ADVERTISEMENT

ರೈಲಿನೊಡನೆ ಜೀವನದ ಓಟ

ಶಶಿರೇಖಾ
Published 1 ಸೆಪ್ಟೆಂಬರ್ 2017, 19:30 IST
Last Updated 1 ಸೆಪ್ಟೆಂಬರ್ 2017, 19:30 IST
ರೈಲಿನೊಡನೆ ಜೀವನದ ಓಟ
ರೈಲಿನೊಡನೆ ಜೀವನದ ಓಟ   

ಪ್ರಯಾಣಿಕರೇ ದಯವಿಟ್ಟು ಗಮನಿಸಿ ಟ್ರ್ಯೆನ್ ನಂಬರು 3214 ಶಿವಮೊಗ್ಗ ಸಿಟಿಯಿಂದ ಮೈಸೂರಿಗೆ ಹೋಗುವ ಪ್ಯಾಸೆಂಜರು ರ‍್ಯೆಲುಗಾಡಿಯೂ ಇನ್ನೂ ಕೆಲವೇ ಕ್ಷಣಗಳಲ್ಲಿ ಎರಡನೇ ಪ್ಲಾಟ್ ಫಾರಂಗೆ ಬಂದು ಸೇರಲಿದೆ.' ರೈಲು ನಿಲ್ದಾಣದ ಧ್ವನಿವರ್ಧಕದಿಂದ ಯಾಂತ್ರಿಕವಾಗಿ ಕನ್ನಡ, ಹಿಂದಿ, ಇಂಗ್ಲಿಷಿನಲ್ಲಿ ಪ್ರಸಾರವಾಗುತಿತ್ತು.

ನಿತ್ಯ ಕಚೇರಿಗೆ, ಶಾಲಾ–ಕಾಲೇಜಿಗೆ ಹೋಗಲು ಬಸ್ಸಿನ ದರವನ್ನು ಭರಿಸಲಾರದ ಸಾಮಾನ್ಯರು ತರಕಾರಿ, ಹಣ್ಣು, ಹೂವು ಮಾರುವವರು ಈ ರೈಲಿಗೆ ಬರುತ್ತಾರೆ. ಈ ರೈಲಿನಲ್ಲಿ ನಾನು ಅಕ್ಕಿಹೆಬ್ಬಾಳದಿಂದ ಮೈಸೂರಿಗೆ ಕೆಲಸಕ್ಕೆ ಹೋಗುತ್ತಿದ್ದೆ. ಆಗ ನಿತ್ಯದ ಈ ರೈಲಿನ ಪಯಾಣವಂತೂ ವೈವಿಧ್ಯಮಯ ಅನುಭವ. ಅವು ಬದುಕಿನ ರಸಘಳಿಗೆಗಳು, ಏಕಾಂತದ ಮೇಲುಕಿಗೆ ಸೂಕ್ತವಾದವು. ಅಕ್ಕಿಹೆಬ್ಬಾಳು-ಹೂಸಗ್ರಹಾರ-ಅರ್ಜುನಳ್ಳಿ-ಹಂಪಾಪುರ-ಕೆ.ಆರ್. ನಗರ-ಡೋರ‍್ನಳ್ಳಿ. ಕೆ.ಆರ್.ಎಸ್. ಬೆಳಗುಳ, ಮೈಸೂರು. ನನಗೀಗ 57 ವರ್ಷ. ಅಂದರೆ ಇದೂ 35 ವರ್ಷಗಳ ಹಿಂದೆ ನಡೆದಿದ್ದಾದಾದರೂ ಆ ನೋಟ, ಪರಿಸರ ನನಗೆ ಇಂದಿಗೂ ನಿತ್ಯನೂತನ.

ಈ ಪ್ಯಾಸೆಂಜರ್ ರೈಲು ಸಮಯಕ್ಕೆ ಸರಿಯಾಗಿ ಬರುತ್ತದೆ ಎಂದೂ ನಿಖರವಾಗಿ ಹೇಳಲಾಗುತ್ತಿರಲಿಲ್ಲ. ಬೆಳಗಿನ 7.15ಕ್ಕೆ ರೈಲು ಬರುವ ಸಮಯ. ಒಂದೂಂದು ಸಲ 8 ಗಂಟೆಯೂ ಆಗುತ್ತಿತ್ತು. ಒಂದೂರಿನಿಂದ ಇನ್ನೂಂದೂರಿಗೆ ಟಪಾಲನ್ನು ಇದೇ ರೈಲಿನಲ್ಲಿ ಸಾಗಿಸುತ್ತಿದ್ದರು. ಭರ್ತಿ ಜನ. ರೈಲು ಸ್ಟೇಷನ್ನಿಗೆ ಬಂದು ನಿಲ್ಲುವುದೇ ತಡ, ಖಾಲಿ ಸಿಟಿಗಾಗಿ ದೊಂಬರಾಟ.

ADVERTISEMENT

ಹತ್ತಿ ಕುಳಿತ ಮೇಲೆ ಹರಟೆ, ಹಾಡು, ನಗು, ಧಾರಾವಾಹಿಯ ಮಹಾಪೂರ ಒಂದೆಡೆಯಾದರೆ, ಸಂಸಾರಸಾಗರದ ಒಳಕತೆಗಳ ಅನಾವರಣ ಇನ್ನೊಂದು ಕಡೆ. ಅತ್ತೆ-ಸೊಸೆಯರ ಜಗಳ, ಕೋರ್ಟ್‌ ಮೆಟ್ಟಿಲೇರಿದ ವ್ಯಾಜ್ಯ, ಸೀರೆ, ಚಿನ್ನ, ಮನೆ ಸೈಟ್ ಖರೀದಿ – ಹೀಗೆ ಈ ಬಗೆಯ ಮಾತು ಮತ್ತೊಂದು ಕಡೆ. ಇನ್ನು ಕೆಲಸಕ್ಕೆ ಹೋಗುವವರದೇ ಬೇರೆ ಥರದ ಮಾತು. ‘ಆಶಾ ಸತೀಶನ್ನ ಲವ್ ಮಾಡುತ್ತಿದಾಳೆ.’ ‘ರವಿ ಇಬ್ಬಿಬ್ಬರಿಗೆ ಲೈನ್ ಹೊಡಿತಿದಾನೆ.’ ‘ನೆನ್ನೆ ಸುಮಾ ಅವಳ ಗಂಡನಿಗೆ ತಿಳಿಯದಂತೆ ಟೂರ್ ಹೋಗಿದಾಳೆ.’ ಹೀಗೆ ಹತ್ತು ಹಲವು ಕಡೆಗೆ ಮಾತು ಹೊರಳುತಿತ್ತು.

ರೈಲೆಂದರೆ ತನ್ನೂದ್ದಕ್ಕೂ ವಿಸ್ಮಯಗಳನ್ನು ಹೊತ್ತು ಸಾಗುವ ಜೀವ. ಅದರ ಒಳಪ್ರಪಂಚಕ್ಕೂ ಹೊರ ಪ್ರಪಂಚಕ್ಕೂ ಆಗಾಧ ವ್ಯತ್ಯಾಸ. ಬೆಳಗಿನ ಖಾಯಂ ಪ್ರಯಾಣಿಕರ ನಿತ್ಯಕರ್ಮಗಳು ಅಲ್ಲೇ. ದೂರದೂರಿನವರ ನಿದ್ದೆ. ವಿದ್ಯಾರ್ಥಿಗಳ ಓದು. ಮದ್ಯಮ ವರ್ಗದವರ ಜೀವನಶೈಲಿಯ ಇಣುಕು ನೋಟವೇ ಕಾಣುತ್ತದೆ. ತನ್ನ ಸುತ್ತಲಿನ ಜನರ ಬಗ್ಗೆ ಏನೇನು ಆಲೋಚಿಸಬಹುದೋ ಅವೆಲ್ಲದಕ್ಕೂ ಈ ಪ್ರಯಾಣ ವೇದಿಕೆ. ನಾವಿಲ್ಲಿ ಎಲ್ಲ ರೀತಿಯ ವ್ಯಕ್ತಿಗಳನ್ನು ಕಾಣಬಹುದು.

ಇದೊಂದು ತರಹದ ಮಿನಿ ಪ್ರಪಂಚ. ಹಂಪಾಪುರ ಬಿಟ್ಟ ನಂತರ ದೊಡ್ಡ ಪಾತ್ರದಲ್ಲಿ ಕಾಣಿಸಿಕೂಳ್ಳುತ್ತಾಳೆ ಕಾವೇರಿ(ನದಿ). ಇವಳೊಂದಿಗೆ ಅವಿನಾಭಾವ ಸಂಬಂಧ ನನ್ನದು. ಒಮ್ಮೊಮ್ಮೆ ಎಂದು ಸುರಿವ ಮುಂಗಾರು ಮಳೆಯಿಂದಾಗಿ ಈಕೆ ಮೈ ಕೈ ತುಂಬಿಕೂಂಡು ತುಳುಕುತ್ತಾಳೆ. ಮತ್ತೊಮ್ಮೆ ಮಳೆಯಿಲ್ಲದೆ ಬಡಕಲಾಗಿ ಮೂಳೆ ಚಕ್ಕಳದಂತೆ ಬಂಡೆಗಲ್ಲುಗಳ ಸಂಧಿಕೂರಕಲುಗಳಲ್ಲಿ ಹಸಿರುಪಾಚಿ. ಇಂಥ ಶೋಚನೀಯ ಸ್ಥಿತಿಯಲ್ಲೂ ತಮಿಳುನಾಡಿನವರು ಇವಳನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ. ಕಾವೇರಿ ಎಂದೆಂದಿಗೂ ನಿತ್ಯನೂತನವೇ. ಕೆ.ಆರ್. ನಗರ(ಕೃಷ್ಣರಾಜ ನಗರ)ದಲ್ಲಿ ಕಾವೇರಿಯ ದಡದಲ್ಲಿರುವ ಶಿವನ ದೊಡ್ಡ ದೇವಾಲಯದ ಮಂಟಪ ಮುಕ್ಕಾಲು ಭಾಗ ಮುಳುಗಿರುತ್ತದೆ. ಈಕೆಯ ಸಾನ್ನಿಧ್ಯದಲ್ಲಿ ಅದೆಷ್ಟು ಸೂರ್ಯಾಸ್ತಗಳನ್ನು ಕಂಡು ಬೆರಗಾಗಿರುವೇನೂ, ಲೆಕ್ಕವಿಲ್ಲ!

ಪ್ರತಿ ಸ್ಟೇಷನ್ನಿನಲ್ಲೂ ಪ್ರಯಾಣಿಕರು ಹತ್ತಿ ಇಳಿಯುತ್ತಲೇ ಇರುತ್ತಾರೆ. ಪ್ರತಿ ನಿಲ್ದಾಣದಲ್ಲೂ ಅದೇ ಧಾವಂತದ ಮುಖಗಳು ಪಯಣಿಸುವಾಗ ಕಣ್ಣು ಹರಿಸಿದಷ್ಟು ವಿಸ್ತಾರವಾದ ಹಸಿರು ಗದ್ದೆ ಬಯಲು. ಅಲ್ಲಿ ಮೇಯುತ್ತಿರುವ ಹಸು–ಕರುಗಳು, ಕುರಿ–ಮೆಕೆಗಳು. ಭತ್ತ, ಕಬ್ಬು, ಬಾಳೆ, ತೆಂಗು, ಅಡಕೆ, ರಾಗಿ, ಜೋಳ. ಕಡ್ಲೇಕಾಯಿ, ಮಾವು – ಹಲಸು ಹೀಗೆ ವಿವಿಧ ರೀತಿಯ ಬೆಳೆಗಳು. ನೀರುಗದ್ದೆಯ ಉಳುಮೆ, ನಾಟಿ, ಕಳೆಕೀಳುವುದು, ಕಟಾವು – ಹೀಗೆ ಕೃಷಿಯೊಡನೆ ಆತ್ಮಿಯ ನಂಟು ಬೆಳೆದಿತ್ತು. ಈ ಪ್ರದೇಶದ ಜನರ ಜೀವನಾಡಿಯಾಗಿದ್ದಾಳೆ ಜೀವನದಿ ಕಾವೇರಿ.

ರೈಲು ಕೆ.ಅರ್. ನಗರ. ಬಿಟ್ಟನಂತರ ಕಲ್ಲಳ್ಲಿ-ಡೋರ‍್ನಳ್ಳಿ ನಂತರ ಮಿನಿಸಾಗರ ಲಕ್ಷ್ಮಣತೀರ್ಥ ನದಿ ಸಿಗುತ್ತದೆ. ದಡದ ಕಲ್ಲು ಕಟ್ಟಡಕ್ಕೆ ಹೊಡೆದು ಆಳೆತ್ತರ ಚಿಮ್ಮುವ ಅಲೆಗಳು ಯಾವ ಬೀಚಿಗೂ ಕಡಿಮೆ ಇಲ್ಲ. ಕೊಡಗಿನಿಂದ ಹರಿದು ಬರುವ ಈ ನದಿ ಸುತ್ತಮುತ್ತಲ ಪರಿಸರವನ್ನು ಹಸಿರಾಗಿಸಿದೆ. ಅಲ್ಲಲ್ಲಿ ಕಾಣುವ ಬಂಡೆ ಮೇಲೆ ರೆಕ್ಕೆ ಬಿಚ್ಚಿ ಕುಳಿತ ಕೊಕ್ಕರೆ, ಕೋಗಿಲೆ, ಬೆಳ್ಳಕ್ಕಿ, ಗಿಳಿ, ಕಾಜಾಣ, ಮೈನಾ, ಗೊರವಂಕ, ಗುಬ್ಬಿ, ಕಾಗೆ – ಹೀಗೆ ಹೆಸರು ತಿಳಿಯದ ಬಣ್ಣ ಬಣ್ಣದ ಪಕ್ಷಿಗಳು ಹಾವುಗಳು, ಒಮ್ಮೊಮ್ಮೆ ಜಿಂಕೆ, ನವಿಲು, ನರಿ, ತೋಳಗಳ ದರ್ಶನವು ಆಗುತ್ತಿತ್ತು. ಆಗ ಸುಂದರ ಕಿನ್ನರಲೋಕವನ್ನು ಹೊಕ್ಕಾಂತಾಗುತ್ತಿತ್ತು.

ಒಮೊಮ್ಮೆ ಕ್ರಾಸಿಂಗ್ ಇದ್ದಾಗ ನಮ್ಮ ರೈಲು ಬೇರೊಂದು ರೈಲಿನ ದಾರಿ ಕಾಯುವುದು. ಮಗದೊಮ್ಮೆ ಬೇರೊಂದು ರೈಲು ನಮ್ಮ ದಾರಿಯನ್ನು ಕಾಯುತ್ತಿರುತಿತ್ತು. ಆಗ ನಮಗೆ ಒಳಗೂಳಗೆ ಖುಷಿ. ಮಧ್ಯೆ ಮಧ್ಯೆ ಗರಂ ಗರಂ ಚಾಯ್, ಕಾಫಿ, ಕಡ್ಲೇಕಾಯಿ, ಚುರುಮುರಿಯ ಭರಾಟೆಯ ಜೊತೆಗೆ ಒಪ್ಪತ್ತಿನ ಊಟಕ್ಕೆ ದಿನದ ವೆಚ್ಚ ಭರಿಸಲು ಭಿಕ್ಷುಕ ವೃತ್ತಿ. ಟಿಕೆಟು ಇಲ್ಲದೆ ಟಿ.ಟಿ.ಗಳ ಕಣ್ ತಪ್ಪಿಸಿ ಓಡಾಡುವವರು, ಹತ್ತು ಹಲವು ಮಂದಿ.

ಮೈಸೂರು ನಿಲ್ದಾಣ ತಲುಪುತ್ತಿದ್ದಂತೆ ಗಜಿ ಬಿಜಿ ಪ್ರಾರಂಭ. ಧಬಧಬನೆ ಇಳಿದು ಕಚೇರಿ, ಶಾಲಾ–ಕಾಲೇಜಿಗೆ ದೌಡಾಯಿಸುವವರು. ಬೇರೊಂದು ರೈಲಿಗೆ ಹೋಗುವವರು, ಪಿಕ್‌ಪಾಕೆಟ್ ಮಾಡುವವರು, ಪಿಕ್‌ಪಾಕೆಟ್‌ಗೆ ಒಳಗಾದವರು, ಚಲಿಸುವ ರೈಲಿಗೆ ಹತ್ತುವವರು, ನಿಲ್ದಾಣವನ್ನು ಸ್ವಚ್ಛಗೊಳಿಸುವವರು, ಕೂಲಿಗಳು, ಪೊಲೀಸರು – ಹೀಗೆ ಇವೆಲ್ಲ ದಿನನಿತ್ಯದ ಮಾಮೂಲು ನೋಟ.

ಸಂಜೆ ವೇಳೆ ಯಥಾವತ್ತು ಇದೇ ಹಾದಿಯಲ್ಲಿ ಮರಳಿದರೂ ಬೆಳಿಗ್ಗೆಗಿಂತಲೂ ತೀರಾ ಭಿನ್ನವಾದ ಮತ್ತೊಂದು ನೋಟ. ಹೆಂಗಸರು ತರಕಾರಿ, ಸೊಪ್ಪು ಇತ್ಯಾದಿಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಆಗ ಮಾತು ಬೇರೊಂದು ದಿಕ್ಕಿನತ್ತ ಹೊರಳಿರುತ್ತದೆ. ಕಚೇರಿಯಲ್ಲಿನ ಮಾತುಕತೆಗಳ ವಿಮರ್ಶೆ ನಡೆಯುತ್ತದೆ. ‘ಮಧ್ಯಾಹ್ನದ ಊಟ ಹಳಸಿ ಹೋಗಿತ್ತು, ಇನ್ನೇನು ಮಾಡೋದು ಅದನ್ನೇ ತಿಂದೆ’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘ಕ್ಯಾಂಟಿನ್‌ನಿಂದ ಏನಾದರೂ ತರಿಸಿಕೂಳ್ಳಬೇಕಿತ್ತು’ ಎನ್ನುತ್ತಾರೆ.

ಇಂಥ ಮಾತನ್ನು ಕೇಳಿದಾಗ ದುಡಿಯುವ ಮಹಿಳೆಯರ ಪರಿಸ್ಥಿತಿ ಕಂಡು ಏನು ಹೇಳಬೇಕು ಎಂದು ತಿಳಿಯುತ್ತಿರಲಿಲ್ಲ. ಅವರ ಮಾತುಗಳು ಮನವನ್ನು ಕಲಕುತ್ತಿದ್ದವು. ನಾನು ‘ಈಗ ಹೋಗಿ ಅಡುಗೆ ಮಾಡಬೇಕು. ಸ್ಕೂಲಿಂದ ಬಂದ ಮಕ್ಕಳು ಏನು ತಿಂದಿವೆಯೋ ಬಿಟ್ಟಿವೆಯೋ, ಹೋಂ ವರ್ಕ್‌ ಮಾಡಿವೆಯೋ ಹೇಗೂ? ಬೆಳಗಿನ ತಿಂಡಿಗೆ ಏನೂ ಮಾಡೋದು ಅಂತ ತಿಳಿತಿಲ್ಲ. ಮಕ್ಕಳ ಡಬ್ಬಿಗೆ ಬೇರೆ ಮಾಡಬೇಕು. ಊರಿಂದ ನೆಂಟರು ಬಂದಿದ್ದಾರೆ. ನಾದಿನಿ ಮದುವೆ ಗೂತ್ತಾಗಿದೆ, ದುಡ್ಡು ಇಲ್ಲ, ಹೋದ ಸಲ ಮಾಡಿರುವ ಸಾಲ ಇನ್ನೂ ತೀರಿಲ್ಲ.

ಮತ್ತೊಂದೆಡೆ ನಮ್ಮತ್ತೆ–ಮಾವ ಇದ್ದಾರೆ; ಹಾಗಾಗಿ ಮಕ್ಕಳ ಬಗ್ಗೆ ಚಿಂತೆ ಇಲ್ಲ, ಕುಡುಕ ಗಂಡ, ಜವಾಬ್ದಾರಿ ಇಲ್ಲದ ತಂದೆ’ ಎಂಬ ಮಾತುಗಳ ಸರಣಿ; ಇದರೊಂದಿಗೆ ದುಡಿಯುತ್ತಿರುವ ಮಗಳಿಗೆ ಮದುವೆ ಮಾಡಿದರೆ ಅವಳ ಸಂಪಾದನೆ ಎಲ್ಲಿ ಕೈ ತಪ್ಪಿಹೋಗುತ್ತದೋ ಎಂದು ಯೋಚಿಸುವ ಹೆತ್ತವರು; ಮಧ್ಯಮ ವರ್ಗದ ಜನರ ಬದುಕಿನ ಬವಣೆಗಳು ತೆರೆದುಕೂಳ್ಳುತ್ತವೆ. ಹೆಂಗಸರ ಬೋಗಿ ಪ್ರತ್ಯೇಕವಾಗಿರುತ್ತದೆ.

ಆದರೆ ಅದರ ಇಂಜಿನ್ನಿನ ಹಿಂಭಾಗ ಒಂದು ಹಾಗೂ ರೈಲಿನ ಕೊನೆಯಲ್ಲಿ ಒಂದು ಬೋಗಿ ಇರುತ್ತದೆ. ಅಲ್ಲಿ ಕಾಲೂರಲೂ ಜಾಗವಿರುವುದಿಲ್ಲ. ಗ್ರಾಮೀಣ ಪ್ರದೇಶದ ಜನರು ಮೂಟೆ ಮೂಟೆಗಳನ್ನು ಪೇರಿಸಿಟ್ಟಿರುತ್ತಾರೆ. ನಮಗೆ ಹತ್ತಲಿಕ್ಕೂ ಆಗುತ್ತಿರಲಿಲ್ಲ. ಇದೊಂದು ರೈಲಿನಲ್ಲಿ ಮಾತ್ರ ಹೀಗೆ. ಬಾಕಿ ರೈಲಿನಲ್ಲಿ ಹೆಂಗಸರ ಬೋಗಿಗೆ ಗಂಡಸರು ಯಾರು ಹತ್ತುತ್ತಿರಲಿಲ್ಲ. ಮರುದಿನ ಬೆಳಿಗ್ಗೆ ಯಧಾ ಪ್ರಕಾರ ಅಡುಗೆ–ತಿಂಡಿ ಮಾಡಿಟ್ಟು ರೈಲಿನೊಡನೆ ಓಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.