರ್ಭಿಕ ಚಿತ್ರ, ಚಿತ್ರ: ರಂಜು ಪಿ.   

ಸವಿತಾ ಮಾಧವ ಶಾಸ್ತ್ರಿ

ನಾನಂತೂ ಈ ಸಲ ರಜೆ ಕಳೆಯಲು ನೂರೆಂಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಅದರಲ್ಲಿ ಎಷ್ಟು ಸಫಲಳಾಗುತ್ತೇನೆಂದು ರಜೆ ಮುಗಿದ ಮೇಲೆ ತಿಳಿಯುತ್ತದೆ.

ಮೊದಲನೆಯದಾಗಿ ಮಕ್ಕಳ ಜೊತೆ ಮಕ್ಕಳಾಗಿ ಆಟ ಆಡಬೇಕೆಂದಿದ್ದೇನೆ. ಅವರ ಜೊತೆ ಚೌಕಾಬಾರ, ಲೂಡೊ, ಹಾವು-ಏಣಿ, ಚೆಂಡಾಟ – ಹೀಗೆ ಬೇರೆ ಬೇರೆ ಆಟಗಳನ್ನು ಆಡಬೇಕು. ಇದರಿಂದ ಅವರಿಗೂ ಮನಸ್ಸಿಗೆ ಆನಂದವಾಗುತ್ತದೆ, ನನಗೂ ಬಾಲ್ಯ ಮರುಕಳಿಸಿದಂತಾಗುತ್ತದೆ.

ADVERTISEMENT

ಹಾಗೆಯೆ ನಮ್ಮೂರು ಗುಂಡ್ಮಿಯ ಜಾತ್ರೆ ಹಾಗೂ ಸಾಲಿಗ್ರಾಮ ಪಟ್ಟಣದಲ್ಲಿ ಮೇ ತಿಂಗಳಲ್ಲಿ ನಡೆಯುವ ಶ್ರೀ ಗುರುನರಸಿಂಹ ದೇವರ ಬ್ರಹ್ಮಕಲಶೋತ್ಸವಕ್ಕೆ ಕರೆದುಕೊಂಡು ಹೋಗಬೇಕು. ಈ ರೀತಿ ಮಕ್ಕಳನ್ನು ಜಾತ್ರೆಗಳಿಗೆ ಕರೆದುಕೊಂಡು ಹೋಗುವುದರಿಂದ ಅವರಲ್ಲಿ ದೇವರ ಬಗ್ಗೆ ಭಯ-ಭಕ್ತಿ ಜಾಗೃತವಾಗುತ್ತದಲ್ಲದೇ, ನಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ಪರಿಚಯಿಸಿದಂತಾಗುತ್ತದೆ. ಜಾತ್ರೆಗಳಲ್ಲಿ ಕುಣಿಯುವ ತಟ್ಟಿರಾಯ ಮುಂತಾದ ಮುಖವಾಡದ ಗೊಂಬೆಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಹಾಗೆಯೆ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ನಮ್ಮೂರಿನ ಹೆಮ್ಮೆಯ ಸಾಂಸ್ಕೃತಿಕ ಬಿಂಬ -ಯಕ್ಷಗಾನ ಪ್ರದರ್ಶನವನ್ನು ತೋರಿಸಲೂ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಟಿ.ವಿ.ಯಲ್ಲಿ ಈ ಕಾರ್ಯಕ್ರಮಗಳನ್ನು ನೋಡುವುದಕ್ಕೂ ನೈಜವಾಗಿ ನೋಡಿ ಆನಂದಿಸುವುದಕ್ಕೂ ವ್ಯತ್ಯಾಸವಿರುತ್ತದಲ್ಲವೇ?

ಇನ್ನು ರಜೆ ಎಂದ ಮೇಲೆ ಅಜ್ಜನ ಮನೆಗೆ ಹೋಗದಿದ್ದರೆ ಅದು ರಜೆ ಎನಿಸಿಕೊಳ್ಳುತ್ತದೆಯೆ? ಹೀಗಾಗಿ ಕೆಲವು ದಿನಗಳ ಮಟ್ಟಿಗೆ ನನ್ನ ತಂದೆ-ತಾಯಿಯ ಊರು ಬೆಂಗಳೂರಿಗೆ ಹೋಗಿಬರಬೇಕು. ನನ್ನ ತಂದೆ ದಿನವೂ ಯೋಗಾಭ್ಯಾಸ ಮಾಡುವುದರಿಂದ ನನ್ನ ದೊಡ್ಡ ಮಗಳು ಅಜ್ಜನಿಂದಲೇ ಯೋಗ ಕಲಿಯುವ ಪಣ ತೊಟ್ಟದ್ದಾಳೆ. ಸಾಧ್ಯವಾದರೆ ನಾನೂ ನನ್ನ ಸೋಮಾರಿತನವನ್ನು ಕೊಡವಿ ಯೋಗ ಕಲಿಯಬೇಕು. ನನ್ನ ಅಪ್ಪ-ಅಮ್ಮ ಮತ್ತು ಮಕ್ಕಳನ್ನು ಕರೆದುಕೊಂಡು ಬೆಂಗಳೂರನ್ನೆಲ್ಲ ಸುತ್ತಾಡಬೇಕು, ಮಾಲ್‌ಗಳನೆಲ್ಲಾ ಸುತ್ತಾಡಿ ಮಕ್ಕಳಿಗೊಂದಿಷ್ಟು ಶಾಪಿಂಗ್ ಮಾಡಬೇಕು. ಬೆಂಗಳೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಸುತ್ತಾಡಿ ಬರಬೇಕು.

ಬೇಸಿಗೆಯ ಕಾಲ ಸೂರ್ಯನ ಸುಡುಬಿಸಿಲು ನೆತ್ತಿ ಸುಡುತ್ತಿರುವಾಗ ಗ್ರಹಿಣಿಯರಿಗೆ ಹಪ್ಪಳ ಸಂಡಿಗೆಯ ನೆನಪಾಗದಿರುತ್ತದೆಯೇ? ಹೀಗಾಗಿ ಮಕ್ಕಳೊಂದಿಗೆ ಸೇರಿ ಒಂದಷ್ಟು ಸಂಡಿಗೆ ಮಾಡಬೇಕು. ನಮ್ಮೊಂದಿಗೆ ಮಕ್ಕಳೂ ಸೇರಿದರೆ ಅವಕ್ಕೂ ಹೊಸತೇನ್ನೆನೋ ಕಲಿತ ಅನುಭವ, ನಮಗೂ ಮಕ್ಕಳು ನಮಗೆ ಸಹಾಯ ಮಾಡುವ ಹಾಗಾದವಲ್ಲ ಎಂಬ ಹೆಮ್ಮೆ!

ನನ್ನ ಮಗಳಿಗೆ ಕಥೆಯ ಪುಸ್ತಕಗಳನ್ನು ಓದುವ ಹುಚ್ಚು! ಆದರೆ ಶಾಲಾದಿನಗಳಲ್ಲಿ ಅವಳಿಗೆ ಪಠ್ಯಪುಸ್ತಕದ ಓದಿನಲ್ಲಿ ಕಥೆಗಳನ್ನು ಓದಲು ಸಮಯವೇ ಸಿಗುವುದಿಲ್ಲ! ಹೀಗಾಗಿ ಅವಳ ಇಷ್ಟದ ಕಥೆ ಪುಸ್ತಕಗಳನ್ನು ಅವಳಿಗೆ ಉಡುಗೊರೆಯಾಗಿ ಕೊಡಿಸಬೇಕು ಮತ್ತು ಲೈಬ್ರರಿಯಿಂದ ಒಂದಷ್ಟು ಕಥೆ ಪುಸ್ತಕಗಳನ್ನು ತಂದುಕೊಡಬೇಕು.

ಅಷ್ಟೇ ಅಲ್ಲದೆ, ಪುರವಣಿಗಳಾದ ಮುಕ್ತಛಂದ, ಭೂಮಿಕಾ ಮುಂತಾದವುಗಳನ್ನು ಮಗಳೇ ಸಂಗ್ರಹಿಸಿ ಇಟ್ಟುಕೊಂಡಿದ್ದಾಳೆ, ರಜೆಯಲ್ಲಿ ಪುರುಸೊತ್ತಿನಲ್ಲಿ ಓದಲು! ಪ್ರಜಾವಾಣಿ ಕ್ವಿಜ್ ಪುಟಗಳನ್ನೂ ಕತ್ತರಿಸಿ ಇಟ್ಟುಕೊಂಡಿದ್ದಾಳೆ. ನಾನು ರಜೆಯಲ್ಲಿ ಕ್ವಿಜ್ ಮಾಸ್ಟರ್ ಥರ ಅವಳಿಗೆ ಪ್ರಶ್ನೆಗಳನ್ನು ಕೇಳಬೇಕಂತೆ!

ಇನ್ನು ಮಕ್ಕಳ ಮನಸ್ಸನ್ನು ಗೆಲ್ಲಬೇಕೆಂದರೆ ಅವರಿಗೆ ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿಕೊಡಲೇಬೇಕು. ದಿನನಿತ್ಯ ಶಾಲೆಗೆ ಕಳಿಸುವ ಧಾವಂತದಲ್ಲಿ ಮಾಡಲಾಗದ ಒತ್ತು ಶಾವಿಗೆ, ಪತ್ರೊಡೆ, ಚಕ್ಕುಲಿ, ಕೋಡುಬಳೆ, ಶಂಕರಪೋಳೆ – ಹೀಗೆ ರುಚಿ ರುಚಿ ತಿಂಡಿಗಳನ್ನು ಮಾಡಿ ಹಾಕಿದರೆ ನನ್ನ ಮಕ್ಕಳಿಗೆ ಅವರ ಅಮ್ಮ ಸೂಪರ್ ಅಮ್ಮ!

ರಜೆಯಲ್ಲಿ ಮಕ್ಕಳು ಆಟದ ಜೊತೆ ಹೊಸ ಹೊಸ ವಿಷಯಗಳನ್ನೂ ಕಲಿಯಬಹುದು. ನನ್ನ ಮಗಳಿಗೆ ಸಣ್ಣ ಸಣ್ಣ ರಂಗೋಲಿ ಹಾಕುವುದನ್ನು ಕಲಿಸಬೇಕು, ಸುಲಭದ ತರಕಾರಿಗಳನ್ನು ಹೆಚ್ಚುವುದನ್ನು ಕಲಿಸಬೇಕು, ಕುಕ್ಕರ್‌ನಲ್ಲಿ ಅನ್ನ ಮಾಡುವುದನ್ನು ಕಲಿಸಬೇಕು, ಜೊತೆಗೆ ಒಂದು ಕಪ್ ಗರಮಾ-ಗರಂ ಚಹಾ ಮಾಡುವುದನ್ನೂ, ಹಾ... ಹಾ... ಇದೆಲ್ಲ ನನಗೆ ಅನುಕೂಲವಾಗಲೆಂದಲ್ಲ ಮುಂದೆ ಅವಳಿಗೆ ಅನುಕೂಲವಾಗಲೆಂದು. ನನ್ನ ಯೋಜನೆಗಳೆಲ್ಲ ಪೂರ್ತಿಯಾಗುವುದರಲ್ಲಿ ರಜೆ ಕಳೆದದ್ದೆ ತಿಳಿಯಲಿಕ್ಕಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.