ADVERTISEMENT

ಸ್ವಾವಲಂಬನೆ, ಸಂಸಾರ ಸುಖದ ನಡುವೆ

ಪ್ರಜಾವಾಣಿ ವಿಶೇಷ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಹೆಣ್ಣುಮಕ್ಕಳು ಮದುವೆಯಾದ ಮೇಲೆ ಗಂಡ ಮತ್ತು ಹೆಂಡತಿ ನಡುವೆ ಪರಸ್ಪರ ಅವಲಂಬನೆ ಅವಶ್ಯ. ಆದರೆ ಇತ್ತೀಚಿನ ಧಾವಂತದ ದಿನಗಳಲ್ಲಿ ಪ್ರೀತಿ, ಹೊಂದಾಣಿಕೆ, ತ್ಯಾಗ ಬರೀ ಬೂಟಾಟಿಕೆ. ಹೊರ ನೋಟಕ್ಕೆ ದಾಂಪತ್ಯ ಜೀವನ ಚೆನ್ನಾಗಿದ್ದರೂ ಅದರ ಒಳನೋಟವೇ ಬೇರೆಯಾಗಿರುತ್ತದೆ. ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರಿಗೆ ತಮಗಾಗಿಯೇ ಒಂದರೆ ಘಳಿಗೆ ಬೇಕು ಎನಿಸುತ್ತದೆ. ಕಚೇರಿಯ ಕೆಲಸ ಅಥವಾ ಮನೆಗೆಲಸದ ಬೇತಾಳವನ್ನು ಹೆಗಲಿನಿಂದಿಳಿಸಿ ತಾನು ತಾನಾಗುವ ಸಮಯಕ್ಕಾಗಿ ಮನಸ್ಸು ನಿರಂತರ ಹುಡುಕಾಟದ ಗೊಂದಲದಲ್ಲಿರುತ್ತದೆ.

ಆದರೆ ಇದಕ್ಕೆಲ್ಲಿಯ ಪುರುಸೊತ್ತು. ಸಂಸಾರದ ಜಂಜಾಟದಲ್ಲಿ ಹೆಚ್ಚಾನೆಚ್ಚು ಉದ್ಯೋಗಸ್ಥ ಮಹಿಳೆಯರು ಪ್ರತಿದಿನ ಗಂಡನ ಮನೆಯವರ ನಿಂದನೆಗೆ ಗುರಿಯಾಗುತ್ತಿದ್ದಾರೆ. ಬೆಳಗಾಯಿತೆಂದರೆ ಸಾಕು, ಕೆಲಸಕ್ಕೆ ಓಡುವ ಗಡಿಬಿಡಿಯಲ್ಲಿ ಗಂಡ ಮತ್ತು ಮಕ್ಕಳಿಗೆ ಅಡುಗೆ ತಯಾರಿ, ಹಾಲು,ಕಿರಾಣಿ, ತರಕಾರಿ ಎಲ್ಲವನ್ನೂ ಪೂರೈಸುವ ದಿನಚರಿ ಇವರ ಪಾಲಿಗೆ. ಇದು ಸಾಲದೆ ಜೊತೆಗೆ ಆಫೀಸ್ ಸಮಸ್ಯೆಗಳು ಬೇರೆ. ಮನೆ ಹೊರಗೂ ಮತ್ತು ಒಳಗೂ ದುಡಿದರೂ ಮನೆಯವರ ಪಾಲಿಗೆ ಅದು ಕಡಿಮೆಯೇ. ಸದಾ ಕಚೇರಿ ಹಾಗೂ ಮನೆಯಲ್ಲಿ ಇನ್ನಿಲ್ಲದ ಕೌಶಲ ಬಳಕೆಗಾಗಿ ಚೈತನ್ಯ ಕಳೆದುಕೊಂಡು ಮಾನಸಿಕ ಒತ್ತಡ, ಆತಂಕಗಳಿಗೆ ಸಿಲುಕಿ ಕುಗ್ಗುತ್ತಾಳೆ.

ಮನೆ, ಮಕ್ಕಳು ಅಂಥಾ ಅವರೆಲ್ಲರ ಆಸೆಗಳನ್ನು ಪೂರೈಸಿ ಅದಕ್ಕಾಗಿಯೇ ಜೀವನ ಮುಡುಪಿಟ್ಟರೂ ಮನೆಯವರ ಅತೃಪ್ತ ಭಾವ, ಬಿರುಸಿನ ಮಾತುಗಳ ಚಾಟಿಯೇಟು ಇವೆಲ್ಲವನ್ನು ಹಿಮ್ಮೆಟ್ಟಿಸಲು ಜಾಣತನದ ಕಸರತ್ತು. ಸದಾ ಅವರನ್ನು ಮೆಚ್ಚಿಸಲೆಂದೆ ಒಂದಲ್ಲ ಒಂದು ಹರಸಾಹಸ ಮಾಡುವುದರಲ್ಲೇ ಕಾಲ ಕಳೆಯುವ ಸ್ಥಿತಿ ಗೃಹಿಣಿಯರದ್ದು. ಮನೆಯವರ ಬೆಂಬಲದ ಕೊರತೆ, ಮನೆ, ಮಕ್ಕಳನ್ನು ನೋಡಿಕೊಳ್ಳಲು ಅನುಕೂಲಕರ ಪರಿಸ್ಥಿತಿ ಇಲ್ಲದೇ ಅನಿವಾರ್ಯವಾಗಿ ಕೆಲವು ಮಹಿಳೆಯರು ಕೆಲಸ ಬಿಟ್ಟರೆ, ಇನ್ನೊಂದು ಕಡೆ ಎಲ್ಲಾ ಅನುಕೂಲಗಳಿದ್ದರೂ ಮನೆಯವರಿಂದ ಒಂದಿಲ್ಲೊಂದು ನಿಂದನೆ ಎದುರಿಸುವ ಪರಿಸ್ಥಿತಿ ಉದ್ಯೋಗಸ್ಥ ಮಹಿಳೆಯರದ್ದು. 

ಕೈತುಂಬಾ ಸಂಬಳ ಬರುವ ಉದ್ಯೋಗ ಬಿಟ್ಟು ಗೃಹಿಣಿಯ ಪಾತ್ರ ವಹಿಸಿದವರು ಹಾಗೂ ಮತ್ತು ಕಚೇರಿ, ಬಸ್, ಟ್ರಾಫಿಕ್ ಜಂಜಾಟದಲ್ಲೆ ಅರ್ಧ ಜೀವನ ಕಳೆಯುವ ಉದ್ಯೋಗಸ್ಥ ಮಹಿಳೆ ತಾವಿರುವ ಸ್ಥಿತಿಗಳ ಬಗ್ಗೆ ಸಂತೃಪ್ತ ಭಾವನೆ ಹೊಂದಿಲ್ಲ. ಗೃಹಿಣಿಗೆ ಹೊರಗಡೆ ಉದ್ಯೋಗ ಮಾಡುವ ಆಸೆ, ಉದ್ಯೋಗಸ್ಥ ಮಹಿಳೆಗೆ ನೌಕರಿಯ ಎಲ್ಲ ಜಂಜಡಗಳನ್ನು ಬಿಟ್ಟು ಮನೆಯಲ್ಲಿ ಗಂಡ ಮಕ್ಕಳೊಂದಿಗೆ ನೆಮ್ಮದಿಯಿಂದ ಕಾಲ ಕಳೆಯುವ ಹೆಬ್ಬಯಕೆ. ಇಬ್ಬರಲ್ಲೂ ಸಾಕಷ್ಟು ಗೊಂದಲಗಳಿವೆ.

ಈ ಗೊಂದಲ ಇಂದು ನಿನ್ನೆಯದ್ದಲ್ಲ. ಇಂದಿಗೇ ಮುಗಿಯುವುದಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ಇವರಿಬ್ಬರ ಮನಸ್ಥಿತಿ, ಸಮಸ್ಯೆ, ಸವಾಲುಗಳ ಸ್ವರೂಪ ಮಾತ್ರ ಬದಲಾಗುತ್ತಾ ಹೋಗುತ್ತದೆ. ಉದ್ಯೋಗಸ್ಥೆ ಮತ್ತು ಸಂಸಾರಸ್ಥೆ ಎರಡೆರಡು ಪಾತ್ರಗಳನ್ನು ನಿಭಾಯಿಸಬೇಕಾಗಿ ಬಂದಾಗ ಆಕೆಯ ಜೀವನ ಎರಡು ದೋಣಿಯ ಪಯಣದಂತಾಗುತ್ತದೆ.

ನೀರಲ್ಲಿ ಮುಳುಗಿಯಾಗಿದೆ
ಮನೆಗೆ ಪ್ರತಿನಿತ್ಯ ನೆಂಟರು ಹಾಜರ್, ಅವರನ್ನು ಶಾಪಿಂಗ್, ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗುವುದು, ಮಕ್ಕಳಿಗೆ ಹೋಂವರ್ಕ್, ಅಲ್ಲದೇ ದಿನಸಿ ಜೋಡಿಸುವುದು ಗಂಡ ಮತ್ತು ಮನೆಯವರೊಂದಿಗೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದರಲ್ಲೇ ಸಾಕಾಗಿ ಹೋಗಿರುತ್ತೆ. ಗಂಡ ಕೊಟ್ಟ ದುಡ್ಡಿನಲ್ಲಿ ಮನೆ ನಡೆಸೋದು ಸುಲಭದ ಮಾತೇನಲ್ಲ. ಒಂದರ್ಧ ದಿನಾನಾದ್ರು ಹೊರಗೆ ಕೆಲಸ ಮಾಡಿ ಬಂದರೆ ಪ್ರತಿಯೊಂದಕ್ಕೂ ಗಂಡನ ಮೇಲೆ ಡಿಪೆಂಡ್ ಆಗುವುದು ಸ್ವಲ್ಪನಾದ್ರು ಕಡಿಮೆಯಾಗತ್ತೆ. ನನ್ನ ಕೈ ಖರ್ಚಿಗಾದ್ರು ಸ್ವಲ್ಪ ಹಣ ಉಳಿಸ್ಬಹುದಿತ್ತು. ಏನ್ಮಾಡೋದು, ನೀರಲ್ಲಿ ಮುಳುಗಿದೀನಿ, ಚಳಿನೋ, ಬಿಸಿಲೋ ಅನುಸರಿಸಿಕೊಂಡು ಇದರಲ್ಲೇ ನೆಮ್ಮದಿ ಕಂಡುಕೊಳ್ತಿದೀನಿ.

-ವಿದ್ಯಾ ಗುರು

ಹೋಂವರ್ಕ್ ಮಾಡದ ವಿದ್ಯಾರ್ಥಿ ಥರ...
ಡಿಗ್ರಿ ಪಡೆದು ಕೈಯಾಗಿನ ಕೆಲಸ ಬಿಟ್ಟು ಗಂಡ, ಗಂಡನ ಮನೀನೆ ಸರ್ವಸ್ವ ಅಂತ ತಿಳಿದುಕೊಂಡಿದ್ದೆ. ಆದರೆ ಕೆಲಸ ಬಿಟ್ಟ ಮೇಲೆ ಗೊತ್ತಾಯಿತು. ಮನೆಯವರ ಕಿರಿಕಿರಿ, ತರಕಾರಿ, ಹಾಲು, ಕಿರಾಣಿ ಹೀಗೆ ಪ್ರತಿಯೊಂದಕ್ಕೂ ಗಂಡನ ಮುಂದೆ ಕೈ ಚಾಚಲು ಸ್ವಾಭಿಮಾನ ಅಡ್ಡ. ಆದರೆ ಅನಿವಾರ್ಯ. ನೆಮ್ಮದಿಯ ಜೀವನ ನಡೆಸಲು ಕೆಲಸ ಬಿಟ್ಟೆ ಆದರೆ ಮನೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇವೆಲ್ಲದರ ನಡುವೆ ಮನೆ ಖರ್ಚಿನ ಲೆಕ್ಕ ಒಪ್ಪಿಸೋದು ಟೀಚರ್ ಮುಂದೆ ಹೋಂವರ್ಕ್ ಮಾಡದೇ ಇರೋ ಸ್ಟೂಡೆಂಟ್ ಥರಾ ಆಗಿದೆ ಈಗ ನನ್ನ ಪಾಡು. ಮನೆ, ಮಕ್ಕಳನ್ನು ನೋಡಿಕೊಳ್ಳಲು ಅನುಕೂಲ ಇಲ್ಲದ್ದಕ್ಕೆ ಕೆಲಸ ಬಿಡಬೇಕಾಯಿತು.
–ಅನಿತಾ ವೀರೇಂದ್ರ

ಸ್ವಾವಲಂಬನೆಯ ಸುಖ
ಗಂಡಸರಿಗೆ ಹೋಲಿಸಿದರೆ ಹೆಣ್ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ. ಗಂಡ ಮತ್ತು ಮಕ್ಕಳನ್ನು ಸಂಭಾಳಿಸಿ ಮನೆ ಹೊರಗೂ ಒಳಗೂ ದುಡಿಯವುದು ಸಾಮಾನ್ಯ ಕೆಲಸ ಅಲ್ಲ. ಗಂಡ ಮನೆಯಿಂದ ಹೊರg ಹಾಕಿದಾಗ ರಾತ್ರಿ 2ಗಂಟೆ. ತಲೆ ಮೇಲೆ ಆಕಾಶವೇ ಕಳಚಿ ಬಿದ್ದ ಅನುಭವ. ನಾನು ನನ್ನ ಮಗಳು ಆ ರಾತ್ರಿ ಅಕ್ಷರಶಃ ಬೀದಿ ಪಾಲಾಗಿದ್ದೆವು. ಕೈಯಲ್ಲಿ ಬಿಡಿಗಾಸು ಇರಲಿಲ್ಲ. ನನ್ನ ಫ್ರೆಂಡ್ ಮನೇಲಿದ್ದು, ಅಣ್ಣನ ಹತ್ರ ಒಂದಿಷ್ಟು ಕಾಸು ತಗೊಂಡು ಬಾಡಿಗೆ ಮನೆ ಪಡೆದೆ. ಛಲದಿಂದ ಫಿಜಿಕಲ್ ಇನ್ಸ್‌ಟ್ರಕ್ಟರ್ ಆಗಿ, ಬೋಟಿಕ್ ಸಹ ನಡೆಸಲು ಶುರು ಮಾಡಿದೆ. ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದೇನೆ. ಈಗ ದುಬೈ ಮತ್ತು ಅಮೆರಿಕಕ್ಕೆ ಫಿಟ್‌ನೆಸ್ ತರಬೇತಿ ನೀಡಲು ಆಫರ್ ಬಂದಿದೆ. ಗೃಹಿಣಿಯಾಗಿಯೂ ಜತೆಗೆ ಹೊರಗೆ ಕೆಲಸ ಮಾಡಿದ ಅನುಭವವೂ ಇದೆ. ಎರಡೂ ಬಗೆಯ ಜೀವನ ನಡೆಸಿದ್ದೇನೆ. ಗಂಡನಿಗೆ ಗುಲಾಮಳಾಗಿ ಬದುಕುವುದಕ್ಕಿಂತ ಸ್ವಾವಲಂಬಿಯಾಗುವುದರಲ್ಲಿ ಸುಖ ಕಂಡುಕೊಂಡಿದ್ದೇನೆ.
-ಅನಿತಾ ನಾಯಕ

ಕಣ್ತುಂಬ ನಿದ್ದೆ, ಮನೆಯಲ್ಲಿ ಹರಟೆ

ದಿನಾ ಮಕ್ಕಳನ್ನು ಶಾಲೆಗೆ ಕಳಿಸೋದು, ಹೋಂವರ್ಕ್ ಮಾಡಿಸೋದು, ನೃತ್ಯ, ಗಾಯನ ಕ್ಲಾಸ್‌ಗಳಿಗೆ ಕರೆದೊಯ್ಯುವುದರಲ್ಲಿಯೇ ದಿನ ಕಳೆದದ್ದೇ ಗೊತ್ತಾಗುವುದಿಲ್ಲ. ಮಕ್ಕಳ ಜತೆ ಆಟ, ಜಗಳ, ಮುನಿಸು ಎಲ್ಲವೂ ನನ್ನನ್ನು ಚೈತನ್ಯದಾಯಕವಾಗಿಟ್ಟಿದೆ. ಅವರು ಕೈತುಂಬಾ ಅಂಕ ತಂದಾಗ, ಸ್ಪರ್ಧೆಗಳಲ್ಲಿ ಗೆದ್ದು ಮೆಡಲ್ ತಂದಾಗ ನಾನು ಪಟ್ಟ ಕಷ್ಟ ಮರೆತು ಹೋಗುತ್ತದೆ.

ನಾನು ಕೆಲಸ ಬಿಟ್ಟದ್ದಕ್ಕೂ ಸಾರ್ಥಕವಾಯಿತು ಎಂದು ಹೆಮ್ಮೆ ಎನಿಸುತ್ತದೆ. ಗಂಡನಿಗೆ ಅಡುಗೆ ಮಾಡಿ ಬಡಿಸುವುದು, ಮನೆಯವರೊಂದಿಗೆ ಹರಟೆ, ಪ್ರವಾಸ ಹೋಗುವುದು. ಮಧ್ಯಾಹ್ನ ಕಣ್ತುಂಬ ನಿದ್ದೆ. ಸದ್ಯ ನಾನು ಕೆಲಸಕ್ಕೆ ಹೋಗಲಿಲ್ಲ. ಹೋಗಿದ್ದರೆ ಇಂಥ ಒಳ್ಳೆಯ ಸಮಯ ಮತ್ತೆಂದೂ ಸಿಗ್ತಾ ಇರಲಿಲ್ಲ.
-ರೇಖಾ ಎಂ.ಎಚ್

ಆತ್ಮ ವಿಶ್ವಾಸ ಹೆಚ್ಚಿದೆ

ಅಮ್ಮಾ ಹೊರಗೆ ಹೋಗ್ಬೇಡಮ್ಮಾ, ನೀನೆ ನನಗೆ ಊಟ ಮಾಡಿಸು ಎಂದು ಎಳೆ ಕೈಗಳಿಂದ ನನ್ನ ಮಗು ದುಪ್ಪಟ್ಟಾ ಹಿಡಿದು ಹಠ ಮಾಡ್ತಿದ್ರೆ ಈಗ ಬಂದು ಬಿಡ್ತೀನಪ್ಪಿ, ಡಾಕ್ಟರ್ ಹತ್ರ ಹೋಗಿ ಬರ್ತೀನಂತ ಸುಳ್ಳು ಹೇಳೋದಿನ್ನು ಎಷ್ಟು ದಿನ? ಒಮ್ಮೆ ಕೆಲಸ ಬಿಡಬೇಕು ಅನಿಸುತ್ತೆ. ಅದೇ ದುಡ್ಡು ಯಾರು ಕೊಡ್ತಾರೆ. ಸ್ವಂತ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದೇನೆ. ಆತ್ಮ ವಿಶ್ವಾಸ ಹೆಚ್ಚಿದ್ದು, ಎಂಥಾ ಸಮಸ್ಯೆಗಳನ್ನಾದರೂ ಎದುರಿಸೋ ಶಕ್ತಿ ಬಂದಿದೆ. ನನ್ನ ಪತಿ, ಅತ್ತೆ, ಮಾವ ಸಹಕರಿಸುತ್ತಿದ್ದಾರೆ. ಹೊರಗೆ ಕೆಲಸ ಮಾಡಿ, ಮನೆ ನಿಭಾಯಿಸುವುದಕ್ಕೆ ಒಗ್ಗಿಕೊಂಡಿದ್ದೇನೆ.

ADVERTISEMENT

-ಲತಾ ಶಿವಕುಮಾರ್

ಜೀವನ ಸುಲಭ

ನಮ್ಮ ಮನೆಯವರು ತುಂಬಾ ಒಳ್ಳೆಯವರು. ಅವರ ಸಂಪೂರ್ಣ ಬೆಂಬಲವಿದೆ. ನಾನು ಕೆಲಸ ಮಾಡಿ ದಣಿದಿರುತ್ತೇನೆಂದು ಅಡುಗೆ ಕೆಲಸ, ಹೀಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡುತ್ತಾರೆ. ಇಬ್ಬರೂ ಸೇರಿ ಖರ್ಚು ನಿಭಾಯಿಸುವುದರಿಂದ ಜೀವನ ಸುಲಭವಾಗಿದೆ. ಇಲ್ಲಿ ನಂದು, ನಿಂದು ಎನ್ನುವ ಪ್ರಶ್ನೆಯೇ ಇಲ್ಲ. ನಮ್ಮಜ್ಜಿ ಮನೆಯಲ್ಲೇ ಇರುವುದರಿಂದ ಮನೆಗೆಲಸ ಹೊರೆ ಎನಿಸುವುದಿಲ್ಲ.
-ಶಾರದಾ ಕೊಟ್ರೇಶ್

ಸಮಯವೆಲ್ಲಿದೆ..?

ಆರಾಮಾಗಿದೀನಿ, ತಿಂಗಳಾಯಿತೆಂದರೆ ಕಿಟ್ಟಿ ಪಾರ್ಟಿ, ಗಂಡನ ಜೇಬಿಂದ ಪಾಕೆಟ್ ಮನಿ, ಫ್ಯಾಮಿಲಿ ಜೊತೆ ಶಾಪಿಂಗ್, ಸಿನಿಮಾ, ಹಬ್ಬ ಹರಿದಿನಗಳಲ್ಲಿ ನೆಂಟರ ಮನೆಗೆ ಹೋಗುವುದು. ಇದರಲ್ಲಿ ಹೊತ್ತು ಹೋಗಿದ್ದೆ ಗೊತ್ತಾಗಲ್ಲ. ಕೆಲಸಕ್ಕೆ ಹೋಗಿದ್ದರೆ ಮುದ್ದು ಕಂದಮ್ಮನ ತೊದಲ್ನುಡಿ ಕೇಳೋಕೆ ಆಗ್ತಿರಲಿಲ್ಲ. ತುಂಬಾ ಮಿಸ್ ಮಾಡ್ತಿದ್ದೆ.

ನಮ್ಮದು ಸಣ್ಣ ಕುಟುಂಬ ನನ್ನ ಬಿಟ್ಟರೆ ಮಕ್ಕಳನ್ನು ನೋಡಿಕೊಳ್ಳೋರು ಯಾರು ಇಲ್ಲಾ. ದಿನಾ ಟಿ.ವಿ, ಪೇಪರ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಸುದ್ದಿಗಳನ್ನ ನೋಡ್ತಿದ್ರೆ ಸ್ಕೂಲಿಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರೋ ತನಕ ಉಸಿರು ಬಿಗಿ ಹಿಡಿದೊಕೋಂಡು ಕಾಯುವ ಪರಿಸ್ಥಿತಿ ಈಗಿನ ದಿನಗಳಲ್ಲಿ. ಇದನ್ನೆಲ್ಲಾ ಮ್ಯಾನೇಜ್ ಮಾಡಿ ಹೊರಗೆ ದುಡಿಯೋಕೆ ಹೋದ್ರು ಎಲ್ಲಿಯ ಸುಖ. ಬಾಸ್, ಸಹೋದ್ಯೋಗಿಗಳ ಕಿರಿಕಿರಿ, ಟ್ಯೆಂ ಮೆಂಟೇನ್ ಮಾಡಬೇಕು ಇದೆಲ್ಲಾ ಸರಿ ಹೋಗಲ್ಲ. ಗೃಹಿಣಿಯಾಗಿ ಗಂಡ, ಮನೆ, ಮಕ್ಕಳನ್ನು ನೋಡಿಕೊಳ್ಳುವುದರಲ್ಲಿರುವ ಸುಃಖ ಕೆಲಸ ಮಾಡುವುದರಲ್ಲಿ ಖಂಡಿತಾ ಸಿಗುವುದಿಲ್ಲ.
-ಗೀತಾ ದೇಸಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.