ADVERTISEMENT

ಸ್ನೇಹಕ್ಕೆ ಅಡ್ಡಿಯಾದ ರಂಗೋಲಿ ಪುಸ್ತಕ

ಲತಾ ಹೆಗಡೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಯಜಮಾನರದ್ದು ವರ್ಗವಾಗುವ ಸರ್ಕಾರಿ ನೌಕರಿ. ಹಾಗಾಗಿ ವರ್ಗವಾದಾಗಲೆಲ್ಲಾ ಅವರೊಟ್ಟಿಗೆ ಬೇರೆ ಬೇರೆ ಊರುಗಳಿಗೆ ಹೋಗಿ ವಾಸಿಸುವುದರ ಜೊತೆಗೆ ಸಾಕಷ್ಟು ಹೊಸ ಹೊಸ ಸ್ನೇಹಿತೆಯರನ್ನೂ ಗಳಿಸಿಕೊಂಡಿದ್ದೆ. ಹಾಗೊಂದು ಊರಿಗೆ ವರ್ಗವಾಗಿ ಹೋದಾಗಿನ ಸಂದರ್ಭ.

ಸದಾ ರಗಳೆ ಮಾಡುತ್ತ ಸೊಂಟ ಬಿಟ್ಟು ಇಳಿಯದ ಪುಟ್ಟ ಮಗುವಿನೊಡನೆ ಅರಿಯದ ಊರಲ್ಲಿ ಏಗುತ್ತಿದ್ದೆ. ಪತಿಯೋ ಕಚೇರಿಯ ಕೆಲಸದಲ್ಲಿ ಸದಾ ವ್ಯಸ್ಥರು. ಆಗ ಸಹಾಯ ಹಸ್ತ ಚಾಚಿದವರು ಆ ಮಹಿಳೆ. ಸ್ವಲ್ಪ ಹೊತ್ತು ಮಗುವನ್ನು ನೋಡಿಕೊಳ್ಳುತ್ತಿದ್ದರು. ಆಗ ಅವಸರ ದಿಂದಲೇ ಅಡುಗೆ, ಮನೆಗೆಲಸ ಮುಗಿಸಿಕೊಳ್ಳುತ್ತಿದ್ದೆ. ಇಬ್ಬರೂ ಸ್ನೇಹಜೀವಿಯಾದ್ದರಿಂದ ಬಹಳ ಬೇಗ ಹಚ್ಚಿಕೊಂಡಿದ್ದೆವು.

ಆಕೆ ಮನೆಯಲ್ಲೇನಾದರೂ ವಿಶೇಷವಾದ ಅಥವಾ ಹೊಸರುಚಿ ಮಾಡಿದಾಗ ತಪ್ಪದೇ ತಂದುಕೊಡುತ್ತಿದ್ದರು. ಹಳರುಚಿಕಟ್ಟಾಗಿರುತ್ತಿದ್ದವು. ಆದರೆ ಆಕೆ ಎಷ್ಟು ನಿಪುಣೆಯೋ ಹೇಳಿಕೊಡುವುದರಲ್ಲಿ ಅಷ್ಟೇ ಜಿಪುಣೆ. ವಿಧಾನ ಕೇಳಿದಾಗ ಸರಿಯಾಗಿ ಹೇಳಿಕೊಡುತ್ತಿರಲಿಲ್ಲ. ಇನ್ನು ಸುಂದರವಾದ ವೈವಿಧ್ಯಮಯ ರಂಗೋಲಿ ಹಾಕುವುದರಲ್ಲೂ ಅವರು ಎತ್ತಿದ ಕೈ. ನನಗೋ ಅಡುಗೆಯಲ್ಲಿ ಅನುಭವ ಕಡಿಮೆಯಿದ್ದರೂ ರಂಗೋಲಿ ಬಿಡಿಸುವಲ್ಲಿ ತಕ್ಕ ಮಟ್ಟಿಗೆ ಹಿಡಿತವಿತ್ತು. ಹಬ್ಬ ಹರಿದಿನಗಳಲ್ಲಿ ಸುಂದರ ರಂಗೋಲಿಗಳನ್ನು ಅವರೊಡನೆ ಜಿದ್ದಿಗೆ ಬಿದ್ದಂತೆ ಹಾಕುತ್ತಿದ್ದೆ.

ನನ್ನ ಹತ್ತಿರ ರಂಗೋಲಿಯ ಕಲೆಕ್ಷನ್ ಬಹಳವಾಗಿತ್ತು. ಬಾಲ್ಯದಿಂದಲೂ  ‘ಸುಧಾ‘ ವಾರಪತ್ರಿಕೆಯಲ್ಲಿ ‘ಚಿತ್ರ ಕುಟೀರ ಉಡುಪಿ’ ಬರಹದಡಿ ಪ್ರಕಟವಾಗುತ್ತಿದ್ದ ರಂಗೋಲಿಯ ಹಾಳೆಗಳನ್ನು ಶೇಖರಿಸಿ ಎಲ್ಲವನ್ನೂ ಕೂಡಿಸಿ ಪುಸ್ತಕದ ರೂಪದಲ್ಲಿ ಹೊಲಿದಿಟ್ಟಿದ್ದೆ . ಅದನ್ನೊಮ್ಮೆ ಕೇಳಿ ಪಡೆದ ಆ ಸ್ನೇಹಿತೆ ಒಂದೆರಡು ದಿನದಲ್ಲೇ ವಾಪಸ್ ಕೊಟ್ಟಿದ್ದರು. ಇನ್ನೊ೦ದು ಸಲ ಅದನ್ನು ಕೇಳಿ ಪಡೆದುಕೊಂಡಿದ್ದನ್ನು ಬಹಳ ದಿನಗಳಾದರೂ ಮರಳಿಸಿರಲಿಲ್ಲ. ನಾನೂ  ಅಣ್ಣನ ಮದುವೆ, ಗೃಹಪ್ರವೇಶ, ಊರಿಗೆ ಹೋಗಿ ಬರುವ ಭರಾಟೆಯಲ್ಲಿ ಅದನ್ನು ಮರೆತೇ ಬಿಟ್ಟಿದ್ದೆ. ಶ್ರಾವಣ ಮಾಸ ಬಂದಾಗಲೇ ನನಗದರ ನೆನಪಾದದ್ದು. ಅವರ ಬಳಿ ಕೇಳಿದಾಗ ‘ನೀವಿರಲಿಲ್ಲ, ನಿಮ್ಮ ಯಜಮಾನರಿಗೆ ಕೊಟ್ಟು ಬಂದಿದ್ದೇನೆ' ಎಂದದ್ದು ಸುಳ್ಳೆಂದು ಯಜಮಾನರನ್ನು ಕೇಳಿದಾಗ ತಿಳಿಯಿತು.

ಪುನ: ಆಕೆಯ ಹತ್ತಿರ ಕೇಳಿದ್ದೆ. ‘ಇನ್ನೊಬ್ಬರ ವಸ್ತು ನಮಗೇಕೆ, ನಾನೇಕೆ ಆ ಜುಜುಬಿ ಪುಸ್ತಕ ಇಟ್ಟುಕೊಳ್ಳಲಿ? ಸುಮ್ಮನೇ ನೋಡೋಕಂತ ಇಸ್ಕೊಂಡಿದ್ದು... ನನ್ನ ಹತ್ತಿರವೂ ರಂಗೋಲಿಯ ಪುಸ್ತಕಗಳು ಬೇಕಾದಷ್ಟಿವೆ’ ಎಂದು ಖಾರವಾಗಿಯೇ ಉತ್ತರಿಸಿದ್ದರು. ಆ ಘಟನೆಯ ನಂತರದಲ್ಲಿ ಬಹಳ ಬದಲಾದ ಆಕೆ ನನ್ನ ಬಗೆಗಿದ್ದ ಸ್ನೇಹ ಸೌಹಾರ್ದತೆ ಮಾಯವಾಗಿ ಅಪರಿಚಿತರಂತೆ ವರ್ತಿಸತೊಡಗಿದರು.

ಬಾಲ್ಯ ಹಾಗೂ ಬೆಚ್ಚನೆಯ ತವರುಮನೆಯನ್ನು ನೆನಪಿಸುವಂತಿದ್ದ ನನ್ನ ಮೆಚ್ಚಿನ ರಂಗೋಲಿ ಪುಸ್ತಕವನ್ನು ಕಳೆದುಕೊಂಡದ್ದೂ ಅಲ್ಲದೇ ಅವರ ಸ್ನೇಹದಿಂದ ವಂಚಿತಳಾಗಿದ್ದು ನೋವೆನ್ನಿಸಿತ್ತು. ಕೆಲವೊಂದು ವಿಷಯಗಳನ್ನು ಬಿಟ್ಟರೆ ಆಕೆ ಉತ್ತಮ ಗೆಳತಿಯಾಗಿದ್ದರು. ನಂತರದಲ್ಲಿ ಎಷ್ಟೇ ಪ್ರಯತ್ನಿಸಿದರೂ ಆ ಸ್ನೇಹ ಉಳಿಸಿಕೊಳ್ಳಲಾಗಲಿಲ್ಲ. ಇಂದಿಗೂ ವಿಶೇಷ ದಿನಗಳಲ್ಲಿ ವೈವಿಧ್ಯಮಯ ರಂಗೋಲಿ ಹಾಕುವಾಗಲೆಲ್ಲಾ ಆ ದಿನಗಳ ನೆನಪಾಗಿ ಖೇದವೆನ್ನಿಸುತ್ತದೆ.

ಆದರೆ ಸ್ನೇಹ ಅಥವಾ ಗೆಳೆತನದ ವಿಷಯದಲ್ಲಿ ನಾನು ನಿಜಕ್ಕೂ ಭಾಗ್ಯಶಾಲಿ. ಹೋದಲ್ಲೆಲ್ಲಾ ಜೀವದ ಗೆಳತಿಯರು ಸಿಕ್ಕಿದ್ದಾರೆ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ, ಯಾರಲ್ಲೂ ಹೇಳಿಕೊಳ್ಳಲಾಗದ ಸೂಕ್ಷ್ಮ ವಿಷಯಗಳನ್ನು ನಿರ್ಬಿಢೆ ನಿರಾತಂಕವಾಗಿ ಹೇಳಿಕೊಂಡು ಮನ ಹಗುರ ಮಾಡಿಕೊಳ್ಳಬಹುದು. ನಿಜವಾದ ಸ್ನೇಹದ ಬುನಾದಿಯಾದ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಂಡು ಬೆಳೆಸಲು ಶ್ರಮಿಸಿದ್ದೇವೆ.

ಬಾಲ್ಯದ ಗೆಳತಿ ಸುಜಾತ ಹಾಗೂ ನನ್ನ ಸ್ನೇಹ ಇನ್ನೂ ಹಸಿರಾಗಿಯೇ ಇದೆ. ಬೇರೆ ಬೇರೆ ಊರುಗಳಲ್ಲಿರುವ ನಾವು ತಿಂಗಳಿಗೊಮ್ಮೆ  ಮಾತನಾಡದಿದ್ದರೂ ಭೇಟಿಯಾದಾಗಲೆಲ್ಲ ಮನಬಿಚ್ಚಿ ಮುಕ್ತವಾಗಿ ಹರಟುತ್ತೇವೆ. ನಮ್ಮ ಸ್ನೇಹದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆಯಿದೆ ಅವಶ್ಯ ಬಿದ್ದಾಗ ಸಹಾಯಹಸ್ತ ಚಾಚುವ ಗುಣವಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳುವ ತುಡಿತವಿದ್ದರಿಂದಲೇ ಗೆಳೆತನ ಚಿರ ನೂತನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT